ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಳ ಕಾರ್ಖಾನೆ...

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯೆಂದರೆ ಕನಸುಗಳನ್ನು ಉತ್ಪಾದಿಸುವ ಕಾರ್ಖಾನೆ. ಶ್ವೇತ ಸಮವಸ್ತ್ರ ಧರಿಸಿ ಕಣಕ್ಕಿಳಿಯುವ  ಆಟಗಾರರ ಮನದಲ್ಲಿ ಬಣ್ಣಬಣ್ಣದ ಕನಸುಗಳು ಗರಿಗೆದರುವುದು ಇಲ್ಲಿಯೇ.

ರಾಷ್ಟ್ರ ತಂಡದ ಗಮನ ಸೆಳೆಯುವಂತಹ ಆಟವಾಡುವ ಕನಸು ಬಹುತೇಕ ಆಟಗಾರರದ್ದು. ಕ್ರಿಕೆಟ್‌ನೊಂದಿಗೆ ದೀರ್ಘ ಕಾಲದ ನಂಟು ಉಳಿಸಿಕೊಳ್ಳಲು ಉತ್ತಮವಾಗಿ ಆಡುವ ಛಲ  ಇನ್ನೂ ಕೆಲವರದ್ದು,  ಭಾರತ ತಂಡದಿಂದ ಬಿಡುವು ಸಿಕ್ಕರೆ ತವರು ರಾಜ್ಯ ತಂಡದಲ್ಲಿ ಆಡುವ ಹಂಬಲ ಇನ್ನಷ್ಟು ಆಟಗಾರರದ್ದು, ಚೊಚ್ಚಲ ಟ್ರೋಫಿ ಗೆಲ್ಲುವ ಛಲ ಕೆಲವು ತಂಡಗಳಿಗಿದ್ದರೆ, ಸೋತಿದ್ದನ್ನು ಮರಳಿ ಗಳಿಸುವ ಮತ್ತು ಗೆದ್ದಿದ್ದನ್ನು ಉಳಿಸಿಕೊಳ್ಳುವ ಯೋಚನೆ ಮತ್ತಷ್ಟು ತಂಡಗಳದ್ದು. ಹೀಗೆ ಹತ್ತು ಹಲವು ಕನಸುಗಳ ಆಗರ ಈ ಟೂರ್ನಿ.

1934ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೆ ಭಾರತದ ಕ್ರಿಕೆಟ್‌ ರಂಗದಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಎಂಟು ದಶಕಗಳ ಅವಧಿಯಲ್ಲಿ  ಏಕದಿನ ಕ್ರಿಕೆಟ್, ಟ್ವೆಂಟಿ–20 ಮಾದರಿಗಳು, ಐಪಿಎಲ್‌, ಕೆಪಿಎಲ್, ಟಿಪಿಎಲ್‌ನಂತಹ ಹತ್ತಾರು ಟೂರ್ನಿಗಳು ಜನಪ್ರಿಯತೆ ಗಳಿಸಿವೆ. ಹೊಡಿ–ಬಡಿ ಆಟದ ಚುಟುಕು ಕ್ರಿಕೆಟ್‌ ಮಾದರಿಯಂತೂ ಒಲಿಂಪಿಕ್ಸ್ ಕ್ರೀಡಾಕೂಟದ ಕದ ತಟ್ಟುತ್ತಿದೆ.

ಕ್ರಿಕೆಟ್‌ ಪ್ರಸಾರಕ್ಕಾಗಿಯೇ ಟಿವಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ವರ್ಷವಿಡೀ ಒಂದಿಲ್ಲೊಂದು ಕ್ರಿಕೆಟ್‌ ಟೂರ್ನಿಗಳು ನಡೆಯುತ್ತಿವೆ. ಆಟಗಾರರೂ ವೃತ್ತಿಪರರಾಗಿದ್ದಾರೆ. ದೀರ್ಘ ಮಾದರಿ, ಏಕದಿನ ಮತ್ತು ಚುಟುಕು ಮಾದರಿಗಳಲ್ಲಿ  ಸತತವಾಗಿ ಆಡುತ್ತ ಬೆಳೆಯುತ್ತಿದ್ದಾರೆ. ಒತ್ತಡಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ.

ಇವೆಲ್ಲವುಗಳ ನಡುವೆ ರಣಜಿ ಟ್ರೋಫಿ ಟೂರ್ನಿಯ ಹೊಳಪು ಕುಂದಿಲ್ಲ. ಪ್ರತಿವರ್ಷವೂ ಅದೇ ಘನತೆ, ರೋಚಕತೆ ಮತ್ತು ಸಂಭ್ರಮಗಳೊಂದಿಗೆ ಬರುತ್ತದೆ. ಕ್ರಿಕೆಟ್‌ ರುತುವಿಗೆ ಮುನ್ನುಡಿ ಹಾಡುತ್ತದೆ. ಪ್ರೇಕ್ಷಕರಿಲ್ಲದ ಗ್ಯಾಲರಿಗಳು, ಡ್ರೆಸ್ಸಿಂಗ್ ಕೋಣೆಯಲ್ಲಿರುವ ಆಟಗಾರರ ಚಪ್ಪಾಳೆ ಸದ್ದು ಬಿಟ್ಟರೆ ಬೇರೆ ಯಾವ ಶಬ್ದವೂ ಇಲ್ಲದ ವಾತಾವರಣ. ಕೆಲವು ಮೈದಾನಗಳಲ್ಲಿ ಬಿಸಿಲ ಬೇಗೆ ಇದ್ದರೆ, ಇನ್ನು ಕೆಲವೆಡೆ ಮಾಗಿಯ ಚಳಿಯ ನಡುವೆ ಆಟಗಾರರು ತಮ್ಮ ಕೌಶಲ ಮೆರೆಯುತ್ತಾರೆ.

ಅಂತಹ ವೈವಿಧ್ಯತೆಗಳ ಸುಂದರ ರಣಜಿ ಟೂರ್ನಿಯ ಮತ್ತೊಂದು ರುತು ಬಂದಿದೆ. ಇದೇ 6ರಿಂದ  2018ರ ಜನವರಿ 3ರವರೆಗೆ ನಡೆಯಲಿದೆ. ನಾಲ್ಕು ಗುಂಪುಗಳಲ್ಲಿ 28 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಎಂಟು ಸಲದ ಚಾಂಪಿಯನ್ ಕರ್ನಾಟಕ ತಂಡವು ಹೊಸ ಹುರುಪಿನೊಂದಿಗೆ ಕಣಕ್ಕೆ ಇಳಿಯಲಿದೆ. ದೇಶದ ಅತ್ಯಂತ ಪ್ರತಿಷ್ಠಿತ ಕ್ರಿಕೆಟ್‌ ತಂಡಗಳಲ್ಲಿ ಒಂದಾಗಿರು ಕರ್ನಾಟಕ ಅ. 14ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಸೆಣಸಲಿದೆ.

ಪ್ರತಿಭಾನ್ವಿತರ ದಂಡು
ಎರಡು ಬಾರಿ ರಣಜಿ ಟ್ರೋಫಿ ಗೆದ್ದ ತಂಡದ ನಾಯಕನೆಂಬ ಹೆಗ್ಗಳಿಕೆಯ ‘ದಾವಣಗೆರೆ ಎಕ್ಸ್‌ಪ್ರೆಸ್‌’ ವಿನಯಕುಮಾರ್ ಅವರೇ ಈ ಬಾರಿಯೂ ಕರ್ನಾಟಕ ತಂಡದ ಸಾರಥ್ಯ ವಹಿಸುವುದು ಬಹುತೇಕ ಖಚಿತ.

2013ಕ್ಕೂ ಮೊದಲು ಕರ್ನಾಟಕ ತಂಡ ಸತತ 14 ವರ್ಷ ಈ ಟೂರ್ನಿಯಲ್ಲಿ ಪ್ರಶಸ್ತಿಯ ಬರ ಎದುರಿಸಿತ್ತು. ಆ ನಂತರದ ಎರಡು ವರ್ಷ ರಣಜಿ ಟ್ರೋಫಿ ಗೆದ್ದಿತ್ತು. ಅಂದು ಆ ಸಾಧನೆಯ ರೂವಾರಿಗಳಾಗಿದ್ದ  ಕೆ.ಎಲ್‌. ರಾಹುಲ್‌, ಕರುಣ್‌ ನಾಯರ್‌, ಮನೀಷ್ ಪಾಂಡೆ ಇಂದು ಭಾರತ ತಂಡದಲ್ಲಿ ಮಿಂಚುತ್ತಿದ್ದಾರೆ.

ರಾಜ್ಯದ ಮಧ್ಯಮವೇಗದ ಬೌಲಿಂಗ್‌ ಶಕ್ತಿಯಾಗಿರುವ ವಿನಯ ಕುಮಾರ್‌, ಅಭಿಮನ್ಯು ಮಿಥುನ್‌,  ಎಸ್‌. ಅರವಿಂದ್‌ ಅವರು ಕೂಡ ದೇಶದ ತಂಡದಲ್ಲಿ ಆಡಿ ಬಂದಿದ್ದಾರೆ. ಮತ್ತೊಂದು ಅವಕಾಶಕ್ಕಾಗಿ ತುಡಿಯುತ್ತಿದ್ದಾರೆ. ವಿಶೇಷವೆಂದರೆ ಆ ಎರಡು ವರ್ಷ ಟ್ರೋಫಿ ಜಯಿಸಿದ್ದಾಗ ಕರ್ನಾಟಕ ಒಂದೂ ಪಂದ್ಯದಲ್ಲಿ ಸೋತಿರಲಿಲ್ಲ. ಆದರೆ 2015–16ರಲ್ಲಿ ಲೀಗ್ ಹಂತದಲ್ಲಿ ಸೋತಿತ್ತು. ಉತ್ತುಂಗ ದಿಂದ ಪ್ರಪಾತಕ್ಕೆ ಬಿದ್ದ ತಂಡವು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.

ಹೋದ ವರ್ಷ ನಾಕೌಟ್ ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಫೈನಲ್‌ ತಲುಪಲಿಲ್ಲ. ಈ ವರ್ಷ ‘ಎ’ ಗುಂಪಿನಲ್ಲಿ ತಂಡವು ಆಡಲಿದೆ. ಅಸ್ಸಾಂ, ದೆಹಲಿ, ಹೈದರಾಬಾದ್, ಕರ್ನಾಟಕ, ಮಹಾರಾಷ್ಟ್ರ, ರೈಲ್ವೆಸ್ ಮತ್ತು ಉತ್ತರ ಪ್ರದೇಶ ತಂಡಗಳು ಈ ಗುಂಪಿನಲ್ಲಿವೆ. ಹಾಲಿ ಚಾಂಪಿಯನ್‌ ಗುಜರಾತ್ ತಂಡವು ಬಿ ಗುಂಪಿನಲ್ಲಿದೆ.

ಹೆಚ್ಚಿದ ಸ್ಪರ್ಧಾತ್ಮಕತೆ
ಬದಲಾಗಿರುವ ಕಾಲಘಟ್ಟದಲ್ಲಿ ದೇಶಿ ಕ್ರಿಕೆಟ್‌ ಹಿಂದಿನಂತೆ ಉಳಿದಿಲ್ಲ. ಒಂದು ರಣಜಿ ರುತುವಿನಲ್ಲಿ ಆಡಿದವರು ನಂತರ ಹಲವು ಸರಣಿಗಳಲ್ಲಿ ಸ್ಥಾನ ಉಳಿಸಿಕೊಳ್ಳುತ್ತಾರೆ ಎಂಬ ರೂಢಿ ಈಗ ಉಳಿದಿಲ್ಲ. ಪ್ರತಿಯೊಬ್ಬ ಆಟಗಾರನಿಗೂ ಈಗ ಪ್ರತಿ ಪಂದ್ಯವೂ ಹೊಸ ಸವಾಲು. ಉತ್ತಮವಾಗಿ ಆಡುವ ಮತ್ತು ದೈಹಿಕ ಕ್ಷಮತೆಯನ್ನು ಚೆನ್ನಾಗಿಟ್ಟುಕೊಳ್ಳುವ ಸವಾಲು ಇದೆ. ಹಿಂದೆಂದಿಗಿಂತಲೂ ಈಗ ಸ್ಪರ್ಧೆ ಹೆಚ್ಚಾಗಿದೆ.

ದಶಕದಿಂದ ಆಡುತ್ತಿರುವ ಆಟಗಾರರು ಯುವ ಪ್ರತಿಭೆಗಳೊಂದಿಗೆ ಸ್ಪರ್ಧಿಸಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ತಂಡ ಗೆಲ್ಲಲೇಬೇಕೆಂಬುದು ಈಗ ಪ್ರತಿಯೊಂದು ರಾಜ್ಯ ಸಂಸ್ಥೆಗಳ ಮೂಲಮಂತ್ರವಾಗಿಬಿಟ್ಟಿದೆ. ಆದ್ದರಿಂದ ಈಗ ಕರ್ನಾಟಕದ ‘ಬೆಂಚ್‌ ಶಕ್ತಿ’ ಉತ್ಕೃಷ್ಠವಾಗಿದೆ. ಸುಚಿತ್, ನಿಕಿನ್ ಜೋಸ್, ಪ್ರತೀಕ್ ಜೈನ್, ಅಬ್ರಾರ್ ಖಾಜಿ ಅವರಂತಹ ಆಟಗಾರರು ಕಣಕ್ಕಿಳಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ.

ತವರಿಗೆ ಮರಳಿದ ಆಟ
ಈ ಬಾರಿ ರಣಜಿ ಟೂರ್ನಿಯಲ್ಲಿ ತಂಡಗಳಿಗೆ ತಮ್ಮ ತವರಿನ ಅಂಗಳದಲ್ಲಿ ಆಡುವ ಅವಕಾಶ ಲಭಿಸಿದೆ. ಹೋದ ವರ್ಷ ಇದ್ದ ತಟಸ್ಥ ಸ್ಥಳದ ನಿಯಮವನ್ನು ಬಿಸಿಸಿಐ ಕೈಬಿಟ್ಟಿದೆ. ಅದರಿಂದಾಗಿ ರಾಜ್ಯದ ಮೈಸೂರು, ಶಿವಮೊಗ್ಗ, ಆಲೂರು, ಹುಬ್ಬಳ್ಳಿಯ ಕ್ರಿಕೆಟ್‌ಪ್ರಿಯರಿಗೆ ರಣಜಿ ಕ್ರಿಕೆಟ್‌ ಸವಿಯುವ ಅವಕಾಶ ಸಿಗಲಿದೆ.

ಕೆಎಸ್‌ಸಿಎ ನಿರ್ಮಾಣ ಮಾಡಿರುವ  ಹುಬ್ಬಳ್ಳಿ ಮತ್ತು ಮೈಸೂರು ಕ್ರೀಡಾಂಗಣಗಳಲ್ಲಿ ಈಚೆಗೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಗಳು ನಡೆದಿದ್ದವು. ಇವುಗಳನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಎರಡು ವರ್ಷಗಳ ಹಿಂದೆ ಇಲ್ಲಿ ರಣಜಿ ಪಂದ್ಯ ನಡೆದಾಗಲೂ ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಈ ಬಾರಿ ಶಿವಮೊಗ್ಗದ ಹೊಸ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ಸಾಧ್ಯತೆಯಿದ್ದು ಅಪಾರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಲ್ಲಿ ಆಯೋಜಕರಿದ್ದಾರೆ.

ಆದರೆ ಎಲ್ಲ ರಾಜ್ಯಗಳಲ್ಲಿಯೂ ಸ್ಪರ್ಧಾತ್ಮಕ ಪಿಚ್‌ಗಳನ್ನು ಸಿದ್ಧಪಡಿಸಿ ಏಲ್ಲ ತಂಡಗಳಿಗೂ ಸಮಾನ ಅವಕಾಶ ನೀಡುವ ಸವಾಲು ಬಿಸಿಸಿಐ ಮುಂದೆ ಇದೆ.  2011ರ ಟೂರ್ನಿಯ ಸೆಮಿಫೈನಲ್ ಪಂದ್ಯದ ಕರಾಳ ಅಧ್ಯಾಯ ಮರುಕಳಿಸದಂತೆ ನಿಭಾಯಿಸುವ ಹೊಣೆ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಇದೆ. ಆ ವರ್ಷ  ವಡೋದರಲ್ಲಿ ನಡೆದಿದ್ದ ಪಂದ್ಯದಲ್ಲಿ ಪಿಚ್‌ ಅನ್ನು ಪೂರ್ಣವಾಗಿ ತವರಿನ ಬರೋಡ ತಂಡಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗಿತ್ತು . ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 107 ರನ್ ಮಾತ್ರ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಕಲೆ ಹಾಕಿದ್ದು 88 ರನ್! ಇದರಿಂದಾಗಿ ಐದು ದಿನಗಳ ಪಂದ್ಯ ಒಂದೂವರೆ ದಿನದಲ್ಲಿಯೇ ಮುಗಿದುಹೋಗಿತ್ತು.

ಹೊಸ ಕೋಚ್‌ ಮುಂದೆ ಸವಾಲು
ಅನುಭವಿ ಮತ್ತು ಯುವ ಆಟಗಾರರ ಹದವಾದ ಮಿಶ್ರಣದ ತಂಡವನ್ನು ಗೆಲುವಿನ ಹಾದಿಯಲ್ಲಿ ನಡೆಸುವ ಸವಾಲು ನೂತನ ಕೋಚ್ ಪಿ.ವಿ. ಶಶಿಕಾಂತ್ ಅವರ ಮುಂದಿದೆ.  ಕಳೆದ ಐದು ವರ್ಷಗಳವರೆಗೆ ಕರ್ನಾಟಕ ತಂಡಕ್ಕೆ ಮಾರ್ಗದರ್ಶನ ನೀಡಿದ್ದ ಜೆ. ಅರುಣಕುಮಾರ್ ಮತ್ತು ಮನ್ಸೂರ್ ಅಲಿ ಖಾನ್ ಅವರು ಈಚೆಗೆ ನಿರ್ಗಮಿಸಿದ್ದರು. ಜೂನಿಯರ್ ಆಟಗಾರರಿಗೆ ತರಬೇತಿ ನೀಡಿದ ಸುದೀರ್ಘ ಅನುಭವ ಇರುವ ಶಶಿಕಾಂತ್ ಅವರ ಮೇಲೆ ಅಪಾರ ನಿರೀಕ್ಷೆಗಳು ಇದೆ. ಅವರೊಂದಿಗೆ ಸಹಾಯಕ ಕೋಚ್ ಆಗಿ ಜಿ.ಕೆ. ಅನಿಲ್‌ಕುಮಾರ್ ಅವರು ಕಾರ್ಯನಿರ್ವಹಿಸಲಿದ್ದಾರೆ.

ಹಿಂದಿನ ಕಹಿನೆನಪುಗಳನ್ನು ಮರೆತು ಮತ್ತೆ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ರಾಜ್ಯ ತಂಡವು ಕಣಕ್ಕಿಳಿಯಲು ಸಿದ್ಧವಾಗಿದೆ.

*

.
ಬಿಸಿಸಿಐ ಉತ್ತಮ ನಿರ್ಧಾರ
ಬಿಸಿಸಿಐ ಉತ್ತಮ ನಿರ್ಧಾರ ಮಾಡಿದೆ. ನಮ್ಮ ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ಕೆ.ಎಲ್. ರಾಹುಲ್, ಕರುಣ್ ನಾಯರ್ ಅವರಂತಹ ಆಟಗಾರರು ಆಡಿದರೆ ಜನರು ಖುಷಿಪಡುತ್ತಾರೆ. ತಮ್ಮ ನೆಚ್ಚಿನ ಆಟಗಾರರನ್ನು ಪ್ರೋತ್ಸಾಹಿಸುತ್ತಾರೆ. ಸ್ಥಳೀಯ ಮಕ್ಕಳಿಗೂ ಪ್ರೇರಣೆ ಸಿಗುತ್ತದೆ. ಅಲ್ಲದೇ ತಂಡದ ಆಟಗಾರರ ಕುಟುಂಬದ ಸದಸ್ಯರು, ಮಿತ್ರರು ಬಂದು ಪಂದ್ಯ ನೋಡಲು ಅವಕಾಶ ಸಿಗುತ್ತದೆ. ನಮ್ಮ ಕ್ರೀಡಾಂಗಣದಲ್ಲಿ ಯಾವುದೋ ರಾಜ್ಯಗಳ ಎರಡು ತಂಡಗಳು ಬಂದು ಆಡಿದರೆ ಯಾರಿಗೆ ಆಸಕ್ತಿ ಇರುತ್ತದೆ?
ಬ್ರಿಜೇಶ್ ಪಟೇಲ್, ಹಿರಿಯ ಕ್ರಿಕೆಟಿಗ

*



ಸ್ಪರ್ಧಾತ್ಮಕತೆ ಹೆಚ್ಚಿದೆ
ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಉತ್ತಮವಾಗಿ ಆಡಲೇಬೇಕು. ಏಕೆಂದರೆ ಬಹಳಷ್ಟು ಸಂಖ್ಯೆಯಲ್ಲಿ ಆಟಗಾರರು ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯಗಳುಹೆಚ್ಚಿವೆ. ಅದರ ಲಾಭ ಪಡೆದು ಆಟಗಾರರು ರಾಜ್ಯ ತಂಡದ ಕದ ತಟ್ಟುತ್ತಿದ್ದಾರೆ. ಅದರಿಂದಾಗಿ ಅನುಭವಿ ಆಟಗಾರರು ಮೈಮರೆಯುವಂತಿಲ್ಲ. ಯುವ ಆಟಗಾರರಿಗೆ ಸರಿಸಮನಾಗಿ ಆಡಬೇಕು. ಒಟ್ಟಾರೆ ತಂಡದ ಗೆಲುವು ಇಲ್ಲಿ ಮುಖ್ಯ. ಮೂರು ಮಾದರಿಗಳಲ್ಲಿಯೂ ಆಡುವ ಕಲೆಯನ್ನು ಆಟಗಾರರು ಬೆಳೆಸಿಕೊಂಡಿದ್ದಾರೆ. ವರ್ಷವಿಡೀ ಅವರು ಅದಕ್ಕಾಗಿ ಶ್ರಮಿಸುವುದು ಅವಶ್ಯಕ. ಅದನ್ನೇ ವೃತ್ತಿಪರತೆ ಎನ್ನುವುದು. ಸ್ಪರ್ಧೆ ಹೆಚ್ಚಿದಷ್ಟು ಆಟಗಾರರೂ ಬೆಳೆಯುತ್ತಾರೆ, ಉತ್ತಮ ಫಲಿತಾಂಶವೂ ಲಭಿಸುತ್ತದೆ.
–ದೊಡ್ಡಗಣೇಶ್, ಕೆಎಸ್‌ಸಿಎ ಆಡಳಿತ ಸಮಿತಿ ಸದಸ್ಯ

*

ಜೂನಿಯರ್ ಆಟಗಾರರು ದೀರ್ಘ ಮಾದರಿ ಆಡಬೇಕು
ಕ್ರಿಕೆಟ್‌ನಲ್ಲಿ ಎಷ್ಟೇ ಬದ ಲಾವಣೆಗಳು ಆದರೂ ದೇಶಿ ಟೂರ್ನಿಗಳು ಇಂದಿಗೂ ಪ್ರಸ್ತುತ. ದೇಶಿ ಟೂರ್ನಿಗಳಲ್ಲಿ ಇರುವುದೇ ನೈಜ ಕ್ರಿಕೆಟ್‌. ಟ್ವೆಂಟಿ–20 ಕ್ರಿಕೆಟ್‌ ಮನರಂಜನೆ ನೀಡುತ್ತದಷ್ಟೆ. ಆದ್ದರಿಂದ ಆಟಗಾರರು ಬೆಳೆಯಬೇಕಾದರೆ ದೀರ್ಘ ಮಾದರಿಯಲ್ಲಿ ಹೆಚ್ಚು ಆಡಬೇಕು. ಇಲ್ಲದಿದ್ದರೆ ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್ ಅವರಂತಹ ಆಟಗಾರರು ಮುಂದಿನ ದಿನಗಳಲ್ಲಿ ಇರುವುದಿಲ್ಲ. ಹೀಗಾಗಿ 19ವರ್ಷ, 17 ವರ್ಷದೊಳಗಿನ ವಯೋಮಿತಿಯಲ್ಲಿ ಆಡುವ ಆಟಗಾರರಿಗೆ 2, 3 ಅಥವಾ 4 ದಿನಗಳ ಪಂದ್ಯಗಳಲ್ಲಿಯೇ ಆಡಿಸಬೇಕು. ಟ್ವೆಂಟಿ–20 ಮಾದರಿಯಿಂದ ದೂರ ಇಡಬೇಕು. ಈಗಿನ ತಂಡದಲ್ಲಿ ಪ್ರತಿಭಾವಂತ ಮತ್ತು ಅನುಭವಿ ಆಟಗಾರರು ಇದ್ದಾರೆ. ಆದ್ದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
–ಡೇವಿಡ್ ಜಾನ್ಸನ್,
ಹಿರಿಯ ಕ್ರಿಕೆಟ್‌ ಆಟಗಾರ

*
ಹೊಸ ಸವಾಲು ನಿಭಾಯಿಸುವ ವಿಶ್ವಾಸ
ಕೋಚ್ ಆಗಿ ನೇಮಕವಾದ ನಂತರ ಮೊದಲ ರಣಜಿ ಟೂರ್ನಿ ಇದು. ಲಭಿಸಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಇದೆ. ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರು ಇದ್ದಾರೆ. ಇದು ಉತ್ತಮ ಲಕ್ಷಣ. ಆಟಗಾರರಲ್ಲಿ ಆರೋಗ್ಯಕರ ಪೈಪೋಟಿ ಇದೆ. ಕೆಪಿಎಲ್‌ಗಿಂತ ಮುನ್ನ ಎರಡು ವಾರ ಮತ್ತು ಟೂರ್ನಿಯ ನಂತರ ತಂಡದ ಆಟಗಾರರು ಅಭ್ಯಾಸ ಮಾಡಿದ್ದಾರೆ. ಕೆ.ಎಲ್. ರಾಹುಲ್, ಮನೀಷ್ ಪಾಂಡೆ ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಮುಂದಿನ ಕೆಲವು ರಣಜಿ ಪಂದ್ಯಗಳಿಗೆ ಅವರು ಮರಳುವುದು ಖಚಿತವಿಲ್ಲ. ಆದ್ದರಿಂದ ಅವರ ಸ್ಥಾನದಲ್ಲಿ ಆಡಬಲ್ಲ ಸಮರ್ಥ ಯುವ ಆಟಗಾರರನ್ನು ಸಿದ್ಧಗೊಳಿಸಲಾಗುತ್ತಿದೆ.
–ಪಿ.ವಿ. ಶಶಿಕಾಂತ್, ಕರ್ನಾಟಕ ತಂಡದ ಕೋಚ್

*


*


*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT