ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಹೇಳುವ ನಿಯೊ ಗೊಂಬೆ…

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ಎಂಬ ಜನಪ್ರಿಯ ಗೀತೆಯನ್ನು ಸ್ವಲ್ಪ ಬದಲಿಸಿ ಹೀಗೂ ಹೇಳಬಹುದು! ‘ಗೊಂಬೆ ಹೇಳುತೈತೆ, ಕಥೆಯ ಹೇಳುತ್ತೈತೆ, ಮಲಗುವ ಮುನ್ನ’ ! ಹೌದು, ಮಕ್ಕಳಿಗಾಗಿಯೇ ಕಥೆ ಹೇಳುವ ಗೊಂಬೆ ಮಾರುಕಟ್ಟೆಗೆ ಬರುತ್ತಿದೆ. ಅದೇ ನಿಯೊ ಗೊಂಬೆ.

80 ಮತ್ತು 90ರ ದಶಕದಲ್ಲಿ ಮಕ್ಕಳನ್ನು ಮಲಗಿಸುವ ಮುನ್ನ ತಂದೆ ತಾಯಿ ಅಥವಾ ಅಜ್ಜ ಅಜ್ಜಿಯರು ಕಥೆ ಹೇಳಿ ಮಕ್ಕಳನ್ನು ಮಲಗಿಸುತ್ತಿದ್ದರು. ಶ್ರೀರಾಮನ ಕಥೆ, ತೆನಾಲಿರಾಮ ಹಾಸ್ಯ ಕಥೆಗಳು ಹಾಗೂ ಮಕ್ಕಳಿಗೆ ಪ್ರಿಯವಾದ ಪ್ರಾಣಿಗಳ ಪಂಚತಂತ್ರ ಕಥೆಗಳನ್ನು ಹೇಳುತ್ತಿದ್ದರು. ಆದರೆ ಬದಲಾದ ಇಂದಿನ ಕಾಲಘಟ್ಟದಲ್ಲಿ ಕಥೆ ಹೇಳುವ ಪರಂಪರೆ ಮೂಲೆಗೆ ಸರಿದಿದೆ. ಇಂದಿನ ಒತ್ತಡದ ಬದುಕಿನಲ್ಲಿ ಮಕ್ಕಳು ಕಥೆ ಕೇಳುವುದನ್ನೇ ಮರೆತು ಬಿಟ್ಟಿದ್ದಾರೆ.

ಅದರ ಬದಲಿಗೆ ವಿಡಿಯೊ ಗೇಮ್ಸ್ ಗೀಳಿಗೆ ಅಂಟಿಕೊಂಡಿದ್ದಾರೆ. ಕಥೆ ಕೇಳುವುದನ್ನು ತಪ್ಪಿಸಿಕೊಳ್ಳುತ್ತಿರುವ ಪುಟಾಣಿಗಳು ಮತ್ತೆ 80 ದಶಕ ಮರುಕಳಿಸಿದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ ಎಂದು ಎಣಿಸಬಹುದು! ಇಂತಹ ಮಕ್ಕಳ ಊಹೆಯನ್ನು ನಿಜಗೊಳಿಸುವ ತಂತ್ರಜ್ಞಾನ ಸೃಷ್ಟಿಯಾಗಿದೆ. ಅದು ಗೊಂಬೆಯ ಮೂಲಕ!

ಸೋಷಿಯಲ್ ಟಾಯ್ಸ್ ಎಂಬ ಕಂಪೆನಿ ಕಥೆ ಹೇಳುವ ಗೊಂಬೆಯನ್ನು ತಯಾರಿಸಿದೆ. ಅಪ್ಪ ಅಮ್ಮ ಮತ್ತು ಅಜ್ಜ ಅಜ್ಜಿಯರು ಕಥೆ ಹೇಳುವಂತೆಯೇ ಈ ಗೊಂಬೆಯನ್ನು ವಿನ್ಯಾಸ ಮಾಡಲಾಗಿದೆ. ಕಿತ್ತಳೆ ಬಣ್ಣದ ಈ ಗೊಂಬೆ, ಆ್ಯಪ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ಮಕ್ಕಳು ಯಾವಾಗ ಬೇಕಾದರೂ ಕಥೆ ಕೇಳಿ ಆನಂದಿಸಬಹುದು. ಅದು ಕೂಡ ತಮ್ಮ ತಂದೆ ತಾಯಿ, ಅಜ್ಜ ಅಜ್ಜಿಯರ ದನಿಯಲ್ಲೇ ಕಥೆಗಳನ್ನು ಕೇಳಬಹುದು ಎಂದು ಸೋಷಿಯಲ್ ಟಾಯ್ಸ್ ಕಂಪೆನಿಯ ಸಹ ಸಂಸ್ಥಾಪಕ ಅಮಿತ್ ದೇಶಪಾಂಡೆ ಹೇಳುತ್ತಾರೆ.

1 ಜಿಬಿ ಸ್ಟೋರೆಜ್ ಸಾಮರ್ಥ್ಯವನ್ನು ಹೊಂದಿರುವ ಈ ಗೊಂಬೆಯ ಒಡಲಿನಲ್ಲಿ ನೂರು ಕಥೆಗಳನ್ನು ಮಾತ್ರ ಸಂಗ್ರಹಿಸಬಹುದು. ಮೊದಲು ಪೋಷಕರು ಕಥೆಗಳನ್ನು ತಮ್ಮ ಸ್ವಂತ ಧ್ವನಿಯಲ್ಲಿ ರೆಕಾರ್ಡ್ ಮಾಡಬೇಕು. ಅದನ್ನು ಮೇಲ್ ಮೂಲಕ ಗೊಂಬೆಗೆ ಕಳುಹಿಸಲಾಗುವುದು. ಇ-ಮೇಲ್ ಮೂಲಕ ಲಾಗಿನ್ ಆಗಿ ಮಕ್ಕಳಿಗೆ ಕಥೆಗಳನ್ನು ಕೇಳಿಸಬಹುದು.

ಮುಂಬರುವ ಜನವರಿ ತಿಂಗಳ ವೇಳೆಗೆ ಗೊಂಬೆಗಳನ್ನು ತಯಾರಿಸಿ, ಮಾರಾಟ ಮಾಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ದೇಶಪಾಂಡೆ ಹೇಳಿದ್ದಾರೆ. ಈಗಾಗಲೇ ಕ್ರೌಡ್ ಫಂಡಿಂಗ್ ಮೂಲಕ ಬಂಡವಾಳವನ್ನು ಕ್ರೋಡೀಕರಿಸುವ ಕೆಲಸ ನಡೆಯುತ್ತಿದೆ. ಕ್ರೌಡ್ ಫಂಡಿಂಗ್‌ನಲ್ಲಿ ಹಣ ಹೂಡುವವರಿಗೆ ನಿಯೊ ಗೊಂಬೆಯನ್ನು ₹ 2800 ಗಳಿಗೆ ಮಾರಾಟ ಮಾಡಲಾಗುವುದು. ಮಾರಕಟ್ಟೆಯಲ್ಲಿ ಈ ಗೊಂಬೆಯ ಬೆಲೆಯನ್ನು ₹ 3500 ಗಳಿಗೆ ನಿಗದಿ ಪಡಿಸಲಾಗಿದೆ. ಮೊದಲ ವರ್ಷದಲ್ಲಿ 5 ರಿಂದ 7 ಸಾವಿರ ಗೊಂಬೆಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ ಎಂದು ಅಮಿತ್ ದೇಶ್‌ಪಾಂಡೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT