ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆಯಿಂದ ಮಾರಾಟದವರೆಗೆ ರೈತರದೇ ಪಾರುಪತ್ಯ!

ಸಿರಿಗ್ರಾಮಗಳಲ್ಲಿ ತೆನೆದೂಗುವ ಧಾನ್ಯ
Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಿರಿಧಾನ್ಯ ಬೆಳೆಯಿರಿ’ ಎಂದು ಕೃಷಿ ಸಚಿವರಾದಿಯಾಗಿ ವಿಜ್ಞಾನಿಗಳು, ಸಂಶೋಧಕರು ರೈತರಿಗೆ ರಂಗುರಂಗಿನ ವೇದಿಕೆಯಲ್ಲಿ ಕರೆ ನೀಡುತ್ತಿದ್ದ ‘ಧಾರವಾಡ ಕೃಷಿ ಮೇಳ’ಕ್ಕೆ ಬರೀ ನಲವತ್ತು ಕಿಲೋ ಮೀಟರ್ ದೂರದ ಹಳ್ಳಿಗಳಲ್ಲಿ ಕೊರಲೆ ಕಟಾವು ನಡೆಯುತ್ತಿತ್ತು. ಕೊರಲೆಯ ಒಂದು ಬೀಜದಿಂದ ಮೊಳಕೆಯೊಡೆದ ಪೈರು ತೆನೆಗಳನ್ನು ಹೊತ್ತು ತೂಗಾಡುತ್ತಿತ್ತು. ಹನುಮನಹಳ್ಳಿಯ ಯಲ್ಲಪ್ಪ ರಾಮಜಿ ಎಣಿಸಿ ನೋಡಿದರು- ಒಂದು, ಎರಡು... ... ನೂರು... ನೂರೈವತ್ತು... ಇನ್ನೂರು... ಅಬ್ಬಾ! ಒಟ್ಟು ನೂರಾ ಎಂಬತ್ತೈದು ತೆನೆಗಳು!!

ಇತ್ತ ಮತ್ತಿಘಟ್ಟಿಯ ಬಸನಗೌಡ ಪಾಟೀಲ ಹೊಲದಲ್ಲಿ ಬೆಳೆದ ಕೆಂಪು ನವಣೆಯನ್ನು ನೋಡುವುದೇ ಹಬ್ಬ! ಒಳ ಹೊಕ್ಕರೆ ಕಾಣದಷ್ಟು ಎತ್ತರದ ಪೈರು. ಸುತ್ತಲಿನ ಹೊಲಗಳ ರೈತರ ಕುತೂಹಲದ ಕೇಂದ್ರ ಬಿಂದುವಾಗಿರುವ ಇವರ ನವಣೆ ಬೆಳೆ, ಅಡಿಯುದ್ದದ ತೆನೆಗಳನ್ನೂ ಹೊತ್ತು ನಿಂತಿದೆ. ಗಂಗಾಧರ ಅಳಗವಾಡಿ ಅವರ ಹೊಲದಲ್ಲಿ ಬೆಳೆದಿರುವ ಊದಲು ಆ ರಸ್ತೆಯಲ್ಲಿ ಸಾಗುವವರನ್ನು ತಡೆದು ನಿಲ್ಲುವಂತೆ ಮಾಡುತ್ತಿದೆ. ಇನ್ನು ಬಸವರಾಜ ಹೊಲದ ಸಾಮೆಯು ತೆನೆಗಳ ಭಾರದಿಂದ ನೆಲಕ್ಕೊರಗಿದೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ನಾಲ್ಕೈದು ಹಳ್ಳಿಗಳಲ್ಲಿ ಈಗ ಅರಳಿರುವ ಸಿರಿಧಾನ್ಯದ ಲೋಕ ಬಲು ವಿಶಿಷ್ಟ. ತೃಣಧಾನ್ಯಗಳೆಂದು ಮೂದಲಿಕೆಗೆ ಒಳಗಾಗಿದ್ದ ಧಾನ್ಯಗಳೆಲ್ಲ ಈಗ ತಮ್ಮ ಅಸ್ತಿತ್ವವನ್ನು ಸಾರುವಂತೆ ತೋರುತ್ತಿದೆ. ಹವಾಮಾನ ಬದಲಾವಣೆ ಬಿಕ್ಕಟ್ಟಿಗೆ ಉತ್ತರವೆಂದು ಸಾಬೀತಾಗಿರುವ ಸಿರಿಧಾನ್ಯ ಕೃಷಿಯತ್ತ ರೈತರನ್ನು ಪ್ರೇರೇಪಿಸುವ ಯತ್ನಗಳು ನಡೆಯುತ್ತಿವೆ. ಅದರ ಯಶಸ್ವಿ ಪ್ರಯೋಗ ನೋಡಬೇಕೆಂದರೆ ಇಲ್ಲಿಗೆ ಬರಬೇಕು. ನೂರಾರು ಎಕರೆ ವ್ಯಾಪ್ತಿಯಲ್ಲಿ ಬೆಳೆದಿರುವ ಸಿರಿಧಾನ್ಯಗಳು, ಬರ ಸಮನ್ವಯತೆಯ ಪಾಠ ಕಲಿಸುವಂತಿವೆ. ಒಂಬತ್ತು ಬಗೆಯ ಸಿರಿಧಾನ್ಯಗಳು ಒಂದೇ ಸುತ್ತಳತೆಯಲ್ಲಿ ಬೆಳೆದಿರುವುದು ಗೌಣವೇನಲ್ಲ; ಇಷ್ಟೊಂದು ವೈವಿಧ್ಯಮಯ ಸಿರಿಧಾನ್ಯಗಳು ಒಂದೇ ಕಡೆ ರಾಜ್ಯದ ಬೇರೆಲ್ಲೂ ಕಾಣಸಿಗಲಿಕ್ಕಿಲ್ಲ.

ಬದಲಾವಣೆ ತಂದ ಬರಗು: ಹನುಮನಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಕೃಷಿ ಇಲಾಖೆಯ ‘ಸಾವಯವ ಭಾಗ್ಯ’ ಯೋಜನೆಯನ್ನು ಜಾರಿಗೊಳಿಸುವ ಹೊಣೆಯನ್ನು ಸಹಜ ಸಮೃದ್ಧ ಬಳಗವು ವಹಿಸಿಕೊಂಡಿತ್ತು. ಇಲ್ಲಿನ ನೂರು ಹೆಕ್ಟೇರ್ ಪ್ರದೇಶವನ್ನು ಸಾವಯವಕ್ಕೆ ಪರಿವರ್ತಿಸುವ ಜವಾಬ್ದಾರಿ ಬಳಗದ ಮೇಲಿತ್ತು. ಬರೀ ಸಾವಯವ ಒಂದೇ ಅಲ್ಲ; ದೇಸಿ ತಳಿಯತ್ತ ಪ್ರೇರೇಪಿಸುವುದೂ ಬಳಗದ ಆಶಯವಾಗಿತ್ತು. ಇದಕ್ಕೆ ಪೂರಕವಾಗಿ 79 ರೈತರನ್ನು ಒಳಗೊಂಡ ‘ಸಂಜೀವಿನಿ ಸಾವಯವ ಕೃಷಿಕರ ಬಳಗ’ ಸ್ಥಾಪನೆಯಾಯಿತು.

ಸಾಮೆ, ನವಣೆ ಹಾಗೂ ಜೋಳ ಬಿಟ್ಟರೆ ಬೇರೆ ಕಿರುಧಾನ್ಯದ ಪರಿಚಯ ಇಲ್ಲಿನ ರೈತರಿಗೆ ಇರಲಿಲ್ಲ. ಸಾವಯವ ವಿಧಾನದ ಜತೆಗೆ ದೇಸಿ ತಳಿ ಜನಪ್ರಿಯಗೊಳಿಸಲು ಎರಡು ವರ್ಷಗಳ ಹಿಂದೆ ಮೊದಲು ಬರಗು ಸಿರಿಧಾನ್ಯವನ್ನು ಈ ಪ್ರದೇಶಕ್ಕೆ ಪರಿಚಯಿಸಲಾಯಿತು. ‘ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ವಿಳಂಬವಾದರೂ ಅದು ಬೆಳೆದಿದ್ದು ನೋಡಿ ನಮಗೆ ಧೈರ್ಯ ಬಂತು. ಎರಡನೇ ವರ್ಷ ಹೆಚ್ಚು ಪ್ರದೇಶದಲ್ಲಿ ಬೆಳೆದೆ’ ಎಂದು ನೆನಪಿಸಿಕೊಳ್ಳುವ ಯುವ ರೈತ ಈಶ್ವರಗೌಡ ಪಾಟೀಲ, ನೂರಾರು ಆಸಕ್ತ ಕೃಷಿಕರಿಗೆ ಬಿತ್ತನೆ ಬೀಜ ಒದಗಿಸಿ ಅದು ರಾಜ್ಯದಾದ್ಯಂತ ವ್ಯಾಪಿಸಲು ಕಾರಣರಾದರು. ಇದರ ಜತೆಗೆ ವೈವಿಧ್ಯ ತಾಕುಗಳಲ್ಲಿ ಹತ್ತಾರು ದೇಸಿ ತಳಿಯ ಊದಲು, ಕೊರಲೆ, ನವಣೆ, ರಾಗಿ ಬೆಳೆದು ನಿಂತವು. ಕಡಿಮೆ ಮಳೆಯಲ್ಲೂ ಸಿರಿಧಾನ್ಯಗಳು ಕೈಕೊಡದೇ ಇದ್ದುದು ರೈತರ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿತು.

ಈ ವರ್ಷ ಮುಂಗಾರು ಹಂಗಾಮು ಶುರುವಾಗುತ್ತಲೇ, ಸಂಜೀವಿನಿ ಬಳಗವನ್ನು ಸುತ್ತಲಿನ ಹಳ್ಳಿಗಳ ರೈತರು ಸಂಪರ್ಕಿಸಲು ಶುರು ಮಾಡಿದರು. ಮಳೆಯ ವ್ಯತ್ಯಾಸದಲ್ಲೂ ಸಿರಿಧಾನ್ಯ ಬೆಳೆದಿದ್ದನ್ನು ಕಂಡಿದ್ದ ಹನುಮನಹಳ್ಳಿ, ಮತ್ತಿಘಟ್ಟ, ರಾಮಾಪುರ, ಬೆಳ್ಳಿಗಟ್ಟಿ, ಕುಂಕೂರ ಇತರ ಗ್ರಾಮಗಳ ರೈತರು ಬಳಗದ ‘ಬೀಜ ಬ್ಯಾಂಕ್’ಗೆ ಭೇಟಿ ನೀಡಿ, ಅಗತ್ಯ ಪ್ರಮಾಣದ ಬಿತ್ತನೆ ಬೀಜ ಒಯ್ದು ಬಿತ್ತಿದರು. ಅಂದಹಾಗೆ, ಈ ‘ಸಮುದಾಯ ಬೀಜ ಬ್ಯಾಂಕ್’ ಕಾರ್ಯವೈಖರಿ ಒಂದಷ್ಟು ವಿಭಿನ್ನ.

‘ಮಾರುಕಟ್ಟೆಯಲ್ಲಿ ಬಿತ್ತನೆ ಬೀಜಗಳು ಮಾರಾಟಕ್ಕೆ ಲಭ್ಯ. ಆದರೆ ನಾವು ರೈತರಿಗೆ ಬೀಜಗಳನ್ನು ಕೊಟ್ಟಾಗ, ಅವರು ಹಣ ಕೊಡಬೇಕಿಲ್ಲ; ಬದಲಾಗಿ ಬೆಳೆ ಕಟಾವಾದ ನಂತರ ಎರಡು ಪಟ್ಟು ಶುದ್ಧ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಾಪಸು ಕೊಡಬೇಕು. ಅದಕ್ಕೆ ಸಂಬಂಧಿಸಿದ ಒಪ್ಪಂದವನ್ನೂ ಮಾಡಿಕೊಂಡಿರುತ್ತೇವೆ’ ಎನ್ನುತ್ತಾರೆ ಬ್ಯಾಂಕ್‌ನ ಸಂಯೋಜಕ ಫಕೀರೇಶ್ ಬಿ. ಕಾಗಿನೆಲೆ. ಹೀಗೆ ಈವರೆಗೆ ನೂರೈವತ್ತಕ್ಕೂ ಹೆಚ್ಚು ರೈತರು ಬ್ಯಾಂಕ್ ಮೂಲಕ ಬಿತ್ತನೆ ಬೀಜ ಪಡೆದಿದ್ದಾರಂತೆ.

ಕೈಕೊಡದ ಧಾನ್ಯಗಳು: ಬರೀ ಬಿ.ಟಿ. ಹತ್ತಿ, ಸೋಯಾಬೀನ್, ಮೆಕ್ಕೆಜೋಳ ಬೆಳೆದು ಕೈಸುಟ್ಟುಕೊಳ್ಳುತ್ತಿದ್ದ ರೈತರ ಮೊಗದಲ್ಲಿ ಈ ಸಲ ನೆಮ್ಮದಿಯ ಮುಗುಳುನಗೆ ಕಾಣಿಸುತ್ತಿದೆ. ಮೂರು ವರ್ಷಗಳಿಂದ ಶೇಂಗಾ ಬಿತ್ತನೆ ಮಾಡಿ, ಕನಿಷ್ಠ ವ್ಯವಸಾಯದ ಖರ್ಚು ಕೂಡ ಗಿಟ್ಟದಂತೆ ನಷ್ಟ ಅನುಭವಿಸುತ್ತಿದ್ದ ಗಂಗಾಧರ ಅಳಗವಾಡಿ ಹೇಳುತ್ತಾರೆ: ‘ಮೊದಲ ಬಾರಿಗೆ ನಾನು ಊದಲು ಬೆಳೆದಿದ್ದೇನೆ. ಇದರ ಬಗ್ಗೆ ಕೇಳಿದ್ದೆ, ಹೊರತು ಕೃಷಿ ವಿಧಾನ ಗೊತ್ತಿರಲಿಲ್ಲ. ಯಾವುದೋ ಭರವಸೆ ಮೇರೆಗೆ ಊದಲು ಹಾಗೂ ಸಾಮೆಯನ್ನು ತಲಾ ಒಂದು ಎಕರೆಯಲ್ಲಿ ಬಿತ್ತಿದೆ. ಸುತ್ತಲಿನ ಹೊಲಗಳಲ್ಲಿ ವಾಣಿಜ್ಯ ಬೆಳೆಗಳು ಮಳೆಕೊರತೆಯಿಂದ ಕೈಕೊಟ್ಟರೆ ಈ ಎರಡು ಸಿರಿಧಾನ್ಯಗಳು ಮಾತ್ರ ಕೈಬಿಡಲಿಲ್ಲ.’

ಚೆನ್ನೈನಲ್ಲಿ ಜುಲೈ ತಿಂಗಳಲ್ಲಿ ನಡೆದಿದ್ದ ರಾಷ್ಟ್ರೀಯ ಬೀಜ ವೈವಿಧ್ಯ ಮೇಳದಿಂದ ತಂದಿದ್ದ ಆರು ತಳಿಯ ಸಾಮೆಯನ್ನು ಯಲ್ಲಪ್ಪ ರಾಮಜಿ ಬೆಳೆದಿದ್ದಾರೆ. ಅದರ ಜತೆಗೆ ಕೊರಲು, ಹಾಲುನವಣೆ ಕೂಡ ಇದೆ. ಬಿತ್ತಿದ ಬಳಿಕ ಹಲವು ದಿನಗಳ ಕಾಲ ಮಳೆ ಬರಲೇ ಇಲ್ಲ. ಇನ್ನೇನು ಎಲ್ಲ ಕೈಕೊಟ್ಟಿತು ಎಂದು ನಿರಾಶೆ ಮೂಡಿದ ಸಂದರ್ಭದಲ್ಲಿ ಮಳೆ ಬಂತು. ಅದಾದ ಬಳಿಕ ನಾಲ್ಕೈದು ಸಲ ಮಳೆ ಸುರಿಯಿತು. ‘ಹತ್ತಿ, ಶೇಂಗಾ, ಮೆಕ್ಕೆಜೋಳಕ್ಕೆ ಇಷ್ಟು ಮಳೆ ಸಾಕಾಗುವುದೇ ಇಲ್ಲ. ಆದರೆ ಸಾಮೆ ಹಾಗೂ ಕೊರಲೆ ನೋಡಿದರೆ ದಂಗು ಬಡಿಸುವಂಥ ಬೆಳವಣಿಗೆ’ ಎಂದು ಉದ್ಗರಿಸುತ್ತಾರೆ ರಾಮಜಿ. ಐದಾರು ಅಡಿ ಎತ್ತರ ಬೆಳೆಯುವ ಕೆಂಪು ನವಣೆ ತಳಿಯು ಒಳ್ಳೆಯ ಪ್ರಮಾಣದ ಮೇವು ಒದಗಿಸುತ್ತದೆ. ತಮ್ಮ ಹೊಲದಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿರುವ ಕೆಂಪು ನವಣೆಯನ್ನು ನೋಡುತ್ತ ಬಸನಗೌಡ ಹೇಳುತ್ತಾರೆ: ‘ರಾಸಾಯನಿಕ ಹಾಕಿಲ್ಲ; ಕೀಟನಾಶಕ ಬಳಸಿಲ್ಲ. ಆದರೂ ನೋಡಿ ಹೇಗೆ ನನಗಿಂತ ಎತ್ತರ ಬೆಳೆದುನಿಂತಿದೆ!’

‘ಇಡೀ ಕರ್ನಾಟಕ ಈ ವರ್ಷ ಬರಗಾಲಕ್ಕೆ ನಲುಗಿದೆ. ಉತ್ತರ ಕರ್ನಾಟಕದಲ್ಲಿ ಮುಂಗಾರು ಬಹುತೇಕ ಕೈಕೊಟ್ಟಿದೆ. ರೈತರು ಹಿಂಗಾರುಮಳೆಯನ್ನು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಆದರೆ ಹನುಮನಹಳ್ಳಿ ರೈತರಿಗೆ ಮುಂಗಾರಿನ ತುಂತುರು ಮಳೆಯಲ್ಲಿ ಬಂಪರ್ ಲಾಟರಿ ಗಿಟ್ಟಿಸಿದ ಅವಕಾಶ. ಹಲವಾರು ರೈತರು ಸಿರಿಧಾನ್ಯ ಕೃಷಿ ಅಪ್ಪಿಕೊಂಡು, ಬರ ಎದುರಿಸುವ ಸುಸ್ಥಿರ ಮಾದರಿಯೊಂದನ್ನು ಕಟ್ಟಿದ ಹೆಮ್ಮೆ ನಮ್ಮದು’ ಎಂದು ‘ಸಹಜ ಸಮೃದ್ಧ’ ಬಳಗದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಸಂತಸದಿಂದ ಹೇಳುತ್ತಾರೆ.

ಮಾರುಕಟ್ಟೆ-ಸಂಸ್ಕರಣೆ ಸವಾಲು: ಬೆಳೆಗೆ ಮಾರುಕಟ್ಟೆ ಕಂಡು ಕೊಳ್ಳುವುದೇ ಒಂದು ಸವಾಲು. ಇದನ್ನು ಗಮನಿಸಿದ ‘ಸಹಜ ಸಮೃದ್ಧ’, ರೈತರೇ ಇರುವ ‘ಸಂಜೀವಿನಿ ಸಾವಯವ ಕೃಷಿಕರ ಬಳಗ’ವನ್ನು ಸ್ಥಾಪಿಸಿ, ಅದರ ಮೂಲಕ ವಹಿವಾಟು ನಡೆಯುವಂತೆ ಮಾಡಿದೆ. ಈ ಗುಂಪು ಸಿರಿಧಾನ್ಯ ಮೇಳಗಳಲ್ಲಿ ಪಾಲ್ಗೊಳ್ಳುತ್ತದೆ. ಕಳೆದ ವರ್ಷದಿಂದ ಸಿರಿಧಾನ್ಯ ಖರೀದಿಸಿ, ಸಂಸ್ಕರಿಸಿ ಮಾರುಕಟ್ಟೆಗೆ ರವಾನಿಸುತ್ತಿರುವ ಆಂಧ್ರದ ಯುವ ಉದ್ಯಮಿ ದಿನೇಶ್ ಕದಿರಿ, ‘ಇಲ್ಲಿನ ಧಾನ್ಯಗಳ ಗುಣಮಟ್ಟ ತಮಿಳುನಾಡು ಅಥವಾ ಆಂಧ್ರಕ್ಕಿಂತ ಚೆನ್ನಾಗಿದೆ. ಇದನ್ನೇ ಹೆಚ್ಚು ಖರೀದಿಸಿ, ರೈತ ಗುಂಪನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ. ಹನುಮನಹಳ್ಳಿಗೆ ಸಮೀಪದ ತಿಮ್ಮಾಪುರದಲ್ಲಿರುವ ಹಿಟ್ಟಿನ ಗಿರಣಿ ಮಾಲೀಕ ಮಂಜುನಾಥ್ ಕೂಡ ಸಿರಿಧಾನ್ಯಗಳ ಸಂಸ್ಕರಣೆಗೆ ಯಂತ್ರವನ್ನು ಒಗ್ಗಿಸಿಕೊಂಡು ಏನೇನೋ ತಂತ್ರೋಪಾಯ ಮಾಡುತ್ತ ರೈತರಿಗೆ ನೆರವಾಗುತ್ತಿದ್ದಾರೆ.

ಇದೆಲ್ಲದರ ಪರಿಣಾಮವಾಗಿ ಕಳೆದ ವರ್ಷ 50 ಟನ್ ಸಿರಿಧಾನ್ಯ ಇಲ್ಲಿಂದ ರವಾನೆಯಾಗಿವೆ. ಈ ಸಲವಂತೂ ಇದರ ಪ್ರಮಾಣ ಇನ್ನೂರು ಟನ್ ದಾಟುವ ನಿರೀಕ್ಷೆ ಇದೆ. ಒಂದೇ ಕಡೆಗೆ ಎಲ್ಲ ಬಗೆಯ ಸಿರಿಧಾನ್ಯಗಳನ್ನು ನೋಡುವ ಅವಕಾಶ ಅಪರೂಪ. ಅಂಥ ನೋಟವನ್ನು ಹನುಮನಹಳ್ಳಿ ಹಾಗೂ ಇತರ ಗ್ರಾಮಗಳು ಕೊಡುತ್ತಿವೆ. ಪ್ರಸ್ತುತ ಊದಲು, ಕೊರಲೆ, ಸಾಮೆ, ನವಣೆ, ಜೋಳ, ರಾಗಿ, ಸಜ್ಜೆ ಹೊಲಗಳಲ್ಲಿವೆ. ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಹಾರಕ ಹಾಗೂ ಬರಗು ‘ಬೀಜ ಬ್ಯಾಂಕ್’ನಲ್ಲಿ ಇವೆ.

ಕಚಡಾ ತಿನಿಸುಗಳಿಂದಾಗಿ (ಜಂಕ್ ಫುಡ್) ಕಾಯಿಲೆಗಳ ಗೂಡಾದ ದೇಹಕ್ಕೆ ಸಿರಿಧಾನ್ಯಗಳ ಸೇವನೆಯೇ ಚಿಕಿತ್ಸೆ ಎಂಬುದು ಜನರಿಗೆ ನಿಧಾನವಾಗಿ ಅರಿವಿಗೆ ಬರುತ್ತಿದೆ. ಇದುವೇ ಸಿರಿಧಾನ್ಯಗಳ ಬೆಲೆ ನಾಲ್ಕೈದು ಪಟ್ಟು ಏರಿಕೆಯಾಗಲು ಕಾರಣವಾಗಿದೆ. ಹಾಗೆಂದು ರೈತರಿಗೆ ಹೆಚ್ಚು ಲಾಭವೇನೂ ಸಿಗುತ್ತಿಲ್ಲ. ಮಧ್ಯವರ್ತಿಗಳೇ ಎಲ್ಲವನ್ನೂ ನುಂಗುವ ಪರಿಪಾಠ ಇದೆ. ಅದೆಲ್ಲ ಒಂದೆಡೆ ಇಟ್ಟು, ಹೊಸ ಸಾಧ್ಯತೆಯತ್ತ ನೋಡಲು ಅವಕಾಶ ಇಲ್ಲಿದೆ.

ಈ ವರ್ಷ ನಾಲ್ಕೈದು ಹಳ್ಳಿಗಳ ಸುಮಾರು ಮುನ್ನೂರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿರುವ ತರಹೇವಾರಿ ಸಿರಿಧಾನ್ಯಗಳು ಮುಂದಿನ ದಿನಗಳಲ್ಲಿ ಕೃಷಿಕರಿಗೆ ಹೊಸಬೆಳಕು ತೋರುತ್ತಿವೆ. ಕೃಷಿ ಬಿಕ್ಕಟ್ಟು ಹೆಚ್ಚುತ್ತಿರುವ ಈಗಿನ ದಿನಗಳಲ್ಲಿ ಹನುಮನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನಡೆದ ಪ್ರಯೋಗ ಸುಸ್ಥಿರ ಹಳ್ಳಿ ಕಟ್ಟಲು ಉತ್ತಮ ಮಾದರಿಯಂತೂ ಹೌದು. ಇದನ್ನು ಗಮನಿಸಿಯಾದರೂ, ‘ಸಿರಿಧಾನ್ಯ ಬೆಳೆಯಿರಿ’ ಎಂಬ ಕ್ಲೀಷೆಯ ಉಪದೇಶ ಕೊಡುವುದನ್ನು ಬಿಟ್ಟು, ಕೃಷಿ ಅಧಿಕಾರಿಗಳು- ವಿಜ್ಞಾನಿಗಳು ಈ ಹಳ್ಳಿಗಳಿಗೆ ಭೇಟಿ ನೀಡಬೇಕು. ರೈತರ ಜತೆ ಚರ್ಚಿಸಿದಾಗ ಮಾತ್ರ ಅವರಿಗೆ ಸಿರಿಧಾನ್ಯ ಕೃಷಿಯ ಹಲವು ಆಯಾಮಗಳು ಅರ್ಥವಾದಾವು. 

ನಾಗಮ್ಮ ಚಡಪಡಿಕೆ
ಸೋಯಾಬೀನ್ ಮತ್ತು ಮೆಕ್ಕೆಜೋಳ ಬೆಳೆಯುತ್ತಿದ್ದ ನಾಗಮ್ಮ ವಿ. ಗವ್ವಣ್ಣವರ್ ಅವರದು ಹನುಮನಹಳ್ಳಿ ಗ್ರಾಮದ ಎದುರಿನ ಹೊಲ. ಯಾವುದಕ್ಕೂ ಇರಲಿ ಎಂದು ಕಾಲು ಎಕರೆ ನವಣೆ ಬಿತ್ತನೆ ಮಾಡಿದರು. ‘ಇದು ಹೀಂಗ ಬೆಳೀತದ ಅಂತ ಗೊತ್ತಿದ್ರ ಎಲ್ಲ ಕಡೀಗೂ ಇದನ್ನ ಬಿತ್ನಿ ಬಿಡ್ತಿದ್ದೆ’ ಎಂದು ಅವರು ಈಗ ಚಡಪಡಿಸುತ್ತಿದ್ದಾರೆ!

ರಾಮಾಪುರದ ಬಸವಣ್ಣೆಪ್ಪ ಬೆನಕಣ್ಣವರ್ ಮೂರು ಎಕರೆಯಲ್ಲಿ ಸಾಮೆ, ಕೊರಲೆ ಹಾಗೂ ಊದಲು ಬೆಳೆದಿದ್ದು, ಮಳೆಯಾಶ್ರಿತ ಜಮೀನಿಗೆ ಸಿರಿಧಾನ್ಯಗಳೇ ವರದಾನ ಎಂಬ ಮಾತನ್ನು ಒಪ್ಪುತ್ತಾರೆ. ಬೆಂಡಿಗೇರಿಯ ವಿರೂಪಾಕ್ಷಗೌಡ ಪಾಟೀಲ, ತೀರ್ಥ ಗ್ರಾಮದ ಶಿವಪ್ಪ ಮುಂದಿನಮನಿ ಹಾಗೂ ಬೆಳ್ಳಿಗಟ್ಟಿಯ ಪರಶುರಾಮ ವಡ್ಡರ್ ಕೂಡ ಸಿರಿಧಾನ್ಯದ ಸವಿಯನ್ನು ಉಂಡವರೇ ಆಗಿದ್ದಾರೆ.

ಪ್ರಯೋಗಗಳ ತಾಣ: ಬರೀ ಬೆಳೆಗೆ ಸೀಮಿತವಾಗದ ಈ ಹಳ್ಳಿಗಳ ರೈತರು, ವಿಶಿಷ್ಟ ಪ್ರಯೋಗಗಳ ಮೂಲಕವೂ ಕ್ರಿಯಾಶೀಲರಾಗಿದ್ದಾರೆ. ತೊಗರಿಯಲ್ಲಿ ಗುಳಿ ಪದ್ಧತಿಯನ್ನು ಈಶ್ವರಗೌಡ ಅಳವಡಿಸಿ ಕಳೆದ ವರ್ಷ ಯಶಸ್ಸು ಕಂಡಿದ್ದರು. ಎರಡು ಸಸಿಗಳ ಮಧ್ಯೆ ಅಂತರ ಬಿಟ್ಟು, ಕುಡಿ ಚಿವುಟುವ ಮೂಲಕ ಅಧಿಕ ಇಳುವರಿ ಪಡೆಯುವುದು ಈ ವಿಧಾನದಲ್ಲಿದೆ. ಈ ಸಲ ಅದನ್ನು ಇನ್ನಷ್ಟು ರೈತರು ಅನುಸರಿಸುತ್ತಿದ್ದಾರೆ. ಅದೇ ರೀತಿ ಗುಳಿ ರಾಗಿ ಪದ್ಧತಿಯನ್ನು ಅನೇಕ ರೈತರು ಅಳವಡಿಸಿಕೊಂಡಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ದೇಸಿ ಹತ್ತಿ, ಹಿಂಗಾರು ಜೋಳ ಹಾಗೂ ಹಾರಕ- ಬರಗು ಬೆಳೆಯಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT