ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗುತಜ್ಞರ ಹೊಯ್ದಾಟದ ಬದುಕು

ತಣ್ಣೀರುಬಾವಿ ಮುಳುಗುತಜ್ಞರ ಕಣ್ಣೀರ ಕಥೆ– ವ್ಯಥೆ
Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಘಟನೆ–1: 2010ರಲ್ಲಿ ಮಂಗಳೂರು ಸಮೀಪ ತಣ್ಣೀರುಬಾವಿ ಬೀಚ್‌ಗೆ ಈಜಲು ಹೋಗಿದ್ದ ನಗರದ ಕಾಲೇಜೊಂದರ 10 ವಿದ್ಯಾರ್ಥಿಗಳು ಸಮುದ್ರದ ತೆರೆಯ ಅಬ್ಬರಕ್ಕೆ ಸಿಲುಕಿ ನೀರುಪಾಲಾದರು. ನೋಡನೋಡುತ್ತಿದ್ದಂತೆ ದಡದಿಂದ ಸುಮಾರು 1 ಕಿ.ಮೀ ದೂರಕ್ಕೆ ಕಡಲು ಅವರನ್ನು ಹೊತ್ತೊಯ್ದಿತು. ಅವರಲ್ಲಿ ನಾಲ್ವರು ಯುವತಿಯರು ಇದ್ದರು. ದಡದಲ್ಲಿದ್ದ ಪ್ರವಾಸಿಗರ ಚೀರಾಟ ಕೇಳಿ ದೌಡಾಯಿಸಿಕೊಂಡು ಬಂದ ಐವರು ತರುಣರು ನೀರಿಗೆ ಧುಮುಕಿದರು. ಶರವೇಗದಲ್ಲಿ ಈಜಾಡಿ ಒಂಬತ್ತು ಮಂದಿಯ ಪ್ರಾಣ ರಕ್ಷಿಸಿದ್ದರು.

ಘಟನೆ– 2: 2016ರ ನವೆಂಬರ್‌ನಲ್ಲಿ ನಡೆದ ಮಾಸ್ತಿಗುಡಿ ದುರಂತ ಘಟನೆಯನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಚಿತ್ರೀಕರಣದ ವೇಳೆ ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿಗೆ ಹೆಲಿಕಾಪ್ಟರ್‌ನಿಂದ ಜಿಗಿದಿದ್ದ ಖಳನಟರಾದ ಅನಿಲ್‌ ಮತ್ತು ಉದಯ್‌ ನೀರು ಪಾಲಾಗಿದ್ದರು. ಘಟನೆ ನಡೆದು 24 ಗಂಟೆಯಾದರೂ ಅವರ ಮೃತದೇಹ ಪತ್ತೆಯಾಗಿರಲಿಲ್ಲ. ಈ ಸಂದರ್ಭ ತುರ್ತು ಬುಲಾವ್‌ ಮೇರೆಗೆ ಈ ತರುಣರು ಎನ್‌ಡಿಆರ್‌ಎಫ್ ತಂಡ ಮತ್ತು ಅಗ್ನಿ ಶಾಮಕ ದಳದೊಂದಿಗೆ ಕಾರ್ಯಾಚರಣೆಗೆ ಕೈ ಜೋಡಿಸಿದ್ದರು. ನಿರಂತರ ಹುಡುಕಾಟ ನಡೆಸಿ ಉದಯ್‌ ಶವವನ್ನು ಹೊರ ತೆಗೆದಿದ್ದರು. ಜತೆಗೆ ಅನಿಲ್‌ ಶವ ಪತ್ತೆಗಾಗಿ ಇನ್ನಿಲ್ಲದ ಕಸರತ್ತು ಮಾಡಿದ್ದರು. ಮಾತ್ರವಲ್ಲ, ಕೆರೆಯ ಬಳಿ ಹೆಜ್ಜೇನು ದಾಳಿಗೆ ತುತ್ತಾಗಿ ನೀರಿಗೆ ಬಿದ್ದ ಯಲ್ಲಪ್ಪ ಅವರ ಮೃತದೇಹವನ್ನೂ ಮೇಲೆತ್ತಿದ್ದರು.

ಘಟನೆ– 3: ಅದು ಉಳ್ಳಾಲದಲ್ಲಿ 2017ರ ಜೂನ್‌ನಲ್ಲಿ ನಡೆದ ಬಾರ್ಜ್‌ ಹಡಗು ಅಪಘಾತ. ಮೊಗವೀರಪಟ್ಣ ಸಮುದ್ರ ತೀರದಲ್ಲಿ ಕಡಲ್ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿ ನಿರತ ಬಾರ್ಜ್‌ ಹಡಗು ಅಪಘಾತಕ್ಕೀಡಾಗಿ ಅದರಲ್ಲಿದ್ದ 27 ಮಂದಿ ಅಪಾಯಕ್ಕೆ ಸಿಲುಕಿದ್ದರು. ಕರಾವಳಿ ಕಾವಲು ಪಡೆ ಕಾರ್ಯಾಚರಣೆ ನಡೆಸಿ ನಾಲ್ಕು ಮಂದಿಯನ್ನು ರಕ್ಷಿಸಿತ್ತು. ಆದರೆ, ಅಂದು ರಾತ್ರಿ 23 ಮಂದಿ ಹಡಗಿನಲ್ಲಿ ಉಸಿರನ್ನು ಬಿಗಿಹಿಡಿದು ಕಾಲ ಕಳೆದಿದ್ದರು. ಸ್ಥಳಕ್ಕೆ ದೌಡಾಯಿಸಿದ್ದ ಈ ತರುಣರು ರಾತ್ರಿಯೇ ರಕ್ಷಣಾ ಕಾರ್ಯಾಚರಣೆಗೆ ಇಳಿಯುವ ಧೈರ್ಯ ತೋರಿದ್ದರು. ಆದರೆ, ಅದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಅಂದು ಸಮುದ್ರ ಪ್ರಕ್ಷುಬ್ಧವಾಗಿದ್ದ ಕಾರಣ ಯಾವುದೇ ಕ್ಷಣದಲ್ಲಿ ಹಡಗು ಮುಳುಗುವ ಅಪಾಯವೂ ಇತ್ತು. ಹೀಗಾಗಿ, ರಾತ್ರಿಯಿಡೀ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಡಗನ್ನು ಇವರು ಕಾದಿದ್ದರು. ಮರುದಿನ ಬೆಳ್ಳಂಬೆಳಿಗ್ಗೆ ಎಂಟು ಮಂದಿಯನ್ನು ರಕ್ಷಿಸಿ, ದಡ ಸೇರಿಸಿ ಸಾಹಸ ಮೆರೆದಿದ್ದರು.

****

ಒಂದಲ್ಲ, ಎರಡಲ್ಲ, ಇಂಥ ನೂರಾರು ಘಟನೆಗಳಲ್ಲಿ 150ಕ್ಕೂ ಅಧಿಕ ಮಂದಿಯ ಪ್ರಾಣವನ್ನು ರಕ್ಷಿಸಿದ ಸಾಹಸ ತಣ್ಣೀರುಬಾವಿಯ ಮುಳುಗುತಜ್ಞರದ್ದು. ಮಹಮ್ಮದ್‌ ಜಾವೀದ್‌ (30), ಜಾಕೀರ್‌ ಹುಸೇನ್‌ (30), ಸಾದಿಕ್‌ (34), ಮಹಮ್ಮದ್‌ ವಸೀಂ (36), ಅಸನ್‌ ಪಿ.ಟಿ. (40) ಅವರ ಈ ತರುಣರ ತಂಡ ದಶಕದಿಂದ ತಮ್ಮ ಜೀವವನ್ನು ಪಣಕ್ಕಿಟ್ಟು ಈ ರೀತಿ ಸಮಾಜ ಸೇವೆ ಮಾಡುತ್ತಿದೆ. ಸಮುದ್ರ, ಕೆರೆ, ಕಾಲುವೆ, ನದಿಗಳಲ್ಲಿ ಮುಳುಗಿದ್ದ 200ಕ್ಕೂ ಅಧಿಕ ಮಂದಿಯ ಶವವನ್ನು ನೀರಿನಿಂದ ಹೊರತೆಗೆದ ಸಾಧನೆ ಇವರದು. ಇವರು ಹೆಚ್ಚೇನು ವಿದ್ಯಾಭ್ಯಾಸ ಪಡೆದಿಲ್ಲ. ಆದರೆ, ಈಜು ಕಲೆ ಇವರ ರಕ್ತದಲ್ಲಿಯೇ ಇದ್ದಂತಿದೆ. ನೀರಿನಲ್ಲಿ ಎಷ್ಟೇ ಆಳಕ್ಕೂ ಸಾಗಬಲ್ಲ, ಹುಡುಕಬಲ್ಲ ಚಾಕಚಕ್ಯತೆ ಇವರಿಗಿದೆ.

ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಯಾರಾದರೂ ನೀರು ಪಾಲಾದರೆ, ಶವ ಪತ್ತೆಯಾಗದಿದ್ದರೆ ತಕ್ಷಣ ನೆನಪಾಗುವುದೇ ಈ ತಂಡ. ಎಲ್ಲೇ ಅವಘಡ ಸಂಭವಿಸಿದರೂ ತಕ್ಷಣ ಸ್ಪಂದಿಸುವ ಇವರು, ತಮ್ಮ ಕೆಲಸಗಳನ್ನು ಬದಿಗೆ ಸರಿಸಿ ಹೊರಟು ನಿಲ್ಲುತ್ತಾರೆ. ಕಾರ್ಯಾಚರಣೆಗೆ ಬೇಕಾಗುವ ಆಕ್ಸಿಜನ್‌ ಸಿಲಿಂಡರ್‌, ಡೈವಿಂಗ್‌ ಸಲಕರಣೆಗಳನ್ನು ಬಾಡಿಗೆಗೆ ಪಡೆದುಕೊಂಡೇ ತೆರಳುತ್ತಾರೆ.

ಸ್ಥಳಕ್ಕೆ ಹೋದ ಬಳಿಕ ಕೆಲಸ ಪೂರ್ಣವಾಗದೆ ಅರ್ಧಕ್ಕೆ ವಾಪಸ್‌ ಬರುವ ಜಾಯಮಾನ ಇವರದಲ್ಲ. ಅದು ನಾಲ್ಕೈದು ದಿನವಾದರೂ ಸರಿಯೇ. ಎಷ್ಟೊ ಬಾರಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ವ್ಯಕ್ತಿಗಳನ್ನು ಕಾಪಾಡಿದ್ದೂ ಇದೆ. ಇವರು ಹಣದ ಆಸೆಗಾಗಿ ಈ ಕಾಯಕವನ್ನು ಮಾಡುತ್ತಿಲ್ಲ. ಕಾರ್ಯಾಚರಣೆಗೆ ಇಂತಿಷ್ಟು ಹಣ ಎಂದೂ ಹೇಳುವವರಲ್ಲ. ಯಾರಾದರೂ ಹಣ ಕೊಟ್ಟರೆ ಪಡೆಯುತ್ತಾರೆ. ಎಷ್ಟೋ ಬಾರಿ ಬರಿಗೈಯಲ್ಲಿ ವಾಪಸ್‌ ಬಂದಿದ್ದೂ ಉಂಟು.

ಟ್ಯೂಬ್‌ ಹಿಡಿದು ಮೀನುಗಾರಿಕೆ ಕಸುಬು ಮಾಡುವ ಇವರು ಸ್ಥಿತಿವಂತರಲ್ಲ. ಆದರೆ, ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಹೃದಯ ಶ್ರೀಮಂತಿಕೆ ಇದೆ. ಸಮಾಜದ ಪಾಲಿಗೆ ಜೀವರಕ್ಷಕರೆನಿಸಿಕೊಂಡ ಇವರ ಜೀವನಕ್ಕೇ ಭದ್ರತೆ ಇಲ್ಲವಾಗಿದೆ. ಮೈಯಲ್ಲಿ ಶಕ್ತಿಯಿರುವಾಗ ಆಪತ್ಪಾಂಧವರಂತೆ ಕಷ್ಟಕಾಲದಲ್ಲಿ ಸ್ಪಂದಿಸುವ ಇವರಿಗೆ ಈಗ ಭವಿಷ್ಯದ ಚಿಂತೆ ಕಾಡುತ್ತಿದೆ.

‘2007ರಲ್ಲಿ ತಣ್ಣೀರುಬಾವಿ ಬಳಿ ಡೆನ್‌ ಡೆನ್‌ ಹಡಗು ಮುಳುಗಡೆಯಾಗಿತ್ತು. ಅದರಲ್ಲಿ 24 ಮಂದಿ ವಿದೇಶಿಯರು ಇದ್ದರು. ತಕ್ಷಣ ಜಿಲ್ಲಾಡಳಿತದ ಜತೆ ನಾವು ಕಾರ್ಯಾಚರಣೆಗೆ ಕೈಜೋಡಿಸಿದೆವು. ಹಡಗಿನಲ್ಲಿದ್ದ 21 ಮಂದಿಯನ್ನು ರಕ್ಷಿಸಲಾಯಿತು. ಮೂರು ಮಂದಿ ಮೃತಪಟ್ಟರೂ ಅವರ ಶವಗಳನ್ನು ದಡ ಸೇರಿಸಲು ನೆರವಾಗಿದ್ದೆವು. ಅಂದಿನ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ರಾಜಭವನದಲ್ಲಿ ನಮ್ಮನ್ನು ಸನ್ಮಾನಿಸಿದ್ದರು.

ಆನಂತರ ನಮಗೆ ಸಿಕ್ಕ ಸನ್ಮಾನ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ಆದರೆ, ನಮಗೆ ಈಗ ಅರ್ಥವಾಗಿದೆ. ಈ ಪ್ರಶಸ್ತಿ ಫಲಕ, ಹಾರ– ತುರಾಯಿಗಳಿಂದ ನಮ್ಮ ಬದುಕನ್ನು ಕಟ್ಟಲು ಸಾಧ್ಯವಿಲ್ಲ. ಮನೆಯಲ್ಲಿ ನಮ್ಮನ್ನು ನಂಬಿರುವ ಪತ್ನಿ, ಮಕ್ಕಳ ಭವಿಷ್ಯದ ಗತಿಯೇನು ಎಂಬ ಆತಂಕದಲ್ಲಿ ದಿನದೂಡುತ್ತಿದ್ದೇವೆ’ ಎಂದು ತಂಡದ ನಾಯಕ ಮಹಮ್ಮದ್‌ ವಸೀಂ ನೋವನ್ನು ಹೊರಹಾಕುತ್ತಾರೆ.

‘ನೋಡುವವರ ಕಣ್ಣಿಗೆ ನಾವು ಹೀರೊಗಳು. ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳನ್ನು ರಕ್ಷಿಸಿದಾಗ ಅಂತಹ ಮರ್ಯಾದೆ ನಮಗೆ ಸಿಗುತ್ತದೆ. ನೀರಿಗೆ ಬಿದ್ದ ವ್ಯಕ್ತಿಯನ್ನು ಜೀವಂತವಾಗಿ ಮೇಲಕ್ಕೆತ್ತಲು ಸಾಧ್ಯವಾಗದಿದ್ದಾಗ, ಶವವನ್ನು ತೆಗೆಯದೆ ವಾಪಸ್‌ ಬರಲ್ಲ. ಶವ ಪತ್ತೆಯಾದಾಗ ಅಲ್ಲಿ ಸೂತಕದ ವಾತಾವರಣ ಇರುತ್ತದೆ.

ಈ ಸಂದರ್ಭ ನಾವು ಹಣಕಾಸಿನ ವ್ಯವಹಾರ ಮಾತನಾಡಿದರೆ ನಮ್ಮನ್ನು ಯಾರಾದರೂ ಮನುಷ್ಯರು ಅಂತಾರಾ? ಅಷ್ಟೊ, ಇಷ್ಟೊ ಯಾರಾದರೂ ಕೊಟ್ಟರೆ ಪಡೆಯುತ್ತೇವೆ. ಕೊಡದಿದ್ದರೂ ನಾವು ಬಂದ ಕೆಲಸವಾಯಿತಲ್ಲ ಎಂದು ಸಮಾಧಾನಪಟ್ಟುಕೊಂಡೇ ವಾಪಸ್‌ ಹೋಗುತ್ತೇವೆ. ಆದರೆ, ಒಂದೊಂದು ಬಾರಿ ಬಾಡಿಗೆ ವಾಹನಕ್ಕೆ ನೀಡಲು ಹಣವಿಲ್ಲದೆ ಸಾಲ ಮಾಡಿದ್ದೂ ಇದೆ. ಇದೇ ರೀತಿ ಸಮಾಜ ಸೇವೆ ಅಂತ ಹೋಗಿ ನಮ್ಮ ಸಾಲದ ಹೊರೆ ಹೆಚ್ಚುತ್ತಲೇ ಇದೆ’ ಎನ್ನುತ್ತಾರೆ ವಸೀಂ.

‘ನಮ್ಮದು ಆರು ಮಂದಿಯ ತಂಡ. ನಮ್ಮ ಜತೆ ಇದ್ದ ಮಹಮ್ಮದ್ ಸಿದ್ದಿಕ್ ಹಲವು ಮಂದಿಯನ್ನು ರಕ್ಷಿಸಿದ್ದ. ಆದರೆ, ಆಕ್ಸಿಜನ್‌ ಹಾಕಿಕೊಂಡು ಮೀನುಗಾರಿಕೆಗೆ ಹೋಗಿದ್ದ ಆತ ಮೇಲೆ ಬರಲಾಗದೆ ಉಸಿರುಗಟ್ಟಿ ಮೃತಪಟ್ಟ. ಆತನಿಗೆ ಮದುವೆಯಾಗಿ ಕೇವಲ ಮೂರು ತಿಂಗಳಾಗಿತ್ತು. ಇದರಿಂದ ಇಡೀ ಕುಟುಂಬ ಇಂದೂ ಕಣ್ಣೀರು ಹಾಕುತ್ತಿದೆ. ನಮಗೆ ಯಾರಿಗೂ ಜೀವ ವಿಮೆ ಮಾಡುವಷ್ಟು ಶಕ್ತಿ ಇಲ್ಲ’ ಎನ್ನುತ್ತಾರೆ ಅವರು.

‘ನೀರು ಪಾಲಾದವರನ್ನು ರಕ್ಷಣೆ ಮಾಡಿದಾಗ ಅಥವಾ ಶವವನ್ನು ಮೇಲೆತ್ತಿದಾಗ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ನಮ್ಮ ಬಳಿ ಬಂದು ಹೊಗಳುತ್ತಾರೆ. ಅವರೆಲ್ಲರ ಬಳಿಯೂ ನಮ್ಮ ಭವಿಷ್ಯದ ಆತಂಕವನ್ನು ಹೇಳಿಕೊಂಡಿದ್ದೇವೆ. ಅದಕ್ಕೆ, ಗೃಹ ರಕ್ಷಕ ದಳದಲ್ಲಿ ಸೇವೆ ಸಲ್ಲಿಸುವಂತೆ ಅವರು ಪುಕ್ಕಟೆ ಸಲಹೆ ನೀಡುತ್ತಾರೆ. ಅಲ್ಲಿ ದಿನಕ್ಕೆ ₹325 ಗೌರವ ಧನ ನೀಡಲಾಗುತ್ತಿದೆ. ಅದರಿಂದ, ನಮ್ಮ ಕುಟುಂಬವನ್ನು ನಿರ್ವಹಿಸಲು ಸಾಧ್ಯವೇ? ಸಮಾಜಕ್ಕಾಗಿ ಜೀವ ಪಣಕ್ಕಿಟ್ಟು ಸೇವೆ ಮಾಡಿದ ನಮಗೆ ಸರ್ಕಾರ ನೀಡುವ ಗೌರವ ಇದೇನಾ’ ಎಂಬುದು ಜಾವೀದ್‌ ಪ್ರಶ್ನೆ.

‘ನಾವು ಸರ್ಕಾರದಿಂದ ಹೆಚ್ಚೇನೂ ಬಯಸುವುದಿಲ್ಲ. ನಿವೇಶನಕ್ಕೆ ಹಕ್ಕುಪತ್ರ ನೀಡಬೇಕು ಮತ್ತು ಒಂದು ಪೂರ್ಣಕಾಲಿಕ ಉದ್ಯೋಗ ಬೇಕು. ನಮಗೆ ಈಜು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಸರ್ಕಾರ ಸೌಲಭ್ಯ ಒದಗಿಸಿಕೊಟ್ಟರೆ ನಾವು ಈಜು ತರಬೇತಿ ನೀಡಲು ಸಿದ್ಧ. ಇಲ್ಲದಿದ್ದರೆ, ಮೀನುಗಾರಿಕೆಗಾಗಿ ದೋಣಿ ಖರೀದಿಸಲು ಸಾಲ ಸೌಲಭ್ಯ ಕೊಟ್ಟರೆ ಅನುಕೂಲ ಎನ್ನುತ್ತಾರೆ’ ಜಾಕೀರ್‌ ಹುಸೇನ್

ವರ್ಷಪೂರ್ತಿ ಸೇವೆ ಸಲ್ಲಿಸಲು ಬದ್ಧ
ಜೂನ್‌ನಿಂದ ಆಗಸ್ಟ್‌ ವರೆಗೆ ಕರಾವಳಿಯಲ್ಲಿ ಧಾರಾಕಾರ ಮಳೆ ಸುರಿಯುವುದರಿಂದ ಈ ಸಂದರ್ಭ ನೀರಿನಲ್ಲಿ ಅವಘಡ ಹೆಚ್ಚು ಸಂಭವಿಸುತ್ತದೆ. ಹೀಗಾಗಿ, ಈ ಮೂರು ತಿಂಗಳ ಅವಧಿಗೆ ಗೃಹ ರಕ್ಷಕ ದಳದ ನೆರೆ ರಕ್ಷಣಾ ಪಡೆಗೆ ಹಲವು ಈಜುಪಟುಗಳನ್ನು ನೇಮಿಸಲಾಗುತ್ತದೆ. ಈ ಪಡೆಯಲ್ಲಿ 10 ವರ್ಷಗಳಿಂದ ತಣ್ಣೀರುಬಾವಿಯ ಮುಳುಗುತಜ್ಞರು ಕೂಡ ಸ್ಥಾನ ಪಡೆದಿದ್ದಾರೆ.

ಇವರು ಈ ಅವಧಿಯಲ್ಲಿ ಎದುರಾಗುವ ತುರ್ತು ಅವಘಡವನ್ನು ಎದುರಿಸಲು ಸನ್ನದ್ಧವಾಗಿರಬೇಕು. ಆದರೆ, ಈ ಬಾರಿ ಅದನ್ನು ಜಿಲ್ಲಾಡಳಿತ ಎರಡೂವರೆ ತಿಂಗಳಿಗೆ ಸೀಮಿತಗೊಳಿಸಿರುವುದು ತಂಡಕ್ಕೆ ಬೇಸರ ತಂದಿದೆ. ಈ ವ್ಯವಸ್ಥೆಯನ್ನು ವರ್ಷಪೂರ್ತಿ ವಿಸ್ತರಿಸಿದರೆ ಸೇವೆ ಸಲ್ಲಿಸಲು ಬದ್ಧ ಎಂಬುದು ತಂಡದ ಅಭಿಲಾಷೆ.

ಗೃಹರಕ್ಷದ ದಳದ ಕಮಾಂಡೆಂಟ್‌ ಏನಂತಾರೆ?
‘ಈ ಮುಳುಗುತಜ್ಞರ ಬೇಡಿಕೆ ನನ್ನ ಗಮನಕ್ಕೂ ಬಂದಿದೆ. ಆದರೆ, ಅದು ನನ್ನ ವ್ಯಾಪ್ತಿಗೆ ಮೀರಿದ್ದು. ಅವರು ಗೃಹ ರಕ್ಷಕ ದಳದಲ್ಲಿ ವರ್ಷಪೂರ್ತಿ ಸೇವೆ ಸಲ್ಲಿಸಲು ಬಯಸುವುದಾದರೆ ಅವಕಾಶ ನೀಡಲಾಗುವುದು’ ಎನ್ನುತ್ತಾರೆ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಮುರಳಿ ಮೋಹನ್‌ ಚೂಂತಾರು.

‘ಅವರಿಗೆ ಈಜು ಕಲೆ ದೇವರ ಕೊಟ್ಟ ದೊಡ್ಡ ವರ. ಎಷ್ಟೇ ಆಳಕ್ಕೂ ಸಾಗಬಲ್ಲ ಸಾಮರ್ಥ್ಯ ಅವರಲ್ಲಿದೆ. ಮಧ್ಯರಾತ್ರಿ ಕರೆ ಮಾಡಿದರೂ ತಕ್ಷಣ ಸ್ಪಂದಿಸುವ ಮಾನವೀಯತೆ ಅವರಲ್ಲಿದೆ. ಅಗ್ನಿಶಾಮಕ ದಳದವರು ಹೋಗಲು ಕಷ್ಟಪಡುವ ಸ್ಥಳಕ್ಕೂ ಇವರು ಹೋಗಿ ಕಾರ್ಯಾಚರಣೆ ನಡೆಸಿದ್ದು ಇದೆ. ಅವರು ಗೃಹ ರಕ್ಷಕ ದಳದವರು ಎಂಬುದು ನನಗೂ ಹೆಮ್ಮೆ’ ಎಂದು ಹೇಳುತ್ತಾರೆ.

‘ಈತನಕ ಜಿಲ್ಲಾಡಳಿತದಲ್ಲಿ ಡೈವಿಂಗ್‌ ಸಲಕರಣೆ, ಆಕ್ಸಿಜನ್‌ ವಿತ್‌ ಕ್ಯಾಮೆರಾ ಇರಲಿಲ್ಲ. ಇದನ್ನು ಜಿಲ್ಲಾಧಿಕಾರಿಗೆ ತಿಳಿಸಿದಾಗ ತಕ್ಷಣ ಸ್ಪಂದಿಸಿ, ತಲಾ ₹ 7.5 ಲಕ್ಷದ ಸಲಕರಣೆಗಳನ್ನು ಪೊಲೀಸ್‌ ಇಲಾಖೆಗೆ ಮತ್ತು ಗೃಹ ರಕ್ಷಕ ದಳಕ್ಕೆ ನೀಡಲು ಸಮ್ಮತಿಸಿದ್ದಾರೆ. ಇನ್ನು ಒಂದು ತಿಂಗಳಲ್ಲಿ ಅವು ನಮ್ಮ ಕೈ ಸೇರಲಿವೆ. ಇನ್ನು ಮುಂದೆ ಜಿಲ್ಲಾ ವ್ಯಾಪ್ತಿಯಲ್ಲಿ ತುರ್ತು ಅವಘಡ ಸಂಭವಿಸಿದಾಗ ಅವುಗಳನ್ನು ಕಾರ್ಯಾಚರಣೆಗೆ ಬಳಸಬಹುದು. ಈತನಕ ಈ ಮುಳುಗುತಜ್ಞರು ಡೈವಿಂಗ್‌ ಸಲಕರಣೆಗಳನ್ನು ಬಾಡಿಗೆಗೆ ತರುತ್ತಿದ್ದರು. ಅದರಿಂದ ಅವರಿಗೆ ಹೆಚ್ಚು ಹಣ ಖರ್ಚಾಗುತ್ತಿತ್ತು’ ಎಂದು ಹೇಳುತ್ತಾರೆ.

ನಮ್ಮ ಪ್ರಾಣಕ್ಕೂ ಬೆಲೆ ಇದೆ
‘ಒಂದು ಬಾರಿ ಮಂಡ್ಯ ಜಿಲ್ಲೆಯ ಮುತ್ತತ್ತಿ ಕೆರೆಗೆ ಬಾಲಕ ಬಿದ್ದಿದ್ದ. ಅಲ್ಲಿನ ಸ್ಥಳೀಯರ ಕರೆಗೆ ಸ್ಪಂದಿಸಿ, ತೆರಳಿದ್ದೆವು. ಎಲ್ಲಿಗೆ ಹೋದರೂ ಮೊದಲು ನಮ್ಮ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ. ಕೆರೆಯಲ್ಲಿ ಹಾವು, ಮೊಸಳೆ ಇರುವ ಸಾಧ್ಯತೆ ಬಗ್ಗೆ ಪ್ರಶ್ನಿಸುತ್ತೇವೆ. ಅಂದು ಆ ಕೆರೆಯನ್ನು ನೋಡಿದಾಗ ಮೊಸಳೆ ಇರುವ ಸಂದೇಹ ಮೂಡಿತ್ತು. ಈ ಬಗ್ಗೆ ಮೃತರ ಸಂಬಂಧಕರಲ್ಲಿ ಕೇಳಿದಾಗ ಏನೂ ತೊಂದರೆಯಿಲ್ಲ ನೀರಿಗೆ ಇಳಿಯಬಹುದು ಎಂದು ಹೇಳಿದ್ದರು. ಬಳಿಕ ಕಾರ್ಯಾಚರಣೆಗೆ ಇಳಿದೆವು.

ಆದರೆ, ಕೆರೆಯಲ್ಲಿ ಮಧ್ಯದಲ್ಲಿ ನಾವಿರುವಾಗ ಮೂರ್ನಾಲ್ಕು ಮೊಸಳೆಗಳು ದಡದಿಂದ ಕೆರೆಗೆ ಇಳಿಯುತ್ತಿರುವುದನ್ನು ನೋಡಿ ಪ್ರಾಣದ ಆಸೆಯನ್ನು ಬಿಟ್ಟಿದ್ದೆವು. ಅಂದು ಹೇಗೋ ಬಚಾವ್‌ ಆದೆವು. ಇಂತಹ ಘಟನೆ ಹಲವು ನಡೆದಿದೆ. ಕೆಲವರು ನಮ್ಮ ಪ್ರಾಣದ ಬೆಲೆಯ ಬಗ್ಗೆ ಯೋಚಿಸುವುದೇ ಇಲ್ಲ’ ಎಂದು ಬೇಸರದಿಂದ ಹೇಳುತ್ತಾರೆ ತಂಡದ ಸದಸ್ಯರು.

‘ಕೆಲವು ಬಾರಿಯಂತೂ ಮೃತದೇಹ ಸಂಪೂರ್ಣ ಕೊಳೆತು, ವಿರೂಪವಾಗಿರುತ್ತದೆ. ಸ್ಥಳದಲ್ಲಿ ಮೂಗು ಮುಚ್ಚುವ ಪರಿಸ್ಥಿತಿ ಇರುತ್ತದೆ. ಈ ಸಂದರ್ಭ ಅದನ್ನು ನೀರಿನಿಂದ ಮೇಲೆತ್ತಲು, ಆಸ್ಪತ್ರೆಗೆ ಸಾಗಿಸಲು ಸಂಬಂಧಿಕರೂ ಬರುವುದಿಲ್ಲ. ಎಷ್ಟೋ ಶವಗಳನ್ನು ನಾವೇ ಆಸ್ಪತ್ರೆಗೆ ಕೊಂಡೊಯ್ದು, ಮರಣೋತ್ತರ ಪರೀಕ್ಷೆ ಮಾಡಿಸಿ, ಅಂತಿಮ ಸಂಸ್ಕಾರ ಮಾಡಿಸಿದ್ದೇವೆ. ಈ ರೀತಿ ಬೇರೆಯವರ ಕಣ್ಣೀರಿನಲ್ಲಿ ನಾವು ಪಾಲು ಪಡೆದಿದ್ದೇವೆ. ಆದರೆ, ನಮ್ಮ ಕಣ್ಣೀರು ಮಾತ್ರ ಯಾರಿಗೂ ಕಾಣುತ್ತಿಲ್ಲವಲ್ಲ ಎನ್ನುವುದೇ ಬೇಸರದ ವಿಚಾರ’ ಎಂಬುದು ಅವರ ಕೊರಗು.

ನಮ್ಮ ಪ್ರಾಣಕ್ಕೂ ಬೆಲೆ ಇದೆ
‘ಒಂದು ಬಾರಿ ಮಂಡ್ಯ ಜಿಲ್ಲೆಯ ಮುತ್ತತ್ತಿ ಕೆರೆಗೆ ಬಾಲಕ ಬಿದ್ದಿದ್ದ. ಅಲ್ಲಿನ ಸ್ಥಳೀಯರ ಕರೆಗೆ ಸ್ಪಂದಿಸಿ, ತೆರಳಿದ್ದೆವು. ಎಲ್ಲಿಗೆ ಹೋದರೂ ಮೊದಲು ನಮ್ಮ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ. ಕೆರೆಯಲ್ಲಿ ಹಾವು, ಮೊಸಳೆ ಇರುವ ಸಾಧ್ಯತೆ ಬಗ್ಗೆ ಪ್ರಶ್ನಿಸುತ್ತೇವೆ. ಅಂದು ಆ ಕೆರೆಯನ್ನು ನೋಡಿದಾಗ ಮೊಸಳೆ ಇರುವ ಸಂದೇಹ ಮೂಡಿತ್ತು. ಈ ಬಗ್ಗೆ ಮೃತರ ಸಂಬಂಧಿಕರಲ್ಲಿ ಕೇಳಿದಾಗ ಏನೂ ತೊಂದರೆಯಿಲ್ಲ ನೀರಿಗೆ ಇಳಿಯಬಹುದು ಎಂದು ಹೇಳಿದ್ದರು. ಬಳಿಕ ಕಾರ್ಯಾಚರಣೆಗೆ ಇಳಿದೆವು. ಆದರೆ, ಕೆರೆಯ ಮಧ್ಯದಲ್ಲಿ ನಾವಿರುವಾಗ ಮೂರ್ನಾಲ್ಕು ಮೊಸಳೆಗಳು ದಡದಿಂದ ಕೆರೆಗೆ ಇಳಿಯುತ್ತಿರುವುದನ್ನು ನೋಡಿ ಪ್ರಾಣದ ಆಸೆಯನ್ನು ಬಿಟ್ಟಿದ್ದೆವು. ಅಂದು ಹೇಗೋ ಬಚಾವ್‌ ಆದೆವು. ಇಂತಹ ಘಟನೆ ಹಲವು ನಡೆದಿವೆ. ಕೆಲವರು ನಮ್ಮ ಪ್ರಾಣದ ಬಗ್ಗೆ ಯೋಚಿಸುವುದೇ ಇಲ್ಲ’ ಎಂದು ಬೇಸರದಿಂದ ಹೇಳುತ್ತಾರೆ ತಂಡದ ಸದಸ್ಯರು.

‘ಕೆಲವು ಬಾರಿಯಂತೂ ಮೃತದೇಹ ಸಂಪೂರ್ಣ ಕೊಳೆತು, ವಿರೂಪವಾಗಿರು ತ್ತದೆ. ಮೂಗು ಮುಚ್ಚುವ ಪರಿಸ್ಥಿತಿ ಇರುತ್ತದೆ. ಆ ಸಂದರ್ಭ ಅದನ್ನು ನೀರಿನಿಂದ ಮೇಲೆತ್ತಲು, ಆಸ್ಪತ್ರೆಗೆ ಸಾಗಿಸಲು ಸಂಬಂಧಿಕರೂ ಬರುವುದಿಲ್ಲ. ಎಷ್ಟೋ ಶವಗಳನ್ನು ನಾವೇ ಆಸ್ಪತ್ರೆಗೆ ಕೊಂಡೊಯ್ದು, ಮರಣೋತ್ತರ ಪರೀಕ್ಷೆ ಮಾಡಿಸಿ, ಅಂತಿಮ ಸಂಸ್ಕಾರ ಮಾಡಿಸಿದ್ದೇವೆ. ಈ ರೀತಿ ಬೇರೆಯವರ ಕಣ್ಣೀರಿನಲ್ಲಿ ನಾವು ಪಾಲು ಪಡೆದಿದ್ದೇವೆ. ಆದರೆ, ನಮ್ಮ ಕಣ್ಣೀರು ಮಾತ್ರ ಯಾರಿಗೂ ಕಾಣುತ್ತಿಲ್ಲವಲ್ಲ ಎನ್ನುವುದೇ ಬೇಸರದ ವಿಚಾರ’ ಎಂಬುದು ಅವರ ಕೊರಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT