ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳುಗಳನ್ನು ಕಿತ್ತಿಟ್ಟು ಹೂವಿನ ಹಾಸಿಗೆ ಹಾಸೋಣ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹಲವರು ದಾಂಪತ್ಯವನ್ನು ಸೆರೆಮನೆ ಎಂದು ಭಾವಿಸುತ್ತಾರೆ. ಆದರೆ ನಾವೇ ನಮ್ಮ ಕೈಯಾರೆ ಅದನ್ನು ಸೆರೆಮನೆ ಮಾಡಿಕೊಂಡಿರುತ್ತೇವೆ, ಅಷ್ಟೆ.  ಒಂದೊಮ್ಮೆ ನೀವು ನಿಮ್ಮ ಸಂಗಾತಿಯ ಜೊತೆ ನಿರಂತರವಾಗಿ ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ ನಿಮ್ಮ ಮನಸ್ಸು ಇನ್ನೂ ನಿದ್ರಾವಸ್ಥೆಯಲ್ಲಿದೆ ಎಂದರ್ಥ. ಅಂದರೆ ನಿಮ್ಮ ಸಂಗಾತಿ ಪರಿಪೂರ್ಣ ಗಂಡ/ಹೆಂಡತಿ ಎಂದಲ್ಲ.  ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳಲು ನಿಮ್ಮ ಮನಸ್ಸು ಇನ್ನೂ ಸಜ್ಜಾಗಿಲ್ಲದಿದ್ದರೆ ಸಂಗಾತಿಯಿಂದ ಸದಾ ಕಿರಿಕಿರಿ ಅನುಭವಿಸುತ್ತಿರುತ್ತೀರಿ. ಅಂದರೆ ನೀವು ಸ್ಥಿರತೆಯಿಲ್ಲದ ಸಾಮರಸ್ಯವಿಲ್ಲದ ಬದುಕಿನ ದಾರಿಯಲ್ಲಿ ನಡೆಯುತ್ತಿದ್ದೀರಿ ಎಂದರ್ಥ. ಹಾಗಾದರೆ ಬದುಕನ್ನು ಸ್ಥಿರಗೊಳಿಸಿಕೊಳ್ಳುವುದು, ಸಾಮರಸ್ಯದ ಹದಕ್ಕೆ ಒಗ್ಗಿಸಿಕೊಳ್ಳುವುದು ಹೇಗೆ? ನಿಮ್ಮ ಮನಸ್ಸನ್ನು ಜಾಗೃತಗೊಳಿಸಿಕೊಳ್ಳುವದರಿಂದ ಇದು ಸಾಧ್ಯ.

‘ಜಾಗೃತಮನಸ್ಸೆಂಬುದು ಎಲ್ಲ ರೀತಿಯ ಸಕಾರಾತ್ಮಕ ಆಲೋಚನೆಗಳನ್ನೂ ಬಿತ್ತಿ ಬೆಳೆಯಬಹುದಾದ ಫಲವತ್ತಾದ, ಅನಂತ ಮೈದಾನ’ ಎಂದಿದ್ದಾರೆ ಜ್ಞಾನಿಗಳು. ಅಲ್ಲಿ ಎಲ್ಲ ಬಗೆಯ ಆಲೋಚನೆಗಳೂ ಸಾವಧಾನದ ಬೆನ್ನೇರಿರುತ್ತವೆ. ಅಲ್ಲಿನ ಗಾಳಿಯಲ್ಲಿ ಎಲ್ಲ ಸಂಗತಿಗಳೂ ಸ್ವಚ್ಛಂದವಾಗಿ ಹಾರಾಡಿಕೊಂಡಿರುತ್ತವೆ. ಅದು ನಮ್ಮೆಲ್ಲ ಗ್ರಹಿಕೆಗಳ ಕೊರತೆಗಳನ್ನು ನಿವಾರಿಸುವ ಪ್ರವಾದಿಯಂಥದ್ದು. ಅದು ನೆನಪುಗಳೆಂಬ ಗೂಡಲ್ಲಿ ಬೆಚ್ಚಗೆ ಬಚ್ಚಿಟ್ಟು, ಬದುಕು ನೀಡುವ ಅನಿರೀಕ್ಷಿತ ಆಘಾತಗಳಿಂದ ನಮ್ಮನ್ನು ಕಾಪಾಡುವ ಪಾಲಕಗುಣವುಳ್ಳದ್ದು. ನಮ್ಮೆಲ್ಲ ಕಾಮನೆಗಳನ್ನು ಈಡೇರಿಸುವ ಕಾಮಧೇನುವಿನಂಥದ್ದು. ಮನಸ್ಸಿನ ನೆಮ್ಮದಿಯನ್ನು ಹಾಳುಗೆಡವುವ ಕೆಟ್ಟ ಭಾವನೆಗಳು ಒಳಗೆ ನುಸುಳದಂತೆ ಕಾಯುವ ಕಾವಲುಗಾರ. ಅಸ್ಥಿರತೆಯನ್ನು ಹೊಡೆದೋಡಿಸುವ ಬಿರುಗಾಳಿಯೂ ಹೌದು. ಎಲ್ಲ ಬಗೆಯ ರೋಗನಿವಾರಣಾ ತಂತ್ರಗಳನ್ನು ಇರಿಸಿಕೊಂಡಿರುವ ಶ್ರೀಮಂತ ಗ್ರಂಥಾಲಯವೂ ಹೌದು.

ಆದ್ದರಿಂದ ಇಂಥ ಸಂಗಾತಿಯೊಂದಿಗೆ ಬದುಕುವ ದೌರ್ಭಾಗ್ಯ ನನ್ನದಾಯಿತಲ್ಲ ಎಂದು ಕೊರಗಬೇಡಿ. ಬದಲಿಗೆ ಇಷ್ಟೊಂದು ಅದ್ಭುತ ಸಾಧ್ಯತೆಗಳಿರುವ, ಜಾಗೃತ ಮನಸ್ಸಿನ, ಆತ್ಯಂತಿಕ ಶಾಂತಿಯ, ಕೊನೆಯಿಲ್ಲದ ಆನಂದದ, ಸ್ಥಿರ ಮನಸ್ಸಿನ ಸ್ವತಂತ್ರ ಮನುಷ್ಯನೊಟ್ಟಿಗೆ ಬದುಕುವ ಸೌಭಾಗ್ಯ ನನ್ನದು ಎಂದು ಹೆಮ್ಮೆಪಟ್ಟುಕೊಳ್ಳಿ.

ಮನಸ್ಸನ್ನು ಜಾಗೃತಗೊಳಿಸಿಕೊಳ್ಳುವುದು ಹೇಗೆ?: ಮನಸ್ಸನ್ನು ಜಾಗೃತಗೊಳಿಸಿಕೊಳ್ಳುವ ಮೊದಲ ದಾರಿ ಎಂದರೆ ನಿಮ್ಮ ಸಂಗಾತಿಯನ್ನು ಮಮತೆಯಿಂದ ನೋಡುವುದು. ಮಮತೆ ಎಂಬುದು ಇನ್ನೊಬ್ಬರಿಂದ ಪ್ರತಿಫಲವನ್ನು ನಿರೀಕ್ಷಿಸದ ಭಾವ. ಅದು ಇನ್ನೊಬ್ಬ ಮನುಷ್ಯನಲ್ಲಿನ ದಿಟ್ಟತೆ, ವ್ಯಾಮೋಹ, ದೃಷ್ಟಿ ಕೋನ, ಸಮಗ್ರತೆ, ಚೈತನ್ಯ, ಸಂಕಷ್ಟವನ್ನು ಎದುರಿಸುವ ಸ್ಥಿತಪ್ರಜ್ಞತೆಗಳಂಥ ಸಕಾರಾತ್ಮಕ ಭಾವಗಳಲ್ಲಿನ ಸೌಂದರ್ಯ ವನ್ನು ನಮಗೆ ಕಾಣಿಸುವ ಕನ್ನಡಕವಿದ್ದಂತೆ. ಮಮತೆ ಇದ್ದಲ್ಲಿ, ದೂಷಣೆ, ಖಂಡನೆ, ತಿರಸ್ಕಾರಗಳಿಗೆ ಎಡೆ ಯಿಲ್ಲ. ಗೌರವ, ಪ್ರಶಂಸೆ, ಪ್ರೇಮದ ಭಾವಗಳಿಗಷ್ಟೆ ಅಲ್ಲಿ ಆದ್ಯತೆ.

ಬದುಕಿನ ನೆಮ್ಮದಿಯನ್ನು ಕಸಿಯುತ್ತಿರುವ ಎಲ್ಲ ನಕಾರಾತ್ಮಕ ದಾರಿಗಳಿಗೂ ಮೂಲ ಅಹಂಕಾರವೇ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಬದುಕಬೇಕು ಎಂದರೆ ಸ್ನೇಹ–ಸಹಕಾರದ ಹೊರತಾಗಿ ಬೇರೆ ದಾರಿ ಇಲ್ಲ. ಈ ದಾರಿ ತೆರೆದುಕೊಳ್ಳಬೇಕು ಎಂದರೆ ನಮ್ಮ ಮನಸ್ಸು ಜಾಗೃತಗೊಳ್ಳಬೇಕು. ಹೀಗೆ ಜಾಗೃತಗೊಂಡ ಮನಸ್ಸು ಅನವಶ್ಯಕ ಚಿಂತೆಗಳಿಂದ, ಕಿರಿಕಿರಿಗಳಿಂದ ಬಿಡುಗಡೆ ಗೊಳಿಸುತ್ತದೆ. ‘ನಾನು ಹೇಗೆ ನಮ್ಮ ಅಭಿಲಾಷೆಗಳ ಈಡೇರಿಕೆ ಗಾಗಿ ಜೊತೆಗಿದ್ದೇನೆಯೋ ಹಾಗೆಯೇ ನನ್ನ ಸಂಗಾತಿಯೂ ಅವನ/ಅವಳ ಅಭಿಲಾಷೆಗಳ ಈಡೇರಿಕೆಗಾಗಿಯೇ ತನ್ನ ಜತೆಗಿದ್ದಾನೆ/ಳೆ’ ಎಂಬ ಸತ್ಯವನ್ನು ಜಾಗೃತ ಮನಸ್ಸು ಅರ್ಥ ಮಾಡಿಕೊಳ್ಳುತ್ತದೆ. ಇದು ಸ್ವಕೇಂದ್ರಿತ ಯೋಚನೆ, ಮಾತು, ವರ್ತನೆಗಳಿಂದ ನಮ್ಮನ್ನು ಬಿಡುಗಡೆಗೊಳಿಸುತ್ತದೆ.

ಸ್ವಕೇಂದ್ರಿತ ಚಿಂತನೆಗೆ ವಿದಾಯ ಹೇಳಿ: ಸ್ವಕೇಂದ್ರಿತ ಚಿಂತನೆಗಳನ್ನು ಬಿಡವುದು ಸುಲಭವಲ್ಲ. ಮೊದಮೊದಲು ನಿಮ್ಮ ನಿರೀಕ್ಷೆಗಳನ್ನು, ಅಪೇಕ್ಷೆಗಳನ್ನು ಬಿಟ್ಟುಕೊಡಬೇಕಾಗಬಹುದು. ಆದರೆ ಯಾವಾಗ ನೀವು ಅಪೇಕ್ಷೆರಹಿತ, ಬೇಡಿಕೆರಹಿತ ಚಿಂತನಾಕ್ರಮಕ್ಕೆ ಒಗ್ಗಿಕೊಳ್ಳುತ್ತೀರೋ ನಿಮ್ಮ ಮನಸ್ಸೂ ಅದನ್ನು ಒಪ್ಪಿಕೊಳ್ಳುತ್ತದೆ. ಅದರಲ್ಲಿಯೇ ಸ್ಥಿರಗೊಂಡು ಶಾಂತಿಯನ್ನು ಕಂಡುಕೊಳ್ಳುತ್ತದೆ. ಆಹ್‌! ಫಲಾಪೇಕ್ಷೆ, ಕೋಪ, ದ್ವೇಷಗಳನ್ನು ತ್ಯಜಿಸಿದ ಸ್ಥಿತಿ ಎಷ್ಟು ಹಗುರವಾದದ್ದು. ದೂರಪ್ರಯಾಣದಲ್ಲಿ ಹೊತ್ತುಕೊಂಡು ಬಂದ ಭಾರದ ಚೀಲವನ್ನು ಕೆಳಗಿಳಿಸಿದಾಗ ಒಂದು ನಿರಾಳಭಾವ ಆವರಿಸಿಕೊಳ್ಳುತ್ತದಲ್ಲ, ಅಂಥದ್ದೇ ನಿರಾಳ ಭಾವವಿದು. ಆ ಹಗುರತನದಲ್ಲಿಯೇ ನಿಮ್ಮ ಮನಸ್ಸನ್ನು ಸಂತೋಷ, ನೆಮ್ಮದಿಯ ಬೆಳಕು ಸೇರಿಕೊಳ್ಳುವುದು.

ಪತಿಯೊಬ್ಬ ಗುರುಗಳ ಬಳಿ ಬಂದು ಕೇಳುತ್ತಾನೆ: ‘ನನ್ನ ಹೆಂಡತಿಯೊಂದಿಗೆ ನೆಮ್ಮದಿಯಿಂದ ಬದುಕಲು ಏನು ಮಾಡಬೇಕು?’ ಗುರುಗಳು ಉತ್ತರಿಸುತ್ತಾರೆ: ‘ಅವಳನ್ನು ಅರ್ಥಮಾಡಿಕೋ’. ಪತಿ ಮತ್ತೆ ಕೇಳುತ್ತಾನೆ: ‘ಅವಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?’ ಗುರುಗಳದು ಮತ್ತದೇ ಶಾಂತಸ್ವರದ ಉತ್ತರ: ‘ನಿನ್ನನ್ನು ನೀನು ಅರ್ಥಮಾಡಿ ಕೊಳ್ಳುವುದರ ಮೂಲಕ’. ಸ್ವಲ್ಪ ದಿನಗಳ ನಂತರ ಅವನ ಪತ್ನಿ ಅದೇ ಗುರುಗಳನ್ನು ಭೇಟಿಯಾಗಿ ಅದೇ ಪ್ರಶ್ನೆಯನ್ನು ಕೇಳುತ್ತಾಳೆ. ಆಗ ಗುರುಗಳು ನೀಡುವ ಉತ್ತರವೂ ಅದೇ ಆಗಿರುತ್ತದೆ! ‘ನಮಗೆ ಶಾಂತಿ ಬೇಕು ಎಂದಾದರೆ, ಸಂಗಾತಿಯನ್ನು ಬದಲಿಸಲು ಪ್ರಯತ್ನಿಸುವುದಲ್ಲ. ಬದಲಿಗೆ ನಾವಿಬ್ಬರೂ ನಮ್ಮ ಮನಸ್ಸುಗಳನ್ನು ಜಾಗೃತಗೊಳಿಸಿ ಕೊಳ್ಳಬೇಕು.’ ಇದನ್ನೇ ಗುರುಗಳೂ ಹೇಳಿದ್ದು.

ಇನ್ನೊಬ್ಬ ಮತ್ತದೇ ಗುರುಗಳ ಬಳಿ ಬಂದು ‘ನನ್ನ ಹೆಂಡತಿ ನನಗೆ ವಿಧೇಯಳಾಗಿರುವಂತೆ ಮಾಡುವುದು ಹೇಗೆ?’ ನಸುನಕ್ಕ ಗುರುಗಳು ಅವನಿಗೆ ಮರುಪ್ರಶ್ನೆ ಹಾಕಿದರು: ‘ನಿನಗೆ ಸಾವಿನ ನಂತರದ ಬದುಕಿನಲ್ಲಿ ನಂಬಿಕೆ ಇದೆಯೇ?’ ಅವನು ಅಚ್ಚರಿಗೊಂಡು ಹೇಳಿದ: ‘ಹೌದು, ಇದೆ’. ‘ಒಳ್ಳೆಯದು’. ಗುರುಗಳು ನುಡಿದರು: ‘ನಿನ್ನ ಹೆಂಡತಿ ಸಾವಿನ ಮೊದಲಿನ ಬದುಕಿನಲ್ಲಿ ನಂಬಿಕೆ ಇಟ್ಟಿದ್ದಾಳೆ!’.

ಇದು ಮೇಲ್ನೋಟಕ್ಕೆ ತುಂಬ ಸಣ್ಣ ಘಟನೆಯಂತೆ ಕಾಣಬಹುದು. ದೊಡ್ಡ ಕಾಯಿಲೆಗೆ ಔಷಧ ಸಣ್ಣ ಗುಳಿಗೆಯಲ್ಲಿಯೇ ಇರುತ್ತದಲ್ಲವೇ? ಹಾಗೆಯೇ ಜ್ಞಾನವೆಂಬುದು ಸಣ್ಣ ಕಥೆಗಳಲ್ಲಿಯೇ ಅಡಗಿರುತ್ತದೆ. ಆ ಜ್ಞಾನವನ್ನು ಹೀರಿಕೊಳ್ಳಿ. ನಿಮ್ಮ ಸಂಗಾತಿಯತ್ತ ಕಾಳಜಿ ತೋರಿ, ಪ್ರೀತಿ ಬೀರಿ, ಸ್ನೇಹಪರತೆಯನ್ನು ಹರಡಿ. ನಿಮ್ಮ ನಿರೀಕ್ಷೆಗಳನ್ನು ಅಪ್ಪಣೆ ಎಂಬಂತೆ ಹೇಳಬೇಡಿ, ಬದಲಿಗೆ ವಿನಂತಿಯ ರೂಪದಲ್ಲಿ ನಿವೇದಿಸಿ. ಒತ್ತಡವನ್ನು ಹೇರಬೇಡಿ, ಸಂತಸವನ್ನು ಹೊರಸೂಸಿ. ಒಂದು ಮುಗುಳ್ನಗು ಹೃದಯವನ್ನು ಹಿಗ್ಗಿಸುತ್ತದೆ.

ನಿಮ್ಮದೊಂದು ಸ್ಪರ್ಶ ನಿಮ್ಮ ಸಂಗಾತಿಯಲ್ಲಿ ಹೊಸ ಭರವಸೆಯ ಬೆಳಕನ್ನೇ ಉಕ್ಕಿಸಬಹುದು. ನೀವಾಡುವ ಒಂದು ಮಾತು ಅವರಲ್ಲಿ ಸುರಕ್ಷತೆಯ ಭಾವವನ್ನು ಹುಟ್ಟಿಸಬಹುದು. ಒಂದು ನಗು ನಿಮ್ಮೊಳಗಿನ ಪ್ರೇಮದ ಬೆಳಕನ್ನು ಅವರಿಗೆ ದಾಟಿಸಬಹುದು. ಒಟ್ಟಿಗೇ ಸೇರಿ ನಿಮ್ಮ ಅಭಿಲಾಷೆಗಳನ್ನು ಹಂಚಿಕೊಳ್ಳಿ. ಸಾಧ್ಯವಾದಷ್ಟೂ ಪರಸ್ಪರ ವಿನಯವಂತರಾಗಿರಿ. ಬೆಂಬಲ ನೀಡುತ್ತಿರಿ. ನೀವೂ ಸಂತೋಷವಾಗಿರಿ, ಹಾಗೇ ನಿಮ್ಮ ಜೊತೆಗಿರುವವರಿಗೂ ಸಂತೋಷ–ಸ್ವಾತಂತ್ರ್ಯಗಳನ್ನು ನೀಡಿ.

ನೆನಪಿನಲ್ಲಿಡಿ: ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳುವುದು ಎಷ್ಟು ಮಹತ್ವವೋ, ‘ಥ್ಯಾಂಕ್ಯೂ’ ಎಂದು ಮನಃಪೂರ್ವಕವಾಗಿ ಹೇಳುವುದೂ ಅಷ್ಟೇ ಮಹತ್ವದ ಸಂಗತಿ. ಹೀಗೆ ಸಂಗಾತಿಗಳಿಬ್ಬರೂ ಸೇರಿ ನಾಜೂಕಾಗಿ ಮುಳ್ಳುಗಳನ್ನು ತೆರೆದರೆ, ದಾಂಪತ್ಯವೆಂಬುದು ಹೂವಿನ ಹಾಸಿಗೆಯಾಗುತ್ತದೆ.

ಮೇಲೆ ಹೇಳಿದ ತುಣುಕು ಕಥೆಗಳ ಮತ್ತೊಂದು ರೂಪ ಹೀಗಿದೆ: ಒಬ್ಬ ವ್ಯಕ್ತಿ ಒಮ್ಮಿಂದೊಮ್ಮೆಲೇ ಬುದ್ಧನ ಪ್ರಭಾವಲಯದೊಳಗೆ ಪ್ರವೇಶಿಸುತ್ತಾನೆ. ಅವನು ಬುದ್ಧನನ್ನು ಕೇಳಿದ: ‘ನೀನು ದೇವರೇ?’. ‘ಅಲ್ಲ’ ಬುದ್ಧ ಶಾಂತನಾಗಿ ಹೇಳಿದ. ‘ಹಾಗಾದರೆ ನೀನು ಮಾಂತ್ರಿಕನೇ?’ ಅವನು ಮತ್ತೆ ಕೇಳಿದ. ಬುದ್ಧ ಅಷ್ಟೇ ಸಾವಧಾನದಿಂದ ಮತ್ತೆ ಉತ್ತರಿಸಿದ: ‘ಅಲ್ಲ’. ‘ಹಾಗಾದರೆ ನೀನು ಯಾರು?’ ಮತ್ತೊಂದು ಪ್ರಶ್ನೆ ಸಿದ್ಧವಾಗಿತ್ತು. ಬುದ್ಧನ ಉತ್ತರವೂ ಸಿದ್ಧವಾಗಿತ್ತು. ‘ನಾನು ಜಾಗೃತಿ’. ಈಗ ಈ ಕಥೆಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನಿಮಗೇ ಬಿಡುವುದೇ ಹೆಚ್ಚು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT