ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುಭವ ಮಂಟಪ ಜಗತ್ತಿನ ಶ್ರೇಷ್ಠ ವಿ.ವಿ’

ಶರಣ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಪೀಠದ ಪ್ರಚಾರೋಪನ್ಯಾಸ ಮಾಲಿಕೆ ಕಾರ್ಯಕ್ರಮ
Last Updated 5 ಅಕ್ಟೋಬರ್ 2017, 9:09 IST
ಅಕ್ಷರ ಗಾತ್ರ

ಕೊಪ್ಪಳ:  ವೇದಗಳ ಕಾಲದಲ್ಲಿ ಮಠಗಳು ಮತ್ತು ಆಶ್ರಮಗಳು ಇರಲಿಲ್ಲ. ಮಠಗಳು ಎಂಬ ಪರಿಕಲ್ಪನೆ ಬಂದಿದ್ದು ಬುದ್ಧನ ಕಾಲದಲ್ಲಿ. 12ನೇ ಶತಮಾನದ ಅನುಭವ ಮಂಟಪವೂ ಒಂದು ರೀತಿಯ ಮಠ ಇದ್ದಂತೆ. ಅನುಭವ ಮಂಟಪ ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯ. ಈ ಮಂಟಪವು ಚಲನಶೀಲವಾಗಿತ್ತು ಎಂದು ಪ್ರಾಧ್ಯಾಪಕ ಡಾ.ಬಿ.ಎಸ್.ಬಿರಾದಾರ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಸರ್ಕಾರಿ ಪ್ರಥಮ ದರ್ಜೇ ಮಹಿಳಾ ಕಾಲೇಜು, ಕಾಲೇಜು ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ಮುಂಡರಗಿಯ ಶ್ರೀ ಅನ್ನದಾನೀಶ್ವರ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಪೀಠದ ಪ್ರಚಾರೋಪನ್ಯಾಸ ಮಾಲಿಕೆಯಲ್ಲಿ ಅನ್ನದಾನೀಶ್ವರ ಸಂಸ್ಥಾನ ಮಠದ ಪರಂಪರೆ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಅನ್ನದಾನೀಶ್ವರ ಸಂಸ್ಥಾನ ಮಠದ ಪರಂಪರೆ ಕುರಿತು ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ 4 ಪಿಎಚ್.ಡಿ ಪ್ರಬಂಧಗಳು ಮತ್ತು 2 ಎಂ.ಫಿಲ್ ಪ್ರಬಂಧಗಳು ಮಂಡನೆಯಾಗಿವೆ. ಈ ಮಠದ ಶ್ರೀಗಳು 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮುಂಡರಗಿಯ ಭೀಮರಾಯನಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯ ನೀಡಿದ್ದರು ಎಂದರು.

ಮುಂಡರಗಿ ಅನ್ನದಾನೇಶ್ವರ ಸಂಸ್ಥಾನದ ಮಠವು ಬಸವಣ್ಣನವರ ದಾಸೋಹ ಮತ್ತು ಕಾಯಕ ನಿಯಮಗಳನ್ನು ಇಟ್ಟುಕೊಂಡಿದೆ. ಶರಣ ಸಂಸ್ಕೃತಿಯ ಧರ್ಮ ಪ್ರಸಾರದ ಜತೆಗೆ ಶಿಕ್ಷಣ ನೀಡುವುದು ಮುಂಡರಗಿಯ ಅನ್ನದಾನೀಶ್ವರ ಮಠದ ಮೂಲ ಉದ್ದೇಶ. ಈ ಮಠವನ್ನು 12ನೇ ಶತಮಾನದಲ್ಲಿ ಅನ್ನದಾನೀಶ್ವರ ಅವರು ಚನ್ನಬಸವಣ್ಣನವರಲ್ಲಿ  ಧೀಕ್ಷೆ ಪಡೆದು ಸ್ಥಾಪಿಸಿದರು. ಈ ಮಠವನ್ನು ಕಟ್ಟಿ ಬೆಳಿಸಿದವರು ಕೆಳವರ್ಗದವರಾದ ಕನಕಪ್ಪ ನಾಯಕ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಗವಿಸಿದ್ದಪ್ಪ ಮುತ್ತಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಠಗಳು ಬದಲಾಣೆಯ ಸಂಕೇತ. ಅವು ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತಿವೆ. ವಿಚಾರಗಳನ್ನು ಪ್ರತಿಪಾದಿಸುವ ವಿಚಾರ ಕೇಂದ್ರಗಳು. ಮಠಗಳು ಜನರಿಗೆ ಸರ್ಕಾರಕ್ಕಿಂತಲೂ ಹೆಚ್ಚಿನ ಸೌಲಭ್ಯ ನೀಡುತ್ತಿವೆ. ಭಾರತದಲ್ಲಿ ಶೈವ ಪರಂಪರೆ ಮೂಲಕ ಮಠಗಳು ಸ್ಥಾಪನೆಯಾಗಿವೆ ಎಂದರು.

ಅಕ್ಕಮಹಾದೇವಿ ವಿಶ್ವ ವಿದ್ಯಾನಿಲಯ ಸಯೋಜಕ ಡಾ.ಎಂ.ನಾಗರಾಜ ಪ್ರಾಸ್ತಾವಿಕ ಮಾತನಾಡಿ, ಕನ್ನಡ ಸಾಹಿತ್ಯವು ಸಮನ್ವಯ ಮತ್ತು ಸ್ವಾಭಿಮಾನದಿಂದ ಕೂಡಿದೆ. ಯಾರು ಸಮಾಜಕ್ಕಾಗಿ ಸೇವೆ ಮಾಡುತ್ತಾರೋ ಅವರನ್ನು ನಾವು ಶಾಶ್ವತವಾಗಿ ನೆನಪಿಸಿಕೊಳ್ಳಬೇಕು. ಇಡೀ ಜಗತ್ತಿಗೆ ಶರಣರ ಕೊಡುಗೆ ಆಪಾರವಾದುದು. ನಮ್ಮ ಸಮಾಜಕ್ಕೆ ಶರಣ ಸಾಹಿತ್ಯ ಕೊಟ್ಟಷ್ಟು ಕೊಡುಗೆಯನ್ನು ಜಗತ್ತಿನ ಬೇರೆ ಯಾವ ಸಾಹಿತ್ಯವೂ ಕೊಟ್ಟಿಲ್ಲ ಎಂದರು.

ಶಿವರಾಜ್‌ ಜಾನಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಧ್ಯಾಪಕರಾದ ಡಾ.ಗಣಪತಿ ಲಮಾಣಿ, ನಾಗರತ್ನ ಬಿ. ತಮ್ಮಿನಾಳ, ಗೀತಾ ಬಸವರಾಜ, ಜಾಫರ್, ವೆಂಕಟೇಶ್, ಶ್ರೀಕಾಂತ, ರಮೇಶ ಇದ್ದರು.

ಪ್ರಾಧ್ಯಾಪಕರಾದ ಡಾ.ನರಸಿಂಹ ಗುಂಜಹಳ್ಳಿ ಸ್ವಾಗತಿಸಿದರು. ಡಾ.ಹುಲಿಗೆಮ್ಮ ನಿರೂಪಿಸಿದರು. ಪ್ರದೀಪ್‌ಕುಮಾರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT