ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ರಗತಿ ಪುನಶ್ಚೇತನಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿ

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬಡ್ಡಿ ದರ ನೀತಿಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯಾವುದೇ ಬದಲಾವಣೆ ಮಾಡದೇ ಇರುವುದು ಹಲವು ವಲಯಗಳಲ್ಲಿ ನಿರಾಶೆ ಮೂಡಿಸಿದೆ. ಆದರೆ ಇದು ಅನಿವಾರ್ಯವಾದ ಕ್ರಮ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಅನಿಶ್ಚಿತತೆ, ತಯಾರಿಕಾ ವಲಯದಲ್ಲಿನ ಮಂದಗತಿ ಹಾಗೂ ಪ್ರಸಕ್ತ ಮುಂಗಾರಿನಲ್ಲಿ ಆಹಾರ ಧಾನ್ಯ ಉತ್ಪಾದನೆ ಇಳಿಕೆ ಸಾಧ್ಯತೆ– ಆರ್ಥಿಕತೆ ಚೇತರಿಕೆ ಹಾದಿಗೆ ಅಡ್ಡಗಾಲು. ಸಾಧಾರಣ ಸಂದರ್ಭವಾಗಿದ್ದಲ್ಲಿ ಬಡ್ಡಿ ದರ ಬದಲಾವಣೆಗೆ ಅವಕಾಶ ಇರುತ್ತಿತ್ತೇನೊ. ಆದರೆ ಅಸಾಧಾರಣ ಕಾಳಜಿ ಅಗತ್ಯವಾಗಿರುವ ಸಮಯ ಇದು. ಏಕೆಂದರೆ ಆರ್ಥಿಕ ವೃದ್ಧಿ ದರದ ನಿರೀಕ್ಷೆಯನ್ನೇ ಆರ್‌ಬಿಐ ಕೆಳಗಿಳಿಸಿದೆ. ಇದು ಆರ್ಥಿಕತೆ ಕುರಿತಂತೆ ವಹಿಸಬೇಕಾಗಿರುವ ಕಾಳಜಿಗೆ ಎಚ್ಚರಿಕೆ ಗಂಟೆಯಾಗಿದೆ.

2017–18ರ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ ಕೇವಲ ಶೇ 6.7 ರಷ್ಟಿರುತ್ತದೆ ಎಂದು ಆರ್‌ಬಿಐ ಅಂದಾಜಿಸಿದೆ. ಕೇವಲ ಎರಡು ತಿಂಗಳ ಹಿಂದೆ ನಡೆಸಿದ್ದ ಆರ್ಥಿಕ ನೀತಿ ಪರಾಮರ್ಶೆಯಲ್ಲಿ ಆರ್ಥಿಕ ವೃದ್ಧಿ ದರ ಶೇ 7.3ರಷ್ಟಿರುತ್ತದೆ ಎಂದು ಆರ್‌ಬಿಐ ಹೇಳಿತ್ತು. ಈಗ ಈ ಅಂದಾಜು ಇಷ್ಟು ತೀವ್ರ ಪ್ರಮಾಣದಲ್ಲಿ ಕುಸಿದಿರುವುದು ಆತಂಕಕಾರಿ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಹಣದುಬ್ಬರ ಪ್ರಮಾಣದಲ್ಲೂ ಸ್ವಲ್ಪ ಮಟ್ಟಿನ ಏರಿಕೆ ಗೋಚರಿಸಲಿದೆ. ಇದು ಶೇ 4– 4.5ರಿಂದ 4.2– 4.6ರ ಆಸುಪಾಸಿನಲ್ಲಿರುತ್ತದೆ.

ಶೇ 4ರಲ್ಲಿ ಹಣದುಬ್ಬರವನ್ನು ಕಾಯ್ದುಕೊಳ್ಳುವ ಬಗ್ಗೆ ಆರ್‌ಬಿಐ ಕಾತರವಾಗಿರುವುದು ಸ್ಪಷ್ಟ. ಹಣದುಬ್ಬರ ನಿಯಂತ್ರಣದ ಮೂಲಕ ಹಣಕಾಸು ಶಿಸ್ತು ಕಾಪಾಡುವುದು ಆರ್‌ಬಿಐ ಆದ್ಯತೆಯಾಗಿದೆ.

ಉದ್ಯೋಗ, ಆದಾಯ, ಬೆಲೆ ಹಾಗೂ ಹಣದ ವೆಚ್ಚ ಕುರಿತಂತೆ ಆರ್‌ಬಿಐನ ಸಮೀಕ್ಷೆ, ರಾಷ್ಟ್ರದ ಆರ್ಥಿಕ ರಂಗವನ್ನು ಸುತ್ತುವರಿದಿರುವ ಕಾರ್ಮೋಡಗಳನ್ನು ಬಯಲುಗೊಳಿಸಿದೆ. ಜಿಎಸ್‌ಟಿ ಅನುಷ್ಠಾನದಿಂದ ಸದ್ಯಕ್ಕೆ ತಯಾರಿಕಾ ವಲಯದ ಮೇಲೆ ಪ್ರತಿಕೂಲ ಪರಿಣಾಮವಾಗಿರುವುದು ದೊಡ್ಡದಾಗಿಯೇ ಗೋಚರವಾಗುತ್ತಿದೆ. ಇದು ಹಣಹೂಡಿಕೆ ಚಟುವಟಿಕೆಯನ್ನು ಇನ್ನಷ್ಟು ವಿಳಂಬ ಮಾಡುವ ಸಂಭವವಿದೆ. ಖಾಸಗಿ ಹಣಹೂಡಿಕೆ ಹೆಚ್ಚಳ ಮಾಡಲು ಹಣಕಾಸು ನೀತಿ ಮಾತ್ರವಲ್ಲ ಆಡಳಿತಾತ್ಮಕ ಕ್ರಮಗಳೂ ಬೇಕು ಎಂಬುದನ್ನು ಕೇಂದ್ರ ಸರ್ಕಾರ ಅರಿಯಬೇಕು. ಆರ್ಥಿಕ ಬೆಳವಣಿಗೆಯ ಮುಖ್ಯ ಎಂಜಿನ್ ಎಂದು ಪರಿಗಣಿಸಲಾದ ರಫ್ತು ವಹಿವಾಟು ಕುಸಿದಿದೆ. ಈ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ರಾಷ್ಟ್ರಗಳಿಗಿಂತ ನಾವು ಹಿಂದೆ ಇದ್ದೇವೆ ಎಂಬುದು ಕಳವಳದ ಸಂಗತಿ.

ಜಿಎಸ್‌ಟಿ ಅನುಷ್ಠಾನದ ಸಮಸ್ಯೆಗಳನ್ನು ಪರಿಹರಿಸಬೇಕು. ಹಣಹೂಡಿಕೆ ಚಟುವಟಿಕೆಗಳಿಗೆ ಹೊಸ ಬಲ ತುಂಬಬೇಕು. ಈ ಹೊಣೆಯನ್ನು ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸರ್ಕಾರದ ಹೆಗಲಿಗೇರಿಸಿದೆ. ಸ್ಥಗಿತಗೊಂಡಿರುವ ಸರ್ಕಾರಿ ಕ್ಷೇತ್ರದ ಹಣಹೂಡಿಕೆ ಯೋಜನೆಗಳು ಆರಂಭವಾಗುವಂತೆ ಕ್ರಮಗಳನ್ನು ಕೈಗೊಳ್ಳುವುದು ಸದ್ಯದ ಅಗತ್ಯ. ಸಂಸ್ಥೆಗಳಿಗೆ ಸಾಲ ನೀಡಲು ಸಾಧ್ಯವಾಗುವಂತೆ ಬ್ಯಾಂಕ್‌ಗಳಿಗೆ ಹೆಚ್ಚು ಬಂಡವಾಳ ಹರಿಯುವಂತಾಗಬೇಕು. ಮಂದಗತಿಯ ಆರ್ಥಿಕತೆಯಿಂದಾಗಿ ಹೆಚ್ಚು ಹಾನಿಗೊಳಗಾಗಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೆಚ್ಚು ಶಕ್ತಿ ತುಂಬಬೇಕು. ‘ಜಿಡಿಪಿ ದರ ಶೇ 5.7ಕ್ಕೆ ಕುಸಿದಿರುವುದು ಇದೇ ಮೊದಲೇನಲ್ಲ. ಶೀಘ್ರವೇ ಸರಿಪಡಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಈ ಭರವಸೆ ಜಾರಿಗೆ ಬರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT