ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್‌ಎಸ್ಎಸ್‌ ಮೂಗು ತೂರಿಸುವ ಅಗತ್ಯವಿಲ್ಲ’

Last Updated 2 ಅಕ್ಟೋಬರ್ 2017, 20:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಚಳವಳಿಯಲ್ಲಿ ನಿರತವಾಗಿರುವವರು ಬುದ್ಧಿಭ್ರಷ್ಟರು, ಶನಿ ಸಂತಾನದವರು’ ಎಂಬ ಆರ್‌ಎಸ್‌ಎಸ್‌ ಕ್ಷೇತ್ರ ಪ್ರಚಾರಕ ಸು.ರಾಮಣ್ಣ ಹೇಳಿಕೆಯನ್ನು ವಿಶ್ವ ಲಿಂಗಾಯತ ಮಹಾಸಭಾದ ಪ್ರಮುಖರಾದ ಬಸವರಾಜ ಹೊರಟ್ಟಿ, ಎಂ.ಎಸ್‌.ಜಾಮದಾರ ಮತ್ತು ಸಂಜಯ್‌ ಮಾಕಲ್‌ ತೀವ್ರವಾಗಿ ಖಂಡಿಸಿದ್ದಾರೆ.

ಈ ಹೋರಾಟವು ಲಿಂಗಾಯತ ಸಮಾಜದ ಬದುಕಿನ ಹಾಗೂ ಭವಿಷ್ಯದ ಚಿಂತನೆಯೇ ಹೊರತು ರಾಜಕೀಯ ಉದ್ದೇಶದ ಹೋರಾಟವಲ್ಲ ಎಂಬುದನ್ನು ಸು.ರಾಮಣ್ಣ ಅರ್ಥ ಮಾಡಿಕೊಳ್ಳಲಿ ಎಂದಿರುವ ಅವರು, ‘ಹಿಂದೊಮ್ಮೆ ಇದೇ ಶನಿ ಸಂತಾನದ ಮತಗಳಿಂದ ಪ್ರಥಮ ಬಾರಿಗೆ ರಾಜ್ಯದಲ್ಲಿ ರಾಜಕೀಯ ಪಕ್ಷವೊಂದು ಅಧಿಕಾರ ಹಿಡಿದಿತ್ತು. ಆಗ ಅವು ಶನಿ ಸಂತಾನದವರ ಮತಗಳು ಎಂಬುದು ಸು.ರಾಮಣ್ಣ ಅವರಿಗೆ ತಿಳಿದಿರಲಿಲ್ಲವೇ’ ಎಂದೂ ಪ್ರಶ್ನಿಸಿದ್ದಾರೆ.

‘ಯಾರೋ ಕೆಲವರು ಟೀಕಿಸಿದ ಎಂದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ. ನಿಂದಕರು ಹೆಚ್ಚಿದಷ್ಟೂ ಅದರ ಶಕ್ತಿ ಹೆಚ್ಚುತ್ತದೆ. ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಮಾಜದ ಬದ್ಧತೆ ಹಾಗೂ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ’ ಎಂದು ಸ್ಪಷ್ಟಪಡಿಸಿರುವ ಅವರು, ಈ ವಿಚಾರದಲ್ಲಿ ಆರ್‌ಎಸ್ಎಸ್‌ ಮೂಗು ತೂರಿಸುವ ಅಗತ್ಯವಿಲ್ಲ ಎಂದಿದ್ದಾರೆ.

‘ಧರ್ಮವನ್ನು ಗುತ್ತಿಗೆ ಪಡೆದವರಂತೆ ಮಾತನಾಡುವ ಹಾಗೂ ವರ್ತಿಸುತ್ತಿರುವ ರಾಮಣ್ಣ ಅವರು ಬಸವಾದಿ ಶರಣರ ಪರಂಪರೆಯನ್ನು ಅವಮಾನಿಸುವ, ಲಿಂಗಾಯತ ಸಮಾಜದ ಆತ್ಮಾಭಿಮಾನ ಕೆಣಕುವ ರೀತಿಯಲ್ಲಿ ಹೇಳಿಕೆ ನೀಡಿರುವುದು ಖಂಡನೀಯ. ಇದಕ್ಕೆ ತಕ್ಕ ಉತ್ತರ ನೀಡಬೇಕಾದೀತು’ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಅಧಿಕಪ್ರಸಂಗ ಬೇಡ: ಮಾತೆ ಮಹಾದೇವಿ


ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ ಸು.ರಾಮಣ್ಣ , ಅನ್ಯ ಧರ್ಮದ ವಿಚಾರದಲ್ಲಿ ಮೂಗು ತೂರಿಸಿರುವುದು ಅಧಿಕಪ್ರಸಂಗಿತನ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಟೀಕಿಸಿದ್ದಾರೆ.

ಆರ್‌ಎಸ್‌ಎಸ್‌ ಒಂದು ಶಿಸ್ತುಬದ್ಧ ಸಂಘಟನೆ, ಇದು ದೇಶಾಭಿಮಾನ ಬೆಳೆಸುವುದರ ಜೊತೆಗೆ ಜನರಿಗೆ ಉತ್ತಮ ಸಂಸ್ಕಾರ ನೀಡುವುದು ಎಂಬ ನಂಬಿಕೆ ತಮ್ಮದು. ಆದರೆ, ಸಂಘಟನೆಯ ಅನೇಕ ವಿಚಾರಗಳಲ್ಲಿ ತಮಗೆ ಭಿನ್ನಾಭಿಪ್ರಾಯವಿದೆ ಎಂದಿರುವ ಅವರು, ‘ಶೂದ್ರರು, ದಲಿತರು, ಮಹಿಳೆಯರು ಶೋಷಣೆಗೀಡಾದ, ಯಾರೂ ಸುಖವಾಗಿ ಬಾಳದ ರಾಮರಾಜ್ಯದ ಭ್ರಮೆಯನ್ನು ಬಿಟ್ಟು, ಬಸವಣ್ಣ ಕಟ್ಟಿದ ಶೋಷಣೆ ರಹಿತ ಕಲ್ಯಾಣ ರಾಜ್ಯ ಸ್ಥಾಪನೆಗೆ ರಾಮಣ್ಣ ಪ್ರಯತ್ನಿಸಲಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT