ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಡಿಗೆಯಿಂದ ಮನಸ್ಸಿನ ರೀಚಾರ್ಜ್‌!’

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಒತ್ತಡಗಳು ಯಾರೊಬ್ಬರ ಸ್ವತ್ತೂ ಅಲ್ಲ. ಇವು ಯಾರನ್ನೂ ಬಿಡುವುದಿಲ್ಲ, ಬಿಟ್ಟಿಲ್ಲ. ಅವರವರಿಗೆ ಅವರವರವೇ ರೀತಿಯ ಒತ್ತಡಗಳು ಇದ್ದೇ ಇರುತ್ತವೆ. ಹಾಗೆಯೇ ಪ್ರತಿಯೊಬ್ಬರೂ ಅವರು ಎದುರಿಸುವ ಒತ್ತಡಗಳನ್ನು ಪರಿಹರಿಸುವ ವಿಧಾನಗಳನ್ನು ಕಾಲಕ್ರಮೇಣ ಕಂಡುಕೊಳ್ಳುತ್ತಾರೆ. ಪರಿಹಾರ ಸಿಗದೇ ಇರುವ ವ್ಯಕ್ತಿ ಮಾನಸಿಕ ಖಿನ್ನತೆಯಿಂದ ಬಳಲಾರಂಭಿಸುತ್ತಾನೆ.

ನಾನು 1983ರಲ್ಲಿ ನಗರಪಾಲಿಕೆ ಚುನಾವಣೆಯಲ್ಲಿ ಜಯ ಗಳಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದೆ. ಅದಕ್ಕೂ ಮುನ್ನ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದೆ. 1975–1977ರ ನಡುವಿನ ತುರ್ತುಪರಿಸ್ಥಿತಿಯ 15 ತಿಂಗಳುಗಳ ಸೆರೆಮನೆಯ ವಾಸ ವಿಭಿನ್ನ ರೀತಿಯ ಒತ್ತಡವನ್ನು ತಂದಿತ್ತು. ಆದರೆ ಅದನ್ನು ಮಾಯವಾಗಿಸಿದ್ದು ಅಲ್ಲಿನ ಹಿರಿಯ, ಸಜ್ಜನ ವ್ಯಕ್ತಿಗಳ ಸಾಮೀಪ್ಯ ಮತ್ತು ನಾನು ತೊಡಗಿಸಿಕೊಂಡ ಯೋಗ, ಅಧ್ಯಯನ, ಚರ್ಚೆ, ಆಟ... ಇತ್ಯಾದಿಗಳು.

1975 ನವೆಂಬರ್ 10ರಂದು ಬೆಂಗಳೂರಿನ ಕೇಂದ್ರ ಕಾರಾಗೃಹ ಪ್ರವೇಶಿಸಿದ ನಾನು 1977 ಜನವರಿ 22ರಂದು ಹೊರಬಂದಾಗ ಸಂಪೂರ್ಣವಾಗಿ ಪರಿವರ್ತನೆಗೊಂಡಿದ್ದೆ. ಆ 15 ತಿಂಗಳುಗಳ ಸೆರೆಮನೆವಾಸ ನನ್ನ ಪಾಲಿಗೆ ನಿಜವಾದ ವಿಶ್ವವಿದ್ಯಾಲಯದ ಶಿಕ್ಷಣ. 1983ರ ನಂತರ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ ನನಗೆ ಕ್ಷೇತ್ರದ ಸಮಸ್ಯೆಗಳ ಒತ್ತಡ ಎದುರಾಗತೊಡಗಿದವು.

ಜನಪ್ರತಿನಿಧಿಯಾದ ಹೊಸತು. ಆದರೆ ನನ್ನ ಆಗಿನ ಕಾರ್ಯಕರ್ತ ಸ್ನೇಹಿತರು ಸಂಪೂರ್ಣವಾಗಿ ಒತ್ತಾಸೆಯಾಗಿ ನಿಂತು ಸಮಸ್ಯೆಗಳನ್ನು ಪರಿಹರಿಸಲು ಭಾಗಿಯಾದರು. ಹಾಂ! ಮರೆತಿದ್ದೆ. ನಾನು ಚುನಾಯಿತನಾಗುವ ಮುನ್ನ ಸಿನಿಮಾಪ್ರೇಮಿ. ಎಷ್ಟರ ಮಟ್ಟಿಗೆ ಎಂದರೆ ವರ್ಷಕ್ಕೆ 70-80 ಸಿನಿಮಾಗಳನ್ನು ನೋಡುತ್ತಿದ್ದೆ. ಆದರೆ ಚುನಾಯಿತನಾದ ಮೇಲೆ ಸಿನಿಮಾ ನೋಡುವ ಹವ್ಯಾಸಕ್ಕೆ ಸಂಪೂರ್ಣ ವಿದಾಯ ಹೇಳುವ ತೀರ್ಮಾನವನ್ನು ಪ್ರಜ್ಞಾಪೂರ್ವಕವಾಗಿ ಕೈಗೊಂಡೆ. ಕ್ಷೇತ್ರದ ಓಡಾಟ, ಜನಸಂಪರ್ಕ, ಸಮಸ್ಯೆಗಳನ್ನು ಅರಿಯುವುದು, ಪರಿಹಾರ ಹುಡುಕುವುದು, ಅಭಿವೃದ್ಧಿ ಕಾರ್ಯಗಳಲ್ಲೇ ತೊಡಗಿಸಿಕೊಂಡೆ.

1994ರಲ್ಲಿ ವಿಧಾನಸಭೆಗೆ ರಾಜಾಜಿನಗರದಿಂದ ಸ್ಪರ್ಧಿಸಿ ವಿಜಯಿಯಾದೆ. ಅನಂತರ ಎದುರಿಸಿದ ಮಾನಸಿಕ ಒತ್ತಡ ಬೇರೆ ಸ್ವರೂಪದ್ದೇ ಆಗಿತ್ತು. ಹಿಂದೆ ಒಂದು ವಿಭಾಗ(ವಾರ್ಡ್)ದ ಪ್ರತಿನಿಧಿಯಾಗಿದ್ದವನು ಒಂಬತ್ತು ವಿಭಾಗಗಳ (ವಾರ್ಡ್)ಗಳನ್ನು ಪ್ರತಿನಿಧಿಸಲಾರಂಭಿಸಿದೆ. ನನ್ನ ಕ್ಷೇತ್ರ ಬಹಳ ದೊಡ್ಡದಿತ್ತು. ಸಮಸ್ಯೆಗಳು ಅಗಾಧವಾಗಿದ್ದವು. ಆಗ ನಾನು ಹೋರಾಟಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆರಂಭಿಸಿದೆ. ಅದು ಯಶಸ್ವಿಯಾಗಲಾರಂಭಿಸಿತು.

ಹೋರಾಟಗಳ ಮೂಲಕವೇ ಮಾನಸಿಕ ಒತ್ತಡವನ್ನು ಪರಿಹರಿಸಿಕೊಳ್ಳಲಾರಂಭಿಸಿದೆ. ಉದಾಹರಣೆಗೆ, ತುಮಕೂರು ರಸ್ತೆಯ ಎಂಇಐ ಕಾರ್ಖಾನೆಯ ಬಳಿ ಗೌತಮನಗರ ಎಂಬ ಕೊಳಚೆ ಪ್ರದೇಶವಿತ್ತು. ಅಲ್ಲಿ ಶೌಚಾಲಯಗಳೇ ಇರಲಿಲ್ಲ. ಅಲ್ಲಿನ ಹೆಣ್ಣುಮಕ್ಕಳು ನನ್ನ ಬಳಿ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ನನ್ನ ಮನಸ್ಸಿನಲ್ಲಿ ಆದ ತುಮುಲ ವರ್ಣಿಸಲು ಅಸಾಧ್ಯ. ಅವರು ಪ್ರತಿದಿನ ಬಹಿರ್ದೆಶೆಗೆ ಹೋಗಲು ಕತ್ತಲಾಗುವ ವರೆಗೆ ಕಾಯಬೇಕಿತ್ತು.

ಆಗ ನಾನು ಅವರಿಗೆ ಶೌಚಾಲಯ ಕಲ್ಪಿಸಿಯೇ ಸಿದ್ಧ ಎಂದು ತೀರ್ಮಾನಿಸಿದೆ. ಅದೇ ಕೊಳಚೆ ಪ್ರದೇಶದಲ್ಲಿ ಹಗಲು ರಾತ್ರಿ ಉಪವಾಸ ಸತ್ಯಾಗ್ರಹ ಮಾಡಿ ಅಂದಿನ ಬಿಡಿಎ ಕಮಿಷನರ್ ಹಾಗೂ ನಗರಾಭಿವೃದ್ಧಿ ಸಚಿವರು ಇಬ್ಬರನ್ನೂ ಆ ಸ್ಥಳಕ್ಕೆ ಬರುವಂತೆ ಮಾಡಿ ಅವರೊಡನೆ ಚರ್ಚಿಸಿ, ಅವರ ಮನ ಒಲಿಸಿ ಅವರಿಂದಲೇ ಶೌಚಾಲಯಗಳಿಗೆ ಗುದ್ದಲಿ ಪೂಜೆ ಮಾಡಿಸಿ ಸತ್ಯಾಗ್ರಹ ಕೊನೆಗೊಳಿಸಿದೆ. ಆ ಕ್ಷಣ ನನ್ನ ಮನಸಿಗೆ ಆದ ನಿರಾಳತೆ, ಸಮಾಧಾನ ಹೇಳತೀರದು.

2013ರಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಬಂದು ಸರ್ಕಾರದಲ್ಲಿ ನನಗೆ ಸಚಿವನಾಗುವ ಅವಕಾಶ ದೊರೆಯಿತು. ನನಗೆ ಕಾನೂನು ಹಾಗೂ ಸಂಸದೀಯ ವ್ವವಹಾರಗಳು ಹಾಗೂ (ಬೆಂಗಳೂರು ಹೊರತುಪಡಿಸಿ) ನಗರಾಭಿವೃದ್ಧಿ ಖಾತೆಗಳನ್ನೂ ನೀಡಲಾಯಿತು. ಕಾನೂನು ಸಚಿವನ ಜವಾಬ್ದಾರಿ ಎಂದು ಗೊತ್ತಾದ ತಕ್ಷಣ ಮನಸ್ಸಿನಲ್ಲಿ ತುಂಬಾ ಆತಂಕ ಪ್ರಾರಂಭವಾಯಿತು. ಏಕೆಂದರೆ ಸಂಸದೀಯ ಸಚಿವನಾಗಿ ಶಾಸನಸಭೆಗಳ ನಿರ್ವಹಣೆ ನನ್ನ ಜವಾಬ್ದಾರಿ.

ಎದುರಿಗೆ ಪ್ರತಿಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ... ಮುಂತಾದ ಘಟಾನುಘಟಿಗಳು. ಇವರನ್ನು ಹೇಗೆ ಎದುರಿಸುವುದು ಎಂಬ ಆತಂಕ. ಆದರೆ ಎಲ್ಲರೊಡನೆ ಯಾವುದೇ ಸಂಕೋಚವಿಲ್ಲದೆ ಮುಕ್ತವಾಗಿ ಮಾತನಾಡುವ ನನ್ನ ಸ್ವಭಾವವೇ ಆ ಒತ್ತಡವನ್ನು ನಿವಾರಿಸಿಬಿಟ್ಟಿತು. ಆದರೂ ಆ ಐದು ವರ್ಷಗಳು ಕರ್ನಾಟಕ ಶಾಸನಸಭೆ ಕಂಡ ಅತ್ಯಂತ ಸಂಘರ್ಷದ ಕಾಲ. ಅನೇಕ ದಿನಗಳು ನಾನು ಮೌನವಾಗಿ ದುಃಖಿಸಿದ್ದೆ. ನನ್ನ ಪುಣ್ಯಕ್ಕೆ ನನ್ನ ಒಳ ತುಮುಲಗಳನ್ನು ಹಂಚಿಕೊಂಡು ಧೈರ್ಯ ತುಂಬಿ ತನಗೆ ತಿಳಿದ ಪರಿಹಾರ ಸೂಚಿಸಲು ನನ್ನ ಪತ್ನಿ ನನಗೆ ಯಾವಾಗಲೂ ಲಭ್ಯವಿರುತ್ತಿದ್ದರು.

ಅದೇ ರೀತಿ ನನ್ನ ಸಂಘಟನೆಯ ಕೆಲವು ಹಿರಿಯರ ಬಳಿ ಹೋಗಿ ಎದುರಾಗಿರುವ ಮಾನಸಿಕ ಗೊಂದಲಗಳನ್ನು ತಿಳಿಸಿ ಪರಿಹಾರ ಪಡೆದುಕೊಳ್ಳುತ್ತಿದ್ದೆ. ಸಹಜವಾಗಿ ನಾನು ಮಾಡುತ್ತಿದ್ದ ಪ್ರವಾಸಗಳು, ಜನರ ಭೇಟಿ, ಅಭಿವೃದ್ಧಿ ಕಾರ್ಯಗಳ ಪರಿಶೀಲನೆ, ಅಧಿಕಾರಿಗಳ ಜೊತೆ ಸಮಾಲೋಚನೆ, ಕರ್ನಾಟಕದ ವಿವಿಧ ಭಾಗಗಳಲ್ಲಿರುವ ವಕೀಲರೊಡನೆ ಸಂವಾದಗಳು... ನನ್ನ ಒತ್ತಡವನ್ನು ದೂರ ಮಾಡಲು ಸಹಕರಿಸುತ್ತಿದ್ದವು. ಸಮಸ್ಯೆಗಳು ತುಂಬಿರುವಾಗ ಬಹಳಷ್ಟು ರಾತ್ರಿಗಳಲ್ಲಿ ದೀರ್ಘ ನಡಿಗೆಗೆ ಶರಣಾಗುತ್ತಿದ್ದೆ. ಆ ಸಮಯದಲ್ಲಿಯೇ ಒಂಟಿಯಾಗಿ ನಡೆಯುವ ಸುದೀರ್ಘ ನಡಿಗೆ ಓರ್ವ ವ್ಯಕ್ತಿ ತನ್ನೊಡನೆ ನಡೆಸಬಹುದಾದ ಸಂವಾದ ಎಂಬುದನ್ನು ಅರ್ಥ ಮಾಡಿಸಿದ್ದು.

2013ರಿಂದ ಮತ್ತೊಮ್ಮೆ ಶಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಒಂದಂತೂ ಸ್ಪಷ್ಟ. ಕುಟುಂಬದ ಯಾವುದೇ ಸಮಸ್ಯೆಗಳು ನನ್ನ ಬಳಿ ಬಾರದಂತೆ ನನ್ನಮ್ಮ, ನನ್ನ ಪತ್ನಿ ಹಾಗೂ ನನ್ನ ಮಗಳು ಎಚ್ಚರ ವಹಿಸಿ ಅವರ ಹಂತದಲ್ಲೇ ಪರಿಹಾರ ಮಾಡಿಕೊಳ್ಳುತ್ತಿರುವುದು ನನ್ನ ಪಾಲಿನ ಅತಿ ದೊಡ್ಡ ಸುಕೃತ. ಜೊತೆಗೆ ಸಂಘಟನೆಯ ಜೊತೆಗಾರರರು ಸದಾ ಜೊತೆಗಿರುತ್ತಾರೆ.

ಇತ್ತೀಚೆಗೆ ಸ್ನೇಹಿತರೊಂದಿಗೆ ದೀರ್ಘ ನಡಿಗೆ, ಚಾರಣ ಮಾಡುವ ಮೂಲಕವೂ ಒತ್ತಡವನ್ನು ಪರಿಹರಿಸಿಕೊಂಡು ಮನಸ್ಸನ್ನು ಮತ್ತೆ ರೀಚಾರ್ಜ್ ಮಾಡಿಕೊಳ್ಳುವ ಮಾರ್ಗ ಕಂಡುಕೊಂಡಿದ್ದೇನೆ. ಬೆಂಗಳೂರಿನಿಂದ ತಿರುಪತಿ, ಬೆಂಗಳೂರಿನಿಂದ ಧರ್ಮಸ್ಥಳ, ಬೆಂಗಳೂರಿನಿಂದ ಶಬರಿಮಲೆಗೆ ಪಾದಯಾತ್ರೆ ನಡೆಸಿದ್ದು ಇದೇ ನಿಟ್ಟಿನಲ್ಲಿ. ಅಮರನಾಥ ಯಾತ್ರೆ, ಚಾರ್‌ಧಾಮ್ ಯಾತ್ರೆ, ಕೈಲಾಸ-ಮಾನಸ ಸರೋವರ ಯಾತ್ರೆ... ಇವುಗಳು ಮನಸ್ಸಿಗೆ ಶಕ್ತಿ ತುಂಬುವ ಸಾಧನಗಳಾದವು.

ಇಷ್ಟೆಲ್ಲಾ ಆದರೂ ಬೇರೆ ಬೇರೆ ರೀತಿಯ ಸಮಸ್ಯೆಗಳು ಒತ್ತಡಗಳಾಗಿ ಮಾರ್ಪಾಡಾಗಿವೆ. ನಾನು ಸಂಪೂರ್ಣವಾಗಿ ನಂಬಿದವರೇ ನನಗೆ ಮೋಸ ಮಾಡಿದಾಗ, ನನಗೆ ಗೊತ್ತಿಲ್ಲದೆ ನನ್ನಿಂದ ಪ್ರಮಾದವಾಗಿ ಸ್ನೇಹಿತರು ದೂರವಾದಾಗ, ರಾಜಕೀಯದ ಕಾರಣ ಒಬ್ಬರ ಮೇಲೊಬ್ಬರ ಮೇಲಾಟದ ಫಲಾನುಭವಿ ನಾನಾದಾಗ ಎದುರಿಸಿದ ಮಾನಸಿಕ ಸಂಕಷ್ಟಗಳು ಹಲವಾರು ಬಾರಿ.

ಆದರೆ Destiny ಎಂಬುದು ನನ್ನ ಬಾಳಿನಲ್ಲಿ ನಿಜವಾಗಿಯೂ ಅರ್ಥಪೂರ್ಣ. ಆ ದೈವಸಂಕಲ್ಪವನ್ನು ನಾನು ನಂಬಿದ್ದೇನೆ. ನನಗೆ ಆಪ್ತನಾದ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಹೋಗಿ ಒಂದಷ್ಟು ಕಾಲ ಕಳೆದಾಗ ಮನಸ್ಸಿಗೆ ಸಮಾಧಾನ ದೊರಕುತ್ತದೆ. ಇದರ ಜೊತೆಗೆ ಯೋಗ, ಓದು, ಬರವಣಿಗೆ, ಯೂಟ್ಯೂಬ್‌ನ ಚೈತನ್ಯ ಕೊಡುವಂತಹ ಭಾಷಣಗಳು, ದೀರ್ಘ ಪ್ರಯಾಣದಲ್ಲಿ ಒಳ್ಳೊಳ್ಳೆ ಹಾಡುಗಳು, ಆಸಕ್ತರೊಂದಿಗೆ ಬಿಢೆ ಇಲ್ಲದ ಚರ್ಚೆಗಳು ಸಹ ನನ್ನ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸುವ ಪರಿಹಾರ ಸೂತ್ರಗಳು.

ನಾನೊಬ್ಬ ಸಾಮಾನ್ಯ ಮನುಷ್ಯ. ಎಲ್ಲರಂತೆ ನಾನೂ ಒತ್ತಡಗಳನ್ನು ಎದುರಿಸಲೇಬೇಕು. ಆದರೆ ಬಹಳಷ್ಟು ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಎದುರಿಸುತ್ತಿರುವ ಒತ್ತಡಗಳು, ವಿರೋಧಿಗಳ ಟೀಕಾಪ್ರಹಾರ... ಇವುಗಳೆಲ್ಲಾ ಒಮ್ಮೆ ಮನಸ್ಸಿನಲ್ಲಿ ಹಾದು ಹೋಗುತ್ತವೆ. ಆದರೆ ಅವುಗಳಿಂದ ಯಾವುದೇ ರೀತಿಯಲ್ಲೂ ವಿಚಲಿತರಾಗೇ ಇಲ್ಲವೇನೋ ಎಂಬ ಅವರ ಕಾರ್ಯವೈಖರಿಯು ಸಾರ್ವಜನಿಕ ಕ್ಷೇತ್ರದಲ್ಲಿರುವ ನಮಗೆಲ್ಲಾ ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT