ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಹಾರ ವೃದ್ಧಿಗೆ ಡಿಜಿಟಲ್‌ ನೆರವು

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇಂಟರ್‌ನೆಟ್ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುನ್ನುಗ್ಗುತ್ತಿದೆ. ಪ್ರಸ್ತುತ 40 ಕೋಟಿ ಇಂಟರ್‍ನೆಟ್ ಬಳಕೆದಾರರು ಭಾರತದಲ್ಲಿದ್ದು, 2020 ರ ವೇಳೆಗೆ ಇವರ ಸಂಖ್ಯೆ 65  ಕೋಟಿಗೆ ತಲುಪುವ ಸಾಧ್ಯತೆಗಳಿವೆ. ಇನ್ನು ಮುಂದೆ ಈ ಇಂಟರ್‍ನೆಟ್‍ನ ಪ್ರಭಾವವನ್ನು ಯಾರೊಬ್ಬರೂ ನಿರ್ಲಕ್ಷಿಸುವಂತಿಲ್ಲ.‌ ನಗದುರಹಿತ ಆರ್ಥಿಕತೆ ಮತ್ತು ಅತಿ ವೇಗದ ಸುಧಾರಿತ ಬ್ರಾಡ್‍ಬ್ಯಾಂಡ್ ಸಂಪರ್ಕಗಳು  ಡಿಜಿಟಲ್ ಬಳಕೆಯ ವೇಗ ಹೆಚ್ಚಿಸುವಲ್ಲಿ ಮುಂಚೂಣಿಯಲ್ಲಿವೆ.

ಸಾರ್ವಜನಿಕ ಸ್ಥಳಗಳು ಸೇರಿದಂತೆ ಎಲ್ಲಿ ಕಣ್ಣು ಹಾಯಿಸಿದರೂ ಅಲ್ಲೆಲ್ಲಾ ಜನರು ಸ್ಮಾರ್ಟ್‍ಫೋನ್‍ಗಳಲ್ಲೇ ಮುಳುಗಿ ಹೋಗಿರುವುದು ಈಗ ಸಾಮಾನ್ಯ ಎನಿಸಿದೆ. ಇವರೆಲ್ಲಾ ಇಂಟರ್‍ನೆಟ್ ಬಳಕೆದಾರರಾಗಿದ್ದು, ಸಾಮಾಜಿಕ ಜಾಲತಾಣ, ವಿಡಿಯೊ ಡೌನ್‍ಲೋಡ್ ಮಾಡಿಕೊಳ್ಳುವುದು, ಸುದ್ದಿಗಳನ್ನು ಅಪ್‍ಡೇಟ್ ಮಾಡುವುದು, ಇ-ಕಾಮರ್ಸ್ ಸೈಟ್‍ಗಳಲ್ಲಿ ಶಾಪಿಂಗ್ ಮಾಡುವುದು ಮತ್ತು ಹಣ ಪಾವತಿ ಮಾಡಲು ತಮ್ಮ ಮೊಬೈಲ್‍ಗಳನ್ನು ಬಳಕೆ ಮಾಡುತ್ತಿರುವುದು ಸಾಮಾನ್ಯ ಎನಿಸಿದೆ.

ಅಂಕಿಅಂಶಗಳ ಪ್ರಕಾರ, ಮೊಬೈಲ್‌ ಬಳಕೆದಾರರು ಸದ್ಯಕ್ಕೆ ಪ್ರತಿದಿನ ಸರಾಸರಿ 177 ನಿಮಿಷಗಳ ಕಾಲ ತಮ್ಮ ಸ್ಮಾರ್ಟ್‍ಫೋನ್‍ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಕೈಗೆಟುಕುವ ದರದಲ್ಲಿ ಸಿಗುವ ಸ್ಮಾರ್ಟ್‍ಫೋನ್‍, ಅತ್ಯಂತ ಕಡಿಮೆ ದರದಲ್ಲಿ ಇಂಟರ್‍ನೆಟ್ ಸೇವೆಯ ಲಭ್ಯತೆ ಮತ್ತು ಗ್ರಾಮಾಂತರ ಪ್ರದೇಶದಲ್ಲೂ ಅತ್ಯುತ್ತಮ ರೀತಿಯಲ್ಲಿ ಇಂಟರ್‍ನೆಟ್ ಸೇವೆ ದೊರೆಯುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ದೇಶದಲ್ಲಿ ಇಂಟರ್‍ನೆಟ್ ಬಳಕೆ ದಾಪುಗಾಲು ಹಾಕುತ್ತಾ ಬೆಳೆಯುತ್ತಿರುವುದನ್ನು ಗಮನಿಸಿದರೆ ಆನ್‍ಲೈನ್ ಮೂಲಕ ವ್ಯವಹಾರ ಮಾಡಲು ಇದು ಸಕಾಲ ಎನಿಸುತ್ತದೆ. ಅದರಲ್ಲಿಯೂ ಪ್ರಮುಖವಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯವಹಾರಗಳಿಗೆ ಇದು ಹೆಚ್ಚು ಸೂಕ್ತ ಎನಿಸುತ್ತದೆ. ಈ ಕ್ಷೇತ್ರಗಳು ಇನ್ನೂ ಇಂಟರ್‍ನೆಟ್ ಬಳಕೆ ಮತ್ತು ಇದರಿಂದ ಆಗುತ್ತಿರುವ ಬದಲಾವಣೆ ಮತ್ತು ಸುಧಾರಿತ ಪರಿಣಾಮಗಳ ಬಗ್ಗೆ ತಿಳಿದುಕೊಂಡಿಲ್ಲ. ಇಂಟರ್‍ನೆಟ್ ಆಧಾರದ ವ್ಯವಹಾರಗಳನ್ನು ಅಳವಡಿಸಿಕೊಳ್ಳಲು ಸದ್ಯಕ್ಕೆ ಸುವರ್ಣಾವಕಾಶ ಇದೆ. ಇಂತಹ  ಸೇವೆಗಳನ್ನು ಪಡೆಯುವುದು ಹೇಗೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ತರಬೇತಿ ಪಡೆಯುವುದು: `ಡಿಜಿಟಲ್ ಅನ್‍ಲಾಕ್ಡ್’ ಮೂಲಕ ಗೂಗಲ್ ಸಂಸ್ಥೆಯು ಡಿಜಿಟಲ್ ಕೌಶಲ್ಯ ತರಬೇತಿ ಕಾರ್ಯಕ್ರಮ ನೀಡುತ್ತಿದೆ. ಈ ಮೂಲಕ ಸಣ್ಣ ಮತ್ತು ಮಧ್ಯಮ ಗಾತ್ರದಲ್ಲಿ ವಹಿವಾಟು ನಡೆಸುವ ಉದ್ದಿಮೆ ಸಂಸ್ಥೆಗಳಿಗೆ ಗುಣಮಟ್ಟದ  ಡಿಜಿಟಲ್ ತರಬೇತಿ ಒದಗಿಸುತ್ತಿದೆ.  ಉದ್ದಿಮೆ ಸಂಸ್ಥೆಗಳ ಕಲಿಕಾ ಅಗತ್ಯಗಳನ್ನು ಗಮನಿಸಿ ಗೂಗಲ್ ಆನ್‍ಲೈನ್, ಆಫ್‍ಲೈನ್ ಮತ್ತು ಮೊಬೈಲ್ ಮೂಲಕ ತರಬೇತಿ ಕಾರ್ಯಕ್ರಮ ನು ರೂಪಿಸಿದೆ.

ಎಫ್‍ಐಸಿಸಿಐ ಸಹಭಾಗಿತ್ವದಲ್ಲಿ ಮುಂದಿನ 3 ವರ್ಷಗಳವರೆಗೆ  ಆಫ್‍ಲೈನ್ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಅದೇರೀತಿ   40 ನಗರಗಳಲ್ಲಿ 5,000 ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಆನ್‍ಲೈನ್ ಮೂಲಕವೂ   ತರಬೇತಿ ಪಡೆಯಬಹುದಾಗಿದೆ. ಈ ಆನ್‍ಲೈನ್ ಆಧಾರಿತ ಕಲಿಕಾ ಪದ್ಧತಿಯಲ್ಲಿ 90 ಸ್ವಯಂ- ಚಾಲಿತ ವಿಡಿಯೊ ಟ್ಯುಟೋರಿಯಲ್‍ಗಳು, ಸಿದ್ಧಪಡಿಸಿರುವ ವಿಶೇಷ ಪಾಠಗಳು ಉಚಿತವಾಗಿ  ಲಭ್ಯವಿವೆ. ಯಾರು ಬೇಕಾದರೂ ಅತ್ಯಂತ ಸುಲಭ ಮತ್ತು ಸರಳರೀತಿಯಲ್ಲಿ ಕಲಿಕಾ ಪಾಠಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರ ಆಧಾರದಲ್ಲಿ ನೀವು ನಿಮ್ಮದೇ ಆದ ಆನ್‍ಲೈನ್ ಶಾಪ್ ಸೇರಿದಂತೆ ಇನ್ನಿತರೆ ಹತ್ತು ಹಲವಾರು ವ್ಯವಹಾರಗಳನ್ನು ಆರಂಭಿಸಬಹುದಾಗಿದೆ.

ಅಂತರ್ಜಾಲ ತಾಣ ಆರಂಭಿಸುವುದು ಮತ್ತು ಗ್ರಾಹಕರನ್ನು ಮೊಬೈಲ್ ಮತ್ತು ವಿಡಿಯೊ ಮೂಲಕ ಸಂಪರ್ಕ ಮಾಡಿ ಆನ್‍ಲೈನ್ ವ್ಯವಹಾರ ವೃದ್ಧಿಸಿಕೊಳ್ಳುವ ಬಗೆ ಹೇಗೆಂಬುದನ್ನು ಈ ಟ್ಯುಟೋರಿಯಲ್‍ನಲ್ಲಿ ಹೇಳಿಕೊಡಲಾಗುತ್ತದೆ. ಈ ತರಬೇತಿಗಳು ಗೂಗಲ್, ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮತ್ತು
ಎಫ್‍ಐಸಿಸಿಐನಿಂದ ಪ್ರಮಾಣೀಕೃತವಾಗಿವೆ.

ಡಿಜಿಟಲ್ ಮಾರುಕಟ್ಟೆ ಕೌಶಗಳನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ಹೇಳಿಕೊಡುವಂತಹ ವಿನೂತನವಾಗಿ ಸಿದ್ಧಪಡಿಸಲಾಗಿರುವ ಮೊಬೈಲ್ ಆ್ಯಪ್ ಅನ್ನೂ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.  ಗ್ರಾಹಕರು ಆಫ್‍ಲೈನ್ ಮೂಲಕವೂ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ವ್ಯವಹರಿಸಬಹುದಾಗಿದೆ. ಸದ್ಯದಲ್ಲೇ ತಮಿಳು, ತೆಲುಗು ಮತ್ತು ಮರಾಠಿ ಅವತರಣಿಕೆಯಲ್ಲೂ ಲಭ್ಯವಾಗಲಿದೆ.

ಆನ್‍ಲೈನ್‍ನಲ್ಲಿ ನೋಡಿ: ಸರ್ಚ್‍ನಲ್ಲಿ ಅಥವಾ Google My Business  ಮೂಲಕ  ವ್ಯವಹಾರವನ್ನು ಲಿಸ್ಟಿಂಗ್ ಮಾಡುವ ಮೂಲಕ ಗ್ರಾಹಕರನ್ನು  ಪತ್ತೆ
ಮಾಡಬಹುದಾಗಿದೆ. ಈ ಮಾಹಿತಿ ನೀಡುವ ಮೂಲಕ ತಮ್ಮ ಹತ್ತಿರದಲ್ಲೇ ಇರುವ ವ್ಯವಹಾರ ಸ್ಥಳಗಳನ್ನು ಪತ್ತೆ ಮಾಡಲು ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ದೀರ್ಘ ಕಾಲದವರೆಗೆ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಇದು ಸಹಕಾರಿಯಾಗುತ್ತದೆ.

ಉದಾಹರಣೆಗೆ  ದಕ್ಷಿಣ ದೆಹಲಿಯಲ್ಲಿನ ಸೈಕಲ್‍ಶಾಪ್‍ಗೆ https://www.google.com/ business/ ನಲ್ಲಿ ಸರ್ಚ್‌ ಮಾಡಿ ಅದರ ಆಧಾರದ ಮೇಲೆ ಸರಿ ಎನಿಸಿದ ಶಾಪ್‍ಗೆ ನಾನು ಹೋಗಬಹುದಾಗಿದೆ.

ಉಚಿತವಾಗಿ ನಿಮ್ಮದೇ ಅಂತರ್ಜಾಲ ತಾಣ ಸೃಷ್ಟಿಸಿಗ್ರಾಹಕರು ಎಲ್ಲಿರುತ್ತಾರೋ ಅಲ್ಲಿ ವ್ಯವಹಾರ ನಡೆಯುತ್ತದೆ. ಈ ಗ್ರಾಹಕರನ್ನು ಹೊಂದಲು ಸರ್ಚ್ ಮತ್ತು ಮ್ಯಾಪ್‍ಗಳು ಆರಂಭಿಕ ಹಂತವಷ್ಟೆ. ವೆಬ್‍ಸೈಟ್ ವ್ಯವಹಾರದ ಯಾನವನ್ನು ಮುಂದಕ್ಕೆ ಕೊಂಡೊಯ್ಯಲು ನೆರವಾಗುತ್ತದೆ. ಹೀಗಾಗಿ, ಗೂಗಲ್ Google My Business ನಲ್ಲಿ ಹೊಸ ವೆಬ್‍ಸೈಟ್ ಸೃಷ್ಟಿಸಲು ಅನುಕೂಲವಾಗುವಂತಹ ಸೌಲಭ್ಯ ಅಭಿವೃದ್ಧಿಪಡಿಸಿದೆ.

ಇದರ ಮೂಲಕ ಕೇವಲ 10 ನಿಮಿಷಗಳಲ್ಲಿ ನಿಮ್ಮದೇ ಆದ ಸ್ವಂತ ವೆಬ್‍ಸೈಟ್ ಅನ್ನು ಅತ್ಯಂತ ಸರಳವಾಗಿ ಸೃಷ್ಟಿ ಮಾಡಬಹುದಾಗಿದೆ. ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಪ್ರಸ್ತುತ ಇರುವ ಗ್ರಾಹಕರ ಪಟ್ಟಿಯನ್ನು ಹೊಂದುವ ಮೂಲಕ ಈ ವೆಬ್‍ಸೈಟ್ ಕಾರ್ಯಪ್ರವೃತ್ತವಾಗುತ್ತದೆ. ಇದರಲ್ಲಿ ಕಾಲ್ ನೌ ಅಥವಾ ಗೆಟ್ ಡೈರೆಕ್ಷನ್ ಆಯ್ಕೆಗಳು ಇರುತ್ತವೆ. ಈ ಮೂಲಕ ಗ್ರಾಹಕರನ್ನು ಅತ್ಯಂತ ಸುಲಭವಾಗಿ ಸಂಪರ್ಕಿಸಬಹುದಾಗಿದೆ.

ಈ ಅಂತರ್ಜಾಲ ತಾಣವನ್ನು ಕನ್ನಡ ಮತ್ತು ಇತರ 9 ಪ್ರಾದೇಶಿಕ ಭಾಷೆಗಳಲ್ಲಿ ಹೊಂದಬಹುದಾಗಿದೆ. ತ್ವರಿತವಾಗಿ ಗ್ರಾಹಕರನ್ನು ತಲುಪಬಹುದು ಗೂಗಲ್ ಸರ್ಚ್‍ನಲ್ಲಿ ಗ್ರಾಹಕರು ನಿಮ್ಮ ವ್ಯವಹಾರ, ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಈ ಮೂಲಕ ವ್ಯವಹಾರದ ಬಗ್ಗೆ ಗ್ರಾಹಕರ ಅಭಿಪ್ರಾಯಗಳನ್ನು ಪಡೆಯಬಹುದಾಗಿದೆ. ಗ್ರಾಹಕರ  ನಿರ್ವಹಣೆ,  ವ್ಯವಹಾರದ ವಿವರಗಳನ್ನು ನವೀಕರಿಸುವುದು ಮತ್ತು ವ್ಯವಹಾರದ ಅಂಕಿಅಂಶಗಳನ್ನು ಈ ವೆಬ್‍ಸೈಟ್‍ನಲ್ಲಿ ಅಡಕ ಮಾಡಬಹುದಾಗಿದೆ.

ದೇಶದಲ್ಲಿ ಆನ್‍ಲೈನ್ ವ್ಯವಹಾರ ಗಮನಾರ್ಹಾಗಿ ಬೆಳೆಯುತ್ತಿದೆ. ಲಕ್ಷಾಂತರ ಸಣ್ಣ ವ್ಯಾಪಾರಸ್ಥರು ಆನ್‍ಲೈನ್ ವ್ಯವಹಾರ ಆರಂಭಿಸುತ್ತಿದ್ದಾರೆ. ಈ ಮೂಲಕ ಭಾರತ ಡಿಜಿಟಲ್ ಆರ್ಥಿಕತೆ ದೇಶವಾಗಿ ಹೊರಹೊಮ್ಮುತ್ತಿದೆ. ಪ್ರತಿಯೊಬ್ಬ ವರ್ತಕ, ಉದ್ಯಮಿಯು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಾಹಿತಿಗೆ  https://business.google.com ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT