ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಗುಂಡಿನ ದಾಳಿ ಬಂದೂಕು ನಿಯಂತ್ರಣಕ್ಕೆ ಸಕಾಲ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಬಂದೂಕಿನ ಲಾಬಿ ಬಹಳ ಪ್ರಬಲವಾಗಿದೆ. ರಾಜಕಾರಣಿಗಳ ಮೇಲೆ ಮತ್ತು ಆಡಳಿತದ ಮೇಲೆ ಭಾರೀ ಪ್ರಭಾವ ಹೊಂದಿದೆ. ಈ ವಿಷಯದಲ್ಲಿ ಆ ಪಕ್ಷ– ಈ ಪಕ್ಷ ಎಂಬ ಭೇದವೇ ಇಲ್ಲ. ಬಂದೂಕಿನ ಮಾರಾಟ– ಖರೀದಿಯ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರುವ ಪ್ರಯತ್ನಗಳು ಫಲಿಸದೇ ಇರುವುದಕ್ಕೆ ಇದೇ ಮುಖ್ಯ ಕಾರಣ. ಬಂದೂಕನ್ನು ಇಟ್ಟುಕೊಳ್ಳುವ ಹಕ್ಕನ್ನು ಅಮೆರಿಕದ ಸಂವಿಧಾನವೇ ನಾಗರಿಕರಿಗೆ ಕಲ್ಪಿಸಿಕೊಟ್ಟಿದೆ. ಹೀಗಾಗಿ ಅಲ್ಲಿನ ಬಹುತೇಕ ರಾಜ್ಯಗಳಲ್ಲಿ ಬಂದೂಕು ಕೊಳ್ಳುವುದು ಬಹಳ ಸುಲಭ. ಇದಕ್ಕೆ, ಒಂದೋ ಯಾವುದೇ ಪರವಾನಗಿ ಬೇಕಿಲ್ಲ ಅಥವಾ ಪರವಾನಗಿ ಪಡೆಯಲು ಅಂತಹ ಕಠಿಣವಾದ ನಿರ್ಬಂಧಗಳೇನಿಲ್ಲ. ರಸ್ತೆ ಬದಿ ತರಕಾರಿ ಕೊಳ್ಳುವಷ್ಟೇ ಸುಲಭವಾಗಿ ಬಂದೂಕು, ಪಿಸ್ತೂಲುಗಳು ಸಿಗುತ್ತವೆ. ಆದರೆ ಅದರಿಂದ ಪದೇಪದೇ ಅನಾಹುತಗಳು ಆಗುತ್ತಲೇ ಇವೆ. ಮೊನ್ನೆ ಲಾಸ್‌ ವೇಗಸ್‌ನಲ್ಲಿ ನಡೆದ ಗುಂಡಿನ ದಾಳಿ ಕೂಡ ಇಂತಹ ಅನಾಹುತದ ಮುಂದುವರಿದ ಭಾಗ. ಅಲ್ಲಿ ವಾರಾಂತ್ಯದ ದಿನ ಸಾರ್ವಜನಿಕ ಸಂಗೀತ ಗೋಷ್ಠಿಯಲ್ಲಿ ಖುಷಿಯಿಂದ ಸಂಗೀತ ಕೇಳುತ್ತಿದ್ದ ಸಹಸ್ರಾರು ಜನರ ಗುಂಪಿನ ಮೇಲೆ ಮತಿಹೀನನೊಬ್ಬ ಮನಬಂದಂತೆ ಗುಂಡು ಹಾರಿಸಿದಾಗ 58 ಜನ ಸಾವಿಗೀಡಾಗಿದ್ದಾರೆ.

500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ದಾಳಿಯನ್ನು ಆಯೋಜಿಸಿದ್ದು ತಾನೇ ಎಂದು ವಿಶ್ವದ ಅತ್ಯಂತ ಭಯಾನಕ ಉಗ್ರಗಾಮಿ ಸಂಘಟನೆ ಐ.ಎಸ್‌. ಹೇಳಿಕೊಂಡಿದೆ. ದಾಳಿಕೋರ, ಕೆಲವೇ ತಿಂಗಳ ಹಿಂದೆ ಇಸ್ಲಾಂಗೆ ಮತಾಂತರ ಹೊಂದಿದ್ದ ಎಂದೂ ಅದು ತಿಳಿಸಿದೆ. ಆದರೆ ‘ಐ.ಎಸ್‌. ಹೇಳಿಕೆ ಆಧಾರರಹಿತ; ಹಂತಕ ಮಾನಸಿಕ ಸಮಸ್ಯೆ ಹೊಂದಿದ್ದ’ ಎಂಬುದು ಪೊಲೀಸ್‌ ಅಧಿಕಾರಿಗಳ ವಾದ. ಇನ್ನಷ್ಟು ತನಿಖೆಯಿಂದ ಮಾತ್ರ ನಿಜಾಂಶ ಹೊರಬರಬಹುದು. ಆಗ ಮಾತ್ರ, ಇದೇನು ಭಯೋತ್ಪಾದನಾ ಕೃತ್ಯವೇ ಅಥವಾ ಮಾನಸಿಕ ಸಮಸ್ಯೆಯುಳ್ಳ ವ್ಯಕ್ತಿಯ ಹುಚ್ಚು ವರ್ತನೆಯೇ ಎಂಬುದು ಗೊತ್ತಾಗಲಿದೆ.

ಇಂತಹ ಪ್ರತಿಯೊಂದು ದುರ್ಘಟನೆಯ ನಂತರವೂ ಬಂದೂಕು ನಿಯಂತ್ರಣ, ಅದನ್ನು ಹೊಂದುವ ಸಂವಿಧಾನಬದ್ಧ ಹಕ್ಕಿನ ಕುರಿತ ಚರ್ಚೆಗಳಿಗೆ ಜೀವ ಬರುತ್ತದೆ. ಅಷ್ಟೇ ಬೇಗ ಮರೆತು ಹೋಗುತ್ತದೆ. ಆದರೆ ಈ ಸಲವಾದರೂ ಹಾಗೆ ಆಗಬಾರದು. ಸುಲಭವಾಗಿ ಬಂದೂಕು ಸಿಗುವುದನ್ನು ತಡೆಯಬೇಕು ಎಂದು ಹಿಂದೆ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಪ್ರತಿಪಾದಿಸಿದ್ದರು. ಆದರೆ ಈ ಅಭಿಪ್ರಾಯವೇ ‘ಅಪ್ರಬುದ್ಧ, ರಾಜಕೀಯ ಲಾಭ ಪಡೆಯುವ ಕ್ಷುಲ್ಲಕ ಪ್ರಯತ್ನ’ ಎಂಬ ಟೀಕೆಗಳನ್ನು ಅವರು ಕೇಳಬೇಕಾಗಿ ಬಂದಿತ್ತು. 2012ರ ಡಿಸೆಂಬರ್‌ನಲ್ಲಿ ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿ ಇರುವ ಸ್ಯಾಂಡಿ ಹುಕ್‌ ಪ್ರಾಥಮಿಕ ಶಾಲೆಗೆ ನುಗ್ಗಿದ ವ್ಯಕ್ತಿಯೊಬ್ಬ ಗುಂಡು ಹಾರಿಸಿ 20 ಮಕ್ಕಳನ್ನು, 6 ವಯಸ್ಕರನ್ನು ಕೊಂದು ಕೊನೆಗೆ ತಾನೂ ಅದೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸತ್ತಿದ್ದ. ಅದರ ನಂತರ ಸಂಗ್ರಹಿಸುತ್ತ ಬಂದ ಅಂಕಿಸಂಖ್ಯೆಗಳನ್ನು ಗಮನಿಸಿದರೆ ಅಲ್ಲಿ ಜನರ ಗುಂಪಿನ ಮೇಲೆ ಗುಂಡು ಹಾರಿಸುವ ಪ್ರಕರಣಗಳು ಸರಾಸರಿ ದಿನಕ್ಕೆ ಒಂದರಂತೆ ನಡೆಯುತ್ತಿವೆ.

1518 ಕಡೆ ಜನಸಮೂಹದ ಮೇಲೆ ಗುಂಡಿನ ದಾಳಿಗಳು ನಡೆದಿವೆ. 1715 ಜನ ಸತ್ತಿದ್ದಾರೆ. ಸಣ್ಣಪುಟ್ಟ ಪ್ರಕರಣಗಳಲ್ಲಿನ ಸಾವು– ನೋವಿಗಂತೂ ಲೆಕ್ಕವೇ ಇಲ್ಲ. ವಿಶ್ವದ ಜನಸಂಖ್ಯೆಯಲ್ಲಿ ಅಮೆರಿಕನ್ನರ ಪ್ರಮಾಣ ಶೇ 4.4ರಷ್ಟು. ಆದರೆ ವಿಶ್ವದಲ್ಲಿ ಬಂದೂಕು ಇಟ್ಟುಕೊಂಡಿರುವ ವ್ಯಕ್ತಿಗಳಲ್ಲಿ ಅರ್ಧದಷ್ಟು ಮಂದಿ ಅಮೆರಿಕನ್ನರು. ಅಲ್ಲಿ ಶೇ 42ರಷ್ಟು ಜನರ ಬಳಿ ಬಂದೂಕುಗಳಿವೆ. ಬಂದೂಕಿನ ಸಂಖ್ಯೆ ಹೆಚ್ಚು ಇರುವ ರಾಜ್ಯಗಳಲ್ಲಿ ಗುಂಡೇಟಿನಲ್ಲಿ ಸತ್ತವರ ಸಂಖ್ಯೆಯೂ ಅಧಿಕ. ಇಷ್ಟಾದರೂ, ಆತ್ಮರಕ್ಷಣೆಗಾಗಿ ಬಂದೂಕು ಹೊಂದಲು ಇರುವ ಸಂವಿಧಾನಬದ್ಧ ಹಕ್ಕು ಮೊಟಕು ಮಾಡಬಾರದು ಎಂದು ವಾದಿಸುವವರ ಬಲ ದಿನೇದಿನೇ ಹೆಚ್ಚುತ್ತಿದೆ ಎನ್ನುವುದೇ ಆಶ್ಚರ್ಯದ ಸಂಗತಿ.

ಈ ವಿಷಯದಲ್ಲಿ, ಬಂದೂಕು ಸಂಸ್ಕೃತಿಯನ್ನು ಯಶಸ್ವಿಯಾಗಿ ಬಗ್ಗುಬಡಿದ ಆಸ್ಟ್ರೇಲಿಯಾದ ನಿದರ್ಶನ ವಿಶ್ವದ ಕಣ್ಣಮುಂದೆ ಇದೆ. ಅಲ್ಲಿಯೂ ಹಿಂದೆ ಬಂದೂಕುಧಾರಿಗಳ ದಾಳಿ ಮಿತಿಮೀರಿತ್ತು. ಹೀಗಾಗಿ ಅದು 1996ರಲ್ಲಿ ಬಂದೂಕು ಹತೋಟಿ ಕಾಯ್ದೆ ಜಾರಿಗೆ ತಂದಿತು. 6.50 ಲಕ್ಷ ಬಂದೂಕುಗಳನ್ನು ಜಪ್ತಿ ಮಾಡಿತು. ಸರ್ಕಾರಿ ಮಾಹಿತಿಯ ಪ್ರಕಾರ, ಈ ಕಾಯ್ದೆ ಬಂದ ನಂತರ ಅಲ್ಲಿ ಜನಸಮೂಹದ ಮೇಲೆ ಒಂದೇ ಒಂದು ಗುಂಡಿನ ದಾಳಿ ನಡೆದಿಲ್ಲ. ವರ್ಷಕ್ಕೆ 400 ಸಾವುಗಳನ್ನು ತಡೆಯಲಾಗಿದೆ. ಬಂದೂಕಿನಿಂದ ತಾವೇ ಗುಂಡು ಹಾರಿಸಿಕೊಂಡು ಸಾಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಆಸ್ಟ್ರೇಲಿಯಾಗೆ ಸಾಧ್ಯವಾದದ್ದು ಅಮೆರಿಕಕ್ಕೆ ಏಕೆ ಆಗುವುದಿಲ್ಲ? ಅದೇ ಯಕ್ಷ ಪ್ರಶ್ನೆ. ಈಗಲೂ ಅಮೆರಿಕ ಪಾಠ ಕಲಿಯದಿದ್ದರೆ ಅದಕ್ಕೇ ತೊಂದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT