ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ಕಣಿವೆಯಲ್ಲಿ ‘ಭೂಮಣ್ಣಿ’ ಹಬ್ಬದ ಸಂಭ್ರಮ

Last Updated 6 ಅಕ್ಟೋಬರ್ 2017, 8:34 IST
ಅಕ್ಷರ ಗಾತ್ರ

ಕಾರ್ಗಲ್: ಶರಾವತಿ ಕಣಿವೆಯ ಗ್ರಾಮೀಣ ಭಾಗಗಳಲ್ಲಿ ರೈತರು ಭೂಮಿ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ತಯಾರಿಸಿದ ಚರಗವನ್ನು ಭೂತಾಯಿಯ ಒಡಲಿಗೆ ಗುರುವಾರ ಅರ್ಪಿಸುವ ಮೂಲಕ ಭಕ್ತಿಯಿಂದ ಆಚರಿಸಿದರು.

ಬಿದರೂರು, ಅರಲಗೋಡು, ಮಳಲಿ, ಹೆನ್ನಿ, ಮರಾಠಿಕೇರಿ, ಇಡುವಾಣಿ ಮುಂತಾದ ಭಾಗಗಳಲ್ಲಿ ಮುಂಜಾನೆಯಿಂದಲೇ ರೈತರು ಭತ್ತದ ಹೊಲ, ಅಡಿಕೆ ತೋಟಗಳಲ್ಲಿ ಹಬ್ಬ ಆಚರಿಸಿದರು.

ಮಹಿಳೆಯರು ಸೂರ್ಯೋದಯಕ್ಕೆ ಮುನ್ನ ಸ್ನಾನ ಮುಗಿಸಿ ಮಡಿಯಿಂದ ಕಡುಬು, ಹೋಳಿಗೆ, ಪಾಯಸ, ತುಪ್ಪ, ಅನ್ನ, ಸಾರು, ವಿವಿಧ ಕಾಳುಗಳ ಪಲ್ಯ, ಸೌತೆಕಾಯಿಯಿಂದ ತಯಾರಿಸಿದ ವಿಶೇಷವಾದ ಖಾದ್ಯಗಳನ್ನು ಭೂತಾಯಿಯ ಬಯಕೆ ತೀರಿಸಲೆಂದು ಸಿದ್ಧಪಡಿಸುತ್ತಿದ್ದರು. ವಿಶೇಷ ಅಲಂಕೃತ ಭೂಮಣ್ಣಿ ಬುಟ್ಟಿಯಲ್ಲಿ ತಿಂಡಿ ತಿನಿಸುಗಳನ್ನು ತುಂಬಿಕೊಂಡು ಮನೆಯಲ್ಲಿರುವ ಗಂಡಸರ ತಲೆಯ ಮೇಲೆ ಹೊರಿಸಿ ಹೊಲ ಗದ್ದೆಗಳಿಗೆ ಹೋದರು.

ವಿಶೇಷ ಅಲಂಕೃತವಾದ ಬಾಳೆದಿಂಡಿನ ಮಂಟಪದಲ್ಲಿ ಭೂತಾಯಿಯ ಆವಾಹನೆ ಮಾಡಿ ಪೂಜಿಸುವುದು ಪದ್ಧತಿ. ಭೂತಾಯಿ ಹಸಿರು ಬಣ್ಣದೊಂದಿಗೆ ಬೇಳೆಕಾಳುಗಳನ್ನು ಮೈದುಂಬಿ ಕೊಂಡು ನಿಂತಿರುವುದನ್ನು ಗರ್ಭಧರಿಸಿರುವಂತೆ ಭಾವಿಸುವ ರೈತರು, ಬಯಕೆ ಶಾಸ್ತ್ರವನ್ನು ತೀರಿಸುವ ಸಂಪ್ರದಾಯವೂ ಇದಾಗಿದೆ.

ಮಹಿಳೆಯರು ಭಕ್ತಿಯಿಂದ ತಯಾರಿಸಿದ ಖಾದ್ಯಗಳನ್ನು ಪುರುಷರು ಬುಟ್ಟಿಯಲ್ಲಿ ಹೊತ್ತು, ಖಾದ್ಯ ಚರಗವನ್ನು ಹೊಲ ಗದ್ದೆಗಳ ಮೇಲ್ಮೈಗೆ ಚೆಲ್ಲಿಬರುವುದು ಪಾರಂಪರಿಕವಾಗಿ ನಡೆದು ಬಂದಿರುವ ಆಚರಣೆಯಾಗಿದೆ ಎಂದು ಹೆನ್ನಿ ಭಾಗದ ರೈತ ಜೆ.ಎಚ್. ರಾಜಪ್ಪ ತಿಳಿಸಿದರು.

ಮಲೆನಾಡಿನ ದೀವರು ಹಬ್ಬ ಆಚರಣೆಯನ್ನು ಹೆಚ್ಚಾಗಿ ಹೊಲ ಗದ್ದೆಗಳ ಪಕ್ಕದ ತೋಟಗಳಲ್ಲಿ ಆಚರಿಸಿದರೆ, ಜೈನರು, ಕುಣಬಿ ಮರಾಠಿ ಜನಾಂಗದವರು ಭತ್ತದ ಹೊಲಗಳಲ್ಲಿ ಭೂಮಣ್ಣಿ ಹಬ್ಬವನ್ನು ಆಚರಣೆ ಮಾಡುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT