ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿಗೆ ಬಗೆಬಗೆ ತಿನಿಸು

Last Updated 28 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಸುಕೃತ ಎಸ್.

**

ಎರಿಯಪ್ಪ

ಬೇಕಾಗುವ ಸಾಮಗ್ರಿಗಳು: 1 ಲೋಟ ಅಕ್ಕಿ, ಅರ್ಧ ಲೋಟ ಬೆಲ್ಲ, ಸ್ವಲ್ಪ ಉಪ್ಪು, ಕರಿಯಲು ಎಣ್ಣೆ.

ವಿಧಾನ: ಅಕ್ಕಿಯನ್ನು ಒಂದು ತಾಸು ನೀರನಲ್ಲಿ ನೆನೆಸಿಡಬೇಕು. ನುಣ್ಣಗೆ ಸ್ವಲ್ಪ ಗಟ್ಟಿಯಾಗಿಯೇ ರುಬ್ಬಿಕೊಳ್ಳಿ. ಮಿಶ್ರಣಕ್ಕೆ ಬೆಲ್ಲ ಹಾಗೂ ಸ್ವಲ್ಪ ಉಪ್ಪು ಹಾಕಿ ಎಣ್ಣೆಯಲ್ಲಿ ಕರಿದರೆ ಎರಿಯಪ್ಪ ಸಿದ್ಧ.

ತೆಳ್ಳವು

ಬೇಕಾಗುವ ಸಾಮಗ್ರಿಗಳು: 2 ಲೋಟ ಅಕ್ಕಿ, ಅರ್ಧ ಕಡಿ ತೆಂಗಿನಕಾಯಿ, ಸ್ವಲ್ಪ ಉಪ್ಪು

ವಿಧಾನ: ಒಂದು ತಾಸು ನೆನೆಹಾಕಿದ ಅಕ್ಕಿ ಮತ್ತು ತೆಂಗಿನ ತುರಿಯನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ರುಬ್ಬಿಕೊಂಡಿದ್ದನ್ನು ದೋಸೆ ಆಕಾರದಲ್ಲಿ ಎರೆಯಿರಿ.

ಮಗೆಕಾಯಿ ಸುಟ್ಟವು

ಬೇಕಾಗುವ ಸಾಮಗ್ರಿಗಳು: ಒಂದು ಗಂಟೆ ನೆನೆಸಿದ 1 ಲೋಟ ಅಕ್ಕಿ, 1 ಮಗೆಕಾಯಿ, ಅರ್ಧ ಲೋಟ ಬೆಲ್ಲ, ಸ್ವಲ್ಪ ಉಪ್ಪು.

ವಿಧಾನ: ಮಗೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ನೆನೆಸಿದ ಅಕ್ಕಿ, ಬೆಲ್ಲ, ಸ್ವಲ್ಪ ಉಪ್ಪು ಬೆರೆಸಿ ದೋಸೆ ಹಿಟ್ಟಿನ ಹದದಲ್ಲಿ ರುಬ್ಬಿಕೊಳ್ಳಬೇಕು. ನಂತರ, ಸಣ್ಣಗೆ ಹೆಚ್ಚಿದ ಮಗೆಕಾಯಿಯನ್ನು ಒಂದು ಬಾಣಲೆಯಲ್ಲಿ ಹಾಕಿ, ರುಬ್ಬಿಕೊಂಡದನ್ನು ಬಾಣಲೆಗೆ ಹಾಕಿ ಕೈಯಾಡಿಸುತ್ತಿರಬೇಕು (ಹಿಟ್ಟನ್ನು ಕೈಯಾಡಿಸುವುದು, ಮಗೆಕಾಯಿ ಅದರ ನೀರು ಬಿಡುವುದರಿಂದ ದೋಸೆ ಹಿಟ್ಟಿನ ಹದಕ್ಕೆ ಬರುತ್ತದೆ). ಇದನ್ನು ಸಣ್ಣ ಆಕಾರದಲ್ಲಿ ದೋಸೆ ರೀತಿಯಲ್ಲಿಯೇ ಬಾಣಲೆಯಲ್ಲಿ ಎರೆಯಬೇಕು. ಇದನ್ನು ಚಟ್ನಿಯೊಂದಿಗೆ ತಿಂದರೆ ಬಹಳ ರುಚಿಯಾಗಿರುತ್ತದೆ.

ಮುತ್ತಸರ

ಬೇಕಾಗುವ ಸಾಮಗ್ರಿಗಳು: ಒಂದು ಗಂಟೆ ನೆನೆಸಿದ ಒಂದು ಲೋಟ ಅಕ್ಕಿ, ಸ್ವಲ್ಪ ಉಪ್ಪು, ಕರಿಯಲು ಎಣ್ಣೆ

ವಿಧಾನ: ಮೊದಲಿಗೆ ಅಕ್ಕಿಯನ್ನು ತೊಳೆದು ಒಳಗಿಸ ಬಟ್ಟೆಯ ಮೇಲೆ ಹರಡಿಕೊಳ್ಳಬೇಕು. ಹೀಗೆ ಮಾಡಿದ ಅಕ್ಕಿ ಒಣಗಿದ ನಂತರ ರುಬ್ಬಿಕೊಳ್ಳಬೇಕು (ನೀರು ಹಾಕದೆ). ಒಂದು ಬಾಣಲೆಯಲ್ಲಿ ಈ ಹಿಟ್ಟನ್ನು ಹಾಕಿ ಸ್ವಲ್ಪ ನೀರನ್ನು ಹಾಗು ಉಪ್ಪು ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಉಕ್ಕರಿಸಿಕೊಳ್ಳಬೇಕು. ಮೂರು ಗುಂಡಿ ಇರುವ ಚಕ್ಕಲಿ ಮುಟ್ಟಿನಲ್ಲಿ ನೇರವಾಗಿ ಕಾದ ಎಣ್ಣೆಗೆ ಬಿಡಬೇಕು. ಇದನ್ನು ಪಾಯಸ ಅಥವಾ ಚಟ್ನೆ ಜತೆಗೂ ತಿನ್ನಬಹುದು.

ಕಾಯಿ ಕಡುಬು

ಎಲ್ಲರಿಗೂ ಇಷ್ಟವಾಗುವಂತಹ ತಿನಿಸು. ಇದಕ್ಕೆ ತುಪ್ಪವನ್ನು ಚೆನ್ನಾಗಿ ಹಾಕಿಕೊಂಡು ತಿಂದರೆ ಆಹಾ! ಬಹಳ ರುಚಿ. ಈ ತಿನಿಸು ತಯಾರಿಯಲ್ಲಿ ಎರಡು ಭಾಗಗಳಿವೆ. ಒಂದು ಹಿಟ್ಟನ್ನು ಮಾಡಿಕೊಳ್ಳುವುದು. ಇನ್ನೊಂದು ತೆಂಗಿನ ತುರಿ ಮತ್ತು ಬೆಲ್ಲದ ಮಿಶ್ರಣ ಮಾಡಿಕೊಳ್ಳುವುದು. ನಂತರ ತಯಾರಿ ಮಾಡಿಕೊಂಡ ಹಿಟ್ಟನ್ನು ತಟ್ಟೆ ಆಕಾರವಾಗಿ ಮಾಡಿಕೊಂಡು ನಂತರ ತೆಂಗಿನ ಹಾಗೂ ಬೆಲ್ಲದ ಮಿಶ್ರಣವನ್ನು ಅದರಲ್ಲಿ ಹಾಕಿ ಮುಚ್ಚಬೇಕು. ನಂತರ ಈ ಕಡುಬುಗಳನ್ನು ಹಬೆಯಲ್ಲಿ ಬೇಯಿಸಿ ತುಪ್ಪ ಹಾಕಿಕೊಂಡು ತಿನ್ನಬೇಕು.

ಹಿಟ್ಟು ಮಾಡಿಕೊಳ್ಳುವುದು

ಸಾಮಗ್ರಿಗಳು: ಒಂದು ಲೋಟ ಅಕ್ಕಿ, 1/4 ಲೋಟ ರವೆ, ಉಪ್ಪು

ವಿಧಾನ: ನೆನೆ ಹಾಕಿದ ಅಕ್ಕಿಯನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು. ನಂತರ ಅದನ್ನು ಒಂದು ಬಾಣಲೆಗೆ ಹಾಕಿ. ಜೊತೆಗೆ ರವೆ ಹಾಗೂ ಸ್ವಲ್ಪ ಉಪ್ಪು ಸೇರಿಸಿ ನೀರು ಆರುವವರೆಗೂ ತೊಳೆಸುತ್ತಿರಬೇಕು. ನಂತರ ಅದು ರೊಟ್ಟಿ ಹಿಟ್ಟಿನ ಹದಕ್ಕೆ ಬರುತ್ತದೆ. ಅದನ್ನು ಸಣ್ಣ ಉಂಡೆಗಳಾಗಿ ಮಾಡಿ ತಟ್ಟೆ ಆಕಾರಕ್ಕೆ ತಂದುಕೊಳ್ಳಬೇಕು.

ತೆಂಗಿನ ತುರಿ ಹಾಗು ಬೆಲ್ಲದ ಮಿಶ್ರಣ

ಸಾಮಗ್ರಿಗಳು: ಒಂದು ತೆಂಗಿನಕಾಯಿ, ಅರ್ಧ ಲೋಟ ಬೆಲ್ಲ, ಸ್ವಲ್ಪ ಉಪ್ಪು

ವಿಧಾನ: ತೆಂಗಿನ ತುರಿಗೆ ಸ್ವಲ್ಪ ಉಪ್ಪು ಹಾಗೂ ಬೆಲ್ಲ ಸೇರಿಸಿದರೆ ಈ ಮಿಶ್ರಣ ಸಿದ್ಧವಾಗುತ್ತದೆ.

ಕಡಲೆಬೇಳೆ ಅಂಬಡೆ

ಸಾಮಗ್ರಿಗಳು: 2ಲೋಟ ಕಡಲೆಬೇಳೆ, 1/4 ಉದ್ದಿನಬೇಳೆ, ಕೊತ್ತಂಬರಿ ಸೊಪ್ಪು, 2 ಚಮಚ ಜೀರಿಗೆ, ಸ್ವಲ್ಪ ಇಂಗು, ಕರಿಬೇವಿನ ಸೊಪ್ಪು, ಹಸಿಮೆಣಸು, ಹುಳಿ, ಎಣ್ಣೆ

ವಿಧಾನ: ನೆನೆಹಾಕಿದ ಕಡಲೆಬೇಳೆ ಹಾಗೂ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಹಾಕಿ, ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಸಣ್ಣ ಉಂಡೆ ಮಾಡಿಕೊಂಡು ಅಂಬಡೆ ಆಕಾರದಲ್ಲಿ ತಟ್ಟಿಕೊಂಡು ಎಣ್ಣೆಯಲ್ಲಿ ಕರಿದರೆ ಬಿಸಿ ಬಿಸಿ ಕಡಲೆಬೇಳೆ ಅಂಬಡೆ ರೆಡಿ.

ಬುತ್ತಿ ಅನ್ನ

ಇದು ಸಹ ಬಹಳ ರುಚಿಕರವಾದ ತಿನಿಸು. ಹಾಗಂತ ಬಹಳ ತಿಂದರೂ ತೊಂದರೆ.

ಸಾಮಗ್ರಿಗಳು: ಅನ್ನ, 4–5 ಹಸಿ ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವಿನಸೊಪ್ಪು, ಒಂದು ಕಪ್ ಗಟ್ಟಿ ಮೊಸರು, ಅರ್ಧ ಕಪ್ ಹಾಲು, ಒಗ್ಗರಣೆಗೆ ಕೊಬ್ಬರಿಗೆ ಎಣ್ಣೆ ಮತ್ತು ಸಾಸಿವೆ, ರುಚಿಗೆ ಉಪ್ಪು.

ವಿಧಾನ: ಒಗ್ಗರಣೆಗೆ ಕೊಬ್ಬರಿ ಎಣ್ಣೆ, ಸಾವಿವೆ, ಕರಿಬೇವಿನ ಸೊಪ್ಪು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಗೂ ಶುಂಠಿಯನ್ನು ಮೊದಲು ಹಾಕುವುದು. ಹಸಿಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೂ ಚೆನ್ನಾಗಿ ಹುರಿಯಿರಿ. ನಂತರ ಅನ್ನ ಹಾಕಿ. ಇದರ ಜೊತೆಯಲ್ಲೇ ಮೊಸರು, ಸ್ವಲ್ಪ ಹಾಲು, ಬೆಣ್ಣೆ ಹಾಗೂ ಉಪ್ಪು ಹಾಕಬೇಕು. ಕುದಿ ಬಂದ ನಂತರ ಗ್ಯಾಸ್‌ ಆಫ್‌ ಮಾಡಿ. ನಂತರ ತುಪ್ಪ ಹಾಕಿಕೊಂಡು ತಿಂದರೆ, ಅದರ ಸ್ವಾದವೇ ಸ್ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT