ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ನೀತಿ: ಟರ್ಕಿ ವಿಭಿನ್ನ ಹೇಗೆ?

Last Updated 30 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ರಿಯಾದಲ್ಲಿ ನಡೆಯುತ್ತಿರುವ ಅಂತರ್ಯುದ್ಧಕ್ಕೆ  2011ರಿಂದ ಈವರೆಗೆ 4.7 ಲಕ್ಷ ಜನ ಬಲಿಯಾಗಿದ್ದಾರೆ. ಇವರಲ್ಲಿ ಬಹುತೇಕರು ನಾಗರಿಕರು. ಕೋಟಿಗಟ್ಟಲೆ ಜನ ಸ್ಥಳಾಂತರಗೊಂಡಿದ್ದಾರೆ. ಜತೆಗೆ ಸುಮಾರು 50 ಲಕ್ಷ ಸಿರಿಯನ್ನರು ವಲಸೆ ಹೋಗಿದ್ದು, ಎರಡನೇ ಜಾಗತಿಕ ಯುದ್ಧ ನಂತರದ ಅತಿ ದೊಡ್ಡ ವಲಸೆ ಬಿಕ್ಟಟ್ಟಿಗೆ ಕಾರಣರಾಗಿದ್ದಾರೆ. ಈ ವಲಸಿಗರ ಹೆಚ್ಚಿನ ಹೊರೆ ಅಮೆರಿಕದ ಮೇಲಾಗಲೀ ಅಥವಾ ಯುರೋಪ್ ಮೇಲಾಗಲೀ ಬೀಳುತ್ತಿಲ್ಲ. ಬದಲಿಗೆ ಸಿರಿಯಾ ನೆರೆ ರಾಷ್ಟ್ರಗಳಾದ ಟರ್ಕಿ, ಲೆಬನಾನ್ ಮತ್ತು ಜೋರ್ಡನ್‍ಗಳ ಮೇಲೆ ಅದು ಪರಿಣಾಮ ಬೀರುತ್ತಿದೆ. ಸಿರಿಯಾದ 50 ಲಕ್ಷ ವಲಸಿಗರಿಗೆ ಈಗ ಆಶ್ರಯ ನೀಡಿರುವುದು ಈ ರಾಷ್ಟ್ರಗಳೇ.

ಮೇಲಿನ ಪ್ರತಿಯೊಂದು ರಾಷ್ಟ್ರವೂ ವಲಸೆ ಸಮಸ್ಯೆಯ ಸವಾಲನ್ನು ತನ್ನದೇ ರೀತಿಯಲ್ಲಿ ನಿಭಾಯಿಸುತ್ತಿದೆ. ಇದರಲ್ಲಿ ಪ್ರತಿಯೊಂದು ರಾಷ್ಟ್ರದ ಯಶಸ್ಸಿನ ಪ್ರಮಾಣವೂ ಭಿನ್ನವಾಗಿದೆ. ಈ ಮೂರು ರಾಷ್ಟ್ರಗಳಿಗೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ, ಸಿರಿಯಾ ವಲಸಿಗರಿಗೆ ಈ ರಾಷ್ಟ್ರಗಳಲ್ಲಿ ಎಂತಹ ಬದುಕು ಕಲ್ಪಿಸಲಾಗಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಲೆಬನಾನ್‍ಗಿಂತ ಜೋರ್ಡನ್‍ನಲ್ಲಿ ಅವರ ಸ್ಥಿತಿ ಹೇಗಿದೆ, ಈ ಎರಡೂ ರಾಷ್ಟ್ರಗಳಿಗೆ ಹೋಲಿಸಿದರೆ ಟರ್ಕಿ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬ ಪ್ರತ್ಯಕ್ಷ ಅರಿವು ಮೂಡಿಸಿಕೊಂಡಿದ್ದೇನೆ.

60 ಲಕ್ಷ ಜನಸಂಖ್ಯೆಯ ಲೆಬನಾನ್ ಬಹಳ ಹಿಂದಿನಿಂದಲೂ ಪ್ಯಾಲೆಸ್ಟೀನ್‌ ವಲಸಿಗರಿಗೆ ಆಶ್ರಯ ನೀಡುತ್ತಲೇ ಬಂದಿದೆ. ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಾಚರಣೆ ಸಂಸ್ಥೆ ಪ್ರಕಾರ, ಲೆಬನಾನ್‍ನಲ್ಲಿ 45 ಲಕ್ಷ ಪ್ಯಾಲೆಸ್ಟೀನಿ ವಲಸಿಗರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಲ್ಲಿ ಬಹುತೇಕರು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಲೆಬನಾನ್‍ನಲ್ಲಿ ಜನ್ಮತಾಳಿರುವ ಮೂರನೇ ಪೀಳಿಗೆಯ ಪ್ಯಾಲೆಸ್ಟೀನಿಯರು ಕೂಡ ವಲಸಿಗರಾಗಿ ಮುಂದುವರಿದಿದ್ದಾರೆಯೇ ವಿನಾ ಅವರಿಗೆ ನಾಗರಿಕ ಸ್ಥಾನಮಾನವನ್ನು ಅಲ್ಲಿನ ಆಡಳಿತ ಕೊಡಮಾಡಿಲ್ಲ. ಅಂದರೆ ತಮ್ಮ ಪೂರ್ವಜರು ಇಲ್ಲಿಗೆ ವಲಸಿಗರಾಗಿ ಕಾಲಿಟ್ಟ 70 ವರ್ಷಗಳ ನಂತರವೂ ಅವರದು ವಲಸಿಗರ ಸ್ಥಾನವೇ ಆಗಿದೆ. ಜತೆಗೆ ವಲಸಿಗರನ್ನು ಉದ್ಯೋಗ ಅವಕಾಶಗಳಿಂದ ಕೂಡ ಲೆಬನಾನ್ ಕಾನೂನು ಹೊರಗಿರಿಸುತ್ತದೆ.

ಲೆಬನಾನ್‍ನ ಈ ವಲಸಿಗರ ಸಂಖ್ಯೆಗೆ ಈಗ 15 ಲಕ್ಷ ಸಿರಿಯಾ ವಲಸಿಗರು ಸೇರಿಕೊಂಡಿದ್ದಾರೆ. ಬಹುತೇಕರು ಜನರಿಂದ ತುಂಬಿ ತುಳುಕುವ ಪ್ಲಾಸ್ಟಿಕ್ ಬಿಡಾರಗಳಲ್ಲಿ ಆಶ್ರಿತರಾಗಿದ್ದಾರೆ. ಇಲ್ಲಿ ಶುದ್ಧ ಕುಡಿಯುವ ನೀರು ಎಂಬುದು ಅಪರೂಪದಲ್ಲಿ ಅಪರೂಪ. ಸ್ವಯಂ ಸೇವಾ ಸಂಸ್ಥೆಗಳು ನೀಡುವ ನೆರವಿನಿಂದ ಇವರು ದಿನ ದೂಡುತ್ತಿದ್ದಾರೆ. ಪ್ಯಾಲೆಸ್ಟೀನ್‌ ವಲಸಿಗರ ವಿಷಯದಲ್ಲಿ ಆದಂತೆ ಸಿರಿಯಾ ವಲಸಿಗರು ಇಲ್ಲಿ ಕಾಯಂ ಆಗಿ ನೆಲೆಸುವುದು ಲೆಬನಾನ್ ಸರ್ಕಾರಕ್ಕೆ ಬೇಕಾಗಿಲ್ಲ. ಹೀಗಾಗಿ ಈ ಶಿಬಿರಗಳನ್ನು ಅಧಿಕೃತವೆಂದು ಪರಿಗಣಿಸುವ ಗೋಜಿಗಾಗಲೀ ಅಥವಾ ವಿಶ್ವಸಂಸ್ಥೆಯ ಮೇಲ್ವಿಚಾರಣೆಗೆ ಅವುಗಳನ್ನು ಒಪ್ಪಿಸುವ ಕಾರ್ಯವನ್ನಾಗಲೀ ಅದು ಮಾಡಿಲ್ಲ. ಸಿರಿಯಾ ವಲಸಿಗರೆಡೆಗಿನ ತಿರಸ್ಕಾರ ತಾರಕಕ್ಕೆ ಏರಿದೆ. ಮುಂದಿನ ವರ್ಷ ಇಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಕೆಲವು ರಾಜಕೀಯ ನಾಯಕರು ಸಿರಿಯಾದಲ್ಲಿ ಕದನ ಮುಗಿದ ತಕ್ಷಣ ಅಲ್ಲಿನ ವಲಸಿಗರನ್ನು ಪುನಃ ಅಲ್ಲಿಗೇ ಕಳುಹಿಸುವ ಭರವಸೆಗಳನ್ನು ನೀಡುತ್ತಿದ್ದಾರೆ. ಈಗಿನ ಪರಿಸ್ಥಿತಿ ಹೇಳುವುದಾದರೆ, ಈಗ ಇಲ್ಲಿ ಸಿರಿಯಾ ವಲಸಿಗರಿಗೆ ಸರ್ಕಾರ ಒಲ್ಲದ ಮನಸ್ಸಿನಿಂದ ಇರಲು ಸ್ವಲ್ಪ ಜಾಗ ಕೊಟ್ಟಿದೆ ಎಂಬುದನ್ನು ಬಿಟ್ಟರೆ ಅವರಿಗೆ ಘನತೆಯ ಬದುಕು ಕಲ್ಪಿಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ.

ಕಳೆದ 10 ತಿಂಗಳ ಅವಧಿಯಲ್ಲಿ ಇಂತಹ ಹಲವು ಶಿಬಿರಗಳಿಗೆ ನಾನು ಭೇಟಿ ನೀಡಿದ್ದೇನೆ. ಬೆಕಾ ಕಣಿವೆಯ ಶಿಬಿರವೊಂದರಲ್ಲಿ 12 ವರ್ಷದ ನೌರ್ ಮತ್ತು ಆಕೆಯ ಸೋದರಿ ಆಯಾಳನ್ನು ಬೇಕರಿಯೊಂದರ ಮುಂದೆ ನಾನು ಭೇಟಿಯಾಗಿದ್ದೆ. ರಂಜಾನ್ ಮಾಸದ ಕೊನೆಯನ್ನು ಆಚರಿಸಲು ಸಿಹಿ ಕೊಳ್ಳುವ ತಯಾರಿಯಲ್ಲಿದ್ದ ನಾನು, ನೌರ್‍ಳನ್ನು ಆಕೆಯ ಕುಟುಂಬದ ಬಗ್ಗೆ ವಿಚಾರಿಸಿದೆ. ತಾನು ಮತ್ತು ಆಯಾ ಎಲ್ಲರನ್ನೂ ಕಳೆದುಕೊಂಡಿರುವುದಾಗಿ ಆಕೆ ನನಗೆ ತಿಳಿಸಿದಳು. ಈಗ ಆಕೆಯ ಪಾಲಿಗಿರುವುದು ಹಿರಿಯಳಾದ ಚಿಕ್ಕಮ್ಮ ಮಾತ್ರ. ಐವರು ಮಕ್ಕಳ ತಾಯಿಯಾಗಿರುವ ಆಕೆ ಕೂಡ ಆರ್ಥಿಕವಾಗಿ ಕಂಗೆಟ್ಟಿದ್ದಾಳೆ.

ಯುದ್ಧ ಶುರುವಾದಾಗಿನಿಂದ ನೌರ್ ಶಾಲೆಯ ಮುಖವನ್ನೇ ನೋಡಿಲ್ಲ. ಲೆಬನಾನ್‍ನ ರಸ್ತೆಗಳಲ್ಲಿ ಸೋದರಿಯೊಂದಿಗೆ ಭಿಕ್ಷಾಟನೆ ಮಾಡುತ್ತಾ ಆಕೆ ದಿನಗಳನ್ನು ದೂಡುತ್ತಿದ್ದಾಳೆ. ಅಲ್ಲಿನ ಬೀದಿಗಳಲ್ಲಿ ನ್ಯಾಪ್‍ಕಿನ್, ಕ್ಯಾಂಡಿ ಮತ್ತು ಬಾಟಲಿ ನೀರುಗಳನ್ನು ಮಾರಾಟ ಮಾಡುವ ಸಿರಿಯಾದ ಸಾವಿರಾರು ಮಕ್ಕಳಲ್ಲಿ ನೌರ್ ಮತ್ತು ಆಯಾ ಕೂಡ ಸೇರಿದ್ದಾರೆ. ಇನ್ನು ಕೆಲವು ಮಕ್ಕಳು ತಮ್ಮ ಹಾಗೂ ಅಳಿದುಳಿದ ಕುಟುಂಬಸ್ಥರ ಹೊಟ್ಟೆ ತುಂಬಿಸಲು ಕೃಷಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ.

ಬೆಕಾ ಕಣಿವೆಯಂತೆ ತಾಲ್ ಸರ್‍ಹೌನ್ ವಲಸಿಗರ ಶಿಬಿರದಲ್ಲಿ ಕೂಡ ಸಿರಿಯಾ ಹಾಗೂ ಪ್ಯಾಲೆಸ್ಟೀನಿ ಮಕ್ಕಳು ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಗಳಿಗೆ ಮಧ್ಯಾಹ್ನದ ನಂತರವಷ್ಟೇ ಹೋಗುತ್ತಾರೆ. ಇದು ಸರ್ಕಾರದ ಆದೇಶ. ಈ ವಲಸಿಗ ಮಕ್ಕಳನ್ನು ಲೆಬನಾನ್ ಮಕ್ಕಳಿಂದ ಪ್ರತ್ಯೇಕಿಸುವ ಸಲುವಾಗಿ ಸರ್ಕಾರವೇ ಪ್ರಜ್ಞಾಪೂರ್ವಕವಾಗಿ ಈ ಕ್ರಮ ಕೈಗೊಂಡಿದೆ. ಅನೇಕ ಹುಡುಗರು ಶಾಲೆಗೆ ಹೋಗುವ ಬದಲಾಗಿ ರಸ್ತೆಗಳಲ್ಲಿ ಆಟಿಕೆ ಬಂದೂಕುಗಳೊಂದಿಗೆ ಆಟವಾಡುತ್ತಿದ್ದುದನ್ನು ನಾನು ನೋಡಿದ್ದೇನೆ. ಇಂತಹ ಮಕ್ಕಳ ಭವಿಷ್ಯವಾದರೂ ಹೇಗಿರಬಹುದು?

ಲೆಬನಾನ್‍ಗೆ ಹೋಲಿಸಿದರೆ ಜೋರ್ಡನ್ ತನ್ನಲ್ಲಿರುವ 13 ಲಕ್ಷ ಸಿರಿಯಾ ವಲಸಿಗರನ್ನು ಔದಾರ್ಯದಿಂದ ನಡೆಸಿಕೊಳ್ಳುತ್ತಿದೆ. ಉತ್ತರ ಗಡಿಯಂಚಿನಲ್ಲಿರುವ ಜಾತರಿ ಎಂಬಲ್ಲಿ ಅತ್ಯಂತ ದೊಡ್ಡ ಶಿಬಿರವಿದೆ. ಜೋರ್ಡನ್‍ನ ಒಳಾಡಳಿತ ಸಚಿವಾಲಯ, ವಿಶ್ವಸಂಸ್ಥೆ ವಲಸೆ ಘಟಕದ ಹೈಕಮಿಷನರ್ ಕಚೇರಿ ಇದನ್ನು ನಿರ್ವಹಿಸುತ್ತಿವೆ. ಅಂತರರಾಷ್ಟ್ರೀಯ ನೆರವು ಸಂಸ್ಥೆಗಳ ಒಕ್ಕೂಟ ಇದಕ್ಕೆ ಹಣಕಾಸು ಪೂರೈಸುವ ಕಾರ್ಯ ಮಾಡುತ್ತಿದೆ.

ಸಿರಿಯಾ- ಜೋರ್ಡನ್ ಗಡಿಯಲ್ಲಿ ಈಗಲೂ 60,000 ಜನ ಅತಂತ್ರರಾಗಿ ಸಿಲುಕಿಕೊಂಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ಕಾರ್ ಬಾಂಬ್ ದಾಳಿಯಿಂದಾಗಿ 2016ರಲ್ಲಿ ಜೋರ್ಡನ್ ಭದ್ರತಾ ಅಧಿಕಾರಿಗಳು ಹತ್ಯೆಗೀಡಾದ ಮೇಲೆ ಸರ್ಕಾರವು ರುಕ್‍ಬನ್ ಎಂಬ ಮತ್ತೊಂದು ಶಿಬಿರಕ್ಕೆ ಪ್ರವೇಶ ತಡೆಯುವುದರ ಜೊತೆಗೆ, ಗಡಿಯಿಂದ ಸಿರಿಯನ್ನರ ಒಳಬರುವಿಕೆಯನ್ನೂ ನಿಷೇಧಿಸಿದೆ. ಹೀಗಾಗಿ ಸಿರಿಯಾದ ಈ ವಲಸಿಗರು ಜನವಸತಿ ಇರದಿದ್ದ ‘ಬರ್ಮ್’ ಎಂಬ ಮರುಭೂಮಿ ಪ್ರದೇಶದಲ್ಲಿ ಸಿಲುಕಿದ್ದಾರೆ. ಇವರೆಲ್ಲಾ ಪದೇಪದೇ ವೈಮಾನಿಕ ದಾಳಿಗೆ ತುತ್ತಾಗುವ ಅಪಾಯದಲ್ಲಿದ್ದು ಅವರ ಸ್ಥಿತಿಗತಿ ಮರುಕ ಹುಟ್ಟಿಸುವಂತಿದೆ. ಸರ್ಕಾರ ನೀಡುವ ಅಷ್ಟೋ ಇಷ್ಟೋ ಪಡಿತರವಷ್ಟೇ ಅವರ ಆಹಾರವಾಗಿದೆ. ಇಲ್ಲಿ ರೋಗ ರುಜಿನಗಳೂ ವ್ಯಾಪಕ. ಆದರೆ ಈ ಪ್ರದೇಶವನ್ನು ಸೇನಾ ವಲಯವೆಂದು ಗುರುತಿಸಿರುವ ಜೋರ್ಡನ್ ಸರ್ಕಾರವು ಇಲ್ಲಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ನೆರವನ್ನು ತಡೆಹಿಡಿದಿದೆ.

ಉಸಿರುಗಟ್ಟಿಸುವ ಈ ಮಾನವೀಯ ಸಂಕಷ್ಟದ ನಡುವೆಯೇ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಸಿರಿಯಾ ವಲಸಿಗರಿಗೆ ನೆರವು ನೀಡುತ್ತಿರುವ ಅಂತರರಾಷ್ಟ್ರೀಯ ನೆರವು ಸಂಸ್ಥೆಗಳಿಗೆ ಹಣಕಾಸು ಪೂರೈಕೆ ಕಡಿತಗೊಳಿಸುವ ಎಚ್ಚರಿಕೆ ನೀಡಿದೆ. ಅಮೆರಿಕವು ತನ್ನ ಜಾಗತಿಕ ನಾಯಕತ್ವದ ಹೊಣೆಗಾರಿಕೆಯಿಂದ ದೂರ ಸರಿಯುತ್ತಿರುವಂತೆಯೇ ಟರ್ಕಿಯಂತಹ ಪ್ರಾದೇಶಿಕ ಬಾಹುಳ್ಯದ ರಾಷ್ಟ್ರಗಳು ಆ ನಿರ್ವಾತವನ್ನು ತುಂಬಲು ಮುಂದಾಗುತ್ತಿವೆ. ಟರ್ಕಿ ಹಾಗೂ ಅದರ 8 ಕೋಟಿ ಜನ 30 ಲಕ್ಷ ಸಿರಿಯಾ ವಲಸಿಗರನ್ನು ತೆರೆದ ಬಾಹುಗಳಿಂದ ಸ್ವಾಗತಿಸಿದ್ದಾರೆ.

‘ಸಿರಿಯಾ ವಲಸಿಗರ ಸಮಸ್ಯೆ ಪರಿಹಾರವಿಲ್ಲದಂಥದ್ದೇನೂ ಅಲ್ಲ. ಈ ವಲಸಿಗರನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಿದೆ’ ಎನ್ನುವ ಟರ್ಕಿಯ ತುರ್ತು ಕಾರ್ಯಾಚರಣೆ ಮುಖ್ಯಸ್ಥರ ಅಭಿಪ್ರಾಯ ಇದಕ್ಕೆ ಪೂರಕವಾಗಿಯೇ ಇದೆ.

ವಲಸಿಗರನ್ನು ಹೇಗೆ ಮಾನವೀಯವಾಗಿ ನಡೆಸಿಕೊಳ್ಳಬೇಕು ಎಂಬುದಕ್ಕೆ ಟರ್ಕಿಯ ಗಾಜಿಯನ್‍ಟೆಪ್ ನಗರ ಒಂದು ಅತ್ಯುತ್ತಮ ಉದಾಹರಣೆ. ಸಿರಿಯಾ- ಟರ್ಕಿ ಗಡಿಯಲ್ಲಿರುವ ಈ ಸುಂದರ ನಗರವು ಸಿರಿಯಾದ 6 ಲಕ್ಷ ವಲಸಿಗರಿಗೆ ಆಶ್ರಯ ನೀಡಿದೆ. ಈ ಪೈಕಿ ಸುಮಾರು 40 ಸಾವಿರ ಜನ ನಗರದ ಐದು ಶಿಬಿರಗಳಲ್ಲಿ ಇದ್ದಾರೆ. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ತಂಡ ಇವುಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ. ಉಳಿದ ಬಹುತೇಕರು ನಗರದಲ್ಲೇ ನೆಲೆಸಿದ್ದಾರೆ. ಈ ವಲಸಿಗರಿಗೆ ಉದ್ಯೋಗ ಮಾಡಲೂ ಅವಕಾಶ ಮಾಡಿಕೊಡಲಾಗಿದೆ. ಉಚಿತ ಆರೋಗ್ಯ ಸೌಲಭ್ಯ ಮತ್ತು ಶಾಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಅಲ್ಲಿನ ಸರ್ಕಾರವು ಈ ವಲಸಿಗರಿಗೆ ಟರ್ಕಿಯ ಪೌರತ್ವ ದೊರಕಿಸಲು ಅನುವು ಮಾಡಿಕೊಡುವ ಕಾರ್ಯಕ್ರಮಗಳನ್ನೂ ಪದೇಪದೇ ಹಾಕಿಕೊಳ್ಳುತ್ತಿದೆ.

ಗಾಜಿಯನ್‍ಟೆಪ್ ನಗರದ ಮೇಯರ್ ಫತ್ಮಾ ಸಹೀನ್ ಅವರು 2014ರಿಂದಲೂ ವಲಸಿಗರ ಹಕ್ಕು ಸಂರಕ್ಷಣೆಯನ್ನು ತಮ್ಮ ಆಡಳಿತ ನೀತಿಯ ಹೆಗ್ಗುರುತಾಗಿಸಿಕೊಂಡಿದ್ದಾರೆ. ಯುದ್ಧದಿಂದ ಪಾರಾಗಿ ಬಂದವರನ್ನು ಹೇಗೆ ಬರಮಾಡಿಕೊಳ್ಳಬೇಕು ಎಂಬುದಕ್ಕೆ ಈ ನಗರ ಜಗತ್ತಿಗೇ ಮಾದರಿಯಾಗಿದೆ. ನಾನು ಸಹೀನ್ ಅವರ ಜತೆ ನಗರದಲ್ಲಿ ವಲಸಿಗರಿಗಾಗಿ ನಡೆಸುತ್ತಿರುವ ಶಿಬಿರಗಳಿಗೆ ಭೇಟಿ ಕೊಟ್ಟಿದ್ದೆ. ಈ ಸಂದರ್ಭದಲ್ಲಿ ಸಿರಿಯಾ ವಲಸಿಗರು ನಮ್ಮನ್ನು ಬಹುಕಾಲದ ಸಂಬಂಧಿಗಳೋ ಎಂಬಂತೆ ಆದರದಿಂದ ಬರಮಾಡಿಕೊಂಡರು. ದಯನೀಯ ಸ್ಥಿತಿಯಲ್ಲಿರುವ ಸಂತ್ರಸ್ತರಲ್ಲೂ ಬದುಕಿನ ಆಶಾಕಿರಣ ಇದೆ ಎಂಬುದನ್ನು ಸಾರಿದ ಕ್ಷಣಾಗಳಾಗಿದ್ದವು ಅವು.

ಟರ್ಕಿಯ ವಲಸೆ ನೀತಿಯು ಕೇವಲ ತನ್ನ ಗಡಿಯಂಚಿನಲ್ಲೇ ಕೊನೆಗೊಳ್ಳುವುದಿಲ್ಲ. ಟರ್ಕಿ ಸೇನೆಯು ಕಳೆದ ವರ್ಷ ಇಸ್ಲಾಮಿಕ್ ಉಗ್ರರ ಹಿಡಿತದಿಂದ ಮುಕ್ತಗೊಳಿಸಿದ ಸಿರಿಯಾದ ಜರಾಬುಲಸ್ ಪಟ್ಟಣಕ್ಕೂ ನಾನು ಭೇಟಿ ಕೊಟ್ಟಿದ್ದೆ. ಟರ್ಕಿ ನೀತಿಯ ಹಿಂದೆ ಹಲವು ಉದ್ದೇಶಗಳಿದ್ದರೂ ಗಡಿ ಭಾಗದಲ್ಲಿ ವಲಸಿಗರ ಸಂಖ್ಯೆ ತಗ್ಗಿರುವುದರಲ್ಲಿ ಯಾವ ಸಂದೇಹವೂ ಇಲ್ಲ; ಅಷ್ಟೇ ಅಲ್ಲ, ಹಲವು ವಲಸಿಗರು ತಮ್ಮ ತಾಯ್ನಾಡಿಗೆ ಮರುಳುವ ಸಾಧ್ಯತೆಗಳನ್ನೂ ಅದು ಸೃಷ್ಟಿಸುತ್ತಿದೆ. ಇಸ್ಲಾಮಿಕ್ ಉಗ್ರರು ಅರೆಬರೆ (ನಾಮಕಾವಸ್ತೆ) ವಿಚಾರಣೆ ನಡೆಸುತ್ತಿದ್ದ ಮತ್ತು ಸಾರ್ವಜನಿಕವಾಗಿ ರುಂಡ ಕತ್ತರಿಸುತ್ತಿದ್ದ ಜಾಗಗಳಲ್ಲಿ ಈಗ ಆಸ್ಪತ್ರೆಗಳು ಹಾಗೂ ಪ್ರಸೂತಿ ಕೇಂದ್ರಗಳು ತಲೆಯೆತ್ತಿವೆ. ಶಾಲೆಗಳನ್ನು ಪುನಃ ನಿರ್ಮಿಸಲಾಗಿದ್ದು, ನಗರದಲ್ಲಿ ಹೊಸ ಸ್ಥಳೀಯ ಆಡಳಿತ ಮಂಡಳಿ ರಚನೆಯಾಗಿದೆ.

ಒಂದು ವರ್ಷಕ್ಕೂ ಸ್ವಲ್ಪ ಮುನ್ನ ಕ್ಷಿಪ್ರಕ್ರಾಂತಿಯ ವಿಫಲ ಯತ್ನ ಎದುರಿಸಿದ ಟರ್ಕಿಯು ತನ್ನದೇ ಸಮಸ್ಯೆಗಳ ನಡುವೆಯೂ ನೆರೆರಾಷ್ಟ್ರಗಳಿಗಿಂತ ಭಿನ್ನವಾದ ಹಾಗೂ ಹೆಚ್ಚು ಮಾನವೀಯವಾದ ವಲಸೆ ನೀತಿ ಅನುಸರಿಸುವಲ್ಲಿ ಸಫಲವಾಗಿದೆ. ಟರ್ಕಿಯು ವಲಸೆ ಕಾರ್ಯಾಚರಣೆಯಲ್ಲಿ ಇಂತಹ ನಾಯಕತ್ವ ವಹಿಸಿರುವುದು ಯುರೋಪ್‍ಗೂ ಖುಷಿಯ ವಿಷಯವೇ. ಈ ಸಂಬಂಧ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಅವರು ಐರೋಪ್ಯ ಒಕ್ಕೂಟದ ಜತೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಆ ಪ್ರಕಾರ, ಟರ್ಕಿ ವಲಸೆ ನೀತಿಯು ಸಿರಿಯಾ ವಲಸಿಗರ ಯುರೋಪ್ ಪ್ರವೇಶಕ್ಕೆ ತಡೆಯೊಡ್ಡಿರುವುದರಿಂದ ಟರ್ಕಿಗೆ ಯುರೋಪ್ ಹಣಕಾಸು ನೆರವು ಒದಗಿಸುತ್ತಿದೆ.

ಟರ್ಕಿಯು ಈ ವಲಸೆ ಬಿಕ್ಕಟ್ಟಿಗೆ ಪ್ರತಿಸ್ಪಂದಿಸುತ್ತಿರುವ ವೈಖರಿಯು ಅದರ ಪ್ರಾದೇಶಿಕ ಘನತೆಯನ್ನು ಹಾಗೂ ಅದರ ರಾಷ್ಟ್ರಾಧ್ಯಕ್ಷರ ಬಾಹುಳ್ಯವನ್ನು ಎತ್ತರಕ್ಕೇರಿಸಿದೆ. ಎರ್ಡೀಗನ್ ಅವರಿಗೆ ಅಂಕಾರವನ್ನು ರಾಜಧಾನಿಯಾಗಿಟ್ಟುಕೊಂಡು ಹೊಸ ‘ಒಟ್ಟೊಮನ್ ಸಾಮ್ರಾಜ್ಯ‘ (13ನೇ ಶತಮಾನದಿಂದ ಮೊದಲನೇ ಜಾಗತಿಕ ಯುದ್ಧದವರೆಗೆ ಅಸ್ತಿತ್ವದಲ್ಲಿದ್ದ ಟರ್ಕಿ ಚಕ್ರಾಧಿಪತ್ಯ) ಸ್ಥಾಪಿಸುವ ಬಯಕೆ ಬಲು ಮುಂಚಿನಿಂದಲೂ ಇತ್ತು. ಟರ್ಕಿ ಅನುಸರಿಸುತ್ತಿರುವ ವಲಸೆ ನೀತಿಯು ಈಗ ಆ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಿಕೊಳ್ಳುವುದಕ್ಕೆ ಇಂಬು ನೀಡಿದೆ.

ಈ ಮಧ್ಯೆಯೇ, ಸಿರಿಯಾದಲ್ಲಿನ ಕದನ ಕ್ಷೀಣಿಸುತ್ತಿದ್ದು ಸಿರಿಯಾ ವಲಸಿಗರು ತಾಯ್ನಾಡಿಗೆ ಮರಳುತ್ತಿರುವ ವಿದ್ಯಮಾನವೂ ನಡೆಯುತ್ತಿದೆ. ಈ ವರ್ಷ 6 ಲಕ್ಷ ಸಿರಿಯನ್ನರು ತಮ್ಮ ನಾಡಿಗೆ ಮರಳಿದ್ದಾರೆ ಎಂದು ವಲಸೆ ಸಂಬಂಧ ಕಾರ್ಯ ನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಸಂಸ್ಥೆಯೊಂದು ಅಂಕಿಅಂಶ ನೀಡಿದೆ. ಆದರೆ ಈ ಪ್ರಕ್ರಿಯೆ ತಿರುವುಮುರುವಾಗುವ ಅಪಾಯವೂ ಇದೆ. ಸಿರಿಯಾ ಅಧ್ಯಕ್ಷ ಬಷರ್ ಅಸ್ಸಾದ್ ಅವರು ಹಲವು ಪ್ರದೇಶಗಳ ಜತೆಗೆ ಇದ್ಲಿಬ್ ನಗರದ ಮೇಲೆ ತಮ್ಮ ಹಿಡಿತ ಪುನರ್ ಸ್ಥಾಪಿಸುವ ಯೋಜನೆ ಹೊಂದಿದ್ದು, ಅದಕ್ಕಾಗಿ ಯಾವುದೇ ನಿರ್ದಯ ಹಿಂಸಾಚಾರಕ್ಕೂ ಹಿಂದೆಮುಂದೆ ನೋಡುವವರಲ್ಲ. ಇದು ಮತ್ತೊಂದು ಸರಣಿ ವಲಸೆಗೆ ಕಾರಣವಾಗಬಹುದು. ಕಳೆದ ಏಪ್ರಿಲ್‍ನಲ್ಲಿ ಅವರು ನಾಗರಿಕರ ಮೇಲೆ ಮತ್ತೊಮ್ಮೆ ಸರಿನ್ ಅನಿಲ ಪ್ರಯೋಗಿಸಿದ್ದರು. ಅವರ ಮುಂದಿನ ದಾಳಿ ಕೂಡ ಅಷ್ಟೇ ಭೀಕರವಾಗಿರಬಹುದು.

ಏನೋ ಒಂದು ಬಗೆಯ ಮಧ್ಯಂತರ ಒಪ್ಪಂದ ಏರ್ಪಟ್ಟಿದೆ, ಸರಿ. ಆದರೆ, ತಮ್ಮ ನಾಡಿಗೆ ವಾಪಸಾಗಿರುವ ಹಾಗೂ ಇನ್ನೂ ವಾಪಸಾಗಲು ಆಗದೇ ಇರುವ ಸಿರಿಯಾ ವಲಸಿಗರ ಸುರಕ್ಷತೆ ಸಂಬಂಧ ಸಮಾಧಾನಕರವಾದ ಯೋಜನೆಯ ಪ್ರಸ್ತಾವವನ್ನು ಯಾರೂ ಮುಂದಿಟ್ಟಿಲ್ಲ. ಈ ಸಂಘರ್ಷದಲ್ಲಿ ತನ್ನ ವಿದೇಶಿ ಮಿತ್ರಪಡೆಗಳು, ಇರಾನ್ ಮತ್ತು ರಷ್ಯಾ ಬೆಂಬಲದ ಬಲದಿಂದ ಅಸ್ಸಾದ್ ಅವರು ಗೆಲುವಿನ ನಗೆ ಬೀರಿ ಅಧಿಕಾರದಲ್ಲಿ ಉಳಿಯುವ ಹವಣಿಕೆ ಹೊಂದಿದ್ದಾರೆ. ಯುದ್ಧ ಮುಗಿದರೂ ಅನೇಕ ವಲಸಿಗರ ಪಾಲಿಗೆ ಅಸ್ಸಾದ್ ನಿಯಂತ್ರಣದ ಸಿರಿಯಾಕ್ಕೆ ಮರಳುವುದು ಎಂದರೆ ಮರಣದಂಡನೆಗೆ ಗುರಿಯಾದಂತೆಯೇ. ಅಸ್ಸಾದ್ ಆಡಳಿತದ ದೌರ್ಜನ್ಯಗಳನ್ನು ಗಮನಿಸಿದರೆ, ಸಿರಿಯಾದ ನೆರೆರಾಷ್ಟ್ರಗಳು ಮುಂದಿನ ಹಲವು ಪೀಳಿಗೆಗಳವರೆಗೆ ವಲಸಿಗರಿಗೆ ಆಶ್ರಯ ನೀಡುವ ಪ್ರಕ್ರಿಯೆ ಮುಂದುವರಿಸುವುದು ನಿಶ್ಚಿತವಾದಂತೆ ತೋರುತ್ತದೆ.

ನಾನು ಶಿಬಿರಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಬಹುತೇಕ ಸಿರಿಯನ್ನರು ತಮ್ಮ ರಾಷ್ಟ್ರದಲ್ಲಿ ಸೇನೆ ಮತ್ತು ಪೊಲೀಸರು ಅನುಸರಿಸುವ ಶೋಷಣಾ ನೀತಿಯ ಬಗ್ಗೆ ಹೆಚ್ಚೂಕಡಿಮೆ ಒಂದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದರು. ವಿಶೇಷವಾಗಿ ಲೆಬನಾನ್‍ನಲ್ಲಿ ಬೀಡುಬಿಟ್ಟಿರುವ ನಿರಾಶ್ರಿತರು ದೀರ್ಘಾವಧಿಗೆ ತಮ್ಮ ಇರುವಿಕೆಯನ್ನು ಸಹಿಸದ ಆಡಳಿತದೊಂದಿಗೆ ಬಲವಂತದಿಂದ ಬದುಕು ದೂಡಬೇಕಾಗುತ್ತದೆ. ತಮ್ಮ ಮನೆಗಳಿಂದ ಪಲಾಯನಗೊಂಡು ಬೇರೆಲ್ಲೆಡೆ ತಿರಸ್ಕೃತರಾದವರಿಗೆ ತಮ್ಮ ಬದುಕು, ಮನೆಮಠ, ಒಂದಷ್ಟು ಗೌರವ ಹಾಗೂ ಕನಿಷ್ಠ ಆಶಾಭಾವ ಮೂಡಿಸುವ ಕಾರ್ಯವನ್ನು ಜಗತ್ತು ಮಾಡದಿದ್ದರೆ, ಅಂತಹವರು ತೀವ್ರವಾದಿಗಳಾಗುವುದನ್ನು ತಡೆಯುವುದು ಕಷ್ಟ.

(ರುಲಾ ಜಿಬ್ರೀಲ್‌  ಅವರು ಪತ್ರಕರ್ತರು, ವಿದೇಶಾಂಗ ನೀತಿ ವಿಶ್ಲೇಷಕರು)

ದಿ ನ್ಯೂಯಾರ್ಕ್ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT