ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಸಿಪಿಎಂ ಕಾರ್ಯಕರ್ತರ ಬಂಧನ

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ನಡೆಯುತ್ತಿರುವ ಕೇರಳ ರಕ್ಷಾ ಯಾತ್ರೆಯ ಪಯ್ಯನ್ನೂರಿನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮರಳುತ್ತಿದ್ದ ಬಿಜೆಪಿ ಕಾರ್ಯಕರ್ತರು ಪ್ರಯಾಣಿಸುತ್ತಿದ್ದ ಬಸ್‌ಗಳ ಮೇಲೆ ವ್ಯಾಪಕ ಕಲ್ಲು ತೂರಾಟ ನಡೆದಿದೆ.

ಮಂಗಳವಾರ ರಾತ್ರಿ ಚೆರ್ವತ್ತೂರು, ಪಡನ್ನಕ್ಕಾಡು, ಹಾಗೂ ಚಂದ್ರಗಿರಿ ಸೇತುವೆ ಬಳಿಯ ಚಳಿಯಂಗೋಡುಗಳಲ್ಲಿ ಬಿಜೆಪಿ ಕಲ್ಲು ತೂರಾಟ ನಡೆದಿದ್ದು, ಪ್ರಕರಣ ಸಂಬಂಧ ಆರು ಸಿಪಿಎಂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ನೀಲೇಶ್ವರ ಪಡನ್ನಕ್ಕಾಡಿನಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಪರಿಣಾಮ ಮಂಜೇಶ್ವರದ ಕಾರ್ಯಕರ್ತರಾದ ಲೀಲಾಮಣಿ ,ಕಿಶೋರ್ ಕುಮಾರ್ ಎಂಬವರು ಗಾಯಗೊಂಡಿದ್ದಾರೆ. ಪಡನ್ನಕ್ಕಾಡಿನಲ್ಲಿ ಎರಡು ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿ ಗಾಜು ಪುಡಿಮಾಡಲಾಗಿದೆ.

ಕಲ್ಲು ತೂರಾಟ ನಡೆದಿರುವ ಘಟನೆಯನ್ನು ಖಂಡಿಸಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶ್ರೀಕಾಂತ್ ನೇತೃತ್ವದಲ್ಲಿ ಪಡನ್ನಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವನ್ನು ತಡೆಗಟ್ಟಿ ಪ್ರತಿಭಟನೆ ನಡೆಸಿದರು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ತಪ್ಪಿತಸ್ಥರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ರಸ್ತೆ ಮುಷ್ಕರ ನಿಲ್ಲಿಸಲಾಯಿತು.

ಚೆರ್ವತ್ತೊರಿನಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆದ ಬಳಿಕ ಅಲ್ಲಿ ಘರ್ಷಣೆ ನಡೆದಿದ್ದು, ಸಿಪಿಐಎಂ ನ ಧ್ವಜ ಸ್ತಂಭವನ್ನು
ಹಾನಿ ಮಾಡಲಾಗಿದೆ ಅಲ್ಲದೆ ಒಂದು ವಸ್ತ್ರದ ಅಂಗಡಿಗೂ ಹಾನಿಯಾಗಿದೆ. ಚಂದ್ರಗಿರಿ ಸೇತುವೆಯ ಬಳಿಯ ಚಳಿಯಂಗೋಡಿನಲ್ಲಿ ರಾತ್ರಿ ಪಯ್ಯನ್ನೂರಿನಿಂದ ಬರುತ್ತಿದ್ದ ಬಸ್‌ಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಸಾಲಾಗಿ ಸಾಗುತ್ತಿದ್ದ 10 ಬಸ್ಸುಗಳನ್ನೂ ಕಾರ್ಯಕರ್ತರು ನಿಲ್ಲಿಸಿ , ಸುತ್ತ ಮುತ್ತ ಪರಿಶೀಲನೆ ನಡೆಸಿದರು.

ಇದೇ ವೇಳೆ ಆ ರಸ್ತೆಯಲ್ಲಿ ಸ್ಕೂಟರಿನಲ್ಲಿ ಸಾಗುತ್ತಿದ್ದ ಇಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಚೆಮ್ನಾಡು ಚಾತಂಗೈ ನಿವಾಸಿಗಳಾದ ರಫೀಕ್ ಹಾಗೂ ಸಮದ್ ಹಲ್ಲೆಗೀಡಾಗಿದ್ದು, ಇಬ್ಬರನ್ನೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹಲ್ಲೆಯ ವೇಳೆ ತಡೆಯಲು ಬಂದ ಇಬ್ಬರು ಪೊಲೀಸರ ಮೇಲೆಯೂ ಗುಂಪು ಹಲ್ಲೆ ನಡೆಸಿದ್ದು, ಸಿವಿಲ್ ಪೊಲೀಸ್ ಅಧಿಕಾರಿಗಳಾದ ಎಂ. ಜಯನ್ ಹಾಗೂ ಅನೀಶ್ ಕುಮಾರ್ ಹಲ್ಲೆಯಿಂದ ಗಾಯಗಳಾಗಿವೆ.

ಈ ವೇಳೆ ಕಾಸರಗೋಡು ಠಾಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬಂದು ಅಶ್ರು ವಾಯು ಸಿಡಿಸಿ ಗುಂಪನ್ನು ಚದುರಿಸಿದರು .ಹಲ್ಲೆ ಸಂಬಂಧ 100 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಚಳಿಯಂಗೋಡಿನಲ್ಲಿ ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮುಂದಿನ ಗಾಜು ಪುಡಿಯಾಗಿದೆ. ಕಾಞಂಗಾಡಿನಿಂದ ಕಾಸರಗೋಡಿಗೆ ಬರುತ್ತಿದ್ದ ವೇಳೆ ಕಲ್ಲೆಸೆಯಲಾಗಿತ್ತು. ಮೊಗ್ರಾಲ್ ಪುತ್ತೂರು , ಎರಿಯಾಲ್ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ಹಿರಿಯ ನಾಯಕರು ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ .ಜಿ. ಸೈಮನ್ ಅವರಿಗೆ ರಾಜ್ಯ ಸಮಿತಿ ಸದಸ್ಯ ವಿ.ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಕೆ. ರ.ಮೇಶ್ ದೂರು ಸಲ್ಲಿಸಿದರು.

ಜನರಕ್ಷಾ ಯಾತ್ರಯಲ್ಲಿ ಯೋಗಿ ಆದಿತ್ಯನಾಥ್

ಕಾಸರಗೋಡು: ಸಿಪಿಐಎಂ ಪಕ್ಷದ ಭಯೋತ್ಪಾದನಾ ರಾಜಕೀಯದ ವಿರುದ್ಧ ಬಿಜೆಪಿ ನಡೆಸುತ್ತಿರುವ ಕೇರಳ ಜನ ರಕ್ಷಾ ಯಾತ್ರೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಕಣ್ಣೂರಿನ ಪಿಲಾತರದಲ್ಲಿ ಸೇರಿಕೊಂಡು ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದರು.

ಯಾತ್ರೆಯಲ್ಲಿ ಪಾಲ್ಗೊಳ್ಳಲು ಯೋಗಿ ಆದಿತ್ಯನಾಥ್ ಬುಧವಾರ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ಕಾಸರಗೋಡಿಗೆ
ಕಾರಿನಲ್ಲಿ ಬಂದಿದ್ದರು. ಬೇಕಲದ ತಾಜ್ ವಿವಂತ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದ ಅವರು 9.30ಕ್ಕೆ ಕಣ್ಣೂರು ಪಿಲಾತರಕ್ಕೆ
ಹೊರಟಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನಂ ರಾಜಶೇಖರನ್, ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶ್ರೀಕಾಂತ್, ಕಾರ್ಯದರ್ಶಿ ಎ. ವೇಲಾಯುಧನ್ ಅವರಿಗೆ ಸ್ವಾಗತ ಕೋರಿದರು.

ಪ್ರಜಾತಂತ್ರದಲ್ಲಿ ಹಿಂಸೆಗೆ ಜಾಗ ಇಲ್ಲ: ಆದಿತ್ಯನಾಥ್‌

ಕಣ್ಣೂರು (ಪಿಟಿಐ): ಬಿಜೆಪಿ ಕಾರ್ಯಕರ್ತರ ಮೇಲಿನ ಸಿಪಿಎಂ ಕಾರ್ಯಕರ್ತರ ದಾಳಿ ವಿರೋಧಿಸಿ ಕೇರಳ ಬಿಜೆಪಿ ಬುಧವಾರ ಹಮ್ಮಿಕೊಂಡಿರುವ ‘ಜನರಕ್ಷಾ ಯಾತ್ರೆ’ಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಆಸ್ಪದ ಇಲ್ಲ. ದುರದೃಷ್ಟವಶಾತ್‌ ದೇವರ ಸ್ವಂತ ನಾಡಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸಿಪಿಎಂ ನಿರಂತರ ರಾಜಕೀಯ ದಾಳಿ ನಡೆಸುತ್ತಿದೆ’ ಎಂದು ಆರೋಪಿಸಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ‘ಲವ್‌ ಜಿಹಾದ್’ನಂತಹ ಅಪಾಯಕಾರಿ ಬೆಳವಣಿಗೆ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದರು.

ಏಳು ಕಿ.ಮೀ ಪಾದಯಾತ್ರೆಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕುಮ್ಮನಂ ರಾಜಶೇಖರನ್‌ ಹಾಗೂ ಇತರ ನಾಯಕರು ಭಾಗವಹಿಸಿದ್ದರು.

ದೆಹಲಿಯಲ್ಲೂ ಯಾತ್ರೆ:

ಈ ನಡುವೆ ನವದೆಹಲಿಯ ಬಿಜೆಪಿ ಕಚೇರಿಯಿಂದ ಸಿಪಿಎಂ ಕಚೇರಿಯವರೆಗೆ ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್‌ ಮತ್ತು ವಿಜಯ್‌ ಗೋಯಲ್‌ ನೇತೃತ್ವದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತವರು ಜಿಲ್ಲೆ ಕಣ್ಣೂರಿನಲ್ಲಿ ಮಂಗಳವಾರ ‘ಜನರಕ್ಷಾ ಯಾತ್ರೆ’ಗೆ ಚಾಲನೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಎಲ್ಲ ರಾಜಧಾನಿಗಳಲ್ಲೂ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದರು.

‘ಕೆಂಪು ಭಯೋತ್ಪಾದನೆ ವಿರುದ್ಧ ಎಲ್ಲರೂ ಬದುಕಲೇಬೇಕು’ ಎಂಬ ಧ್ಯೇಯವಾಕ್ಯದಲ್ಲಿ ನಡೆಯುತ್ತಿರುವ ಪಾದಯಾತ್ರೆ ರಾಜ್ಯದಾದ್ಯಂತ ಸಂಚರಿಸಿ ಅ.17ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ. ಪಾದಯಾತ್ರೆಯಲ್ಲಿ ಕೇಂದ್ರದ ಹಲವು ಸಚಿವರು ಭಾಗವಹಿಸಲಿದ್ದಾರೆ.

2001ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 120 ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಕಣ್ಣೂರು ಜಿಲ್ಲೆಯೊಂದರಲ್ಲಿಯೇ 84 ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಆ ಪೈಕಿ 14 ಕಾರ್ಯಕರ್ತರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರತಿನಿಧಿಸುವ ಕ್ಷೇತ್ರದವರು ಎಂದು ಬಿಜೆಪಿ ಆರೋಪಿಸಿದೆ.

ಮೋದಿ ವೈಫಲ್ಯ ಮರೆಮಾಚಲು ಹೊಸ ನಾಟಕ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಮತ್ತು ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಹೊಸ ನಾಟಕ ಶುರುವಿಟ್ಟುಕೊಂಡಿದೆ ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ತಿರುಗೇಟು ನೀಡಿದ್ದಾರೆ.

ಕೇರಳದಲ್ಲಿ ಬಿಜೆಪಿ ಆರಂಭಿಸಿರುವ ಯಾತ್ರೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ತನ್ನ ಹುಳುಕು ಮುಚ್ಚಿಕೊಳ್ಳಲು ಯಥಾರೀತಿ ಹಿಂಸೆ ಮತ್ತು ಕೋಮುದ್ವೇಷಗಳೆಂಬ ಅಸ್ತ್ರಗಳಿಗೆ ಮೊರೆ ಹೋಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಮೋದಿ ಸರ್ಕಾರದ ಹುಳುಕು ಬಯಲಾಗಿದೆ. ಮೋದಿ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಬಿಜೆಪಿ ಹೊಸ ನಾಟಕ ಆರಂಭಿಸಿದೆ ಎಂದು ಯೆಚೂರಿ ಲೇವಡಿ ಮಾಡಿದ್ದಾರೆ.

ಸಿಪಿಎಂ ಪ್ರತಿಭಟನೆ

ಬಿಜೆಪಿಯ ಜನರಕ್ಷಾ ಯಾತ್ರೆಗೆ ಪ್ರತಿಯಾಗಿ ಸಿಪಿಎಂ ಇದೇ 9ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದೆ ಎಂದು ಅವರು ಪ್ರಕಟಿಸಿದರು.

ಯುಡಿಎಫ್‌ ಹರತಾಳ

ಈ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಇದೇ 13ರಂದು 12 ಗಂಟೆಗಳ ಹರತಾಳಕ್ಕೆ ಕರೆ ನೀಡಿದೆ.

ಬಂದೂಕು ಹಿಡಿದು ಹೆದರಿಸಿ ಅಧಿಕಾರ ಪಡೆಯುವುದು ಎಡಪಕ್ಷಗಳ ಸಂಸ್ಕೃತಿ
ಯೋಗಿ ಆದಿತ್ಯನಾಥ್‌
ಉತ್ತರ ಪ್ರದೇಶ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT