ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಕುಟುಂಬಗಳ ಭಾಗ್ಯ ಬದಲಿಸಲಿ ‘ಸೌಭಾಗ್ಯ’

Last Updated 28 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಿದ್ಯುತ್‌ ಎನ್ನುವುದು ಶಕ್ತಿಯ ಪ್ರಮುಖ ಮೂಲ. ಅಷ್ಟೇ ಅಲ್ಲ, ಅದು ಪ್ರಗತಿ ಮತ್ತು ಚೈತನ್ಯದ ಸಂಕೇತ. ಆಧುನಿಕ ಬದುಕು ಮತ್ತು ಅರ್ಥವ್ಯವಸ್ಥೆ ವಿದ್ಯುತ್ತನ್ನೇ ಬಹುಪಾಲು ಅವಲಂಬಿಸಿವೆ. ಅದೀಗ ಐಷಾರಾಮಿ ಸೌಕರ್ಯವಾಗಿ ಉಳಿದಿಲ್ಲ. ಅನಿವಾರ್ಯ ಅಗತ್ಯ ಎನಿಸಿಕೊಂಡಿದೆ. ಹೀಗಿದ್ದರೂ ನಮ್ಮ ದೇಶದಲ್ಲಿ ಈಗಲೂ 4.05 ಕೋಟಿ ಮನೆಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲ. ಇದಕ್ಕೆ ಕಾರಣ, ಬಡತನ ಅಥವಾ ವಿದ್ಯುತ್‌ವಂಚಿತರ ಹಳ್ಳಿಗಳಿಗೆ ಇನ್ನೂ ವಿದ್ಯುತ್‌ ಬರದೇ ಇರುವುದು. ಇದರಿಂದ ಒಂದು ರೀತಿಯಲ್ಲಿ ಅಸಮಾನತೆ ಬೆಳೆದಿತ್ತು. ಗ್ರಾಮೀಣ ಮತ್ತು ನಗರ ಪ್ರದೇಶಗಳ ಎಲ್ಲ ಬಡ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಿಸಿದ ‘ಸೌಭಾಗ್ಯ’ (ಪ್ರಧಾನಮಂತ್ರಿ ಸಹಜ್‌ ಬಿಜ್ಲಿ ಹರ್‌ ಘರ್‌ ಯೋಜನಾ) ಯೋಜನೆ, ಈ ಅಸಮಾನತೆ ತೊಡೆದುಹಾಕುವ ನಿಟ್ಟಿನಲ್ಲಿ ಇರಿಸಿದ ಹೆಜ್ಜೆ. ಇದು ಸಮರ್ಪಕವಾಗಿ ಜಾರಿಗೆ ಬಂದರೆ 2018ರ ಡಿಸೆಂಬರ್‌ ಹೊತ್ತಿಗೆ ದೇಶದಲ್ಲಿ ವಿದ್ಯುತ್‌ರಹಿತ ಮನೆಯೇ ಇರುವುದಿಲ್ಲ. ಇದಕ್ಕಾಗಿ ₹ 16,320 ಕೋಟಿ ಖರ್ಚಾಗಲಿದ್ದು, ಕೇಂದ್ರ ಸರ್ಕಾರವೇ ಸಾಕಷ್ಟು ಮೊತ್ತ ಭರಿಸಲಿದೆ.

ಅರ್ಜಿ ಸಲ್ಲಿಸುವುದಕ್ಕಾಗಿ ಫಲಾನುಭವಿಯು ಸರ್ಕಾರಿ ಕಚೇರಿಗೆ ಅಲೆದಾಡಬೇಕಾಗಿಲ್ಲ. ಜಾರಿ ಹೊಣೆ ಹೊತ್ತ ಗ್ರಾಮ ಪಂಚಾಯ್ತಿ ಅಥವಾ ಸರ್ಕಾರಿ ಏಜೆನ್ಸಿಗಳೇ ವಿಶೇಷ ಶಿಬಿರ ನಡೆಸಿ ಅರ್ಜಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. 2011ರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಜನಗಣತಿಯ ಮಾಹಿತಿ ಆಧರಿಸಿ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಈ ಪಟ್ಟಿಯಲ್ಲಿ ಇಲ್ಲದವರು ವಿದ್ಯುತ್‌ ಸಂಪರ್ಕ ಪಡೆಯಲು ₹ 500 ಶುಲ್ಕ ಕೊಡಬೇಕು. ವಿದ್ಯುತ್‌ ಸಂಪರ್ಕದಿಂದ ವಂಚಿತವಾಗುವ ಮನೆಗಳಿಗೆ ಸೌರಶಕ್ತಿ ವಿದ್ಯುತ್‌ ಸಾಧನ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಪುನರ್‌ನವೀಕರಣ ಇಂಧನಕ್ಕೆ ಒತ್ತು ನೀಡುವ ಯತ್ನವೂ ಇಲ್ಲಿದೆ.

ಗ್ರಾಮೀಣ ವಿದ್ಯುತ್‌ ವಲಯದ ಸುಧಾರಣೆಗೆ 2015ರಲ್ಲಿ ₹ 76 ಸಾವಿರ ಕೋಟಿ ವೆಚ್ಚದ ‘ದೀನದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ’ ಯೋಜನೆ ರೂಪಿಸಲಾಗಿತ್ತು. 2005ರಲ್ಲಿ ರಾಜೀವ್‌ಗಅಂಧಿ ಗ್ರಾಮೀಣ ವಿದ್ಉದೀಕರಣ ಯೋಜನೆಯನ್ನು ಯುಪಿಎ ಸರ್ಕಾರ ಜಾರಿಗೊಳಿಸಿತ್ತು. ಗ್ರಾಮಗಳ ವಿದ್ಯುದೀಕರಣ ಯೋಜನೆಯನ್ನು ಮನೆಮನೆಗಳಿಗೆ ತಲುಪಿಸುವ ಪ್ರಯತ್ನ ‘ಸೌಭಾಗ್ಯ’ ಯೋಜನೆಯಲ್ಲಿದೆ.

‘ಸೌಭಾಗ್ಯ’ದಲ್ಲಿ ಸಂಪರ್ಕದ ವೆಚ್ಚ ಉಚಿತ. ಆದರೆ ಬಳಸಿದ ವಿದ್ಯುತ್‌ಗೆ ಶುಲ್ಕ ತೆರಬೇಕಾಗುತ್ತದೆ. ವಿದ್ಯುತ್‌ ದರ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿರುವ ಕಾರಣ ಅನೇಕರು ಹಿಂಜರಿಯಬಹುದು. ಅದನ್ನೂ ಸರ್ಕಾರ ಗಮನದಲ್ಲಿ ಇಟ್ಟುಕೊಳ್ಳಬೇಕು. ವಿದ್ಯುತ್‌ ದರ ಅಗ್ಗವಾಗುವಂತೆ ಪ್ರಯತ್ನಿಸುವುದಾಗಿ ಪ್ರಧಾನಿ ಭರವಸೆ ಕೊಟ್ಟಿದ್ದಾರೆ. ‘ನಾವೀಗ ವಿದ್ಯುತ್‌ ಕೊರತೆಯ ಬದಲು ಬೇಡಿಕೆಗಿಂತ ಹೆಚ್ಚು ವಿದ್ಯುತ್‌ ಉತ್ಪಾದನೆಯ ದೇಶವಾಗುವತ್ತ ಸಾಗುತ್ತಿದ್ದೇವೆ.

ರೈತರು, ಗ್ರಾಮಸ್ಥರು ಸೇರಿ ಎಲ್ಲ ಬಗೆಯ ಬಳಕೆದಾರರಿಗೆ ದಿನದ 24 ತಾಸೂ ವಿದ್ಯುತ್‌ ಒದಗಿಸುವ ಗುರಿ ನಮ್ಮದು’ ಎಂದು ಅವರು ಹೇಳಿದ್ದಾರೆ. ‘ಸೌಭಾಗ್ಯ’ದಿಂದ ವಿದ್ಯುತ್‌ ಬೇಡಿಕೆ ಶೇ 20ರಷ್ಟು ಅಂದರೆ ವರ್ಷಕ್ಕೆ 8 ಸಾವಿರ ಕೋಟಿ ಯೂನಿಟ್‌ನಷ್ಟು ಹೆಚ್ಚುತ್ತದೆ. ತನ್ಮೂಲಕ ರಾಜ್ಯಗಳ ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ ವರ್ಷಕ್ಕೆ ₹ 24 ಸಾವಿರ ಕೋಟಿ ಹೆಚ್ಚು ಆದಾಯ ಬರಲಿದೆ ಎಂಬ ಅಂದಾಜಿದೆ. 2015ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಅವರು, ಬಾಕಿ ಇರುವ 18,452 ಗ್ರಾಮಗಳಿಗೆ 1 ಸಾವಿರ ದಿನಗಳೊಳಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಘೋಷಣೆ ಮಾಡಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ವಿದ್ಯುತ್‌ ಉತ್ಪಾದನೆ ಮತ್ತು ವಿತರಣಾ ಕಂಪೆನಿಗಳ ಆರ್ಥಿಕ ಆರೋಗ್ಯ ಚೆನ್ನಾಗಿಲ್ಲ ಎಂಬ ವಾಸ್ತವವನ್ನೂ ನಾವು ಮರೆಯಲಾಗದು. ಅವುಗಳಿಗೆ ಗ್ರಾಹಕರಿಂದಲೂ ಬಾಕಿ ಬರಬೇಕಾಗಿದೆ, ಪೂರೈಕೆದಾರರಿಗೂ ಅವು ಬಾಕಿ ಕೊಡಬೇಕಾಗಿದೆ. ಇದಕ್ಕಾಗಿಯೇ 2016ರಲ್ಲಿ ವಿದ್ಯುತ್‌ ಕಂಪೆನಿಗಳ ಬಾಕಿ ಮರು ಹೊಂದಾಣಿಕೆ ಮತ್ತು ಪುನಶ್ಚೇತನಕ್ಕೆ ‘ಉದಯ್‌’ ಯೋಜನೆ ಜಾರಿಗೆ ಬಂದಿತ್ತು. ಈ ಯೋಜನೆ ಯಶಸ್ವಿಯಾಗುವುದು ಈಗ ಮುಖ್ಯ. ಇದರ ಯಶಸ್ಸಿನಲ್ಲಿ ‘ಸೌಭಾಗ್ಯ’ದ ಯಶಸ್ಸು ಅಡಗಿದೆ. ಹೊಗೆ ಮತ್ತು ಕತ್ತಲಿಂದ ಕಷ್ಟ ಅನುಭವಿಸುತ್ತಿರುವ ಬಡ ಕುಟುಂಬಗಳ ಮಹಿಳೆಯರ ಬದುಕಿನಲ್ಲಿ ರಚನಾತ್ಮಕ ಬದಲಾವಣೆ ತರುವ ಸಾಮರ್ಥ್ಯ ‘ಸೌಭಾಗ್ಯ’ಕ್ಕೆ ಇದೆ. ಹೀಗಾಗಿ ಅದರ ಅನುಷ್ಠಾನಕ್ಕೆ ಯಾವುದೇ ಅಡಚಣೆ ಎದುರಾಗದಂತೆ ಸರ್ಕಾರ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT