ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ, ಯಡಿಯೂರಪ್ಪ ಸ್ಪರ್ಧಿಸಿದರೂ ನಾನೇ ಗೆಲ್ಲುವುದು’

ಇಳಕಲ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಜನ್– 5ರ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಕಾಶಪ್ಪನವರ
Last Updated 3 ಅಕ್ಟೋಬರ್ 2017, 5:23 IST
ಅಕ್ಷರ ಗಾತ್ರ

ಇಳಕಲ್: ‘ನನ್ನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಬಂದು ಸ್ಪರ್ಧಿಸಿದರೂ ನಾನೇ ಗೆಲ್ಲುವುದು. ಯಾರು ಬೇಕಾದರೂ ನನ್ನ ಸವಾಲು ಸ್ವೀಕರಿಸಿದರೂ 2018ರಲ್ಲಿ ಮತ್ತೆ ನಾನೇ ಶಾಸಕ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಅವರು ನಗರದ ಕಂಠಿ ವೃತ್ತದಲ್ಲಿ ಹುನಗುಂದ ಸ್ಪೋರ್ಟ್ಸ್‌ ಆ್ಯಂಡ್‌ ಕಲ್ಚರಲ್‌ ಅಸೋಸಿಯೇಶನ್‌ ಹಾಗೂ ಕರ್ನಾಟಕ ರಾಜ್ಯ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಇಳಕಲ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಜನ್– 5ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಹುಡುಗರನ್ನು ಇಟ್ಟುಕೊಂಡು ಹೇಗೆ ಚುನಾವಣೆ ಗೆಲ್ಲುತ್ತಾನೆ ಎಂದು ಅಪಹಾಸ್ಯ ಮಾಡಿದವರಿಗೆ ಉತ್ತರ ನೀಡಿದ್ದೇನೆ. ನಾನು ಯಾರಿಗೂ ಬಗ್ಗಲ್ಲ, ನಾನು ಬದಲಾಗಲ್ಲ, ನನ್ನದು ನೇರ, ದಿಟ್ಟ, ನಡವಳಿಕೆ. ಈ ಬಾರಿಯ ಯಾವುನೋ ಒಬ್ಬ ಚುನಾವಣೆಯ ಕಣಕ್ಕಿಳಿಯಲು ಬಂದಿದ್ದಾನೆ. ಏನೋ ಫೌಂಡೇಷನ್ ಮಾಡಿಕೊಂಡು, ಯಾರದೋ ಹಣವನ್ನು ಕ್ಷೇತ್ರದಲ್ಲಿ ಬೇಕಾಬಿಟ್ಟಿ ಹಂಚುತ್ತಿದ್ದಾನೆ. ಇಂತಹದ್ದಕ್ಕೆಲ್ಲ ನಾನು ಬಗ್ಗಲ್ಲ’ ಎಂದು ಯಾರನ್ನೂ ಹೆಸರಿಸದೇ ಹರಿ ಹಾಯ್ದರು.

ಯುವಕರಿಗಾಗಿ ಐಪಿಎಲ್ ಟೂರ್ನಿ ನಡೆಸುತ್ತಿದ್ದೇನೆ. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ. ನಾನು ಹಾಗೂ ಬಿಜಾಪೂರ ಬುಲ್ಸ್ ತಂಡದ ಮಾಲೀಕ ಕಿರಣ ಕಟ್ಟಿಮನಿ ಸೇರಿಕೊಂಡು ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಟರ್ಫ್‌ ಕ್ರಿಕೆಟ್ ಮೈದಾನ ನಿರ್ಮಿಸಿ, ರಾಷ್ಟ್ರಮಟ್ಟದ ಐಪಿಎಲ್‌ ಟೂರ್ನಿ ನಡೆಸುವ ಗುರಿ ಹೊಂದಿದ್ದೇವೆ’ ಎಂದು ತಿಳಿಸಿದರು.

ಸ್ಥಳೀಯ ಐಪಿಎಲ್ ಟೂರ್ನಿಯ ಸೀಜನ್ 5 ಅನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಉದ್ಘಾಟಿಸಿದರು. ಬಿಜಾಪೂರ ಬುಲ್ಸ್ ತಂಡದ ಮಾಲೀಕ ಕಿರಣ ಕಟ್ಟಿಮನಿ ಕ್ರೀಡಾ ಕ್ವಿಜ್‌ ಪುಸ್ತಕ ಬಿಡುಗಡೆ ಮಾಡಿದರು. ಟೆಸ್ಟ್‌ನ ಕ್ರಿಕೆಟಿನ ಮಾಜಿ ಆಟಗಾರ ಸದಾನಂದ ವಿಶ್ವನಾಥ ಟ್ರೋಫಿ ಅನಾವರಣಗೊಳಿಸಿದರು. ಹುನಗುಂದ ಹಾಗೂ ಇಳಕಲ್‌ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಗಂಗಾಧರ ದೊಡಮನಿ ಹಾಗೂ ಮೆಹಬೂಬಸಾಬ್‌ ಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂ.ಎಲ್‌.ಶಾಂತಗೇರಿ. ಗಂಗಾಧರ ದೊಡಮನಿ ಮಾತನಾಡಿದರು. ಸೈಯ್ಯದ್‌ ಷಾ ಮುರ್ತುಜಾ ಹುಸೈನಿ ಫೈಸಲ್‌ ಪಾಷಾ, ಬಿಜಾಪುರ ಬುಲ್ಸ್‌ ತಂಡದ ನಾಯಕ ಭರತ್‌ ಚಿಪ್ಲಿ, ಚಲನಚಿತ್ರ ನಟರಾದ ಸಂಚಾರಿ ವಿಜಯ, ನಾಗಕಿರಣ, ಅಮೃತಾರಾವ್, ದೀಪಿಕಾ, ನಿರ್ದೇಶಕ ಬಾಹುಬಲಿ ಕರ್ಣವಾಡಿ, ರಾಜು ಬೋರಾ, ಶಾಂತಕುಮಾರ ಸುರಪುರ, ಪ್ರಶಾಂತ ಕಲ್ಲೂರು ಇದ್ದರು.

***
‘ಕಾಶಪ್ಪನವರ ಹುಚ್ಚು ಹಿಡಿದಿದೆ, ಚಿಕಿತ್ಸೆ ನೀಡಿ’

ಇಳಕಲ್: ‘ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪನವರಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಏಕವಚನದಲ್ಲಿ ಸಂಬೋಧಿಸಿ, ಸವಾಲು ಹಾಕಿರುವುದು ಖಂಡನೀಯ. ಮತಿಭ್ರಮಣೆ ಗೊಂಡಿರುವ ಶಾಸಕ ಕಾಶಪ್ಪನವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ಸೂಕ್ತ ಚಿಕಿತ್ಸೆ ಕೊಡಿಸಬೇಕು’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರಿಕೆಟ್‌ ಮೂಲಕ ಮತದಾರರನ್ನು ಗೆದ್ದಿದ್ದೇವೆ ಎಂಬ ಭ್ರಮೆಯಲ್ಲಿ ಇದ್ದಾರೆ. ಇದು ಜನರನ್ನು ಜೂಜಾಡುವ ಹಚ್ಚುವ ಕೆಲಸ ಎಂದು ಲೇವಡಿ ಮಾಡಿದರು.

ಈ ಹಿಂದೆ ಹಲವಾರು ಬಾರಿ ಏಕವಚನದಲ್ಲಿ ನನ್ನನ್ನು ನಿಂದಿಸಿದ್ದರು. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದೆ. ಆದರೆ ಮೋದಿಯವರ ಪಾದದ ಧೂಳಿಗೂ ಸಮನಾಗದ ವಿಜಯಾನಂದ ಸ್ಥಾನದ ಘನತೆ ಅರಿತು ಮಾತನಾಡಬೇಕು. ಅಧಿಕಾರ, ಹಣ ಹಾಗೂ ವಯಸ್ಸು ಸೇರಿದಾಗ ಹೆಂಡ ಕುಡಿದ ಮಂಗನಿಗೆ ಚೇಳು ಕಡಿದಾಗ ವರ್ತಿಸುವಂತೆ ವರ್ತಿಸುತ್ತಾರೆ ವಾಗ್ದಾಳಿ ನಡೆಸಿದರು.

‘ತಾಲ್ಲೂಕಿನ ಎಲ್ಲ ಹಳ್ಳಗಳ ಮರಳು ಲೂಟಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮರೆತಿದ್ದಾರೆ. ಗ್ರಾನೈಟ್ ಸಾಗಿಸುವ ಲಾರಿ ಮಾಲೀಕರಿಂದ ಬಂಟನೊಬ್ಬನ ಮೂಲಕ ಹಫ್ತಾ ವಸೂಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಹುನಗುಂದದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಗೋಡಾನ್‌ನಿಂದ ನಾಪತ್ತೆಯಾದ ₹ 72 ಲಕ್ಷ ಮೊತ್ತದ ಅನ್ನ ಭಾಗ್ಯ ಯೋಜನೆಯ ಅಕ್ಕಿ ಎಲ್ಲಿ ಹೋಯಿತು? ಎಂಬುವುದನ್ನು ಕ್ಷೇತ್ರದ ಜನತೆಗೆ ಶಾಸಕರು ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಶ್ಯಾಮ ಕರವಾ, ಮಹಾಂತಗೌಡ ತೊಂಡಿಹಾಳ, ಅರವಿಂದ ಮಂಗಳೂರ, ಆದಪ್ಪ ಮೇರನಾಳ, ಮಹಾಂತಪ್ಪ ಚನ್ನಿ, ಬಸವರಾಜ ತಾಳಿಕೋಟಿ, ದಿಲೀಪ ದೇವಗಿರಕರ, ಮಾಧೂಸಾ ಕಾಟವಾ, ಚೋಳಪ್ಪ ಇಂಡಿ ಇದ್ದರು.

***
ಮತದಾರರು ಪ್ರಬುದ್ಧರಿದ್ದು, ₹ 3 ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ನನ್ನನ್ನು 2018ರ ಚುನಾವಣೆಯಲ್ಲೂ ಗೆಲ್ಲಿಸುತ್ತಾರೆ
ವಿಜಯಾನಂದ ಕಾಶಪ್ಪನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT