ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಂಜೆಲಾ ಮರ್ಕೆಲ್ ಪುನರಾಯ್ಕೆ ಮುಗಿಯದ ಸವಾಲುಗಳು

Last Updated 27 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಏಂಜೆಲಾ ಮರ್ಕೆಲ್ ಅವರು ನಾಲ್ಕನೇ ಬಾರಿ ಜರ್ಮನಿಯ ಚಾನ್ಸೆಲರ್ ಆಗಿ ಆಯ್ಕೆಯಾಗಿರುವುದು ಒಳ್ಳೆಯ ಸುದ್ದಿ. ಜಾಗತಿಕ ರಾಜಕಾರಣದಲ್ಲಿ ಸರಿಯಾದ ತಿರುವು. ಈ ಚುನಾವಣೆ ಅನೇಕ ಅಚ್ಚರಿಗಳನ್ನೂ ಹೊರಹಾಕಿದೆ. 7 ರಾಜಕೀಯ ಪಕ್ಷಗಳು, ಬುಂಡೆಸ್ಟ್ಯಾಗ್ (ಸಂಸತ್) ಪ್ರವೇಶಿಸಿರುವುದು ದಾಖಲೆ. ಈ ಪೈಕಿ ತೀವ್ರ ಬಲಪಂಥ ನಿಲುವುಗಳನ್ನು ಹೊಂದಿದ ರಾಷ್ಟ್ರೀಯವಾದಿ ಪಕ್ಷ ಆಲ್ಟರ್ನೇಟಿವ್ ಫಾರ್ ಜರ್ಮನಿ (ಎಎಫ್‌ಡಿ), ಸುಮಾರು ಶೇ 13ರಷ್ಟು ಮತ ಗಳಿಸಿಕೊಂಡು ಜರ್ಮನಿ ಸಂಸತ್ ಪ್ರವೇಶಿಸಿರುವುದು ಅನಿರೀಕ್ಷಿತ. 1945ರ ಮಹಾಯುದ್ಧದಲ್ಲಿ ಅಡೊಲ್ಫ್ ಹಿಟ್ಲರ್‌ನ ಭಾರಿ ಸೋಲಿನ ನಂತರ ಇದೇ ಮೊದಲ ಬಾರಿಗೆ ತೀವ್ರವಾದಿ ಬಲಪಂಥೀಯ ಪಕ್ಷವೊಂದು ಜರ್ಮನಿ ಸಂಸತ್‌ಗೆ ಪ್ರವೇಶ ಪಡೆದುಕೊಂಡಿದೆ. ಐರೋಪ್ಯ ಒಕ್ಕೂಟ ವಿರೋಧಿಸುವ ಪಕ್ಷವಾಗಿ 2013ರಲ್ಲಿ ರಚನೆಯಾದ ಎಎಫ್‌ಡಿ ಬಲವರ್ಧನೆ ಆಶ್ಚರ್ಯ ಹುಟ್ಟಿಸುವಂತಹದ್ದು. ಜನಾಂಗದ್ವೇಷ, ಮುಸ್ಲಿಂ ವಿರೋಧಿ ನಂಬಿಕೆಗಳು ಹಾಗೂ ಜರ್ಮನ್ ಅಸ್ಮಿತೆಯಲ್ಲಿ ಹೆಮ್ಮೆ ಹೊಂದಿರುವ ಈ ಪಕ್ಷ ಈಗ ರಾಷ್ಟ್ರದ 3ನೇ ಅತಿ ದೊಡ್ಡ ಪಕ್ಷವಾಗಿ ಹೊಮ್ಮಿದೆ.

ಈಚಿನ ವರ್ಷಗಳಲ್ಲಿ ಯುರೋಪಿನಾದ್ಯಂತ ತೀವ್ರವಾದಿ ಬಲಪಂಥೀಯ ಪಕ್ಷಗಳು ಮುನ್ನೆಲೆಗೆ ಬರುತ್ತಿವೆ ಎಂಬುದು ನಿಜ. ಹೀಗಿದ್ದೂ ಈ ಪ್ರವೃತ್ತಿಗೆ ಜರ್ಮನಿ ಹೊರತಾಗಿತ್ತು. ಜರ್ಮನಿಯ ಇತಿಹಾಸದಲ್ಲಿ ಅಂತರ್ಗತವಾಗಿರುವಂತಹ ನಾಜಿ ಇತಿಹಾಸದ ತಪ್ಪಿತಸ್ಥ ಭಾವ, ತೀವ್ರವಾದಿ ಬಲಪಂಥೀಯ ಪಕ್ಷಗಳು ಬೆಳೆಯಲು ತಡೆಗೋಡೆಯಾಗಿತ್ತು. ಆದರೆ ಈಗ ಬದಲಾವಣೆಯ ಲಕ್ಷಣಗಳು ಗೋಚರಿಸಿವೆ.

ಈ ಚುನಾವಣೆಯಲ್ಲಿ ಏಂಜೆಲಾ ಮರ್ಕೆಲ್ ಅವರ ಮತ ಹಂಚಿಕೆ ಪಾಲು ಸಹ ಕುಸಿದಿದೆ. ಕಡಿಮೆ ಮತಗಳ ಅಂತರದಿಂದ ಅವರು ಮರು ಆಯ್ಕೆಯಾಗಿದ್ದಾರೆ. ಯುರೋಪ್ ಖಂಡ ಹಾಗೂ ಜರ್ಮನಿಯನ್ನು ಕಾಡುತ್ತಿರುವ ನಿರಾಶ್ರಿತರ ಬಿಕ್ಕಟ್ಟಿನ ಬಗ್ಗೆ ಅವರು ತಳೆದ ನಿಲುವು ಇದಕ್ಕೆ ಕಾರಣ. ವಲಸೆ ವಿಚಾರದಲ್ಲಿ ನೈತಿಕವಾಗಿ ಸರಿ ಇದ್ದಂತಹ ಆದರೆ ಜನಪ್ರಿಯವಲ್ಲದ ನಿಲುವು ತಳೆದಿದ್ದರು ಏಂಜೆಲಾ. 2015ರಿಂದ ಪಶ್ಚಿಮ ಏಷ್ಯಾದಿಂದ ಬರುತ್ತಿರುವ ಲಕ್ಷಾಂತರ ನಿರಾಶ್ರಿತರಿಗೆ ಜರ್ಮನಿಯಲ್ಲಿ ನೀಡಿದ ಆಶ್ರಯ ಸ್ಥಳೀಯರಲ್ಲಿ ಸೃಷ್ಟಿಸಿದ ಅಭದ್ರತೆಯ ಭಾವ ಎಎಫ್‌ಡಿಗೆ ಚುನಾವಣೆಯಲ್ಲಿ ವರದಾನವಾಗಿರುವುದು ಸ್ಪಷ್ಟ.

ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕುಶಲ ಸಂಧಾನಕಾರರೆನಿಸಿದ್ದಾರೆ ಏಂಜೆಲಾ. ಆದರೆ ಈಗ ತಮ್ಮದೇ ದೇಶದಲ್ಲಿ ಹೊಸ ಸರ್ಕಾರವನ್ನು ರಚಿಸುವ ಪ್ರಕ್ರಿಯೆಯಲ್ಲಿ ವಿವಿಧ ಪಕ್ಷಗಳ ಜೊತೆ ಮೈತ್ರಿ ಮಾತುಕತೆಗಳನ್ನು ನಡೆಸುವ ಪ್ರಮುಖ ಸವಾಲುಗಳನ್ನು ಎದುರಿಸಬೇಕಾಗಿದೆ. ಹೀಗಾಗಿ ಏಂಜೆಲಾ ಅವರಿಗೆ ಇದು ‘ದುಃಸ್ವಪ್ನದ ಗೆಲುವು’ ಎಂದೇ ಪತ್ರಿಕೆಯೊಂದು ಬಣ್ಣಿಸಿರುವುದು ಸರಿಯಾದುದು. ‘ಸರ್ಕಾರ ರಚನೆ ಪ್ರಕ್ರಿಯೆಗೆ ತಿಂಗಳುಗಳು ಹಿಡಿಯಬಹುದು’ ಎಂದು ಏಂಜೆಲಾ ಅವರೇ ಹೇಳಿದ್ದಾರೆ.

ಬ್ರೆಕ್ಸಿಟ್ ಹಾಗೂ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಧ್ಯ್ಯಕ್ಷರಾಗಿ ಆಯ್ಕೆಯಾದ ನಂತರ, ಯುರೋಪಿನಾದ್ಯಂತ ಬೀಸುತ್ತಿರುವ ಜಾಗತೀಕರಣ ವಿರೋಧಿ ಭಾವ ಫ್ರಾನ್ಸ್‌ನಲ್ಲಿ ಎಮ್ಮಾನುಯೆಲ್ ಮ್ಯಾಕ್ರನ್ ಚುನಾವಣೆಯಿಂದ ತಗ್ಗಿದಂತಹ ಭಾವನೆ ಮೂಡಿಸಿತ್ತು. ಆದರೆ ಯುರೋಪ್‌ನಲ್ಲಿ ವ್ಯಾಪಕವಾಗುತ್ತಿರುವ ವಲಸೆ ವಿರೋಧಿ ಭಾವನೆಗಳನ್ನು ನಿರ್ವಹಿಸಬೇಕಾದ ಅಗತ್ಯ ಇದೆ ಎಂಬುದಕ್ಕೆ ಜರ್ಮನಿಯಲ್ಲಿ ಈಗ ತೀವ್ರವಾದಿ ಬಲಪಂಥೀಯ ಪಕ್ಷವಾದ ಎಎಫ್‌ಡಿ ಗೆಲುವು ಸಂಕೇತವಾಗಿದೆ. ಜಾಗತಿಕವಾಗಿ ತಳಮಳದ ದಿನಗಳು ಇವು. ಬ್ರೆಕ್ಸಿಟ್, ಡೊನಾಲ್ಡ್ ಟ್ರಂಪ್ ಅವರ ಮುಕ್ತ ವ್ಯಾಪಾರ ವಿರೋಧಿ ನೀತಿಗಳು, ಕೊರಿಯಾ ದ್ವೀಪದಲ್ಲಿನ ಅಶಾಂತಿ, ಅಫ್ಗಾನಿಸ್ತಾನ ಹಾಗೂ ಪಶ್ಚಿಮ ಏಷ್ಯಾದಲ್ಲಿ ಮುಗಿಯದ ಯುದ್ಧಗಳು– ಅನಿಶ್ಚಯದ ದಿನಗಳಿಗೆ ಕಾರಣವಾಗಿವೆ. ಇಂತಹ ಸನ್ನಿವೇಶದಲ್ಲಿ ಶ್ರೀಮಂತ ರಾಷ್ಟ್ರವಾಗಿರುವ ಜರ್ಮನಿಗೆ ಮರ್ಕೆಲ್ ನಾಯಕತ್ವವನ್ನೇ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಬಯಸುತ್ತವೆ ಎಂಬುದು ಸಹಜ. ಎರಡು ವಿಶ್ವ ಮಹಾಯುದ್ಧಗಳ ನಂತರ ಕಂಡುಕೊಳ್ಳಲಾದ ಮೌಲ್ಯಗಳು ಹಾಗೂ ನೀತಿಗಳನ್ನು ಎತ್ತಿಹಿಡಿಯುವ ವಿಶ್ವನಾಯಕರ ಕೊರತೆ ಇರುವ ಸಂದರ್ಭದಲ್ಲಿ ಏಂಜೆಲಾ ಮರ್ಕೆಲ್ ಅವರು ಇನ್ನೂ ಹೆಚ್ಚಿನ ಜಾಗತಿಕ ಪಾತ್ರ ನಿರ್ವಹಿಸಬೇಕೆಂಬ ನಿರೀಕ್ಷೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT