ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ಗೆ ಇದು ಸಕಾಲ:ಮಿಶ್ರಾ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸಫಲತೆ ಸಿಕ್ಕರೆ ಮಾತ್ರ ಆ ಕ್ರೀಡೆಯ ಜನಪ್ರಿಯತೆ ಮುಗಿಲು ಮುಟ್ಟಲು ಸಾಧ್ಯ. ಹಾಗೆಯೇ ಇದು ಬ್ಯಾಡ್ಮಿಂಟನ್ ಸ್ಪರ್ಧಿಗಳಿಗೆ ಸಕಾಲ. ಈಗಲೇ ಈ ಕ್ರೀಡೆಯನ್ನು ನಾವು ಭಾರತದಲ್ಲಿ ಎತ್ತರಕ್ಕೆ ಕೊಂಡೊಯ್ಯಬೇಕು’ ಇದು ಜೂನಿಯರ್‌ ಬ್ಯಾಡ್ಮಿಂಟನ್ ಕೋಚ್ ಸಂಜಯ್ ಮಿಶ್ರಾ ಅವರ ಮಾತುಗಳು.

ಬೆಂಗಳೂರಿನಲ್ಲಿ 15 , 17 ಮತ್ತು 19 ವರ್ಷದೊಳಗಿನವರ ಜೂನಿಯರ್ ಬಾಲಕ ಮತ್ತು ಬಾಲಕಿಯರ ರಾಷ್ಟ್ರೀಯ ಶಿಬಿರ ನಡೆಯುತ್ತಿದೆ. ಕರ್ನಾಟಕ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ರಾಜ್ಯದ ಪ್ರತಿಭೆ ರಾಹುಲ್ ಭಾರದ್ವಾಜ್ ಸೇರಿದಂತೆ ಜೂನಿಯರ್ ವಿಭಾಗದ ಅಗ್ರ ರ‍್ಯಾಂಕಿಂಗ್ ಆಟಗಾರ ಲಕ್ಷ್ಯಸೇನ್‌, ಬಾಲಕಿಯರ ವಿಭಾಗದ ಅಗ್ರ ರ‍್ಯಾಂಕಿಂಗ್ ಆಟಗಾರ್ತಿ ಆಕರ್ಷಿ ಕಶ್ಯಪ್ ಕೂಡ ಇಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ.

‘ಆರು ತಿಂಗಳ ಹಿಂದೆ ಆಷ್ಟೇ ಜೂನಿಯರ್ ವಿಭಾಗದ ಕೋಚ್ ಆಗಿ ಆಯ್ಕೆಯಾಗಿದ್ದೇನೆ. ಈಗಿನ ಮಕ್ಕಳು ಸಾಕಷ್ಟು ಪರಿಶ್ರಮ ಹಾಕಿ ಆಡುತ್ತಾರೆ. ಈ ಕ್ರೀಡೆಯಲ್ಲಿಯೇ ಮುಂದುವರಿಯುವ ಛಾತಿ ಹೊಂದಿದ್ದಾರೆ. ಅವರ ಛಲವನ್ನು ನೋಡಿದರೆ ಖುಷಿಯಾಗುತ್ತದೆ. ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ದಾರಿ ತೋರಿಸುವುದು ನಮ್ಮ ಕೆಲಸ’ ಎಂದು ಮಿಶ್ರಾ ಅವರು ತಮ್ಮ ಕೆಲಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

‘ಅಕ್ಟೋಬರ್‌ 9ರಿಂದ ಇಂಡೊನೇಷ್ಯಾದಲ್ಲಿ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್ ನಡೆಯಲಿದೆ. ಅಲ್ಲಿ ನಮಗೆ ಮೂರರಿಂದ ನಾಲ್ಕು ಪದಕಗಳ ಭರವಸೆ ಇದೆ. ಕರ್ನಾಟಕದ ರಾಹುಲ್ ಭಾರಧ್ವಾಜ್, ತೇಜಸ್‌ ಪ್ರತಿಭಾನ್ವಿತ ಆಟಗಾರರು. ಲಕ್ಷ್ಯಸೇನ್, ಆಕರ್ಷಿ ಕಶ್ಯಪ್ ಅವರು ಪದಕದ ಭರವಸೆ ಮೂಡಿಸಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಕಪಿಲ ಹಾಗೂ ಕೃಷ್ಣಪ್ರಸಾದ್ ಉತ್ತಮವಾಗಿ ಆಡುತ್ತಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಕಪಿಲ ಮತ್ತು ಮಿಥುಲ ಕೂಡ ಪ್ರಶಸ್ತಿ ಗೆಲ್ಲುವ ಛಲ ಹೊಂದಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಜೂನಿಯರ್ ವಿಭಾಗದ ಟೂರ್ನಿಗಳಲ್ಲಿ ಶ್ರಮದ ಜತೆ ಅದೃಷ್ಟ ಕೂಡ ನಮ್ಮ ಕಡೆ ಇರಬೇಕು. ಇಲ್ಲಿ ಡ್ರಾ ಕೂಡ ಮುಖ್ಯವಾಗುತ್ತದೆ. ನಾನು ಒಂಬತ್ತು ವರ್ಷದವನಿದ್ದಾಗಿನಿಂದ ಬ್ಯಾಡ್ಮಿಂಟನ್ ಆಡಿದ್ದೇನೆ. ಈ ಆಟಕ್ಕೆ ದೈಹಿಕ ಶ್ರಮ ಎಷ್ಟು ಅಗತ್ಯವೋ ಅಷ್ಟೇ ಮಾನಸಿಕ ಧೃಢತೆ ಕೂಡ ಮುಖ್ಯ. ರಾಯಪುರದಲ್ಲಿ ನನ್ನದೊಂದು ಚಿಕ್ಕ ಅಕಾಡೆಮಿ ಇದೆ. ಚತ್ತೀಸಗಡದ ಆಕರ್ಷಿ ಹಾಗೂ ವೆಂಕಟ್ ಗೌರವ್ ನನ್ನ ವಿದ್ಯಾರ್ಥಿಗಳು. ಅಲ್ಲಿ ಬೆಂಗಳೂರಿನಲ್ಲಿ ಇರುವಷ್ಟು ಸೌಲಭ್ಯಗಳಿಲ್ಲ. ಅಲ್ಲಿನ ಮಕ್ಕಳಿಗೆ ನಾನೇ ಫಿಸಿಯೋ, ನಾನೇ ಟ್ರೈನರ್‌ ನಾನೇ ಕೋಚ್ ಎಲ್ಲವೂ ಆಗಿದ್ದೇನೆ’ ಎಂದು ತಮ್ಮ ಕೆಲಸದ ವಿಸ್ತೃತ ಅನುಭವಗಳನ್ನು ಹಂಚಿಕೊಂಡರು.

‘ಕರ್ನಾಟಕದಲ್ಲಿ ಪ್ರಕಾಶ್ ಪಡುಕೋಣೆ ಅಕಾಡೆಮಿ ಇದೆ. ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಕೂಡ ಮಕ್ಕಳ ಪ್ರತಿಭೆಗೆ ಒರೆ ಹಚ್ಚುತ್ತಿದೆ. ಬ್ಯಾಡ್ಮಿಂಟನ್‌ನಲ್ಲಿ ಮುಂದುವರಿಯಲು ಇಷ್ಟು ಇದ್ದರೆ ಸಾಕಾಗದು. ಉತ್ತಮ ಪ್ರಾಯೋಜಕರೂ ಸಿಗಬೇಕು’ ಎಂದು ಅವರು ಹೇಳಿದರು.

‘ಸೈನಾ ನೆಹ್ವಾಲ್‌, ಪಿ. ವಿ ಸಿಂಧು, ಶ್ರೀಕಾಂತ್‌, ಪ್ರಣಯ್ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದ್ದರಿಂದ ಈಗ ಬ್ಯಾಡ್ಮಿಂಟನ್‌ನಲ್ಲಿ ಏನನ್ನಾದರೂ ಸಾಧಿಸುವ ಕಾಲ. ಬೇರೆ ಬೇರೆ ವಲಯಗಳಲ್ಲಿ ರಾಷ್ಟ್ರೀಯ ಅಕಾಡೆಮಿ ತೆರೆದರೆ ಸಾಕಷ್ಟು ಮಕ್ಕಳಿಗೆ ಉಪಯೋಗ ಆಗಲಿದೆ. ಭಾರತದಲ್ಲಿ ಎರಡರಿಂದ ಮೂರು ದೊಡ್ಡ ಅಕಾಡೆಮಿಗಳು ಮಾತ್ರ ಇವೆ. ಗೋಪಿಚಂದ್ ಅಕಾಡೆಮಿ ಬಿಟ್ಟರೆ, ಬೆಂಗಳೂರಿಗೆ ಸಾಕಷ್ಟು ಮಕ್ಕಳು ಬರುತ್ತಾರೆ. ಅಕಾಡೆಮಿಗಳಿಗೆ ತನ್ನದೇ ಆದ ಮಿತಿ ಇರುತ್ತದೆ. 500ಕ್ಕಿಂತ ಹೆಚ್ಚು ಮಕ್ಕಳಿಗೆ ತರಬೇತಿ ನೀಡಲು ಸಾಧ್ಯವಿಲ್ಲ. ಹೀಗಿದ್ದಾಗ ಈ ಕ್ರೀಡೆಯಲ್ಲಿ ಕೆಲವರಿಗೇ ಅವಕಾಶ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಅಕಾಡೆಮಿಗಳನ್ನು ತೆರೆಯುವ ಯೋಜನೆ ನಮ್ಮ ಮುಂದಿದೆ’ ಎಂದು ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.

‘ಕೆಲವು ಮಕ್ಕಳು ಅಭ್ಯಾಸದ ವೇಳೆ ಉತ್ತಮವಾಗಿ ಆಡುತ್ತಾರೆ. ಆದರೆ ನಿಜವಾದ ಸ್ಪರ್ಧೆ ಎದುರಾದಾಗ ಪೈಪೋಟಿ ನೀಡಲು ಸಾಧ್ಯವಾಗದೇ ಸೋಲುತ್ತಾರೆ. ಬೇರೆ ದೇಶದ ಆಟಗಾರರೊಂದಿಗೆ ಆಡಲು ಭಾರತದ ಸ್ಪರ್ಧಿಗಳು ಕಷ್ಟಪಡುತ್ತಾರೆ.ಮಂಗೋಲಿಯಾದ ಬೆಲ್ಟ್‌ ಇರುವ ಚೀನಾ, ಇಂಡೊನೇಷ್ಯಾ, ಜಪಾನ್‌, ಮಲೇಷ್ಯಾ ಸ್ಪರ್ಧಿಗಳು ನೈಸರ್ಗಿಕವಾಗಿಯೇ ದೈಹಿಕವಾಗಿ ಸಮರ್ಥರಾಗಿರುತ್ತಾರೆ. ಅವರಿಗೆ ಸರಿಸಮನಾಗಿ ಆಡಲು ಭಾರತದ ಮಕ್ಕಳಿಗೆ ಸಾಧ್ಯವಿಲ್ಲ. ಅವರನ್ನು ನಾವು ಅನುಸರಿಸುವ ಅಗತ್ಯ ಕೂಡ ಇಲ್ಲ. ಅವರು ದೈಹಿಕವಾಗಿ ಮುಂದಿದ್ದರೆ ನಾವು ತಂತ್ರ ಹಾಗೂ ಕೌಶಲಗಳಲ್ಲಿ ನಿಪುಣತೆ ಸಾಧಿಸಿದ್ದೇವೆ. ಇದನ್ನು ಅವರ ಜತೆ ಹೊಂದಿಸಿಕೊಂಡು ಆಡಬೇಕಿದೆ. ನಮ್ಮಲ್ಲಿ ಮಣಿಪುರ ಹಾಗೂ ನಾಗಾಲ್ಯಾಂಡ್‌ ಸ್ಪರ್ಧಿಗಳು ದೈಹಿಕವಾಗಿ ಸಮರ್ಥರಿರುತ್ತಾರೆ. ಸ್ಕೋರಿಂಗ್ ವ್ಯವಸ್ಥೆ ಬದಲಾದ ಮೇಲೆ ನಿಖರತೆ ಕೂಡ ಈ ಆಟದ ಬಹುಮುಖ್ಯ ದಾಳವಾಗಿದೆ’ ಎಂದು ಅವರು ಹೇಳಿದರು.

‘ಶ್ರೀಕಾಂತ್‌ ಸತತವಾಗಿ ಪಂದ್ಯಗಳನ್ನು ಆಡುತ್ತಿದ್ದಾರೆ. ಸರಿಯಾದ ಫಿಟ್‌ನೆಸ್ ಇಲ್ಲದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ. ನಮ್ಮಲ್ಲೂ ದೈಹಿಕ ಸಾಮರ್ಥ್ಯಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ’ ಎಂದರು.

‘ಮಕ್ಕಳು ಈ ಆಟದಲ್ಲಿ ಷಟಲ್‌ಗಾಗಿಯೇ ಸಾಕಷ್ಟು ವೆಚ್ಚ ಮಾಡುತ್ತಿದ್ದಾರೆ. ಉತ್ತಮ ರ‍್ಯಾಂಕಿಂಗ್ ಸಿಗುವವರೆಗೂ ಬೆಂಬಲ ಸಿಗುವುದು ಕಷ್ಟ. ಹೀಗಿದ್ದರೂ ಕೆಲವು ಸ್ಪರ್ಧಿಗಳು ಎಲ್ಲವನ್ನೂ ಮೀರಿ ಸಾಧನೆ ಮಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಹೆಮ್ಮೆ ಎನಿಸುತ್ತದೆ’ ಎಂದು ಅವರು ಹೇಳಿದರು.

ರಾಹುಲ್‌ ಭಾರಧ್ವಾಜ್ ಮಾತುಗಳು: ‘ಮೊದಲು ನಾವು ಕುದುರೆಮುಖದಲ್ಲಿ ಇದ್ದೆವು. ಅಲ್ಲಿ ಅಪ್ಪ ಬ್ಯಾಡ್ಮಿಂಟನ್ ಆಡಲು ಪ್ರೋತ್ಸಾಹ ನೀಡಿದರು. 2008ರಲ್ಲಿ ಹತ್ತು ವರ್ಷದೊಳಗಿನವರ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಚಾಂಪಿಯನ್ ಆದೆ. ಅಲ್ಲಿಂದ ನನ್ನ ಆಟದ ದಿಕ್ಕು ಬದಲಾಯಿತು.’ ಎಂದು ಅವರು ಹೇಳಿದ್ದಾರೆ.

‘2010ರಿಂದ ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ನಾನು ಬ್ಯಾಡ್ಮಿಂಟನ್‌ನಲ್ಲಿ ಬೆಳೆಯುವ ಕನಸು ಅಪ್ಪನಿಗೆ ಇತ್ತು’ ಎಂದು ರಾಹುಲ್ ಕುಟುಂಬದ ಬೆಂಬಲದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ರಾಹುಲ್‌ ವಿಶ್ವ ಜೂನಿಯರ್‌ ಚಾಂಪಿಯನ್‌ ಷಿಪ್‌ ಹಾಗೂ ಸೀನಿಯರ್ ನ್ಯಾಷನಲ್ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆಲ್ಲುವ ಕನಸು ಇಟ್ಟುಕೊಂಡಿದ್ದಾರೆ. ಗಾಯದಿಂದಾಗಿ ಎರಡು ವರ್ಷ ಅವರು ಯಾವುದೇ ಟೂರ್ನಿ ಆಡಿಲ್ಲ. ಇದು ಅವರ ಆಟದಲ್ಲಿ ಹಿನ್ನಡೆಗೆ ಕಾರಣವಾಯಿತು. ಪ್ರತಿ ದಿನ ಐದರಿಂದ ಆರು ಗಂಟೆ ಅವರು ಸತತ ಅಭ್ಯಾಸ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT