ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲುವಿನ ಸಿನಿಮಾ ಸವಾರಿ!

Last Updated 6 ಅಕ್ಟೋಬರ್ 2017, 6:57 IST
ಅಕ್ಷರ ಗಾತ್ರ

ವೃತ್ತಾಕಾರದ ಫ್ರೇಮಿನ ಕಪ್ಪು ಕನ್ನಡಕ ಹಾಕಿಕೊಂಡ, ಅಷ್ಟೇನೂ ಸ್ಮಾರ್ಟ್‌ ಅಲ್ಲದ ಯುವಕನ ಚಿತ್ರವನ್ನು ‘ಹುಲಿರಾಯ’ ಸಿನಿಮಾದ ಪೋಸ್ಟರ್‌ಗಳಲ್ಲಿ ನೀವು ಗಮನಿಸಿರುತ್ತೀರಿ. ಈ ಪೋಸ್ಟರ್‌ನಲ್ಲಿ ಕಾಣಿಸಿಕೊಂಡವರು ‘ಹುಲಿರಾಯ’ ಸಿನಿಮಾದ ಹೀರೊ ಬಾಲು ನಾಗೇಂದ್ರ.

ಅವರ ಜೊತೆ ಮಾತಿಗೆ ಕುಳಿತರೆ, ಅವರ ಧ್ವನಿಯಲ್ಲಿ ಕಾಣಿಸುವುದು ತುಂಬು ಆತ್ಮವಿಶ್ವಾಸ. ತಾವು ಮಾಡುತ್ತಿರುವುದು ಏನು ಎಂಬುದರ ಬಗ್ಗೆ ಅಪಾರ ಸ್ಪಷ್ಟತೆ. ಲವಲವಿಕೆ ಮತ್ತು ಜೀವನಪ್ರೀತಿ ಕೂಡ ಅವರ ಮಾತುಗಳಲ್ಲಿ ಕಾಣಿಸುತ್ತದೆ. ಅರವಿಂದ್ ಕೌಶಿಕ್ ನಿರ್ದೇಶನದ ‘ಹುಲಿರಾಯ’ ಶುಕ್ರವಾರ ತೆರೆಗೆ ಬರಲಿದ್ದಾನೆ. ಸಿನಿಮಾ ಬಿಡುಗಡೆಯ ಒತ್ತಡದ ನಡುವೆಯೇ ಬಾಲು ‘ಚಂದನವನ’ ಜೊತೆ ಚಂದವಾಗಿ ಮಾತನಾಡಿದ್ದಾರೆ. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

*ನೀವು ಹೀರೊ ಆಗಿ ನಟಿಸುತ್ತಿರುವ ಮೊದಲ ಸಿನಿಮಾ ‘ಹುಲಿರಾಯ’. ಈ ಹುಲಿರಾಯನ ಹುಟ್ಟಿನ ಬಗ್ಗೆ ಚುಟುಕಾಗಿ ವಿವರ ಕೊಡುವಿರಾ?
ನಾನೇ ಹೀರೊ ಆಗಿರುವ ಮೊದಲ ಸಿನಿಮಾ ಇದು. ಈ ಮೊದಲು ನಾನು ಸಿನಿಮಾಗಳಲ್ಲಿ ಹಲವು ಪಾತ್ರಗಳನ್ನು ನಿಭಾಯಿಸಿದ್ದೇನೆ. ಖಳನ ಪಾತ್ರಗಳನ್ನು ಮಾಡಿದ್ದೇನೆ, ಪ್ರಮುಖ ಪಾತ್ರಗಳನ್ನೂ ಮಾಡಿದ್ದೇನೆ. ಆದರೆ ‘ಹೀರೊ’ ಎಂದು ಕರೆಸಿಕೊಳ್ಳುವ ಪಾತ್ರ ನನಗೆ ದಕ್ಕಿರುವುದು ಇದೇ ಮೊದಲು.

‘ಲೈಟ್ಸ್‌, ಕ್ಯಾಮೆರಾ, ಆ್ಯಕ್ಷನ್‌’ ಸಿನಿಮಾದಲ್ಲಿ ಮೂರ್ನಾಲ್ಕು ಜನ ಹುಡುಗರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರಲ್ಲಿ ನಾನೂ ಒಬ್ಬನಾಗಿದ್ದೆ. 2014ರಲ್ಲಿ ಇದು ತೆರೆಗೆ ಬಂದಿತ್ತು. ಅದಕ್ಕೂ ಮೊದಲು ‘ಕಡ್ಡಿಪುಡಿ’ ಸಿನಿಮಾದಲ್ಲಿ ಅಭಿನಯಿಸಿದ್ದೆ. ಅದರಲ್ಲಿನ ಪಾತ್ರ ಬಹಳ ಜನರಿಗೆ ಇಷ್ಟವಾಗಿತ್ತು. ಸೂರಿ ಅವರ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ‘ಕಡ್ಡಿಪುಡಿ’ ಸಿನಿಮಾದಲ್ಲಿ ಸೂರಿ ಅವರು ನನಗಾಗಿ ಪ್ರಮುಖ ಪಾತ್ರವೊಂದನ್ನು ಸೃಷ್ಟಿಸಿದ್ದರು. ಅದು ನನಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು. ನಂತರ ಹಲವು ಅವಕಾಶಗಳು ಬಂದವು.

ಆದರೆ, ವಿಭಿನ್ನವಾದ ಪಾತ್ರ ಮಾಡಬೇಕು ಎಂದು ಮನಸ್ಸಿಗೆ ಅನಿಸುತ್ತಿತ್ತು. ಹಾಗಾಗಿಯೇ ಕೈಗೆ ಬಂದ ಕೆಲವು ಅವಕಾಶಗಳನ್ನು ನಿರಾಕರಿಸಿದೆ. ಆ ಹಂತದಲ್ಲಿ ಅರವಿಂದ್ ಕೌಶಿಕ್ ಅವರನ್ನು ಭೇಟಿಯಾದಾಗ, ಜನರ ಮನವನ್ನು ರಂಜಿಸುವಂತಹ ವಿಭಿನ್ನ ಸಿನಿಮಾವೊಂದನ್ನು ಮಾಡೋಣ ಎಂದು ತೀರ್ಮಾನಿಸಿದೆವು. ಆ ತೀರ್ಮಾನದ ಪರಿಣಾಮವಾಗಿ ಜನಿಸಿದ್ದು ‘ಹುಲಿರಾಯ’ ಸಿನಿಮಾ.

*‘ಹುಲಿರಾಯ’ ಸಿನಿಮಾದಲ್ಲಿ ನಿಮಗೆ ನಾಯಕನ ಪಾತ್ರ ಲಭಿಸಿರುವುದರ ಹಿಂದೆಯೂ ಒಂದು ಕಥೆ ಇದೆಯಲ್ಲವೇ? ಏನು ಆ ಕಥೆ?
- ಹಲವು ವರ್ಷಗಳಿಂದ ನನಗೆ ಅರವಿಂದ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಅವರು ಎಷ್ಟೋ ಬಾರಿ ಕರೆ ಮಾಡಿದ್ದರೂ ನನಗೆ ಭೇಟಿ ಆಗಲು ಸಾಧ್ಯವಾಗಿರಲಿಲ್ಲ. ನಾನು ಮತ್ತು ಅವರು ಭೇಟಿಯಾಗದೆ ಮೂರು ವರ್ಷಗಳೇ ಕಳೆದಿದ್ದವು. ಅರವಿಂದ್ ಅವರು ಒಳ್ಳೆಯ ನಿರ್ದೇಶಕ, ಸಿನಿಮಾ ತಂತ್ರಜ್ಞ ಕೂಡ ಹೌದು. ಅವರನ್ನು ಭೇಟಿ ಮಾಡಿ ಏನಾದರೂ ಮಾಡೋಣವೇ ಅನಿಸಿತು. ಹಾಗಾಗಿ ಅದೊಂದು ದಿನ ಅವರಿಗೆ ಎಸ್‌ಎಂಎಸ್‌ ಸಂದೇಶ ಕಳುಹಿಸಿದೆ. ‘ಸಿಗೋಣ?’ ಎಂದು ಕೇಳಿದೆ.

‘ಸಿಕ್ಬಿಡೋಣಾ’ ಎನ್ನುವ ಉತ್ತರ ಅವರಿಂದ ಬಂತು. ‘ಪಿಚ್ಚರ್‌ ಮಾಡ್ಬಿಡೋಣ’ ಎಂದು ನಾನು ಮರು ಸಂದೇಶ ಕಳುಹಿಸಿದೆ. ‘ಮಾಡ್ಬಿಡೋಣ, ಬಂದ್ಬಿಡಿ’ ಅಂದರು ಅರವಿಂದ್. ಇವೆಲ್ಲವೂ ತೀರಾ ಸಹಜವೆಂಬಂತೆ ನಡೆದುಹೋದವು. ಭೇಟಿಯಾದ ತಕ್ಷಣ ‘ಏನಾದರೂ ಮಾಡಬೇಕು’ ಎಂದರು. ಸಿನಿಮಾ ಮಾಡ ಬೇಕು ಎಂಬ ಆಲೋಚನೆ ಇಬ್ಬರಲ್ಲೂ ಇತ್ತು.

ಆದರೆ ನಮ್ಮ ಬಳಿ ಕಥೆ ಇರಲಿಲ್ಲ, ಶೀರ್ಷಿಕೆ ಇರಲಿಲ್ಲ, ನಿರ್ಮಾಪಕರೂ ಇರಲಿಲ್ಲ... ಏನು, ಎತ್ತ, ಗೊತ್ತು, ಗುರಿ... ಹೀಗೆ ಏನೂ ಇರಲಿಲ್ಲ ನಮ್ಮ ಬಳಿ. ಕನ್ನಡದ ವೀಕ್ಷಕರು ಒಪ್ಪಿಕೊಳ್ಳುವ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ತೀರ್ಮಾನಕ್ಕಂತೂ ಬಂದೆವು. ಅವತ್ತು ಅರವಿಂದ್ ಅವರು ತಮ್ಮ ಕಲ್ಪನೆಯ ಪಾತ್ರದ ಬಗ್ಗೆ ಹೇಳಿದ್ದು ಹೀಗೆ: ‘ರೌಂಡ್‌ ಗಾಗಲ್ಸ್‌ ಹಾಕಿಕೊಂಡಿರುವ ಒಬ್ಬ ಕಾಡು ಹುಡುಗ ನಿಂತಿರುತ್ತಾನೆ’.

ನಾನು ಒಬ್ಬ ಚಿತ್ರ ಕಲಾವಿದ ಕೂಡ ಹೌದು. ಅವರ ಮಾತು ಕೇಳಿಸಿಕೊಂಡ ತಕ್ಷಣ, ನನ್ನದೇ ಒಂದು ಚಿತ್ರವನ್ನು ಬರೆದು ತೋರಿಸಿದೆ. ಅದನ್ನು ಕಂಡ ಅರವಿಂದ್‌, ‘ಇದೇ ಕ್ಯಾರೆಕ್ಟರ್‌ ನನ್ನ ಮನಸ್ಸಲ್ಲಿ ಇರುವುದು’ ಎಂದರು. ಇವತ್ತು ‘ಹುಲಿರಾಯ’ ಪೋಸ್ಟರ್‌ ಹಾಗೂ ಟ್ರೇಲರ್‌ಗಳಲ್ಲಿ ಇರುವ ಚಿತ್ರ ಅಂದು ನಾನು ಚಿತ್ರಿಸಿದ್ದು.

ಅಲ್ಲಿಂದ ನಮ್ಮ ಸಿನಿಮಾ ಯಾನ ಶುರುವಾಯಿತು. ಒಂದಿಷ್ಟು ಲೊಕೇಷನ್‌ಗಳನ್ನು ಹುಡುಕಿದೆವು. ನನ್ನ ಸ್ನೇಹಿತ ಕೇಶವ್‌ ಎನ್ನುವವರು ಹಣಕಾಸಿನ ಸಹಾಯ ಮಾಡಿದರು. ಸಿನಿಮಾದ ಟೀಸರ್‌ ಸಿದ್ಧಪಡಿಸಿದೆವು. ಟೀಸರ್‌ ಇಟ್ಟುಕೊಂಡು ನಿರ್ಮಾಪಕರನ್ನು ಹುಡುಕಲು ಆರಂಭಿಸಿದೆವು. ಟೀಸರ್‌ಅನ್ನು ಯೂಟ್ಯೂಬ್‌ನಲ್ಲಿ ಹಾಕಿದೆವು.

ಯೂಟ್ಯೂಬ್‌ನಲ್ಲಿ ಹಾಕಿದ ನಂತರ ಕೆಲವರು ನಮ್ಮನ್ನು ಸಂಪರ್ಕಿಸಿ, ಪರಿಕಲ್ಪನೆ ವಿಭಿನ್ನವಾಗಿದೆ ಎಂದರು. ಇದರಲ್ಲಿ ಹೊಸತನ ಇದೆ, ಕನ್ನಡದ ಬಗ್ಗೆ ಕಾಳಜಿ ಇದೆ ಎಂದು ನಿರ್ಮಾಣಕ್ಕೆ ಮುಂದೆ ಬಂದರು. ಆಗ ನಾಗೇಶ್ ಕೋಗಿಲು ಅವರು ತಾವು ಈ ಸಿನಿಮಾ ನಿರ್ಮಾಣ ಮಾಡಿಯೇ ಸಿದ್ಧ ಎಂದು ಮುಂದೆ ಬಂದರು. ಅವರೇ ಈಗ ನಮ್ಮ ಸಿನಿಮಾ ನಿರ್ಮಾಪಕರು.

*ರಕ್ಷಿತ್ ಶೆಟ್ಟಿ ಅವರ ‘ಪರಮ್‌ವಾ’ ಸಂಸ್ಥೆ ನಿಮ್ಮ ಜೊತೆ ಬಂದಿದ್ದು ಹೇಗೆ?
ನಾವು ಇಡೀ ಸಿನಿಮಾ ಪೂರ್ಣಗೊಳಿಸಿ, ಒಂದು ಪ್ರೀಮಿಯರ್ ಶೋ ಇಟ್ಟುಕೊಂಡಿದ್ದೆವು. ನಾನು, ಅರವಿಂದ್ ಹಾಗೂ ರಕ್ಷಿತ್ ಶೆಟ್ಟಿ ಹಳೆಯ ಸ್ನೇಹಿತರು. ಸಿನಿಮಾ ವೀಕ್ಷಿಸಿದ ರಕ್ಷಿತ್‌ ಅದನ್ನು ಮೆಚ್ಚಿಕೊಂಡರು. ಏನೂ ನಿರೀಕ್ಷೆ ಇಲ್ಲದೆ ಇಲ್ಲಿಗೆ ಬಂದಿದ್ದೆ, ಸಿನಿಮಾ ನೋಡಿ ಥ್ರಿಲ್ ಆಗಿದೆ. ಇದು ಹೊಸ ಬಗೆಯ ಸಿನಿಮಾ. ಎರಡು ದಿನ ಸಮಯ ಕೊಡಿ, ಏನಾದರೂ ಮಾಡುವೆ ಎಂದು ರಕ್ಷಿತ್ ಹೇಳಿದರು. ಪುಷ್ಕರ್‌ ಫಿಲಂಸ್ ಸಂಸ್ಥೆಯವರೂ ಈ ಸಿನಿಮಾ ನೋಡಿದರು. ಅವರಿಬ್ಬರೂ ಸೇರಿ ಸಿನಿಮಾ ವಿತರಣೆಯ ಹೊಣೆ ಹೊತ್ತುಕೊಂಡರು. ಈಗ ಜಯಣ್ಣ ಕಂಬೈನ್ಸ್‌ ಕೂಡ ಸೇರಿಕೊಂಡಿದೆ.

*ಸಿನಿಮಾ ಕಥೆಯ ಗುಟ್ಟು ಬಿಟ್ಟುಕೊಡಲಾಗದು. ಆದರೆ, ಓದುಗರ ಜೊತೆ ಏನು ಹಂಚಿಕೊಳ್ಳಲು ಬಯಸುವಿರಿ?
ಹುಲಿರಾಯ ಹುಟ್ಟಿಕೊಂಡ ಬಗೆ ವಿಭಿನ್ನವಾಗಿದೆ. ಹುಲಿ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಹಲವು ಸಿನಿಮಾಗಳು ಬಂದಿವೆ. ಹಾಗೆ ಹೆಸರಿಟ್ಟುಕೊಂಡ ಸಿನಿಮಾಗಳು ಹಿಟ್ ಆಗಿವೆ. ಆ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದವರಿಗೂ ಒಂದು ತೂಕ ಇದೆ. ಈ ಎಲ್ಲ ಕಾರಣಗಳಿಂದ, ಹುಲಿಯ ಹೆಸರನ್ನು ಸಿನಿಮಾಕ್ಕೆ ಇಟ್ಟುಕೊಂಡಿರುವ ನಮಗೆ ಕೂಡ ಒಂದಿಷ್ಟು ಹೊಣೆ ಇದೆ.

ಈ ಶೀರ್ಷಿಕೆ ಇಟ್ಟುಕೊಂಡು ವಿಭಿನ್ನವಾಗಿಯೇ ಸಿನಿಮಾ ಮಾಡಬೇಕು ಎಂದು ತೀರ್ಮಾನಿಸಿದ್ದೆವು. ಈ ತೀರ್ಮಾನ ಆಧರಿಸಿ ಅರವಿಂದ್ ಕಥೆ ಬರೆಯಲು ಆರಂಭಿಸಿದರು. ‘ನಾನು ಒಬ್ಬ ಹುಡುಗನನ್ನು ಆಗುಂಬೆ ಘಾಟಿಯ ಚೆಕ್‌ಪೋಸ್ಟ್‌ನಲ್ಲಿ ನೋಡಿದ್ದ. ಆತ ಹರಿದುಹೋದ ಅಂಗಿ, ಲುಂಗಿ ಹಾಕಿಕೊಂಡು ನನ್ನನ್ನೇ ನೋಡುತ್ತಿದ್ದ’ ಎಂದು ಅರವಿಂದ್ ಹೇಳಿದ್ದರು.

ಅಂತಹ ಒಬ್ಬ ಹುಡುಗನನ್ನು ಇದ್ದಕ್ಕಿದ್ದಂತೆ ನಗರಕ್ಕೆ ತಂದುಬಿಟ್ಟರೆ ಏನಾಗಬಹುದು ಎಂಬ ಪರಿಕಲ್ಪನೆ ಇಟ್ಟುಕೊಂಡು ಕಥೆ ಬರೆದರು. ಜೀವನದಲ್ಲಿ ಎಂದಿಗೂ ನಗರವನ್ನೇ ನೋಡದವ, ಯಾವುದೋ ಒತ್ತಡದ ಕಾರಣದಿಂದಾಗಿ ಇದ್ದಕ್ಕಿದ್ದಂತೆ ಮಹಾನಗರಕ್ಕೆ ಬಂದಾಗ ಏನಾಗಬಹುದು ಎಂಬುದು ಸಿನಿಮಾ ಕಥೆ.

ಸ್ವಚ್ಛಂದವಾಗಿ ತಿರುಗಾಡಿಕೊಂಡು, ನೀರಿನಲ್ಲಿ ಈಜಾಡಿಕೊಂಡು, ಶುದ್ಧ ಗಾಳಿ ಸೇವಿಸಿಕೊಂಡು ಇದ್ದವನನ್ನು ಬೆಂಗಳೂರಿನಂತಹ ಮಹಾನಗರಕ್ಕೆ ಏಕಾಏಕಿ ತಂದುಬಿಟ್ಟರೆ, ಕಾಡಿನಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದ ಪ್ರಾಣಿಯನ್ನು ನಗರಕ್ಕೆ ತಂದುಬಿಟ್ಟಂತೆ ಆಗಬಹುದು. ಆ ಪ್ರಾಣಿಗೆ ಕೂಡ ಭಾವನೆಗಳು ಇರುತ್ತವೆ, ಅದಕ್ಕೂ ನಗರದ ಬಗ್ಗೆ ಭಯ ಇರುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳಲು ಹೊರಟಿದ್ದೇವೆ. ಇದು ಈ ಸಿನಿಮಾದ ವಿಶೇಷಗಳಲ್ಲಿ ಪ್ರಮುಖವಾಗಿದ್ದು.

ತಾಂತ್ರಿಕವಾಗಿ ಕೂಡ ಈ ಸಿನಿಮಾ ಶ್ರೀಮಂತವಾಗಿದೆ. ಆಗುಂಬೆ, ಹೆಬ್ರಿ, ಸೀತಾನದಿ, ಮಡಿಕೇರಿ, ಕೊಪ್ಪದ ರಮ್ಯ ದೃಶ್ಯಗಳು ಇದರಲ್ಲಿವೆ. ಈ ಸಿನಿಮಾದ ಬಹುಪಾಲು ದೃಶ್ಯಗಳು ಕಾಡಿನ ಪ್ರದೇಶಗಳಲ್ಲಿ ಚಿತ್ರೀಕರಿಸಿದ್ದು. ಸಿನಿಮಾದ ದೃಶ್ಯಗಳಲ್ಲಿ ತಾಜಾತನ ಇದೆ. ಬೆಂಗಳೂರನ್ನು ಕೂಡ ವಿಭಿನ್ನವಾಗಿ ತೋರಿಸಿದ್ದೇವೆ. ಬೆಂಗಳೂರು ಅಂದ ತಕ್ಷಣ ವಿಧಾನಸೌಧ, ಕಬ್ಬನ್ ಪಾರ್ಕ್‌ ಮಾತ್ರ ತೋರಿಸುವ ಕೆಲಸಕ್ಕೆ ಕೈಹಾಕಿಲ್ಲ. ಸಿನಿಮಾ ವೀಕ್ಷಿಸುವಾಗ ಕಾಡಿನ ಘಮ ಕೂಡ ನಿಮ್ಮ ಮೂಗಿಗೆ ಬಡಿಯಬಹುದು!

*ನಿಮ್ಮ ಸಿನಿಮಾ ಹಿನ್ನೆಲೆಯನ್ನು ಕೇಳುವುದನ್ನೇ ಮರೆತುಬಿಟ್ಟೆ?!
ಹ್ಞಾಂ, ನಾನು ಹುಟ್ಟಿದ್ದು ಚೆನ್ನಪಟ್ಟಣದ ಬಳಿಯ ಹಳ್ಳಿಯಲ್ಲಿ. ನಾನು ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಚಿಕ್ಕ ವಯಸ್ಸಿನಲ್ಲಿ ನನ್ನನ್ನು ಕಲಾಮಂದಿರ ಸ್ಕೂಲ್‌ ಆಫ್‌ ಆರ್ಟ್ಸ್‌ಗೆ ಸೇರಿಸಿದರು. ಆವಾಗ ನಾನು ಕದ್ದುಮುಚ್ಚಿ ನಾಟಕಗಳ ತರಗತಿ ನೋಡುತ್ತಿದ್ದೆ. ಅಲ್ಲಿಂದ ನನಗೆ ಅಭಿನಯದ ಹುಚ್ಚು ಬೆಳೆಯಿತು. ಅದಾದ ನಂತರ ಶಾಲೆ–ಕಾಲೇಜುಗಳಲ್ಲಿ ನಾಟಕಗಳನ್ನು ಮಾಡುತ್ತಿದ್ದೆ. ಅಂತಿಮ ಬಿಎಸ್ಸಿ ಪರೀಕ್ಷೆ ಬರೆಯುವ ಬದಲು ನಾಟಕಗಳಿಗೆ ಹೋಗಿಬಿಡುತ್ತಿದ್ದೆ!

ಅಲ್ಲಿಂದ ಹವ್ಯಾಸಿ ರಂಗಭೂಮಿ ಸೇರಿಕೊಂಡೆ. ನಾಟಕಗಳಲ್ಲಿ ನಿರಂತರವಾಗಿ ಅಭಿನಯಿಸಿದೆ. ಹನ್ನೆರಡು ವರ್ಷಗಳ ಹಿಂದೆ ಒಂದು ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೂತ್ರ ವಿಸರ್ಜನೆ ಮಾಡಿ ಸಂಸ ಬಯಲು ರಂಗಮಂದಿರ ಮೂಲಕ ವಾಪಸ್ ಬರುತ್ತಿದ್ದೆ. ಅಲ್ಲಿ ಗಿರೀಶ ಕಾರ್ನಾಡರು ಆಡಿಷನ್ ನಡೆಸುತ್ತಿದ್ದರು. ಆಡಿಷನ್ ಸಾಲಿನಲ್ಲಿ ಹಿಂದೆ ನಿಂತಿದ್ದ ಒಬ್ಬರಲ್ಲಿ ಕೇಳಿದಾಗ, ‘ರಿಜಿಸ್ಟ್ರೇಷನ್ ಹಿಂದಿನ ದಿನವೇ ಮುಗಿದಿದೆ’ ಎಂದರು.

ಇನ್ನೇನು ಮಾಡುವುದು ಎಂದು ನಾನು ನಡೆದು ಹೋಗುತ್ತಿದ್ದೆ. ಆಗ ಒಬ್ಬರು ನನ್ನನ್ನು ಕೂಗಿ ಕರೆದು, ಹಿಂದೆ ಬಂದು ನಿಂತುಕೋ ಯಾರಿಗೂ ಗೊತ್ತಾಗಲ್ಲ ಅಂದರು. ಆಗ ಆಡಿಷನ್ ಮೂಲಕ ನನಗೆ ಅವಕಾಶ ಸಿಕ್ಕಿತು. ‘ಚಿದಂಬರ ರಹಸ್ಯ’ ಎನ್ನುವ ಹೆಸರಿನ ಟೆಲಿ ಸೀರಿಯಲ್ ಆಗಿ ಅದು ಚಂದನ ವಾಹಿನಿಯಲ್ಲಿ ಪ್ರಸಾರ ಆಯಿತು. ಆ ಮೂಲಕ ನಾನು ತೆರೆಯ ಮೇಲಿನ ಬದುಕಿಗೆ ಪ್ರವೇಶ ಕೊಟ್ಟೆ.

*ಹೊಸ ಬಗೆಯ ಸಿನಿಮಾಗಳ ಬಗ್ಗೆ ಏನು ಹೇಳುತ್ತೀರಿ? ನಿಮ್ಮದು ಇಂಥದ್ದೊಂದು ಸಿನಿಮಾ ಆಗಬಲ್ಲದೇ?
ನಮ್ಮ ಸಿನಿಮಾದಲ್ಲಿ ಥ್ರಿಲ್ ಇದೆ. ಇದನ್ನು ಕ್ಯಾರೆಕ್ಟರ್‌ ಆಧರಿಸಿದ ಸಿನಿಮಾ ಎನ್ನಬಹುದು. ಇಷ್ಟರವರೆಗೆ ಈ ಬಗೆಯ ಸಿನಿಮಾವನ್ನು ಕನ್ನಡದಲ್ಲಿ ಯಾರೂ ತಂದಿಲ್ಲ ಎನ್ನಬಹುದು. ಇದು ಇಂದಿನ ಬದುಕಿಗೆ ಅನುಗುಣವಾಗಿ ಹೋಗುವ ರಿಯಲಿಸ್ಟಿಕ್‌ ಸಿನಿಮಾ ಇದು. ನಮ್ಮ ಸಿನಿಮಾ ಕನ್ನಡದಲ್ಲಿ ಒಂದು ಹೊಸ ಅಲೆ ಎಬ್ಬಿಸುತ್ತದೆ ಎಂಬ ನಂಬಿಕೆ ನಮ್ಮದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT