ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯದ ಬಳ್ಳಿ ಒಣಗದಿರಲಿ

ಸಂಗತ
Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕರಾವಳಿ ಕರ್ನಾಟಕದ ಕೋಮುವಾದದ ಸ್ವರೂಪವನ್ನು ಕುರಿತ ಲೇಖನ (ಕರಾವಳಿ ಕರ್ನಾಟಕವೆಂಬ ಭಾವಿಸಿದ ಜನಪದ; ಪ್ರ.ವಾ., ಸೆ. 27) ರೂಪಕವಾಗಿಯೂ, ವಾಸ್ತವವಾಗಿಯೂ ಹೆಚ್ಚು ಸಂಕೀರ್ಣತೆಯಿಂದ ಕೂಡಿದೆ. ತನ್ನಲ್ಲಿನ ಶಬ್ದಕ್ಕೂ, ಅರ್ಥಕ್ಕೂ ಸಂಪೂರ್ಣ ತಾಳೆಯಾಗದೆ ಚೈತನ್ಯಶೂನ್ಯತೆಯಿಂದ ಬಳಲಿರುವ ಲೇಖನ ಇದು.

ವಾಸ್ತವ ಸಂಗತಿಯೆಂದರೆ, ನಾವೀಗ ಕಳೆದುಹೋದ ಚರಿತ್ರೆಯ ಪುಟಗಳಿಂದ ಏನನ್ನು ನೆನಪಿಸಿಕೊಳ್ಳಬೇಕೋ ಅದನ್ನು ನೆನಪಿಸಿಕೊಳ್ಳುತ್ತಿಲ್ಲ! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದಾರವಾದಿ ಮಾನವತಾವಾದವನ್ನು ಬೋಧಿಸಿದ ನಾರಾಯಣ ಗುರು, ಎಪ್ಪತ್ತು -ಎಂಬತ್ತರ ದಶಕದಲ್ಲಿ ನಡೆದ ಕಾರ್ಮಿಕ ಹೋರಾಟಗಳು, ದೇವರಾಜ ಅರಸು ಅವರ ಭೂ ಸುಧಾರಣಾ ಚಳವಳಿ, ದಲಿತ ಹೋರಾಟಗಳು, ಕಡಿಮೆ ಪ್ರಮಾಣದಲ್ಲಿದ್ದರೂ ಪರಿಣಾಮಕಾರಿಯಾಗಿದ್ದ ರಂಗಚಳವಳಿ, ಕ್ರೈಸ್ತ ಮಿಷನರಿಗಳು ಮತ್ತು ಮುಸ್ಲಿಂ ಸಮುದಾಯವು ಕರಾವಳಿ ಸಮಾಜಕ್ಕೆ ನೀಡಿದ ಮೇರು ಕೊಡುಗೆಗಳು, ವೈದಿಕೇತರ ಧಾರ್ಮಿಕ ಪಂಥಗಳು, ಸಮುದಾಯಗಳನ್ನು ಒಗ್ಗೂಡಿಸುವ ಆಶಯಗಳಿರುವ ಜನಪದರ ವಿವಿಧ ಆಚರಣೆಗಳು... ಅಲ್ಲಿ ಸಮಭಾವದ ಸಾಧ್ಯತೆಯ ರಾಜಕೀಯ ತತ್ವಕ್ಕೆ ನೀಡಿದ ಕೊಡುಗೆ ಎನ್ನುವುದನ್ನು ಚರಿತ್ರೆ ಹೇಳುತ್ತದೆ.

ಆದರೆ ಈ ಎಲ್ಲವೂ ಹೊಸ ಕಾಲದಲ್ಲಿ ನೇಪಥ್ಯಕ್ಕೆ ಸರಿದಿರುವುದರಿಂದ ಕೋಮುವಾದಿಗಳು ಮತ್ತು ಮೂಲಭೂತವಾದಿಗಳು ಆ ತೆರವುಗೊಂಡ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಇದರೊಂದಿಗೆ ಬೆಸೆದುಕೊಂಡಿರುವ ಇನ್ನಿತರ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳನ್ನು ನಮ್ಮ ಸಮಾಜಶಾಸ್ತ್ರಜ್ಞರು ವಿಶ್ಲೇಷಿಸಬೇಕಾಗಿದೆ. ಧರ್ಮ ಮತ್ತು ರಾಜಕಾರಣದ ನಿರ್ಲಜ್ಜ ಆಲಿಂಗನದ ಫಲವಾಗಿಯೇ ದಕ್ಷಿಣ ಕನ್ನಡ ಜಿಲ್ಲೆ ಇಂದು ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ರುದ್ರನರ್ತನದ ರಂಗಸ್ಥಳವಾಗಿ ಮಾರ್ಪಾಟಾಗಿದೆ. ಇಂತಹ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕದ ಕೋಮುವಾದವನ್ನು ವಿಶ್ಲೇಷಿಸುವಲ್ಲಿ ಈ ಲೇಖನ ಹಿಂದೆ ಸರಿದಿದೆ. ಬದಲಿಗೆ ‘ಕರಾವಳಿ ಕರ್ನಾಟಕದ ನಾಗರಿಕ ಸಮಾಜ ಕೋಮುವಾದಿಯಾಗಿ ಪರಿವರ್ತಿತವಾಗಿದೆ’ ಎಂದು ತನ್ನ ನಿಲುವನ್ನು ಹಗುರವಾಗಿ ಹೇಳಿದೆ. ಹೀಗೆ ಹೇಳುವುದರ ಮೂಲಕ ಒಂದು ಭೌಗೋಳಿಕ ಪ್ರದೇಶದ ಜನರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಟ್ಟಿದೆ!

ಇವರ ಅಭಿಪ್ರಾಯವನ್ನೇ ನಿಜವೆಂದು ನಂಬಿದರೆ, ಇಡೀ ಉತ್ತರಪ್ರದೇಶ ಮತ್ತು ಗುಜರಾತಿನ ಜನರೆಲ್ಲಾ ಸಂಪೂರ್ಣವಾಗಿ ಕೋಮುವಾದಿಗಳಾಗಿಬಿಡುತ್ತಾರೆ! ಹೀಗೆ ತೀರ್ಪು ಕೊಡಲು ನಮಗಿರುವ ಆಧಾರಗಳು ಹೆಚ್ಚಿನ ಸ್ವಾತಂತ್ರ್ಯವನ್ನು ನಮಗೆ ನೀಡುವುದಿಲ್ಲ. ಹಾಗೆ ನೋಡಿದರೆ ಕೋಮುವಾದಿಗಳು ಮತ್ತು ಮೂಲಭೂತವಾದಿಗಳನ್ನು ಕುರಿತು ಹೆಚ್ಚಿನ ವಿಶ್ಲೇಷಣೆಗಳು ನಮ್ಮಲ್ಲಿ ನಡೆದಿಲ್ಲ. ಕೋಮುವಾದಿಗಳು ಮೂಲಭೂತವಾದಿಗಳ ಕೈಯೊಳಗಿನ ಸೂತ್ರದ ಗೊಂಬೆಯಂತೆ. ಅವರು ನಿರ್ದೇಶಿಸಿದಂತೆ ರಂಗದ ಮೇಲೆ ಆಡುವುದೇ ಇವರ ‘ಧರ್ಮ’ ಎಂದು ಪರಿಗಣಿಸಲಾಗಿದೆ.

ಅಂತಿಮವಾಗಿ ನಿರ್ದಿಷ್ಟ ಉದ್ದೇಶದಿಂದ ಕೂಡಿದ ಮತೀಯ ಗಲಭೆಗಳಿಂದ ರಾಜಕೀಯ ಲಾಭ ಪಡೆಯುವವರು ಮತ್ತು ಅಧಿಕಾರ ಅನುಭವಿಸುವವರು ಇವರಲ್ಲ. ಅಯೋಧ್ಯೆ ಮತ್ತು ಗುಜರಾತಿನ ಕೋಮು ದಳ್ಳುರಿಯಲ್ಲಿ ನೇರವಾಗಿ ಪಾಲ್ಗೊಂಡ ಬಹುತೇಕ ಹಿಂದುಳಿದವರು ಮತ್ತು ಕೆಳಜಾತಿಯ ತರುಣರು ಆನಂತರದ ದಿನಗಳಲ್ಲಿ ತಮ್ಮ ಬದುಕಿನ ಅಸಹಾಯಕತೆ ಮತ್ತು ತಿಳಿವಳಿಕೆಯ ಕೊರತೆಯಿಂದ ಈ ಕೃತ್ಯಗಳಲ್ಲಿ ತಾವು ಪಾಲ್ಗೊಳ್ಳುವಂತಾಯಿತು. ಅಂದು ತಮ್ಮನ್ನು ಪ್ರಚೋದಿಸಿದವರು ಯಾರೂ ಜೈಲಿಗೆ ಹೋಗಿಲ್ಲ, ತಮ್ಮಂತೆ ಕೇಸು ಹಾಕಿಸಿಕೊಂಡಿಲ್ಲ! ಆದರೆ ಅವರೆಲ್ಲ ಈಗ ಅಧಿಕಾರದಲ್ಲಿದ್ದಾರೆ ಎನ್ನುವ ಕಟುವಾಸ್ತವದ ಸತ್ಯವನ್ನು ಹೇಳಿಕೊಂಡಿದ್ದಾರೆ.

ಗಲಭೆಯಲ್ಲಿ ಕೈಜೋಡಿಸುವ ಈ ಗುಂಪಿನ ಸದಸ್ಯರು ಕಾಲ ಕಾಲಕ್ಕೆ ಬದಲಾಗಬಹುದು. ಆದರೆ ಈ ಗುಂಪು ಮಾತ್ರ ಶಾಶ್ವತ. ಆದರೆ ಮೂಲಭೂತವಾದಿಗಳು ಹಾಗಲ್ಲ! ಇದು ಶಾಶ್ವತವಾಗಿ ಉಳಿಯುವ ಕಠೋರ ಮನಸ್ಸಿನ ಧಾರ್ಮಿಕ ಯಜಮಾನಿಕೆ ಹೊಂದಿರುವ ಗುಂಪು. ಧಾರ್ಮಿಕ ನಾಯಕತ್ವ ಮತ್ತು ರಾಜಕೀಯ ಅಧಿಕಾರ ಒಂದೇ ವ್ಯಕ್ತಿಯಲ್ಲಿ ಮೇಳೈಸಿಕೊಂಡರೆ ನಡೆಯುವ ಅವಘಡಗಳೇ ಇವು. ಬೇಕಾದರೆ ನಾವು ಜನಶಕ್ತಿಯಿಂದ ದೆಹಲಿಯನ್ನು ಬದಲಿಸಬಹುದು, ಆದರೆ ನಾಗಪುರವನ್ನು ಎಂದಿಗೂ ಬದಲಿಸಲಾಗದು. ಹೀಗೆ ಕರಾವಳಿ ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮುಗಲಭೆಗಳ ಹಾಲಾಹಲದ ಕಾರಣಗಳಲ್ಲಿ ಒಂದಾದ ಕೋಮುವಾದಿಗಳು ಮತ್ತು ಮೂಲಭೂತವಾದಿಗಳೊಂದಿಗೆ ಬೆಸೆದುಕೊಂಡಿರುವ ‘ಧರ್ಮ’ದ ಬಗ್ಗೆ ತಿಳಿಯುವಲ್ಲಿ ಈ ಲೇಖನ ಸಹಾಯಕವಾಗುವುದಿಲ್ಲ.

ನಮ್ಮ ನಡುವಿನ ಉದ್ವೇಗರಹಿತ ಚರ್ಚೆಯಲ್ಲಿ ಕೋಮುವಾದಿ ಮತ್ತು ಮೂಲಭೂತವಾದಿಗಳಿಂದ ಸಮಾಜವನ್ನು ಪಾರುಮಾಡಲು, ಪರಂಪರೆಯಿಂದ ಬಂದ ಸಾಮಾಜಿಕ ಸಾಮರಸ್ಯದ ಬಳ್ಳಿ ಒಣಗದೆ ಇರುವಂತೆ ಕಟ್ಟೆಚ್ಚರದಿಂದ ಕಾಪಾಡಿಕೊಳ್ಳುವುದು ಸಾಮೂಹಿಕ ಹೊಣೆಗಾರಿಕೆಯಾಗಿದೆ. ಈ ದೇಶಕ್ಕೆ ಆಳದಲ್ಲಿ ಇನ್ನೊಂದು ಮಾನವೀಯ ಮುಖವೂ ಇದೆ. ಮನುಷ್ಯ ದೇವರು- ಧರ್ಮವನ್ನು ತನ್ನ ವೈಯಕ್ತಿಕ ನಂಬಿಕೆಗಳಿಗಾಗಿ ಕಾಯ್ದುಕೊಂಡು, ಆಳದಲ್ಲಿ ಬಹುತ್ವದ ಸಮಾಜದಲ್ಲಿ ಜೀವಿಸಲು ಬಯಸುತ್ತಾನೆ. ಆದ್ದರಿಂದಲೇ ತಿಲಕರು ಧಾರ್ಮಿಕ ಸಂಕೇತವಾದ ಗಣೇಶ ಉತ್ಸವದ ಮೂಲಕ ಭಾರತವನ್ನು ಒಗ್ಗೂಡಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಆದರೆ ಗಾಂಧೀಜಿ ಅವರು ಗ್ರಾಮ ಭಾರತದ ಸಂಕೇತವೂ ಮತ್ತು ಧರ್ಮನಿರಪೇಕ್ಷವೂ ಆದ ‘ಚರಕ’ದ ಮೂಲಕ ಉಪಖಂಡದ ಮನಸ್ಸನ್ನು ಒಗ್ಗೂಡಿಸಿದರು. ಇದು ನಮ್ಮ ನಂಬಿಕೆಯನ್ನು ಪೋಷಿಸುವ ರೂಪಕ ಹೇಗೋ ಹಾಗೆಯೇ ಸಾಧ್ಯತೆಯ ಕಡೆಗೂ ನಮ್ಮನ್ನು ಚಲಿಸುವಂತೆ ಮಾಡುತ್ತದೆ.

ಭಾರತದ ನಡುಗಾಲದ ಚರಿತ್ರೆಯಲ್ಲಿ ಕಾಣಿಸಿಕೊಂಡ ಏಷ್ಯಾದ ಉಪಖಂಡದ ದೇಶಭಾಷೆಗಳಲ್ಲಿ ಬಂದ ಸಂತರು, ಅನುಭಾವಿಗಳು ಸಹನಶೀಲತೆಯಿಲ್ಲದ ಧರ್ಮಾಂಧರನ್ನು ಸಮರ್ಥವಾಗಿಯೇ ಹಿಮ್ಮೆಟ್ಟಿಸಿದ್ದಾರೆ. ಇವೆಲ್ಲವೂ ಕೋಮುವಾದ ಮತ್ತು ಮೂಲಭೂತವಾದಿಗಳನ್ನು ನಿಗ್ರಹಿಸಲು ನಮ್ಮೊಳಗೇ ಇರುವ ಸಾಂಸ್ಕೃತಿಕ ನಿರೂಪಗಳು. ಆಧುನಿಕ ಕಾಲದಲ್ಲಿ ಗಾಂಧೀಜಿ, ಅಂಬೇಡ್ಕರ್, ನಾರಾಯಣ ಗುರು, ಕುವೆಂಪು ಅವರ ಚಿಂತನೆಗಳು ಹಾಗೂ ನಮ್ಮ ಜನಪದರು ಸೃಷ್ಟಿಸಿರುವ ಜಾತ್ಯತೀತ ಧಾರ್ಮಿಕ ನೆಲೆಗಳು ನಮಗೆ ನಿಗ್ರಹದ ಹತ್ತಾರು ದಾರಿಗಳನ್ನು ತೋರಿಸಿಕೊಟ್ಟಿವೆ. ಮೂಲಭೂತವಾದಿಗಳಂತೆಯೇ ಧರ್ಮನಿರಪೇಕ್ಷತೆಯ ಬಗ್ಗೆ ನಂಬಿಕೆ ಇರುವವರೂ ಇದರ ಕಡೆಗೆ ಕಣ್ಣುಹಾಯಿಸಬೇಕಾಗಿದೆ. ಹೀಗೆ ನಮ್ಮಲ್ಲಿ ಬಹುತ್ವದ ಪರವಾಗಿರುವ ಸಹನಶೀಲಗುಣದ ಸಂಪನ್ಮೂಲಗಳನ್ನು ನಿರ್ಲಕ್ಷಿಸಿ ಹೊಸ ರೂಪವನ್ನು ನಿರ್ಮಿಸಲಾಗುವುದಿಲ್ಲ.

ಈ ಹಿನ್ನೆಲೆಯಲ್ಲಿ ಸಮುದಾಯಗಳ ನಡುವಿನ ಭ್ರಾತೃತ್ವವನ್ನು ಧಾರ್ಮಿಕ ಹಾಗೂ ರಾಜಕೀಯ ಮಧ್ಯವರ್ತಿಗಳ ಮುಂದಾಳತ್ವವಿಲ್ಲದೆ ಸಾಮರಸ್ಯದ ಪ್ರಸನ್ನತೆಯನ್ನು ಅರಸುವುದು ಯುಕ್ತವಾದ ಕ್ರಮವಾದೀತು. ಇದು ರಾಜಕೀಯವನ್ನು ಧರ್ಮದಿಂದ ಬೇರ್ಪಡಿಸಲು ನೆರವಾಗಬಹುದು. ಈ ದಾರಿಯು ನಮ್ಮನ್ನು ಜಗದ್ಗುರುವಿನ ಪಾದಗಳಿಗಾಗಲೀ ಅಥವಾ ಧರ್ಮದ ಮೇಲಿನ ಯಜಮಾನಿಕೆ ಪ್ರದರ್ಶಿಸುವವರ ಬಳಿಗಾಗಲೀ ಕೊಂಡೊಯ್ಯುವುದಿಲ್ಲ. ಬದಲಿಗೆ ಸಮುದಾಯದ ಮನೋಭಾವವನ್ನು ಗೌರವದಿಂದ ನೋಡಲು ಕಲಿಸುತ್ತದೆ. ಮೂಲಭೂತವಾದಿಗಳನ್ನು ನಿಗ್ರಹಿಸುವ ಸಾಧ್ಯತೆಗಳ ಬಗ್ಗೆ ಇವರ ಲೇಖನದ ಕೊನೆಯ ಭಾಗದಲ್ಲಿ ಮಂಡಿತವಾಗಿರುವ ಕ್ರಿಯಾತ್ಮಕ ಸೂಚಿಗಳ ಬಗ್ಗೆ ನನಗೆ ಸಹಮತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT