ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯ ಅಮ್ಮ ಏಂಜೆಲಾ ಮರ್ಕೆಲ್‌

Last Updated 30 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಜರ್ಮನಿಯ ಮೊದಲ ಮಹಿಳಾ ಚಾನ್ಸಲರ್ ಏಂಜೆಲಾ ಮರ್ಕೆಲ್ ಸತತ ನಾಲ್ಕನೇ ಅವಧಿಗೆ ಇನ್ನೇನು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಜಗತ್ತಿನ ಅತ್ಯಂತ ಪ್ರಭಾವಿ ನಾಯಕಿ ಎಂದು ಹೇಳುವುದಕ್ಕೆ ಯಾವ ಸಮೀಕ್ಷೆಯೂ ಬೇಕಾಗಿಲ್ಲ. ಕಳೆದ ಹನ್ನೆರಡು ವರ್ಷಗಳ ಆಡಳಿತದಲ್ಲಿ ಈ ಸ್ಥಾನ ಅವರಿಗೆ ಅನಾಯಾಸವಾಗಿ ಬಂದಿದೆ. 1991ರಲ್ಲಿ ಮೊದಲ ಬಾರಿ ಮರ್ಕೆಲ್ ಅವರನ್ನು ಸಚಿವರನ್ನಾಗಿ ಮಾಡಿದವರು ಹೆಲ್ಮೆಟ್‌ ಕೋಹ್ಲ್. ಈ ಮಹಿಳೆ ಅವರಿಗೆ ಅಚ್ಚುಮೆಚ್ಚಾಗಿದ್ದರು. ಹೋದಲ್ಲೆಲ್ಲ ‘ನಮ್ಮ ಹುಡುಗಿ’ ಎಂದೇ ಮರ್ಕೆಲ್‍ರನ್ನು ಹೇಳುತ್ತಿದ್ದರು. ಆದರೆ ಕೊನೆಗೆ, ಇದೇ ಕೋಹ್ಲ್, ‘ಆಕೆ ನನ್ನ ಕೊಲೆ ಮಾಡಿಬಿಟ್ಟಳು’ ಎಂದೂ ಹೇಳಿದ್ದರು. ಪಕ್ಷದ ನಿಧಿಯ ಹಗರಣವೊಂದರಲ್ಲಿ ಕೋಹ್ಲ್ ಹೆಸರು ಕೇಳಿ ಬಂದಾಗ ಮರ್ಕೆಲ್ ಬಹಿರಂಗವಾಗಿ ಕೋಹ್ಲ್ ವಿರುದ್ಧ ನಿಂತರು. ಕೋಹ್ಲ್ ಅವರ ರಾಜಕೀಯ ಜೀವನವೇ ಕೊನೆಯಾಗುವಂತೆ ನೋಡಿಕೊಂಡರು. ಅದನ್ನೇ ತಮ್ಮ ಗೆಲುವಿಗೆ ಮೆಟ್ಟಿಲಾಗಿಸಿಕೊಂಡರು.

ಆಕೆ ಏನು ಎಂಬುದು ಆಕೆಗೆ ಮಾತ್ರ ಗೊತ್ತು ಎಂದು ರಾಜಕೀಯ ವಿಶ್ಲೇಷಕರು, ಇತಿಹಾಸಕಾರರು ಹೇಳುತ್ತಾರೆ. ತಾನು ಏನು ಎಂಬುದನ್ನು ಅವರು ಯಾವತ್ತೂ ಬಹಿರಂಗ ಮಾಡುವುದೇ ಇಲ್ಲ. ಅವರ ಸುತ್ತ ಕೆಲವು ಆಪ್ತರಿದ್ದಾರೆ. ಮರ್ಕೆಲ್‍ಗಾಗಿ ಅವರು ಮಾತನಾಡುತ್ತಾರೆ. ತನ್ನನ್ನು ಜನರು ಏನೆಂದು ಭಾವಿಸಬೇಕು ಎಂದು ಮರ್ಕೆಲ್ ಭಾವಿಸುತ್ತಾರೆಯೋ ಆ ಅರ್ಥ ಬರುವ ಮಾತುಗಳನ್ನು ಈ ಆಪ್ತವರ್ಗ ಆಡುತ್ತದೆ. ಮರ್ಕೆಲ್ ವ್ಯಕ್ತಿತ್ವ ಅಳತೆಗೆ ಸಿಗದೆಯೇ ಉಳಿಯುತ್ತದೆ.

1954ರಲ್ಲಿ ಮರ್ಕೆಲ್ ಹುಟ್ಟುವಾಗ ಜರ್ಮನಿಯು ಪಶ್ಚಿಮ ಮತ್ತು ಪೂರ್ವ ಜರ್ಮನಿಗಳೆಂದು ಎರಡು ದೇಶಗಳಾಗಿದ್ದವು. ಕ್ರೈಸ್ತ ಧರ್ಮೋಪದೇಶಕ ತಂದೆ ಹಾರ್ಸ್ಟ್‌ ಕಾಸ್ನರ್ ಮರ್ಕೆಲ್ ಹುಡುಗಿಯಾಗಿದ್ದಾಗಲೇ ಪಶ್ಚಿಮ ಜರ್ಮನಿಯಂದ ಪೂರ್ವ ಜರ್ಮನಿಗೆ ಹೋದರು. ಕಮ್ಯುನಿಸ್ಟ್ ಆಡಳಿತದ ಪೂರ್ವ ಜರ್ಮನಿಯಿಂದ ಜನರು ಪಶ್ಚಿಮ ಜರ್ಮನಿಗೆ ಸಾಮೂಹಿಕವಾಗಿ ವಲಸೆ ಬರುವ ಕಾಲದಲ್ಲಿ ಪಶ್ಚಿಮ ಜರ್ಮನಿಯಿಂದ ಪೂರ್ವ ಜರ್ಮನಿಗೆ ಹೋಗುವುದು ಪ್ರವಾಹದ ವಿರುದ್ಧ ಈಜುವ ಕೆಲಸವಾಗಿತ್ತು. ಆದರೆ ಈ ಸ್ಥಳವೇ ಮರ್ಕೆಲ್ ಅವರ ವ್ಯಕ್ತಿತ್ವವನ್ನು ರೂಪಿಸಿತು. ಟೆಂಪ್ಲಿನ್ ನಗರದ ಹೊರವಲಯದ ಅಂಗವಿಕಲರ ಆಶ್ರಯ ಕೇಂದ್ರದ ಉಸ್ತುವಾರಿಯನ್ನು ಕಾಸ್ನರ್ ಹೊತ್ತಿದ್ದರು. ಮರ್ಕೆಲ್ ಬೆಳೆದದ್ದು ಅಲ್ಲಿಯೇ. ಕ್ರೈಸ್ತ ಧರ್ಮದ ಬಗ್ಗೆ ದೃಢ ನಂಬಿಕೆ ಇರುವ ಅವರಿಗೆ ತಮ್ಮ ಬಾಲ್ಯದ ಅನುಭವದ ಕಾರಣಕ್ಕಾಗಿಯೇ ಇರಬಹುದು ಎಲ್ಲರ ಬಗ್ಗೆಯೂ ಅಪಾರ ಸಹಾನುಭೂತಿ ಇದೆ.

ಭೌತ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಹೊಂದಿರುವ ಅವರು ವಿಜ್ಞಾನಿಯಾಗಿದ್ದವರು. ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದರು. ರಾಜಕೀಯದ ಯಾವ ಹಿನ್ನೆಲೆಯೂ ಅವರಿಗೆ ಇರಲಿಲ್ಲ. ಮರ್ಕೆಲ್ ಅವರನ್ನು ಅತ್ಯಾಕರ್ಷಕ ವ್ಯಕ್ತಿ ಎಂದು ಯಾರೂ ಹೇಳುವುದಿಲ್ಲ. ಅವರು ಮಾತನಾಡುವಾಗ ಭೂಮಿ ನಡುಗುವುದಿಲ್ಲ. ತೀರಾ ನಿಧಾನವಾಗಿ, ಧ್ವನಿಯಲ್ಲಿ ಯಾವ ಏರಿಳಿತವೂ ಇಲ್ಲದೆ ನೀರಸವಾಗಿ ಮಾತನಾಡುತ್ತಾರೆ. ತಮ್ಮ ಮಾತಿನಲ್ಲಿ ಯಾರಿಗೂ ಆಸಕ್ತಿಯೇ ಹುಟ್ಟಬಾರದು ಎಂಬ ಉದ್ದೇಶದಲ್ಲಿ ಅವರು ಮಾತನಾಡುತ್ತಿರುವಂತೆ ಕಾಣಿಸುತ್ತದೆ. ಆದರೆ ಮೋಡಿಯೇ ಮಾಡದ ಈ ಮಾತುಗಳನ್ನು ಜರ್ಮನಿಯ ಜನ ಕೇಳುತ್ತಾರೆ. ಯುರೋಪ್‍ನ ಜನರೂ ಕೇಳುತ್ತಾರೆ. ಯಾಕೆಂದರೆ ಯುರೋಪ್‍ನ ಯಾವ ದೇಶವೂ ಆರ್ಥಿಕವಾಗಿ ಈಗ ಸದೃಢವಾಗಿಲ್ಲ. ಅಲ್ಲೆಲ್ಲ ನಿರುದ್ಯೋಗವಿದೆ. ಸಂಪನ್ಮೂಲದ ಕೊರತೆ ಇದೆ. ಜರ್ಮನಿ ಹಾಗಲ್ಲ. ಅಲ್ಲಿ ನಿರುದ್ಯೋಗ ಇಲ್ಲ, ಸಂಪನ್ಮೂಲಕ್ಕೆ ಯಾವ ಕೊರತೆಯೂ ಇಲ್ಲ. ಜನರು ಗೊಣಗುವುದಕ್ಕೆ ಕಾರಣವೇ ಇಲ್ಲ. ಯುರೋಪ್‍ನ ಇತರ ದೇಶಗಳಿಗೆ ಜರ್ಮನಿಯೇ ಈಗ ದೊಡ್ಡಕ್ಕ. ಹಾಗಾಗಿಯೇ ಮರ್ಕೆಲ್ ಅವರನ್ನು ಯುರೋಪ್‍ನ ಚಾನ್ಸಲರ್ ಎಂದು ಕರೆಯುವುದುಂಟು. ಐರೋಪ್ಯ ಒಕ್ಕೂಟ ಸಕ್ರಿಯವಾಗಿ ಇರಲು ಮರ್ಕೆಲ್ ಕಾರಣ. ಮರ್ಕೆಲ್‌ಗೆ ನಾಯಿ ಕಂಡರೆ ಭಯ. ಹಾಗಾಗಿಯೇ ಒಮ್ಮೆ ಮರ್ಕೆಲ್‌ ಭೇಟಿಗೆ ಬಂದಾಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ತಮ್ಮ ದೊಡ್ಡ ಲ್ಯಾಬ್ರಡಾರ್‌ ನಾಯಿ ತಂದಿದ್ದರು. ‘ತಮ್ಮೊಳಗಿನ ಭಯ ಮುಚ್ಚಿಕೊಳ್ಳಲು ಅವರಿಗೆ ಬೇರೆ ದಾರಿಯೇ ಇರಲಿಲ್ಲ’ ಎಂದು ಸಭೆಯ ಬಳಿಕ ಮರ್ಕೆಲ್‌ ಕುಟುಕಿದ್ದರು. ಅಳೆದು ತೂಗಿ, ಮತ್ತಷ್ಟು ನಿಧಾನ ಮಾಡಿ ನಿರ್ಧಾರ ಕೈಗೊಳ್ಳುವ ಮರ್ಕೆಲ್‌ ಮಮತಾಮಯಿ, ಜತೆಗೆ ವಜ್ರದಷ್ಟು ಕಠಿಣವೂ ಹೌದು.

ಜಾಗತಿಕ ಮಟ್ಟದಲ್ಲಿ ಅವರು ಸುದ್ದಿ ಮಾಡಿದ್ದು ಕಡಿಮೆ. ಯಾರ ವಿರುದ್ಧವೂ ಗುಟುರು ಹಾಕಿದ್ದೂ ಇಲ್ಲ. ಆದರೆ ತಮ್ಮ ದೇಶವನ್ನು ಅವರು ಜತನವಾಗಿ ಕಾಯ್ದುಕೊಂಡ ರೀತಿಯಿಂದಾಗಿಯೇ ಅವರು ಜಾಗತಿಕ ನಾಯಕಿಯಾಗಿ ಬೆಳೆದು ನಿಂತಿದ್ದಾರೆ.

ಅವರು ಭಾವನಾತ್ಮಕ ವ್ಯಕ್ತಿಯೂ ಅಲ್ಲ. ಭಾವನೆಗಳನ್ನು ಕೆರಳಿಸಿ ಜನ ಪ್ರೀತಿ ಗಳಿಸುವುದು ಅವರಿಗೆ ಗೊತ್ತೇ ಇಲ್ಲ. ವಿರೋಧ ಪಕ್ಷಗಳ ನಾಯಕರು ಅವರನ್ನು ಹಂಗಿಸುವುದಕ್ಕಾಗಿಯೇ ‘ಅಮ್ಮ’ (ಜರ್ಮನ್ ಭಾಷೆಯಲ್ಲಿ ಮುಟ್ಟಿ ಎನ್ನುತ್ತಾರೆ) ಎಂದು ಕರೆಯುತ್ತಿದ್ದರು. ಅದನ್ನು ಕೇಳಿದರೆ ಮರ್ಕೆಲ್ ಸಿಡಿಮಿಡಿಗೊಳ್ಳುತ್ತಿದ್ದರು. ಆದರೆ ಈಗ ಜರ್ಮನಿ ಜನರೆಲ್ಲರೂ ಅವರನ್ನು ಅಮ್ಮ ಎಂದೇ ಕರೆಯುತ್ತಾರೆ.

ಅಮ್ಮ ಎಂಬುದು ಅವರನ್ನು ಬಣ್ಣಿಸಲು ಹೆಚ್ಚು ಸೂಕ್ತವಾದ ಪದ. ಯಾಕೆಂದರೆ ಭೂಮಿಯಷ್ಟು ತಾಳ್ಮೆಯ ಹೆಣ್ಣು ಅವರು. ಇನ್ನೊಂದು ಕಾರಣ ಅವರ ನಡವಳಿಕೆ- ಮಕ್ಕಳಿಗೇನು ಬೇಕು ಎಂಬುದು ಅಮ್ಮನಷ್ಟು ಚೆನ್ನಾಗಿ ಗೊತ್ತಿರುವವರು ಯಾರೂ ಇಲ್ಲ ಎಂಬ ಅವರ ದೃಢ ವಿಶ್ವಾಸ. ಅಮ್ಮ ಎಂದರೆ ಈಗ ಅವರು ಕೆರಳುವುದಿಲ್ಲ.
ಮರ್ಕೆಲ್ ಅವರು ವಿಜ್ಞಾನಿ. ಹಾಗಾಗಿಯೇ ರಾಜಕೀಯವನ್ನು ಅವರು ವಿಜ್ಞಾನದ ಖಚಿತತೆಯಲ್ಲಿ ನೋಡುತ್ತಾರೆ. ಅಲ್ಲಿ ಭಾವನೆಗಳಿಗೆ ಸ್ಥಾನವೇ ಇಲ್ಲ ಎಂಬುದು ಅವರ ನಂಬಿಕೆ.

ಮರ್ಕೆಲ್ ಯಾವ ಸಿದ್ಧಾಂತಕ್ಕೂ ಬದ್ಧರಲ್ಲದವರು ಎಂಬುದು ಅವರ ವಿರುದ್ಧ ಇರುವ ಟೀಕೆ ಮತ್ತು ಮೆಚ್ಚುಗೆ. ಸಿರಿಯಾದ ಲಕ್ಷಾಂತರ ವಲಸಿಗರು ಇರುವೆಗಳಂತೆ ಯುರೋಪ್‌ನತ್ತ 2015ರಲ್ಲಿ ನಡೆದು ಬಂದಾಗ ಅಲ್ಲಿನ ದೇಶಗಳು  ಬೆಚ್ಚಿದ್ದವು. ಈ ನಿರಾಶ್ರಿತರು ಜಾಗತಿಕ ಸಮಸ್ಯೆಯಾಗಿ, ದೊಡ್ಡ ಭೀತಿಯಾಗಿ ಕಾಡಿದ್ದರು. ಅವರನ್ನು ಸೇರಿಸಿಕೊಳ್ಳಲು ಯುರೋಪ್‌ನ ದೇಶಗಳು ನಿರಾಕರಿಸಿದಾಗ ಹತ್ತು ಲಕ್ಷ ಜನರಿಗೆ ಆಶ್ರಯ ನೀಡುವ ಔದಾರ್ಯವನ್ನು ಮರ್ಕೆಲ್‌ ಪ್ರದರ್ಶಿಸಿದ್ದರು. ಆಗ, ಮರ್ಕೆಲ್‌ ಸಮಾಜವಾದಿ ಎಂದು ಸಮಾಜವಾದಿಗಳು ಖುಷಿಪಟ್ಟಿದ್ದರು. ಆದರೆ ಇನ್ನಷ್ಟು ಜನರು ಯುರೋಪ್‌ಗೆ ಬಾರದಂತೆ ತಡೆಯುವುದಕ್ಕಾಗಿ ಟರ್ಕಿಗೆ ಐರೋಪ್ಯ ಒಕ್ಕೂಟವು 220 ಕೋಟಿ ಡಾಲರ್‌ (ಈಗಿನ ಮೌಲ್ಯದಲ್ಲಿ ಸುಮಾರು ₹14,250 ಕೋಟಿ) ನೆರವು ನೀಡುವ ಒಪ್ಪಂದ ಮಾಡಿಕೊಳ್ಳುವಲ್ಲಿ ಮರ್ಕೆಲ್‌ ನಿರ್ಣಾಯಕ ಪಾತ್ರ ವಹಿಸಿದ್ದರು.

ಕಮ್ಯುನಿಸ್ಟ್‌ ಪ್ರಾಬಲ್ಯದ ಪೂರ್ವ ಜರ್ಮನಿಯಲ್ಲಿ ಬೆಳೆದ ಮರ್ಕೆಲ್‌ಗೆ ಸ್ವಾತಂತ್ರ್ಯ ಎಷ್ಟು ಮಹತ್ವದ್ದು ಎಂಬುದು ಗೊತ್ತು. ಹೆಚ್ಚು ಧಾರ್ಮಿಕವಾಗಿರುವ ಅವರಿಗೆ ಮನುಷ್ಯನ ಪರಿಮಿತಿಗಳ ಬಗ್ಗೆಯೂ ಅರಿವಿದೆ. ಹಾಗಾಗಿಯೇ ಅವರು ನಿರಂಕುಶಾಧಿಕಾರಿ ಎಂದು ಯಾರಿಗೂ ಅನಿಸುವುದಿಲ್ಲ. ಅವರಲ್ಲಿ ವಿರೋಧಾಭಾಸಗಳೂ ಹೆಚ್ಚು. ಸಲಿಂಗ ವಿವಾಹಕ್ಕೆ ಅವರು ಬದ್ಧ ವಿರೋಧಿ. ಈ ವಿಚಾರ ಜರ್ಮನಿಯಲ್ಲಿ ಚರ್ಚೆಗೆ ಬಂದಾಗ ಅವರು ಸಂಸತ್ತಿನಲ್ಲಿ ಅದನ್ನು ಮತಕ್ಕೆ ಹಾಕಿದ್ದರು. ಅದರ ವಿರುದ್ಧ ಮತ ಹಾಕಿದ್ದಾಗಿ ಬಹಿರಂಗವಾಗಿಯೇ ಹೇಳಿದ್ದರು. ಬುರ್ಖಾ ನಿಷೇಧಿಸಬೇಕು ಎಂಬ ಕೂಗಿಗೆ ಅವರ ಗಟ್ಟಿ ಬೆಂಬಲ ಇತ್ತು. ಮರ್ಕೆಲ್‌ ನೇತೃತ್ವದ ಪಕ್ಷವಾದ ಕ್ರಿಶ್ಚಿಯನ್‌ ಡೆಮಾಕ್ರಟಿಕ್‌ ಯೂನಿಯನ್‌ (ಸಿಡಿಯು) ಮಧ್ಯಮ ಮಾರ್ಗಿ ಬಲಪಂಥೀಯ ನಿಲುವು ಹೊಂದಿದೆ. ಆದರೆ ಮರ್ಕೆಲ್‌ ಅವರನ್ನು ಎಡಪಂಥೀಯ ಒಲವಿನವರು ಎಂದು ಗುರುತಿಸಲಾಗುತ್ತದೆ.

ನಾಲ್ಕನೆಯ ಅವಧಿಯಲ್ಲಿ ಮರ್ಕೆಲ್‌ ಅವರಿಗೆ ಸವಾಲುಗಳೇ ಹೆಚ್ಚು. ತೀವ್ರವಾದಿ ಬಲಪಂಥೀಯ ನಿಲುವುಗಳ ಆಲ್ಟರ್‌ನೇಟಿವ್‌ ಫಾರ್‌ ಜರ್ಮನಿ (ಎಎಫ್‌ಡಿ) ಪಕ್ಷ ಇದೇ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದೆ. ಈ ಪಕ್ಷಕ್ಕೆ ಶೇ 13ರಷ್ಟು ಮತ ದೊರೆತಿದೆ. ಈ ಪಕ್ಷ ಪೂರ್ವ ಜರ್ಮನಿಯಲ್ಲಿ ಹೆಚ್ಚು ಮತಗಳನ್ನು ಪಡೆದಿದೆ. ಸಿರಿಯಾ ನಿರಾಶ್ರಿತರಿಗೆ ಆಶ್ರಯ ನೀಡಿದ್ದೂ ಸೇರಿ ವಿವಿಧ ವಿಚಾರಗಳು ಪೂರ್ವ ಜರ್ಮನಿಯ ಜನರಲ್ಲಿ ಆಕ್ರೋಶ ಉಂಟು ಮಾಡಿವೆ. ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವ ಅವರಲ್ಲಿದೆ. ರಾಷ್ಟ್ರೀಯತೆಯೇ ಕೇಂದ್ರವಾಗಿರುವ ಚಿಂತನೆಗಳು ಅಲ್ಲಿ ಕುಡಿಯೊಡೆದಿವೆ. ಹೊಸ ಜರ್ಮನಿ ಕಟ್ಟುವ ಚಿಂತನೆಯನ್ನು ಎಎಫ್‌ಡಿ ಬಿತ್ತಿದೆ.

ಚುನಾವಣೆಯ ಫಲಿತಾಂಶದ ಬಳಿಕ ಮಾತನಾಡಿದ ಮರ್ಕೆಲ್‌, ಎಎಫ್‌ಡಿಗೆ ಮತ ಹಾಕಿದವರ ಜತೆ ‘ಮಾತನಾಡುವುದಾಗಿ’ ಹೇಳಿದ್ದಾರೆ. ಅವರ ಆತಂಕ, ನೋವು, ಕಳವಳ ಮತ್ತು ಸಮಸ್ಯೆಗಳನ್ನು ಆಲಿಸುವುದಾಗಿ ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ರಾಜಕಾರಣದ ಮೂಲಕ ಎಲ್ಲರನ್ನೂ ಒಲಿಸಿಕೊಳ್ಳುವುದಾಗಿ ಹೇಳಿದ್ದಾರೆ. ಅದು ಅಷ್ಟು ಸುಲಭವೇ ಎಂಬ ಪ್ರಶ್ನೆ ಇದೆ. ಅದಕ್ಕಾಗಿ ಅವರು ಸ್ವಲ್ಪ ಮಟ್ಟಿಗೆ ಬಲಪಂಥೀಯ ಚಿಂತನೆಗಳನ್ನು ರೂಢಿಸಿಕೊಳ್ಳಲು ಹಿಂಜರಿಯಲಿಕ್ಕಿಲ್ಲ ಎಂದು ಅವರನ್ನು ಬಲ್ಲವರು ಹೇಳುತ್ತಾರೆ.

ಇನ್ನೊಂದೆಡೆ, ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಹೋಗಿದೆ. ಒಕ್ಕೂಟವನ್ನು ಒಂದಾಗಿ ಇರಿಸಿಕೊಳ್ಳುವ ದೊಡ್ಡ ಹೊಣೆ ಮರ್ಕೆಲ್‌ ಮೇಲಿದೆ. ಯುರೋಪ್‌ನ ಮೇಲೆ ರಷ್ಯಾ ಪ್ರಭಾವ ಹೆಚ್ಚುತ್ತಿದೆ. ಜರ್ಮನಿಗೆ ಬಂದಿರುವ ಹತ್ತು ಲಕ್ಷ ವಲಸಿಗರಿಗೆ ವ್ಯವಸ್ಥೆ ಮಾಡಿಕೊಡಬೇಕಿದೆ. ಫ್ರಾನ್ಸ್‌ ಬಿಟ್ಟು ಯುರೋಪ್‌ನ ಇತರ ದೇಶಗಳಲ್ಲಿ ಬಲಪಂಥೀಯ ಚಿಂತನೆಯ ಸರ್ಕಾರಗಳೇ ಇವೆ. ಜರ್ಮನಿಯಲ್ಲಿ ಬಲಪಂಥೀಯ ಚಿಂತನೆ ಹೆಚ್ಚುತ್ತಿದೆ. ಈ ಎಲ್ಲದರ ನಡುವೆ ಸಮತೋಲನದ ನಡಿಗೆ ವಿಜ್ಞಾನಿ ಮರ್ಕೆಲ್‌ಗೆ ಕಷ್ಟವಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT