ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂಟೂತ್‌ನಿಂದಲೂ ದಾಳಿ ಮಾಡಬಹುದು ಎಚ್ಚರ!

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕುತಂತ್ರಾಂಶಗಳು ನಿಮ್ಮ ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ಫೋನ್‌ಗೆ ಪ್ರವೇಶಿಸಿದರೆ, ಅಮೂಲ್ಯವಾದ ಮಾಹಿತಿಗಷ್ಟೇ ಅಲ್ಲ, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ಕಾರ್ಡ್‌ಗಳಿಗೂ ಕನ್ನ ಹಾಕುವ ಸಾಧ್ಯತೆ ಇದೆ.

ಇಷ್ಟು ದಿನ ಹ್ಯಾಕರ್‌ಗಳು ಅಂತರ್ಜಾಲದ ಸಹಾಯದಿಂದ ನಿಮ್ಮ ಪರಿಕರಗಳ ಮೇಲೆ ದಾಳಿ ಮಾಡುತ್ತಿದ್ದರು. ಇದಕ್ಕಾಗಿ, ನಿಮಗೆ ಬಹುಮಾನ ಬಂದಿದೆ, ಕಡಿಮೆ ಖರ್ಚಿನಲ್ಲಿ ವಿದೇಶ ಪರ್ಯಟನೆ ಮಾಡಬಹುದು ಎಂಬ ಆಕರ್ಷಕ ಸಂದೇಶಗಳು, ಮಿಂಚಂಚೆಗಳ ಮೂಲಕ ಗಮನ ಸೆಳೆಯುತ್ತಿದ್ದರು.

ಈ ಆಕರ್ಷಣೆಗಳಿಗೆ ಒಳಗಾಗಿ ಮೇಲ್‌ ತೆರೆಯುತ್ತಿದ್ದಂತೆ ಅಥವಾ ಸಂದೇಶ ಓದಲು ಲಿಂಕ್‌ ಕ್ಲಿಕ್‌ ಮಾಡುತ್ತಿದ್ದಂತೆ, ಕುತಂತ್ರಾಂಶಗಳು ಪರಿಕರಿಗಳನ್ನು ಪ್ರವೇಶಿಸುತ್ತಿದ್ದವು. ಆಗ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ ಹ್ಯಾಕರ್‌ಗಳ ಹಿಡಿತಕ್ಕೆ ಸಿಲುಕುತ್ತಿದ್ದವು.

ಹೀಗೆ ಕನ್ನ ಹಾಕುವ ಹಲವು ವಿಧಾನಗಳನ್ನು ಹ್ಯಾಕರ್‌ಗಳು ಅನುಸರಿಸುತ್ತಿದ್ದಾರೆ. ಇವನ್ನು ತಡೆಯುವಂತಹ ತಂತ್ರಾಂಶಗಳು ಲಭ್ಯವಿವೆಯಾದರೂ ಎಚ್ಚರಿಕೆ ಅಗತ್ಯ. ಏಕೆಂದರೆ ಈಗ ಅಂತರ್ಜಾಲದ ಅಗತ್ಯವಿಲ್ಲದೇ ಪರಿಕರಗಳಿಗೆ ಕನ್ನ ಹಾಕುವ ವಿಧಾನವನ್ನು ಹ್ಯಾಕರ್‌ಗಳು ಕಂಡುಕೊಂಡಿದ್ದಾರೆ.

ವಿಶ್ವದಾದ್ಯಂತ ಪ್ರಸ್ತುತ ಬಳಕೆಯಲ್ಲಿರುವ ಸುಮಾರು 800ಕೋಟಿ ಪರಿಕರಗಳಲ್ಲಿ ಬ್ಲೂಟೂತ್‌ ಸೌಲಭ್ಯವಿದೆ. ಹೀಗಾಗಿ ಇವುಗಳ ಮೂಲಕ ಹ್ಯಾಕರ್‌ಗಳು ಕುತಂತ್ರಾಂಶಗಳನ್ನು ಕಳುಹಿಸುವ ಸಾಧ್ಯತೆ ಇದೆ ಎಂದು ಸೈಬರ್‌ ಸುರಕ್ಷತಾ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಹ್ಯಾಕರ್‌ಗಳ ಈ ತಂತ್ರ ಭಾರತಕ್ಕೂ ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ. ಈಚೆಗೆ ನಡೆದ ವನ್ನಾಕ್ರೈ ಕುತಂತ್ರಾಂಶದ ದಾಳಿಗೆ ಸಿಲುಕಿ ಎಚ್ಚೆತ್ತುಕೊಂಡಿರುವ ಸಾರ್ವಜನಿಕರು ತಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್‌ಗಳಗೆ ಆ್ಯಂಟಿ ವೈರಸ್‌ ಸಾಫ್ಟ್‌ವೇರ್‌ಗಳ ಮೂಲಕ ರಕ್ಷಣೆ ಒದಿಗಿಸುತ್ತಿದ್ದಾರೆ. ಹೀಗಾಗಿ ಹ್ಯಾಕರ್‌ಗಳು ಬ್ಲೂಟೂತ್ ಮೇಲೆ ಕಣ್ಣು ಹಾಯಿಸಿದ್ದಾರೆ.

ಅಂತರ್ಜಾಲದ ಸಹಾಯವಿಲ್ಲದೇ, ಇದರ ಮೂಲಕ ಫೈಲ್‌ಗಳು, ಹಾಡುಗಳು, ಚಿತ್ರಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಇದಕ್ಕೆ ಬಳಕೆದಾರರ ಅನುಮತಿ ಬೇಕಾಗುತ್ತದೆ. ಆದರೆ ಅನುಮತಿ ಇಲ್ಲದೆ ಕುತಂತ್ರಾಂಶಗಳನ್ನು ಕಳುಹಿಸುವ ತಂತ್ರಾಂಶವನ್ನು ಹ್ಯಾಕರ್‌ಗಳು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೇ, ದಾಳಿ ಆಗಿರುವ ವಿಷಯ ತಕ್ಷಣಕ್ಕೆ ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದಾರೆ. ಹೀಗಾಗಿ ಬ್ಲೂಟೂತ್‌ನಿಂದ ಅಪಾಯವಿದೆ ಎನ್ನುತ್ತಿದ್ದಾರೆ ಸೈಬರ್ ತಜ್ಞರು.

ಇದಕ್ಕೆ ಪರಿಹಾರವೆಂದರೆ, ಹೊಸ ತಂತ್ರಜ್ಞಾನ ಇರುವ ಬ್ಲೂಟೂತ್‌ ಬಳಸಬೇಕು, ಸೆಕ್ಯೂರಿಟಿ ಪ್ಯಾಚ್‌ಗಳನ್ನು ಆಗಾಗ್ಗೆ ಅಳವಡಿಸಿಕೊಂಡು ನಿಮ್ಮ ಪರಿಕರಿಗಳಿಗೆ ರಕ್ಷಣೆ ಒದಗಿಸಬೇಕು. ಮುಖ್ಯವಾಗಿ ಜನಸಂದಣಿ ಇರುವಂತಹ ಪ್ರದೇಶಗಳಲ್ಲಿ ಬ್ಲೂಟೂತ್‌ಗಳನ್ನು ನಿಷ್ಕ್ರಿಯಗೊಳಿಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT