ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಲಿಗೆ ಕತ್ತರಿಸುವವರ ಸಹಿಸಲಾಗದು’

Last Updated 30 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೊನಚು ಮಾತು, ಕಟು ವ್ಯಂಗ್ಯದ ಬರಹಗಳಲ್ಲೂ ನಿಷ್ಠುರದ ದರ್ಶನ ಮಾಡಿಸುವ ಚಿಂತಕ, ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅವರನ್ನು ಮೈಸೂರಿನಲ್ಲಿ ನವೆಂಬರ್ 24ರಿಂದ 26ರವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಕರ್ನಾಟಕ ವಿ.ವಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಚಂಪಾ, 1964ರಲ್ಲಿ ‘ಸಂಕ್ರಮಣ’ ಸಾಹಿತ್ಯಿಕ ಪತ್ರಿಕೆ ಆರಂಭಿಸಿದರು. ಸಾಹಿತ್ಯಿಕ ಚಟುವಟಿಕೆಗಳ ಜತೆಗೆ ಬಂಡಾಯ ಸಾಹಿತ್ಯ ಸಂಘಟನೆ ಸಂಚಾಲಕರಾಗಿದ್ದರು. ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿಯಾಗಿ ಗೋಕಾಕ್ ಚಳವಳಿಯ ಕೇಂದ್ರ ಬಿಂದುವಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದರು. ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಪರವಾಗಿ ನಿರಂತರ ಹೋರಾಟ ಮಾಡುತ್ತ ಬಂದಿರುವ ಚಂಪಾ, ಎಂ.ಎಂ.ಕಲಬುರ್ಗಿ ಹತ್ಯೆ ಖಂಡಿಸಿ, ತಮಗೆ ದೊರೆತ ಪ್ರತಿಷ್ಠಿತ ಪ್ರಶಸ್ತಿಗಳನ್ನು ವಾಪಸ್ ಮಾಡಿದರು.

*‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ ಎಂಬ ಘೋಷಣೆಯೊಂದಿಗೆ ನೀವು ಬರವಣಿಗೆ ಮೂಲಕ ವ್ಯವಸ್ಥೆ ವಿರುದ್ಧ  ಬಂಡಾಯ ಸಾರಿದವರು. ಈಗ ಪ್ರಶಸ್ತಿ–ಸನ್ಮಾನ, ಪದವಿಗಳನ್ನು ಒಪ್ಪಿಕೊಳ್ಳುತ್ತಿದ್ದೀರಿ. ಇದು ನಂಬಿದ ಆಶಯಗಳಿಗೆ ವಿರುದ್ಧವಲ್ಲವೇ?
ಈ ಘೋಷ ವಾಕ್ಯ ಕೊಟ್ಟವರು ಡಿ.ಆರ್‌.ನಾಗರಾಜ್‌. ಇದನ್ನು 1970ರ ದಶಕದಲ್ಲಿ ನಾವು ಬಂಡಾಯ ಚಳವಳಿಗೆ ಬಳಸಿಕೊಂಡೆವು. 60–70ರ ದಶಕದಲ್ಲಿ ಇಡೀ ದೇಶದ ಮತ್ತು ಕರ್ನಾಟಕದ ಎಲ್ಲ ವಿದ್ಯಮಾನಗಳಿಗೆ ಕನ್ನಡದ ಬರಹಗಾರರು ದೊಡ್ಡಮಟ್ಟದ ಪ್ರತಿರೋಧ ಒಡ್ಡಿದರು. ಇದಕ್ಕೆ ಒಂದು ಹಿನ್ನೆಲೆ ಇದೆ. ನನ್ನ ಮಟ್ಟಿಗೆ ಹೇಳುವುದಾದರೆ, ನಾನು ಸಮಾಜವಾದಿ ಯುವಜನ ಸಭಾದಲ್ಲಿ ಬೆಳೆದು ಬಂದವನು. ಲಂಕೇಶ್‌, ತೇಜಸ್ವಿ, ರಾಮದಾಸ್‌, ಕೆ.ಎಂ.ಶಂಕರಪ್ಪ... ನಾವೆಲ್ಲಾ ಸಮಾಜವಾದದಲ್ಲಿ ನಂಬಿಕೆ ಇಟ್ಟುಕೊಂಡವರು. ರಾಜಕೀಯವಾಗಿ ಲೋಹಿಯಾ ವಾದಿಗಳು ಎಂದು ಗುರುತಿಸಿಕೊಂಡವರು. ಅದು ನಮ್ಮ ಪೊಲಿಟಿಕಲ್‌ ಐಡೆಂಟಿಟಿ. ಕುವೆಂಪು ನಮ್ಮ ಆ ಹೊತ್ತಿನ ಸ್ಫೂರ್ತಿ. 1974ರೊಳಗೆ ಕರ್ನಾಟಕ ಕಲಾವಿದರು ಮತ್ತು ಬರಹಗಾರರ ಒಕ್ಕೂಟ ಅಸ್ತಿತ್ವಕ್ಕೆ ಬಂತು. ಒಕ್ಕೂಟ ಮೈಸೂರಿನಲ್ಲಿ ಉದ್ಘಾಟನೆ ಆಯಿತು. ಅಂದು ಕುವೆಂಪು ಅವರು ಬ್ರಾಹ್ಮಣ್ಯ ಹಾಗೂ ಪುರೋಹಿತಶಾಹಿಗಳ ವಿರುದ್ಧ ದೊಡ್ಡ ಸಮರ ಸಾರಿದರು. ಪರಿವರ್ತನೆ ಪರ್ವ ಶುರುವಾಗಿದ್ದೇ ಅಲ್ಲಿಂದ. ಮುಂದಿನ ಹಂತವೇ ತುರ್ತುಪರಿಸ್ಥಿತಿ. ಜೆ.ಪಿ. ಚಳವಳಿಯಲ್ಲಿ ನಾವು ಕ್ರಿಯಾಶೀಲರಾಗಿದ್ದೆವು. ಮಾರ್ಕ್ಸ್‌ವಾದಿಗಳು ದೂರದಲ್ಲಿದ್ದರು. ಆಮೇಲೆ ನಮ್ಮ ಸಾಮಾನ್ಯ ವೈರಿ ಯಾರು ಎಂದು ಗೊತ್ತಾದ ಬಳಿಕ ನಾವು ಎಡ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದೇ ಪ್ರವಾಹದಲ್ಲಿ ಸೇರಿಕೊಂಡೆವು.

ಆಗ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಮ್ಮ ಕಣ್ಣಿಗೆ ಪ್ರತಿಗಾಮಿ ಶಕ್ತಿಗಳ ಸಂಕೇತವಾಗಿತ್ತು. ಧರ್ಮಸ್ಥಳದ ಸಮ್ಮೇಳನಕ್ಕೆ ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾದರು. ಅವರು ಪುರೋಹಿತಶಾಹಿ ವ್ಯವಸ್ಥೆಯ ರೂಪವಾಗಿ ಕಂಡರು. ನಾವು ಪ್ರಜ್ಞಾಪೂರ್ವಕವಾಗಿ ಇಂಥದೊಂದು ಸಂಸ್ಥೆ ವಿರುದ್ಧ ನಿಲುವು ತಾಳಿದೆವು.

ಸಾಮಾನ್ಯವಾಗಿ, ಒಂದು ಚಳವಳಿ ಪರಿಣಾಮ ಮತ್ತೊಂದರ ಮೇಲೆ ಇರುತ್ತೆ. ಗೊ.ರು. ಚನ್ನಬಸಪ್ಪ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿದ್ದಾಗ ಅವರೇ ಮುಂದೆ ನಿಂತು, ಬಂಡಾಯ ಸಾಹಿತ್ಯ ಸಂಘಟನೆಯ ದಶಮಾನೋತ್ಸವ ಆಚರಿಸಿದರು. ಆಮೇಲೆ ಇದೊಂದು ಪ್ರಜಾಸತ್ತಾತ್ಮಕ ಸಂಸ್ಥೆ ಎಂಬ ಸಂಗತಿ ನಮಗೆ ಮನವರಿಕೆ ಆಯ್ತು. ಅನಂತರ ಸಾಹಿತ್ಯ ಪರಿಷತ್ತಿಗೆ ನಾನೇ ಗೆದ್ದು ಬಂದೆ. ಸಾಹಿತ್ಯ ಪರಿಷತ್ತು ಗೋಕಾಕ್‌ ಚಳವಳಿಯ ಮುಂದುವರಿದ ಭಾಗವಾಯಿತು. ನಮ್ಮ ಸಿದ್ಧಾಂತ ಮತ್ತು ಮನೋಧರ್ಮದಿಂದ ಕಸಾಪದಲ್ಲೂ ಸಂಘರ್ಷ ಮುಂದುವರಿಯಿತು. ಇದಕ್ಕೊಂದು ದೊಡ್ಡ ಉದಾಹರಣೆ ಶಿವಮೊಗ್ಗ ಸಾಹಿತ್ಯ ಸಮ್ಮೇಳನ.

* ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಆದರೆ, ಸಮ್ಮೇಳನಗಳಲ್ಲಿ ಈಗಲೂ ರಾಜಕಾರಣಿಗಳಿಗೆ ಮಣೆ ಹಾಕಲಾಗುತ್ತಿದೆ?
ಸಾಹಿತ್ಯ ಪರಿಷತ್ತು ಒಂದು ಸ್ಥಾವರ ಸಂಸ್ಥೆ. ಸ್ಥಾವರ ಅಂದ್ರೆ ಒಂದು ರೀತಿ ಜಡಾನೇ. ಅದನ್ನು ಜಂಗಮವಾಗಿ ಮಾಡಬೇಕಾದರೆ ಪರಿಷತ್ತಿನ ಅಧ್ಯಕ್ಷ ಬಹಳ ಮುಖ್ಯ. ಅವರ ಜೊತೆಗಿರುವ ಕಾರ್ಯಕಾರಿ ಸಮಿತಿ ಸಂಗಾತಿಗಳೂ ಅಷ್ಟೇ ಮುಖ್ಯ. ಅಧ್ಯಕ್ಷ ಸರ್ವಾಧಿಕಾರಿ ಅಲ್ಲ. ಎಲ್ಲರನ್ನು ಕಟ್ಟಿಕೊಂಡೇ ಮುಂದೆ ಹೋಗಬೇಕು. ನನ್ನಂತ ಸೈದ್ಧಾಂತಿಕ ಚಳವಳಿ ಹಿನ್ನೆಲೆಯಿಂದ ಬಂದವರ ಕಾರ್ಯಶೈಲಿ ಬೇರೆ ಇರುತ್ತೆ. ಕೆಲವರು ಮಾಸ್ತರಿಕೆ ಮಾಡಿ ಬಂದಿರುತ್ತಾರೆ. ವ್ಯಾಪಾರ–ಉದ್ಯಮದವರು ಇರುತ್ತಾರೆ. ಸರ್ಕಾರಿ ಸೇವೆಯವರೂ ಇರುವುದುಂಟು. ಹೀಗಾಗಿ ಒಂದೇ ತರಹದ ತಾತ್ವಿಕ ಗಟ್ಟಿತನ ನಿರೀಕ್ಷೆ ಮಾಡುವಂತಿಲ್ಲ. ರಾಜಕಾರಣಿಗಳನ್ನು ದೂರ ಇಡುವುದಕ್ಕೆ ನಾನು ವಿರೋಧ ಇದ್ದೇನೆ. ಕನ್ನಡದ ಎಲ್ಲ ಸಮಸ್ಯೆಗಳಿಗೂ ಧ್ವನಿ, ವೇದಿಕೆ ಆಗುವ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಪಾಲ್ಗೊಳ್ಳಬೇಕು. ಅದು ಪ್ರಜಾಸತ್ತೆಯೊಳಗೆ ಪ್ರಜೆಗಳ ಸೇವಕರಾಗಿ ಮಾತ್ರ.

*ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಸಮ್ಮೇಳನದ ಸ್ವರೂಪ ಬದಲಾಗಬೇಕೇ?
ಎಲ್ಲೆಡೆಯಿಂದಲೂ ಜನ ಸಮ್ಮೇಳನಕ್ಕೆ ಬರಬೇಕು. ನಾವಿರುವುದು ಭೌಗೋಳಿಕ– ರಾಜಕೀಯ ಕರ್ನಾಟಕದಲ್ಲಿ. ನಮ್ಮ ಸಾಂಸ್ಕೃತಿಕ ಪ್ರದೇಶ ವಿಶಾಲವಾಗಿದೆ. ರಾಜ್ಯದ ಹೊರಗೂ ಕನ್ನಡಿಗರಿದ್ದಾರೆ. ವರ್ಷಕ್ಕೆ ಒಮ್ಮೆಯಾದರೂ ಎಲ್ಲರೂ ಕೂಡಬೇಕು. ಸಮ್ಮೇಳನ ಭಾವನಾತ್ಮಕವಾಗಿ ನಮ್ಮನ್ನು ಬೆಸೆಯುತ್ತೆ. ಅಲ್ಲದೆ. ಜನರ ಸಾಮಾಜಿಕ ಹಾಗೂ ಸಾಮೂಹಿಕ ಜವಾಬ್ದಾರಿ ಹೆಚ್ಚು ಮಾಡುವ ದೊಡ್ಡ ವೇದಿಕೆ ಇದು.

* ಬರಹಗಾರರ ಸೃಜನಶೀಲ ಅಭಿವ್ಯಕ್ತಿಗೆ ಇರುವ ಮಾಧ್ಯಮ ಸಾಹಿತ್ಯ. ಸಾಹಿತಿಗಳು ಎಡ– ಬಲದ ಬೇಲಿ ಹಾಕಿಕೊಳ್ಳುವುದು ಸರಿಯೇ?
ಸಾಹಿತ್ಯ ಲೋಕವನ್ನು ನಾನು ಅಕ್ಷರಜೀವಿಗಳ ಲೋಕ ಅಂತ ಕರೀತೀನಿ. ಇಲ್ಲಿ ಕಥೆ, ಕವನ ಬರೆಯುವ ಸೃಜನಶೀಲರಿದ್ದಾರೆ. ಪತ್ರಕರ್ತರೂ ಇದರೊಳಗೆ ಬರುತ್ತಾರೆ. ಇನ್ನು ಮೂರನೇ ಬೆಳವಣಿಗೆ ಸೋಷಿಯಲ್‌ ಮೀಡಿಯಾ (ಸಾಮಾಜಿಕ ಜಾಲತಾಣ) ಇವೆಲ್ಲಕ್ಕೂ ಭಾಷೆಯೇ ಬಂಡವಾಳ. ಇಡೀ ಬದುಕಿನೊಳಗೆ ಅನೇಕ ಗೊಂದಲಗಳಿವೆ. ನಮ್ಮ ಸಮಾಜಕ್ಕೆ ಒಂದು ನಿರಂತರ ಚರಿತ್ರೆ ಇದೆ. ಭೂತ, ವರ್ತಮಾನ ಇದೆ. ಇದರ ಮೇಲೇ ಭವಿಷ್ಯ ನಿರ್ಮಾಣ ಆಗುವುದು. ಇಲ್ಲೂ ಪ್ರೇಮ– ದ್ವೇಷ, ಜಗಳ– ಕಿತ್ತಾಟ, ಟೀಕೆ ಇದ್ದದ್ದೇ. ಯಾವುದೇ ಸಂಘರ್ಷ ಮೌಲ್ಯ ಹಾಗೂ ಸಿದ್ಧಾಂತದ ನೆಲೆಯೊಳಗೆ ಇರಬೇಕೇ ವಿನಾ ಧರ್ಮ, ಜಾತಿಯ ನೆಲೆಯೊಳಗೆ ಇರಬಾರದು. ಸದ್ಯ ಇಡೀ ದೇಶದಲ್ಲಿ ಒಂದು ರೀತಿ ಮೌಲ್ಯಗಳ ಸಂಘರ್ಷ ನಡೆಯುತ್ತಿದೆ. ಇದು ಸಹಜ ಹಾಗೂ ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಇಡೀ ಕನ್ನಡ ಸಾಹಿತ್ಯ ಪರಂಪರೆ ಒಟ್ಟಾರೆ ಪ್ರಗತಿಪರ, ಮನುಷ್ಯಪರ, ಎಡಪಂಥೀಯ ಅಂತಲೇ ಹೇಳಬಹುದು.

*ಸಮಾಜದಲ್ಲಿ ಸಹನೆ ಕಡಿಮೆ ಆಗುತ್ತಿದೆ. ಅಸಹನೆ ಬೆಳೆಯುತ್ತಿದೆ. ಕೆಂಪೇಗೌಡರ ಬಗ್ಗೆ ಮಾತನಾಡಿದರೆ ಒಕ್ಕಲಿಗರು ಬೀದಿಗೆ ಬರುತ್ತಾರೆ. ಬ್ರಾಹ್ಮಣರ ಬಗ್ಗೆ ಕಾಗೋಡು ತಿಮ್ಮಪ್ಪ ಮಾತನಾಡಿದರೆ ಮೂತ್ರಿಗಳಲ್ಲಿ ಭಾವಚಿತ್ರ ಅಂಟಿಸುತ್ತಾರೆ. ಬಸವಣ್ಣನ ಬಗೆ ಬರೆದರೆ ಲಿಂಗಾಯತ ಸಮಾಜ ಪ್ರತಿಭಟಿಸುತ್ತದೆ. ಈ ಸಂದರ್ಭದಲ್ಲಿ ಬರಹಗಾರರ ಜವಾಬ್ದಾರಿ ಏನು?
ಬರಹಗಾರರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಜನ ಸಮುದಾಯದ ವಿವೇಕದ ಪ್ರತಿನಿಧಿಗಳು ಅವರು. ಅಕ್ಷರದ ಮೂಲಕ ಅವರಿಗೆ ಧ್ವನಿ ಆಗಬೇಕಾದವರು ಬರಹಗಾರರು. ಇದರ ಬಗ್ಗೆ ಅನೇಕರಿಗೆ ಬಹಳ ಸಿಟ್ಟಿದೆ. ವ್ಯಕ್ತ ಮಾಡಲಾಗದೆ ಸುಮ್ಮನಿದ್ದಾರೆ. ಎಂತಹದೇ ಕೆಟ್ಟ ಆಡಳಿತ ಇದ್ದರೂ, ದುಷ್ಟ ದೊರೆ ಇದ್ದರೂ ನಿಜವಾದ ಬರಹಗಾರ ಸುಮ್ಮನೆ ಕೂರಲು ಸಾಧ್ಯವಿಲ್ಲ. ಸುಮ್ಮನೆ ಕೂತರೆ ಅವನನ್ನು ಬರಹಗಾರ ಅನ್ನುವುದಿಲ್ಲ. ನಾನು ಬಳಸುವ ಮಾಧ್ಯಮ ನನ್ನದೂ ಅಲ್ಲ, ನನ್ನಪ್ಪನದೂ ಅಲ್ಲ. ಹಾಗೆ, ಮಾಧ್ಯಮವಾಗಿ ಬಳಸುವ ಭಾಷೆ ವೈಯಕ್ತಿಕವೂ ಹೌದು. ಸಾರ್ವತ್ರಿಕವೂ ಹೌದು. ಅದು ಇವತ್ತಿನ ಭಾಷೆಯೂ ಹೌದು. ನಮ್ಮ ಎಲ್ಲ ಕಾಲದ ಭಾಷೆಯೂ ಹೌದು. ಆ ಅರಿವು ಇರಬೇಕು.

*ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೊಡ್ಡ ದಾಳಿ ನಡೆಯುತ್ತಿದೆ ಎಂಬ ಕೂಗೆದ್ದಿದೆ. ಈ ಸಂದಿಗ್ಧತೆ ನಿಭಾಯಿಸುವುದು ಹೇಗೆ?
ನಮ್ಮ ನಾಲಿಗೆ ಕತ್ತರಿಸಲು ಬರುವವರ ವಿರುದ್ಧ ಹೋರಾಟ ಮಾಡಲೇಬೇಕು. ಇದು ಒಬ್ಬರಿಂದ ಆಗುವುದಿಲ್ಲ. ಜನಾಂದೋಲನ ಆಗಬೇಕು. ಇನ್ನೊಂದು, ಅಂತರಂಗದ ಹೋರಾಟ. ನನ್ನ ಮಾತು ಯಾವ ರೀತಿ ಹೇಳಿದರೆ ಗುರಿ ತಲುಪಬಹುದು ಎಂದು ಆಲೋಚಿಸಬೇಕು. ಇದು ಬರಹಗಾರರಿಗೆ ಬಹಳ ಮುಖ್ಯ.

*ಹೊಸ ತಲೆಮಾರಿನ ಬರಹಗಾರರನ್ನು ಯಾವ ನೆಲೆಯಲ್ಲಿ ಗುರುತಿಸಬೇಕು?
ತೀರಾ ಹೊಸದು ಯಾವುದೂ ಇಲ್ಲ. ಪತ್ರಿಕೆಗಳ ಮೂಲಕ, ಸೋಷಿಯಲ್‌ ಮೀಡಿಯಾ ಮೂಲಕ ಸಾವಿರಾರು ಜನ ಬರೆಯುತ್ತಿದ್ದಾರೆ. ತುಂಬಾ ವೈವಿಧ್ಯವೂ ಇದೆ. ಆದರೆ, ಸೈದ್ಧಾಂತಿಕವಾಗಿ ಕಲಸುಮೇಲೊಗರ. ಹಳ್ಳಿಗಾಡಿನಿಂದ ಬಂದವರು, ತಳ ಸಮುದಾಯದಿಂದ ಬಂದವರು ದಲಿತ, ಬಂಡಾಯದ ಧಾರೆ ಮುಂದುವರೆಸಿದ್ದಾರೆ. ಬಂಡಾಯದ ಕಾಲ ಇನ್ನೂ ಮುಗಿದಿಲ್ಲ. ಅವರ ಮುಂದೆ ಬೇಕಾದಷ್ಟು ಸಮಸ್ಯೆಗಳಿವೆ.

ನವ್ಯದ ಮುಂದುವರಿಕೆಯನ್ನೂ ನಾವು ಕಾಣುತ್ತಿದ್ದೇವೆ. ಎಚ್.ಎಸ್‌.ವೆಂಕಟೇಶ ಮೂರ್ತಿ ಬರೆಯುತ್ತಿದ್ದಾರೆ. ಕಾರ್ಪೊರೇಟ್‌ ಸಾಹಿತಿಗಳು ಅಂತ ನಾವು ಸಾಮಾನ್ಯವಾಗಿ ಕರೆಯುವ ವಸುಧೇಂದ್ರ, ನಾಗರಾಜ್‌ ವಸ್ತಾರೆ, ವಿವೇಕ ಶಾನಭಾಗ, ಜಯಂತ್‌ ಕಾಯ್ಕಿಣಿ, ದತ್ತಾತ್ರಿ ಅವರದ್ದೂ ನವ್ಯದ ಮುಂದುವರಿಕೆ. ಎಲ್ಲ ದಾರಿಗಳೂ ಮುಂದುವರಿದಿವೆ. ಹೊಸ ತಲೆಮಾರಿನ ಬರವಣಿಗೆಗೆ ಹತ್ತಿಪ್ಪತ್ತು ವರ್ಷ ಆದ ಮೇಲೆ ಸ್ವಲ್ಪ ಹೊರಳು ನೋಟ ಬೀರಿದಾಗ ಅದಕ್ಕೊಂದು ಲೇಬಲ್‌ ಕೊಡಬಹುದು.

*ಡಿಜಿಟಲ್‌ ಲೋಕಕ್ಕೆ ಕನ್ನಡ ಸಾಹಿತ್ಯ ಅಣಿಗೊಳಿಸುವುದು ಹೇಗೆ?
ನಾನು ಡಿಜಿಟಲ್‌ ಲೋಕಕ್ಕೆ ಇಲಿಟರೇಟ್‌. ಏನೂ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳುವ ಆಸಕ್ತಿಯೂ ಇಲ್ಲ. ಬಿಳಿಯ ಹಾಳೆ ಮೇಲೆ ಕರಿ ಅಕ್ಷರ ಮೂಡಿಸುವವನು ನಾನು. ಡಿಜಿಟಲೈಸೇಷನ್‌ ದಾಖಲೆಯ ಒಂದು ಮಾದರಿ. ಅಕ್ಷರವೂ ಅದೇ. ಮಾತು ಮತ್ತು ಧ್ವನಿಯೂ ಭಾಷೆ. ಲಿಪಿ ಈಚಿನ ಶತಮಾನಗಳ ಬೆಳವಣಿಗೆ. ಅಕ್ಷರ ಒಂದು ಮಿತಿ. ಅದನ್ನು ಒಡೆದೊಡೆದು ಕ್ಯಾರೆಕ್ಟರ್ಸ್‌ ಮಾಡಲಾಗಿದೆ. ಅಕ್ಷರ ಹಾಗೂ ಲಿಪಿಗೆ ಕಾಲ, ದೇಶಗಳ ಎಲ್ಲೆ ಇಲ್ಲ. ಇವತ್ತು ಬರೆದಿದ್ದು ಮುಂದೆ ಯಾವುದೋ ಕಾಲದಲ್ಲಿ ಓದಬಹುದು. ಎಲ್ಲಾದರೂ ಓದಬಹುದು. ಇದಕ್ಕಿಂತ ನೂರು ಪಟ್ಟು ಶಕ್ತಿ ಇರುವುದು ಕ್ಯಾರೆಕ್ಟರ್ಸ್‌ಗೆ. ಒಂದು ಕಾಲಕ್ಕೆ ಎಲ್ಲ ಭಾಷೆಗಳು ಅಸ್ತಿತ್ವ ಕಳೆದುಕೊಂಡು ಈ ಕ್ಯಾರೆಕ್ಟರ್‌ ವಿಶ್ವ ಭಾಷೆ ಆಗಿಬಿಡಬಹುದು. ಸದ್ಯದ ಸ್ಥಿತಿಯಲ್ಲಿ ಯಾವುದೇ ಭಾಷೆಗೆ ತಾಂತ್ರಿಕತೆ ಬೇಕು. ರೀಚ್‌ ಅಂದರೆ, ಬೀಸು ಇದೆಯಲ್ಲಾ ಅದು ಎಲ್ಲ ಭಾಷೆಗೂ ಬೇಕು. ಸೃಜನಶೀಲತೆಗೆ ಇದರಿಂದ ಹೆಚ್ಚು ಲಾಭ ಇಲ್ಲ. ಅದು ಬೇರೆಯದೇ ಲೋಕ. ನಮ್ಮ ವಾಣಿಜ್ಯ, ವ್ಯವಹಾರ, ಕೈಗಾರಿಕೆಗಳಿಗೆ ಡಿಜಿಟಲೈಸೇಷನ್‌ ಅನಿವಾರ್ಯ.

*ಹಿಂದಿ ಹೇರಿಕೆ ವಿರುದ್ಧ ಮತ್ತೊಂದು ಚಳವಳಿ ಅಗತ್ಯವಿದೆಯೇ?
ನಮ್ಮ ದೇಶಕ್ಕೆ ಭಾಷಾ ನೀತಿ ಬೇಕು. ಬಹು ಭಾಷೆ ಇರುವ ಕಡೆ ಭಾಷಾ ನೀತಿ ಅಗತ್ಯ. ಎಲ್ಲ ಭಾಷೆಗಳಿಗೂ ಬದುಕುವ ಹಕ್ಕು ಇರಬೇಕು. ಇಲ್ಲಿ ಸಮಗ್ರ, ಸಂಕೀರ್ಣ ಭಾಷಾ ನೀತಿ ಅವಶ್ಯ. ಸ್ವಾತಂತ್ರ್ಯ ನಂತರ ನಮ್ಮ ಅನುಕೂಲಕ್ಕೆ ತ್ರಿಭಾಷಾ ಸೂತ್ರ ಇಟ್ಟುಕೊಳ್ಳಲಾಯಿತು. ಹಿಂದಿ ರಾಷ್ಟ್ರ ಭಾಷೆ ಅಲ್ಲ. ಆದರೂ ಅದನ್ನು ಬೇರೆ ಭಾಷೆ ಮೇಲೆ ಹೇರುವ ಪರಂಪರೆ ಆರಂಭವಾಯಿತು. ವಿಶೇಷವಾಗಿ ಈಗಿನ ಸರ್ಕಾರ(ಕೇಂದ್ರದಲ್ಲಿ) ಬಂದ ಮೇಲೆ ಹಿಂದಿ, ಹಿಂದೂ ಹಾಗೂ ಹಿಂದೂಸ್ಥಾನ ಅಂಥ ಹೊರಟಿದೆ. ಹಿಂದಿ ಬಗ್ಗೆ ನಮ್ಮ ವಿರೋಧ ಇಲ್ಲ. ಅದೂ ಜನ ಭಾಷೆ. ಆದರೆ, ಹೇರಿಕೆ ಸಹಿಸುವುದಿಲ್ಲ.

***
ಸಾಬ್ರನ್ನ ಮಾಡಬೇಡಿ
2006ರಲ್ಲಿ ನಡೆದ ಶಿವಮೊಗ್ಗ ಸಮ್ಮೇಳನಕ್ಕೆ ನಿಸಾರ್‌ ಅಹಮದ್‌ ಸರ್ವಾಧ್ಯಕ್ಷರು. ಅದು ಬಿಜೆಪಿಯವರಿಗೆ ಬೇಕಿರಲಿಲ್ಲ. ನಿಸಾರ್‌ ಎಂದೂ ಕ್ರಾಂತಿ ಮಾಡಿದವರಲ್ಲ. ಆದರೆ, ಅವರು ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ವಿರೋಧಿಸಿದರು. ಕಾರ್ಯಕಾರಿ ಸಮಿತಿ ಮೇಲೆ ಕೊನೆಯ ಗಳಿಗೆವರೆಗೆ ಬಿಜೆಪಿ ಕಡೆಯಿಂದ ದೊಡ್ಡ ಒತ್ತಡ ಇತ್ತು. ಕೆಲವರು ತೇಜಸ್ವಿ ಹೆಸರು ಹೇಳಿದರು... ಇನ್ನೂ ಹಲವರು ನಾ. ಡಿಸೋಜಾ ಅವರನ್ನು ಮಾಡಿ ಅಂದರು.... ಕೊನೆಯ ಕ್ಷಣದಲ್ಲೂ ಜಿಲ್ಲಾ ಅಧ್ಯಕ್ಷರ ಮೂಲಕ, ನೀವು ಯಾರನ್ನಾದರೂ ಮಾಡಿ ಸಾಬ್ರನ್ನ ಬಿಟ್ಟು ಎಂಬ ಸಂದೇಶ ಬಂತು. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಬ್ರನ್ನೇ ಮಾಡಿದೆ. ಅದೊಂದು ದೊಡ್ಡ ಸೈದ್ಧಾಂತಿಕ ವಿಜಯ.

ಅನಂತರ ಒಂದು ಗೋಷ್ಠಿಗೆ ಗೌರಿ ಲಂಕೇಶ್‌ ಹಾಗೂ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಕರೆದಿದ್ದೆವು. ಅದೂ ಅವರಿಗೆ ಬೇಡವಾಗಿತ್ತು. ಅವರಿಬ್ಬರೂ ನಕ್ಸಲೀಯ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿದರು. ಯಡಿಯೂರಪ್ಪ ನನಗೆ ನೇರವಾಗಿ ಫೋನ್‌ ಮಾಡಿ, ಚಂಪಾ ಅವರೇ ನನ್ನ ಮೇಲೆ ಭಾರಿ ಒತ್ತಡ ಇದೆ. ದಯವಿಟ್ಟು ಅವರನ್ನು ಕೈಬಿಡಿ ಅಂದರು. ಕಸಾಪ ಸರ್ಕಾರದ ಅಂಗ ಸಂಸ್ಥೆಯಲ್ಲ. ಸ್ವಾಯತ್ತ ಸಂಸ್ಥೆ. ಯಾರನ್ನು ಕರೆಯಬೇಕು, ಯಾರನ್ನು ಬಿಡಬೇಕು ಎಂಬ ತೀರ್ಮಾನ ನಮಗೆ ಬಿಟ್ಟಿದ್ದು ಎಂದು ನೇರವಾಗಿ ಹೇಳಿದೆ. ಹೋರಾಟದಿಂದಲೇ ಬಂದ ನನಗೆ ಅದೇನು ಹೊಸದಾಗಿರಲಿಲ್ಲ

***
ಸಂಯಮ ಇರಬೇಕಿತ್ತು
ನಮ್ಮಲ್ಲಿ ಆಗುತ್ತಿರುವ ಬಹಳ ಅನಾಹುತಗಳಿಗೆ ಸಂಯಮದ ಕೊರತೆಯೇ ಕಾರಣ. ನಾವು ಕಲಬುರ್ಗಿ ಅವರನ್ನು ಕಳೆದುಕೊಂಡಿದ್ದೇವೆ. ಗೌರಿಯನ್ನು ಕಳೆದುಕೊಂಡಿದ್ದೇವೆ. ಅವರ ಹತ್ಯೆ ವಿರುದ್ಧ ಹೋರಾಟ ಮಾಡಲೇಬೇಕು. ಆದರೆ, ನಮ್ಮ ಅಭಿವ್ಯಕ್ತಿ ರೀತಿಯೊಳಗೇ ಸಮಸ್ಯೆ ಇದೆ. ಅವರು ಸಂಯಮ ತೋರಿದ್ದರೆ ಬಹುಶಃ ಈ ರೀತಿ ಆಗುತ್ತಿರಲಿಲ್ಲ.

***
ನಮ್ಮ ಹಣ ನಮಗೆ ಕೊಟ್ಟರು
ಶಿವಮೊಗ್ಗ ಸಮ್ಮೇಳನದ ಸಮಯದಲ್ಲಿ ನನಗೆ ಯಡಿಯೂರಪ್ಪ ಅವರ ಜೊತೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು. ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ತಾಕಲಾಟ ಇತ್ತು. ಸಮ್ಮೇಳನದ ಉದ್ಘಾಟನೆಗೆ ಬರಬೇಕಿದ್ದ ಕುಮಾರಸ್ವಾಮಿ ಅವರನ್ನು ಸಮಾರೋಪಕ್ಕೆ ಕರೆದಿದ್ದೆ. ಇದರಿಂದ ಅವರಿಗೆ ಸಿಟ್ಟು ಬಂದಿತ್ತು. ನಾನು ಅವರನ್ನು ವಿಧಾನಸೌಧದಲ್ಲಿ ಕಾಣಲು ಹೋಗಿದ್ದೆ. ಹಣ ಕೊಟ್ಟಾಯಿತಲ್ಲಾ ಇನ್ನು ನಾವ್ಯಾಕೆ ಬೇಕು ಎಂದು ಸಿಡುಕಿದರು. ನೋಡಿ, ನಮ್ಮ ಹಣವನ್ನು ನಮಗೆ ಕೊಟ್ಟಿದ್ದೀರಿ. ನಿಮ್ಮನ್ನು ಸಮಾರೋಪಕ್ಕೆ ಕರೆಯಬೇಕು ಎನ್ನುವುದು ಕಾರ್ಯಕಾರಿ ತೀರ್ಮಾನ. ದಯವಿಟ್ಟು ಬನ್ನಿ ಎಂದು ಹೇಳಿದೆ. ಪ್ರೀತಿಯಿಂದ ಬಂದರು. ಅವರೊಬ್ಬ ಜಾತ್ಯತೀತ ಮನುಷ್ಯ. ಅವರೊಂದಿಗೆ ಬೇರೆ ತಿಕ್ಕಾಟ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT