ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆ ಮರೆಸಿಕೊಂಡಾಗ ನಡೆದಿತ್ತು ಮರುಮದುವೆ...

Last Updated 30 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಕ್ಷಿದಾರರಾಗಿ ವಕೀಲರ ಸೇವೆ ಬಯಸಿ ಬಂದವರಲ್ಲಿ ಹಲವರು ಕೇವಲ ಕಕ್ಷಿದಾರರಾಗಿಯೇ ಉಳಿದು ಹೋಗದೆ ಆಪ್ತವಾದ ಸ್ನೇಹಿತರೂ, ಹಿತೈಷಿಗಳೂ ಆಗಿಬಿಡುತ್ತಾರೆ. ನನ್ನ ಬಹು ಆತ್ಮೀಯರಲ್ಲಿ ಅನೇಕ ಮಂದಿ ಒಂದಲ್ಲಾ ಒಂದು ಕಾಲಘಟ್ಟದಲ್ಲಿ ಕಕ್ಷಿದಾರರಾಗಿ ಬಂದವರೇ. ಅವರಲ್ಲಿ ನಾನು ಹೆಮ್ಮೆ ಪಡುವಂತಹ ಉತ್ತಮಿಕೆ ಕಂಡಿದ್ದೇನೆ. ಕೆಲವರು ನನಗೆ ಶಕ್ತಿಯೇ ಆಗಿದ್ದಾರೆ.

ಅಂತಹವರ ಪೈಕಿ ದೇವಗೆರೆ ಗ್ರಾಮದ ಕಳಕಪ್ಪ ಒಬ್ಬರು. ನಮ್ಮಿಬ್ಬರದ್ದು 40 ವರ್ಷಗಳ ಸುದೀರ್ಘ ಸ್ನೇಹ. ಕಳಕಪ್ಪನ ಬಗ್ಗೆ ಮಾತು ಬಂದಾಗಲೆಲ್ಲಾ ನನಗೆ ‘OUR FRIENDSHIP HAS STOOD THE TEST OF TIME’ ಅನ್ನಿಸುತ್ತದೆ. ಇಂತಹ ಗೆಳೆಯ ಕಳಕಪ್ಪ ಒಂದು ಸಂಜೆ ಒಬ್ಬ ಬಲರಾಮನ ಗೋವಿನಂತಿದ್ದವನೊಂದಿಗೆ ಕಚೇರಿಗೆ ಬಂದರು. ಕಳಕಪ್ಪ ವಾಡಿಕೆ ಮಾತುಗಳನ್ನು ಬದಿಗಿಟ್ಟು ತಮ್ಮೊಂದಿಗೆ ಬಂದಿದ್ದ ರತ್ನಯ್ಯನ ಮಗಳು ಕುಮುದಾ ಎದುರಿಸುತ್ತಿದ್ದ ಸಮಸ್ಯೆಯನ್ನು ಕುರಿತು ಮಾತನಾಡಲು ಮುಂದಾದರು. ಅವರ ಇಂಗಿತ ನನಗೆ ಅರ್ಥವಾಗಿ ಮಾತುಗಳನ್ನು ಆಲಿಸಲು ಸಿದ್ಧನಾದೆ.

ಕುಮುದಾ ಚಿಟ್ಟೆಪಾಳ್ಯದ ಮುನ್ನಪ್ಪನೊಂದಿಗೆ ಮದುವೆಯಾಗಿ ಎಂಟು ವರ್ಷಗಳಾಗಿತ್ತು. ಮದುವೆಯಾದ ಎರಡು ತಿಂಗಳಿಗೇ ಮುನ್ನಪ್ಪ, ಗ್ರಾಮದಲ್ಲಿ ನಡೆದ ಜೋಡಿಕೊಲೆಯ ಆರೋಪಕ್ಕೆ ಒಳಗಾದ. ಮುನ್ನಪ್ಪ ಮತ್ತು ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಹುಡುಕಲು ಶುರುಮಾಡಿದಾಗ ಮೂವರೂ ತಲೆತಪ್ಪಿಸಿಕೊಂಡರು. ರತ್ನಯ್ಯ ಕುಮುದಾಳನ್ನು ಮನೆಗೆ ಕರೆದುಕೊಂಡು ಹೋಗಿ ನೋಡಿಕೊಳ್ಳುತ್ತಿದ್ದ. ಮುನ್ನಪ್ಪ ವಕೀಲರೊಬ್ಬರಿಂದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಾಕಿಸಿದ. ಸೆಷನ್ಸ್ ನ್ಯಾಯಾಲಯದಲ್ಲಾಗಲೀ, ಹೈಕೋರ್ಟ್‌ನಲ್ಲಾಗಲೀ ಅವನಿಗೆ ಜಾಮೀನು ದೊರೆಯಲಿಲ್ಲ. ಅಷ್ಟರಲ್ಲಿ ಇನ್ನಿಬ್ಬರು ಆರೋಪಿಗಳು ಪೊಲೀಸರ ಮುಂದೆ ಶರಣಾದರು. ತನಿಖೆ ಮುಗಿಸಿದ ಪೊಲೀಸರು ಮುನ್ನಪ್ಪನನ್ನು ತಲೆತಪ್ಪಿಸಿಕೊಂಡಿರುವ ಆರೋಪಿಯೆಂದು ಪರಿಗಣಿಸಿ ಮೂವರ ವಿರುದ್ಧ ಕೊಲೆ ದೋಷಾರೋಪ ಪಟ್ಟಿ ಸಿದ್ಧಪಡಿಸಿ ಕೋರ್ಟ್‌ಗೆ ಒಪ್ಪಿಸಿದರು.

ದೋಷಾರೋಪ ಪಟ್ಟಿ ದಾಖಲಾಗುತ್ತಿದ್ದಂತೆ ಮುನ್ನಪ್ಪ ಅದೇ ವಕೀಲರನ್ನು ಕಂಡು ಮತ್ತೊಮ್ಮೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸುವಂತೆ ಕೋರಿಕೊಂಡ. ವಕೀಲರು ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದರು. ಆದರೆ ಜೋಡಿ ಕೊಲೆಗಳಲ್ಲಿ ಮುನ್ನಪ್ಪನ ವಿರುದ್ಧ ಗಂಭೀರವಾದ ಆರೋಪಗಳಿರುವ ಕಾರಣ, ನಿರೀಕ್ಷಣಾ ಜಾಮೀನು ಸಿಗುವುದಿರಲಿ, ಬಂಧನಕ್ಕೆ ಒಳಗಾದರೆ ಸಾಮಾನ್ಯ ಜಾಮೀನು ಕೂಡ ಸಿಗುವ ಸಾಧ್ಯತೆಯಿಲ್ಲವೆಂದು ತಿಳಿಸಿದರು.

ಇದರಿಂದ ತೃಪ್ತನಾಗದ ಮುನ್ನಪ್ಪ ಮತ್ತೊಬ್ಬ ವಕೀಲರನ್ನು ಕಂಡ. ಅವರೂ ಅಂತಹುದೇ ಕಾರಣ ಕೊಟ್ಟಾಗ ವಿವರ್ಣನಾದ. ಬಂಧನಕ್ಕೆ ಒಳಗಾದ ಇತರ ಆರೋಪಿಗಳ ವಿಚಾರಣೆ ಮುಗಿದು ಕೊಲೆ ಪ್ರಕರಣದಲ್ಲಿ ತೀರ್ಪು ಏನಾಗುತ್ತದೆ ಎಂಬುದನ್ನು ತಿಳಿದ ನಂತರವೇ ತಾನು ವಾಪಸಾಗಬೇಕು, ಅಲ್ಲಿಯವರೆಗೆ ತಲೆಮರೆಸಿಕೊಂಡೇ ಇರಬೇಕು ಎಂದು ತನ್ನಲ್ಲೇ ತೀರ್ಮಾನಿಸಿ ಮತ್ತೆ ತಲೆತಪ್ಪಿಸಿಕೊಂಡ. ಉಳಿದ ಇಬ್ಬರು ಆರೋಪಿಗಳಿಗೆ ಜಾಮೀನು ಸಿಕ್ಕಿತು. ಆದರೆ ಈ ಕೊಲೆ ಪ್ರಕರಣ ಹಲವು ವರ್ಷಗಳು ಕಳೆದರೂ ವಿಚಾರಣೆಗೆ ಬರಲಿಲ್ಲ. ಆ ಅವಧಿಯಲ್ಲಿ ಮುನ್ನಪ್ಪ ಯಾರನ್ನೂ ಸಂಧಿಸಲಿಲ್ಲ. ಹೆಂಡತಿ ಕುಮುದಾಳೂ ಸೇರಿದಂತೆ ಯಾರಿಗೂ ಅವನ ಸುಳಿವು ಸಿಗಲಿಲ್ಲ. ಮುನ್ನಪ್ಪ ತಲೆತಪ್ಪಿಸಿಕೊಂಡು ಹೋಗಿ ಅನೇಕ ವರ್ಷಗಳಾದವು. ಆತ ಸತ್ತಿದ್ದಾನೋ, ಬದುಕಿದ್ದಾನೋ ಎನ್ನುವುದು ಕೂಡ ಯಾರಿಗೂ ತಿಳಿಯಲಿಲ್ಲ. ಅವನು ಕೂಡ ಯಾರನ್ನೂ ಸಂಪರ್ಕಿಸಲಿಲ್ಲ.

ಹೀಗೆ ಹಲವು ವರ್ಷ ಕಳೆದ ಮೇಲೆ, ಆತ ಜೀವಸಹಿತ ಇರುವುದು ಅನುಮಾನವೆಂದು ತೀರ್ಮಾನಿಸಿದ ರತ್ನಯ್ಯನ ಸಂಬಂಧಿಕರು, ಕುಮುದಾಳ ಮರು-ಮದುವೆಯನ್ನು ಮಾಡಿಸಲು ಯೋಚನೆ ಮಾಡಿದರು. ಈ ಬಗ್ಗೆ ರತ್ನಯ್ಯ ಅವರಿಗೆ ಒತ್ತಾಯವನ್ನೂ ಮಾಡಿದರು. ಇದು ರತ್ನಯ್ಯ ಹಾಗೂ ಅವರ ಹೆಂಡತಿಗೂ ಸರಿ ಎನಿಸಿತು. ತಮ್ಮ ಮಗಳ ಭವಿಷ್ಯದ ಪ್ರಶ್ನೆ ಇರುವುದರಿಂದ ಬೇರೊಬ್ಬರ ಜೊತೆ ಮದುವೆ ಮಾಡುವುದು ಸೂಕ್ತ ಎಂದು ದಂಪತಿ ಅಂದುಕೊಂಡರು.
ವಕೀಲೆಯೊಬ್ಬರ ಮೂಲಕ ಹಿಂದೂ ವಿವಾಹ ಕಾಯಿದೆಯ ಕಲಂ 13 ಉಪಕಲ 07ರಡಿ ಕುಮುದಾ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಏಕಪಕ್ಷೀಯ ವಿವಾಹ ವಿಚ್ಛೇದನ ಪಡೆದಳು. ತಮ್ಮ ದೂರದ ಸಂಬಂಧಿ ವಿದುರ ಮುಕ್ಕಣ್ಣನೊಂದಿಗೆ ಮದುವೆ ಮಾಡಿಸಲು ಎಲ್ಲರಿಗೂ ಒಪ್ಪಿಗೆಯಾಗಿ, ಮುಕ್ಕಣ್ಣ ಮತ್ತು ಅವನ ತಾಯಿ-ತಂದೆಯರೂ ಇದಕ್ಕೆ ಒಪ್ಪಿತರಾಗಿ ಮದುವೆಯು ನೆರವೇರಿತು. ಕುಮುದಾಳನ್ನು ಗಂಡನ ಮನೆಗೆ ಕಳಿಸಿಕೊಟ್ಟ ರತ್ನಯ್ಯ ದಂಪತಿ, ಹತ್ತಿರದ ಸಂಬಂಧಿಗಳು ನಿರಾಳರಾದರು.

ಕುಮುದಾಳ ಮರುಮದುವೆ ಆದ ಆರು ತಿಂಗಳ ನಂತರ ಕೊಲೆ ಪ್ರಕರಣದ ಇನ್ನಿಬ್ಬರು ಆರೋಪಿಗಳ ವಿಚಾರಣೆ ಮುಕ್ತಾಯವಾಗಿ ಅವರು ಖುಲಾಸೆಗೊಂಡರು, ವಿಚಾರಣೆ ಮುಗಿಯುವುದನ್ನೇ ಕಾಯುತ್ತಿದ್ದ ಮುನ್ನಪ್ಪ, ಸಹ ಆರೋಪಿಗಳು ಬಿಡುಗಡೆಯಾದ ವಿಷಯವನ್ನು ಹೇಗೋ ತಿಳಿದುಕೊಂಡ. ಅವರಿಬ್ಬರೂ ಬಿಡುಗಡೆಯಾಗಿರುವುದರಿಂದ ಅದೇ ಆಧಾರದ ಮೇಲೆ ತಾನೂ ಬಿಡುಗಡೆಯಾಗುತ್ತೇನೆ ಎಂದು ಭಾವಿಸಿದ. ಆದ್ದರಿಂದ ತಾನೂ ಪೊಲೀಸರಿಗೆ ಶರಣಾಗಿ ವಿಚಾರಣೆಯನ್ನು ಎದುರಿಸಲು ಮುಂದಾದ.

ವಕೀಲರೊಬ್ಬರನ್ನು ಗೊತ್ತುಪಡಿಸಿಕೊಂಡು ಅವರ ಮುಖಾಂತರ ಕೋರ್ಟಿಗೆ ಶರಣಾದ. ಕೋರ್ಟಿನ ಆದೇಶದಂತೆ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಉಳಿದ. ಇದಾದ ಕೆಲವು ದಿನಗಳಲ್ಲೇ ತನ್ನ ಹೆಂಡತಿ ಮರುಮದುವೆಯಾಗಿರುವ ವಿಚಾರ ತಿಳಿದುಬಂದು ಹೆಂಡತಿ ಮತ್ತು ಆಕೆಯ ಸಂಬಂಧಿಗಳ ಮೇಲೆ ಕ್ರೋಧಿತನಾದ. ಜೈಲಿನಲ್ಲಿರುವ ತನಗೆ ಜಾಮೀನು ಸಿಗುವ ಸಂಭವವೇ ಇಲ್ಲ. ಹಾಗಾಗಿ ಅವರ ವಿರುದ್ಧ ತಾನು ಏನೂ ಮಾಡಲು ಸಾಧ್ಯವಿಲ್ಲವೆಂದು ತಿಳಿದು ಪರಿತಪಿಸಿದ.

ಕೆಲವು ತಿಂಗಳ ಜೈಲುವಾಸದ ನಂತರ ಕುದಿಯುತ್ತಿದ್ದ ಕ್ರೋಧವೆಲ್ಲ ಕರಗಿತು. ತಾನು ಮುಂದೆ ಏನು ಮಾಡಬಹುದು ಎಂದು ಸಹ ವಿಚಾರಣಾಧೀನ ಕೈದಿಗಳ ಸಲಹೆ ಪಡೆದುಕೊಂಡ. ವಿಚಾರಣೆಗೆಂದು ಕೋರ್ಟಿಗೆ ಅವನನ್ನು ಕರೆತಂದಿದ್ದಾಗ, ವಕೀಲರೊಂದಿಗೆ ಚರ್ಚಿಸಿ ತನ್ನ ಹೆಂಡತಿ ಎರಡನೆಯ ಮದುವೆ ಮಾಡಿಕೊಂಡಿರುವ ಕುರಿತು ಒಂದು ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಕೇಳಿದ. ಹಾಗೆ ಮಾಡಲು ಸಾಧ್ಯವಿದೆ ಎಂದು ವಕೀಲರೂ ಹೇಳಿದರು.

ಅದರಂತೆ ಕುಮುದಾ ವಿರುದ್ಧ ದ್ವಿಪತಿತ್ವ (ಅಂದರೆ ದಂಪತಿಯಲ್ಲಿ ಯಾರಾದರೊಬ್ಬರು ಜೀವಂತವಿರುವಾಗ ಪುನಃ ವಿವಾಹವಾಗುವುದು- ಇದಕ್ಕೆ ಏಳು ವರ್ಷ ಶಿಕ್ಷೆ ಇದೆ). ಮೊಕದ್ದಮೆ ಹೂಡಿದ. ಕೆಲವು ಪ್ರಾರಂಭಿಕ ಪ್ರಕ್ರಿಯೆಗಳು ನಡೆದು ಕುಮುದಾಳಿಗೆ ನ್ಯಾಯಾಲಯದಲ್ಲಿ ನಿಗದಿತ ದಿನಾಂಕದಂದು ಹಾಜರಾಗಲು ಸಮನ್ಸ್ ಹೊರಟಿತು. ಕುಮುದಾ ಸಮನ್ಸ್ ಪಡೆದುಕೊಂಡಳು.

ರತ್ನಯ್ಯನಿಗೆ ದಿಕ್ಕು ತೋಚದಾಗಿ ತನ್ನ ಗೆಳೆಯರೊಬ್ಬರ ಮುಖಾಂತರ ಕಳಕಪ್ಪನನ್ನು ಸಂಧಿಸಿ ನನ್ನ ಕಚೇರಿಗೆ ಬಂದಿದ್ದರು...

ಇವೆಲ್ಲ ಸಂಗತಿಗಳನ್ನು ಕಳಕಪ್ಪ ತಿಳಿಸಿಕೊಡುತ್ತಾ ನಾನೇ ಏನಾದರೂ ಮಾಡಬೇಕು ಎಂದು ಕೋರಿದರು. ಒಂದು ಕ್ಷಣ ನಾನು ಅವರು ಹೇಳಿದ ಕಥೆಗಳನ್ನೆಲ್ಲಾ ಮನಸ್ಸಿನಲ್ಲಿಯೇ ಪುನರಾವರ್ತನೆ ಮಾಡಿದೆ. ಆಗ ನನ್ನ ಗಮನ ಮುನ್ನಪ್ಪ ತಲೆತಪ್ಪಿಸಿಕೊಂಡು ಹೋದ ನಂತರದಿಂದ ಕುಮುದಾಳ ಎರಡನೆಯ ಮದುವೆಯ ಮಧ್ಯೆ ಆಗಿ ಹೋದ ಘಟನೆಗಳತ್ತ ಹೋಯಿತು. ಈ ನಡುವಣ ಸಮಯ ಎಷ್ಟಿರಬಹುದು ಎಂಬ ಬಗ್ಗೆ ಕೂಲಂಕಷವಾಗಿ ರತ್ನಯ್ಯ ಅವರಲ್ಲಿ ವಿಚಾರಿಸಿಕೊಂಡೆ.
ಕುಮುದಾಳ ಪರವಾಗಿ ನಾನು ಸೆಷನ್ಸ್ ನ್ಯಾಯಾಲಯದಲ್ಲಿ ಮುನ್ನಪ್ಪ ಹೂಡಿದ್ದ ಮೊಕದ್ದಮೆಯ ವಿಧಿಬದ್ಧತೆಯನ್ನು ಮತ್ತು ಮ್ಯಾಜಿಸ್ಟ್ರೇಟರ ಆದೇಶವನ್ನು ಪ್ರಶ್ನಿಸಿ ಅರ್ಜಿ (ಕ್ರಿಮಿನಲ್ ರಿವಿಷನ್ ಪಿಟಿಷನ್) ದಾಖಲಿಸಿದೆ.

ಇದರ ನೋಟಿಸ್‌ ಅನ್ನು ಮುನ್ನಪ್ಪ ಜೈಲಿನಲ್ಲಿ ಪಡೆದುಕೊಂಡ. ಅವನ ಪರ ವಕೀಲ ಸುಬ್ಬಣ್ಣ ಸೆಷನ್ಸ್ ಕೋರ್ಟ್‌ಗೆ ಹಾಜರಾದರು. ಸೆಷನ್ಸ್ ನ್ಯಾಯಾಲಯವು ವಾದ-ಪ್ರತಿವಾದ ಕೇಳಲು ದಿನಾಂಕವನ್ನು ನಿಗದಿಪಡಿಸಿತು. ಈ ಪ್ರಕರಣದ ವಿಚಾರ ವಕೀಲರ ಸಂಘದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಇಂತಹ ಪ್ರಕರಣವೊಂದು ಹಿಂದೆಂದೂ ವಿಚಾರಣೆಗೆ ಬಂದಿರದ ಕಾರಣ ವಕೀಲರ ದೃಷ್ಟಿ ಈ ಕೇಸಿನತ್ತ ನೆಟ್ಟಿತ್ತು. ಕೆಲವರು ಮುನ್ನಪ್ಪನ ಹೇಳಿಕೆಯಂತೆ ಕುಮುದಾ ತಪ್ಪು ಮಾಡಿರುವಳೆಂದು; ಇನ್ನು ಕೆಲವರು ಅದಕ್ಕೆ ಬೇರೊಂದು ಮುಖವಿದ್ದು ಅದರಂತೆ ಅಪರಾಧವೇನೂ ಆಗಿಲ್ಲವೆಂದು ಚರ್ಚಿಸತೊಡಗಿದರು.

ತುಂಬಿದ ನ್ಯಾಯಾಂಗಣದಲ್ಲಿ ಕುಮುದಾ ಪರವಾಗಿ ನಾನು ದಾಖಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶರು ವಾದವನ್ನು ಪ್ರಾರಂಭಿಸಬಹುದೆಂದು ಸೂಚಿಸಿದರು. ನನ್ನ ವಾದದ ಪ್ರಾರಂಭದಲ್ಲಿ ಈ ಪ್ರಕರಣದ ಮತ್ತು ಮುನ್ನಪ್ಪ ಆರೋಪಿಯಾಗಿರುವ ಜೋಡಿಕೊಲೆ ಪ್ರಕರಣದ ಸಂಗತಿಗಳನ್ನು ತಿಳಿಸುತ್ತಿದ್ದಂತೆ ನ್ಯಾಯಾಧೀಶರು, ‘ಕೊಲೆ ಪ್ರಕರಣದ ವಿಚಾರಣೆ ಯಾವ ಹಂತದಲ್ಲಿದೆ?’ ಎಂದು ನನ್ನನ್ನು ಪ್ರಶ್ನಿಸಿದರು. ಅದರ ಆಗುಹೋಗುಗಳ ವಿವರಗಳನ್ನು ತಿಳಿಸಿದೆ. ಆಗ ನ್ಯಾಯಾಧೀಶರು ಸದ್ಯದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾದ ಮಂಡನೆ ಮಾಡಲು ಕೇಳಿಕೊಂಡರು.

‘ಯುವರ್ ಆನರ್, ಜೋಡಿ ಕೊಲೆ ಪ್ರಕರಣದಲ್ಲಿ ಮುನ್ನಪ್ಪ ಇತರ ಇಬ್ಬರೊಂದಿಗೆ ಆರೋಪಿಯಾಗಿ ಅದು ತನಿಖಾ ಹಂತದಲ್ಲಿರುವಾಗ ಮತ್ತೆ ತನಿಖೆ ಮುಗಿದು ದೋಷಾರೋಪ ಪಟ್ಟಿ ದಾಖಲಾದ ನಂತರ ಎರಡು ಬಾರಿ ನಿರೀಕ್ಷಣಾ ಜಾಮೀನಿಗಾಗಿ ಈ ನ್ಯಾಯಾಲಯ ಮತ್ತು ಹೈಕೋರ್ಟ್ ಮೊರೆಹೋಗಿದ್ದ. ಎರಡೂ ಸಂದರ್ಭದಲ್ಲಿ ಜಾಮೀನು ದೊರಕಲಿಲ್ಲ. ಇತರ ಆರೋಪಿಗಳಿಗೆ ಜಾಮೀನು ದೊರಕಿತು. ನ್ಯಾಯಾಲಯಗಳು ಮುನ್ನಪ್ಪನ ಜಾಮೀನು ಅರ್ಜಿಗಳನ್ನು ತಿರಸ್ಕರಿಸುವ ಮತ್ತು ಇತರರ ಅರ್ಜಿಯನ್ನು ಪುರಸ್ಕರಿಸಿದ ಆದೇಶಗಳಲ್ಲಿ ಜೋಡಿ ಕೊಲೆ ಪ್ರಕರಣದಲ್ಲಿ ಮುನ್ನಪ್ಪನ ಪಾತ್ರವೇ ಮುಖ್ಯವಾಗಿದ್ದು, ಆ ಕೊಲೆಗಳಲ್ಲಿ ಮುನ್ನಪ್ಪನೇ ನೇರವಾಗಿ ಭಾಗಿಯಾಗಿರುವ ವಿಚಾರ ದೋಷಾರೋಪ ಪಟ್ಟಿಯಲ್ಲಿ ಎದ್ದು ಕಾಣುತ್ತಿರುವುದರ ಕುರಿತು ಹೇಳಿದ್ದವು.

ಘಟನೆಯ ಗಂಭೀರತೆಯನ್ನು ಗ್ರಹಿಸಿಕೊಂಡ ಮುನ್ನಪ್ಪ ತಲೆತಪ್ಪಿಸಿಕೊಂಡ. ಪೊಲೀಸರು ದಂಡ ಪ್ರಕ್ರಿಯಾ ಸಂಹಿತೆಯ ಕಲಂ 82, 83 ರಂತೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮ ಜರುಗಿಸಿದರೂ ಅವರಿಂದ ಯಶಸ್ವಿಯಾಗಿ ತಲೆತಪ್ಪಿಸಿಕೊಂಡ. ಆತ ಮತ್ತೆ ಕಾಣಿಸಿಕೊಂಡದ್ದು ಜೋಡಿ ಕೊಲೆ ಮೊಕದ್ದಮೆಯಲ್ಲಿ ಇತರ ಆರೋಪಿಗಳು ಬಿಡುಗಡೆ ಹೊಂದಿದ ಮೇಲೆ. ಅಂದರೆ, ಏಳು ವರ್ಷ ಒಂಬತ್ತು ತಿಂಗಳ ನಂತರ. ತನ್ನ ಹೆಂಡತಿಗಾಗಲೀ, ತಾಯಿತಂದೆಗಾಗಲೀ, ಬಂಧುಬಳಗದ ಯಾವುದೇ ಸದಸ್ಯರಿಗಾಗಲೀ ತನ್ನ ಇರುವಿಕೆಯ ಯಾವುದೇ ಸುಳಿವನ್ನು ಬಿಟ್ಟುಕೊಡದಂತೆ ಅಡಗಿಕೊಂಡಿದ್ದ. ಇವನ ಹೆಂಡತಿ ಮತ್ತು ರಕ್ತಸಂಬಂಧಿಗಳು ಇವನು ಬದುಕಿರಬಹುದೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಭಾರತೀಯ ಸಾಕ್ಷ್ಯ ಕಾಯ್ದೆಯ ಕಲಂ 108 ಒಂದು ಮಹತ್ತರ ವಿಚಾರವನ್ನು ಕಾನೂನು ರೂಪದಲ್ಲಿ ನಮಗೆ ತಿಳಿಸುತ್ತದೆ. ಅದೇನೆಂದರೆ, ‘ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ಕಳೆದ ಏಳು ವರ್ಷಗಳಿಂದ ಯಾವುದೇ ಸುದ್ದಿಯಿಲ್ಲದಾಗ ಆತ ಮರಣ ಹೊಂದಿರುವನೆಂದು ತಿಳಿಯಬಹುದು’ ಎಂದು ನಾನು ಹೇಳುತ್ತಿದ್ದಂತೆ ಟೇಬಲ್ ಮೇಲಿದ್ದ ‘ಸಾಕ್ಷ್ಯ ಕಾಯ್ದೆ’ ಅನ್ನು ಸರ್ರನೆ ತಮ್ಮ ಕಡೆ ಎಳೆದುಕೊಂಡ ನ್ಯಾಯಾಧೀಶರು ನಾನು ಹೇಳಿದ ಕಲಮನ್ನು ಗಮನಿಸಿಕೊಂಡು, ಮತ್ತೆ ನನ್ನ ಕಡೆ ನೋಡುತ್ತಾ, ‘ಇದಕ್ಕೆ ಸಂಬಂಧಪಟ್ಟಂತೆ ಹಿಂದೂ ವಿವಾಹ ಅಧಿನಿಯಮದಲ್ಲಿ ಇಂತಹದೇ ಒಂದು ಕಲಂ ಇದೆಯಲ್ಲಾ; ಅದನ್ನು ನಿಮ್ಮ ಕಕ್ಷಿದಾರರು ಕೊನೆಗಾಣಿಸಿರುವರೇ?’ ಎಂದು ಪ್ರಶ್ನಿಸಿದರು. ನಾನು ‘ಅದೆಲ್ಲಾ ಪೂರೈಸಿಯಾಗಿದೆ ಸ್ವಾಮಿ’ ಎಂದಾಗ, ‘ಅರ್ಥವಾಯಿತು ಬಿಡಿ’ ಎಂದರು.

ಮುನ್ನಪ್ಪನ ವಕೀಲರು ಎದ್ದು ನಿಂತು ಸಮಯಾವಕಾಶಕ್ಕಾಗಿ ಕೇಳಿಕೊಂಡರು. ನ್ಯಾಯಾಧೀಶರು ತುಸು ಹೆಚ್ಚೇ ಸಿಟ್ಟುಮಾಡಿಕೊಂಡು, ‘ಅವರು ಎತ್ತಿರುವ ಲೀಗಲ್ ಪಾಯಿಂಟ್ ಅಂಗೈ ಅಷ್ಟೇ ಸ್ಪಷ್ಟವಾಗಿದೆ. ಅದು ನನಗೆ ಅರ್ಥವಾಗಿರುವಂತೆ ನಿಮಗೂ ಅರ್ಥವಾಗಿರಬೇಕೆಂದು ತಿಳಿದಿದ್ದೇನೆ. ನಿಮಗೇನಾದರೂ ಭಿನ್ನವಾಗಿ ಅರ್ಥವಾಗುತ್ತಿದೆಯೇ? ಅವರು ಕಳೆದ 8 ವರ್ಷಗಳಿಂದ ಎಚ್ಚರ ತಪ್ಪಿಲ್ಲ’ ಎನ್ನುತ್ತಾ, ‘ಏನಾದರೂ ಹೇಳುವುದಿದ್ದರೆ ದಯಮಾಡಿ ಈಗಲೇ ಹೇಳಿ. ಇದಕ್ಕೆ ಮುಂದೂಡುವುದು ಬೇಕಿಲ್ಲ’ ಎಂದು ಕಡ್ಡಾಯಗೊಳಿಸಿದರು. ಮುನ್ನಪ್ಪನ ವಕೀಲರು ಕಲಂ 108 ಭಾರತೀಯ ಸಾಕ್ಷ್ಯ ಕಾಯ್ದೆಗೆ ಸಂಬಂಧಿಸಿದಂತೆ ಇನ್ನೊಂದು ರೀತಿಯ ವ್ಯಾಖ್ಯಾನ ಮಾಡಲು ಶುರುಮಾಡಿದರಾದರೂ, ನ್ಯಾಯಾಧೀಶರು ಒಪ್ಪದೇ ‘ಕಾನೂನು ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದಾಗ ವಿಚಾರಗಳನ್ನು ಬದಲಾಯಿಸುತ್ತಿದ್ದೀರಿ’ ಎನ್ನುತ್ತ ತೀರ್ಪನ್ನು ನೀಡಲು ದಿನಾಂಕವೊಂದನ್ನು ನಿಗದಿಪಡಿಸಿದರು. ಆ ದಿನ ಕುಮುದಾಳ ಅರ್ಜಿಯನ್ನು ಪುರಸ್ಕರಿಸುತ್ತಾ ಮುನ್ನಪ್ಪನು ಅಧೀನ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯನ್ನು ವಜಾಗೊಳಿಸಿದರು.

ಇದಾದ ಕೆಲವು ತಿಂಗಳಲ್ಲೇ ಜೋಡಿ ಕೊಲೆ ಮೊಕದ್ದಮೆಯಲ್ಲಿ ಮುನ್ನಪ್ಪನು ತಪ್ಪಿತಸ್ಥನೆಂದು ಕಂಡುಬಂದು ಆಜೀವ ಕಾರಾಗೃಹ ಶಿಕ್ಷೆಗೆ ಗುರಿಯಾಗಿ ಇದ್ದ ಕಾರಾಗೃಹದಲ್ಲೇ ಉಳಿದ.

(ಹೆಸರುಗಳನ್ನು ಬದಲಾಯಿಸಲಾಗಿದೆ)

ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT