ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್‌, ಖರೀದಿಯಲ್ಲಿ ಅಕ್ರಮ ಇದಕ್ಕೆ ಹಾಕಬೇಕು ಕಡಿವಾಣ

ಸಂಪಾದಕೀಯ
Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಬೊಕ್ಕಸದ ಹಣವನ್ನು ಸ್ವಂತ ಹಣದಷ್ಟೇ ಕಾಳಜಿಪೂರ್ವಕವಾಗಿ, ಜೋಪಾನವಾಗಿ, ಎಚ್ಚರಿಕೆಯಿಂದ ವಿನಿಯೋಗ ಮಾಡಬೇಕು ಎನ್ನುತ್ತದೆ ಕರ್ನಾಟಕ ಹಣಕಾಸು ಸಂಹಿತೆಯ 15 (1) ಕಲಂ. ಅಂದರೆ ಸರ್ಕಾರಿ ಅಧಿಕಾರಿಯು ಬೊಕ್ಕಸದ ಹಣವನ್ನು ಮನಸ್ಸಿಗೆ ಬಂದಂತೆ ಬೇಕಾಬಿಟ್ಟಿ ದುಂದು ಮಾಡಬಾರದು; ತುಂಬ ಜಾಗ್ರತೆ ವಹಿಸಬೇಕು ಎನ್ನುವುದು ಅದರ ಅರ್ಥ. ಜನಸಾಮಾನ್ಯರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಖರ್ಚು ಮಾಡುವ ಅಧಿಕಾರ ಉಳ್ಳ ಜನಪ್ರತಿನಿಧಿಗಳಿಗೂ ಇದು ಅನ್ವಯಿಸುತ್ತದೆ. ಬೇಸರದ ಸಂಗತಿ ಎಂದರೆ, ಆ ನಿಯಮ ಬರೀ ಕಾಯ್ದೆ ಪುಸ್ತಕದಲ್ಲಿದೆಯೇ ಹೊರತು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಒಂದು ವೇಳೆ ಜಾರಿಯಾಗಿದ್ದರೆ ಭ್ರಷ್ಟಾಚಾರ, ಹಣ ದುರುಪಯೋಗ, ದುಂದು ವೆಚ್ಚ, ಅವ್ಯವಹಾರಗಳಿಗೆ ಅವಕಾಶವೇ ಸಿಗುತ್ತಿರಲಿಲ್ಲ. ರಾಜ್ಯದ ಆರೋಗ್ಯ ಇಲಾಖೆಯ ಇ–ಹಾಸ್ಪಿಟಲ್‌, ಆರೋಗ್ಯ ಭಾಗ್ಯ ಯೋಜನೆಯ ಟೆಂಡರ್‌– ಖರೀದಿ ಪ್ರಕ್ರಿಯೆಗಳನ್ನು ನೋಡಿದರೆ ಅವ್ಯವಹಾರದ ದುರ್ವಾಸನೆ ಜೋರಾಗಿಯೇ ಮೂಗಿಗೆ ಬಡಿಯುತ್ತಿದೆ. ಒಂದಕ್ಕೆ ನಾಲ್ಕರಷ್ಟು ಖರ್ಚು ಮಾಡಲು ಇಲಾಖೆ ತೋರಿಸುತ್ತಿರುವ ಅತ್ಯುತ್ಸಾಹ, ತರಾತುರಿಯಂತೂ ಅಚ್ಚರಿ ಮೂಡಿಸುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗೂ, ಇಲಾಖೆಯಲ್ಲಿ ನಡೆಯುತ್ತಿರುವ ಖರೀದಿ ಅಕ್ರಮಗಳಿಗೂ ಜನ ತಳಕು ಹಾಕುತ್ತಿದ್ದಾರೆ. ಅವರ ಅನುಮಾನವನ್ನು ಪರಿಹರಿಸುವುದು ಆಡಳಿತದ ಸೂತ್ರ ಹಿಡಿದವರ ಜವಾಬ್ದಾರಿ. ಏಕೆಂದರೆ ಸರ್ಕಾರ ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿರುವುದು ಪ್ರಜೆಗಳು ಬೆವರು ಸುರಿಸಿ ತೆರಿಗೆ ರೂಪದಲ್ಲಿ ಕೊಟ್ಟ ಹಣ ಎನ್ನುವುದನ್ನು ಮರೆಯಬಾರದು.

ಇ– ಹಾಸ್ಪಿಟಲ್‌ ಯೋಜನೆಗೆ ಆರೋಗ್ಯ ಇಲಾಖೆಯು ಅವಸರದಲ್ಲಿ ಗುತ್ತಿಗೆ ನೀಡಿದೆ. ಯೋಜನೆಯ ಅನುಷ್ಠಾನಕ್ಕೆ ಬೇಕಾದ ಉಪಕರಣಗಳು ಮತ್ತು ಸೇವೆಗಳಿಗೆ ದುಪ್ಪಟ್ಟು ಹಣ ಪಾವತಿಸಲು ಒಪ್ಪಿಕೊಂಡಿದೆ. ಕಂಪ್ಯೂಟರ್‌ ಟ್ಯಾಬ್ಲೆಟ್‌ಗಳು, ಸ್ಕ್ಯಾನರ್‌ಗಳು, ಅಡೆತಡೆಯಿಲ್ಲದೆ ವಿದ್ಯುತ್‌ ಪೂರೈಸುವ ಯುಪಿಎಸ್‌ಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚು ಪಾವತಿಸಲಿದೆ. ಒಂದೊಂದು ರಂಧ್ರ ಕೊರೆಯಲು ₹ 148 ಕೊಡುವುದಂತೂ ಅಂದಾದುಂದಿಯ ಪರಮಾವಧಿ. ಸಾರ್ವಜನಿಕರ ಹಣದ ದುರುಪಯೋಗ. ಒಟ್ಟೂ ₹ 34.35 ಕೋಟಿಯ ಈ ಯೋಜನೆಯಲ್ಲಿ ಸರ್ಕಾರ ಚೌಕಾಸಿ ಮಾಡಿದ್ದರೆ ₹ 10 ಕೋಟಿಗೂ ಹೆಚ್ಚು ಉಳಿಯುತ್ತಿತ್ತು. ವಾಸ್ತವದಲ್ಲಿ ಸಗಟು ಖರೀದಿ ದರ ಮಾರುಕಟ್ಟೆ ದರಕ್ಕಿಂತ ಕಡಿಮೆಯೇ ಇರುತ್ತದೆ. ಸಗಟು ದರದಲ್ಲಿ ಪೂರೈಸಲು ಪೈಪೋಟಿಯಿದೆ. ಅದನ್ನು ಲೆಕ್ಕ ಹಾಕಿದರೆ ಉಳಿತಾಯದ ಮೊತ್ತ ಇನ್ನೂ ಹೆಚ್ಚೇ ಇರುತ್ತಿತ್ತು. ಅಂತಹ ಪ್ರಯತ್ನವೇ ನಡೆದಂತೆ ಕಾಣುತ್ತಿಲ್ಲ. ಇನ್ನು, ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ವಿವರ, ಚಿಕಿತ್ಸೆಯ ಮಾಹಿತಿಯನ್ನು ಡಿಜಿಟಲ್‌ ರೂಪದಲ್ಲಿ ಶಾಶ್ವತವಾಗಿ ಸಂಗ್ರಹಿಸಿಡುವ ಇ– ಹಾಸ್ಪಿಟಲ್‌ ಯೋಜನೆಯೇನೋ ಒಳ್ಳೆಯದು. ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಖಾಸಗಿ ಸಂಸ್ಥೆಯೊಂದು ಸಲ್ಲಿಸಿದ ದುಬಾರಿ ದರಪಟ್ಟಿಯನ್ನು ಒಪ್ಪಿಕೊಂಡು ಟೆಂಡರ್‌ ತೆರೆದ ಎರಡೇ ದಿನಗಳ ಒಳಗೆ ಕಾರ್ಯಾದೇಶ ನೀಡಿ ಕರಾರು ಪತ್ರ ಮಾಡಿಕೊಂಡಿರುವುದರ ಉದ್ದೇಶ ಏನು? ಇಷ್ಟೊಂದು ಚುರುಕಾಗಿ ಕೆಲಸ ಮಾಡುವ ದಕ್ಷತೆ ಸರ್ಕಾರಕ್ಕೆ ಎಂದಿನಿಂದ ಬಂತು?

ಒಂದು ವಾರದ ಹಿಂದೆ ಕೂಡ ಇದೇ ರೀತಿ, ಆರೋಗ್ಯ ಭಾಗ್ಯ ಯೋಜನೆಯ ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳುವ ಮತ್ತು ಆಧಾರ್‌ ಸಂಖ್ಯೆಗೆ ಜೋಡಿಸುವ ಕೆಲಸಕ್ಕಾಗಿ ₹ 450 ಕೋಟಿಯ ಟೆಂಡರ್‌ ಕರೆಯಲಾಗಿತ್ತು. ಆ ವ್ಯವಹಾರದಲ್ಲಿ ಸಹ ಯಾವುದೂ ಪಾರದರ್ಶಕವಾಗಿರಲಿಲ್ಲ. ಎಲ್ಲವೂ ತರಾತುರಿಯಲ್ಲೇ ನಡೆದಿದ್ದವು. ಇದೇ ಮಾದರಿಯ ಯೋಜನೆಗೆ ಉತ್ತರ ಪ್ರದೇಶದಲ್ಲಿ ಪ್ರತೀ ಫಲಾನುಭವಿಗೆ ತಲಾ ₹ 10 ಖರ್ಚಾಗಿದ್ದರೆ, ನಮ್ಮ ಸರ್ಕಾರ ತಲಾ ₹ 70 ಖರ್ಚು ಮಾಡಲು ಮುಂದಾಗಿತ್ತು. ಸಾರ್ವಜನಿಕ ವಲಯದಿಂದ ಭಾರಿ ಟೀಕೆ– ಟಿಪ್ಪಣಿಗಳು ಬಂದ ನಂತರ ಕೈಬಿಟ್ಟಿತ್ತು. ಸರ್ಕಾರಿ ಟೆಂಡರ್‌, ಖರೀದಿ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು. ಅದಕ್ಕಾಗಿಯೇ ನಮ್ಮಲ್ಲಿ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ’ (ಕೆಟಿಟಿಪಿ) ಜಾರಿಯಲ್ಲಿದೆ. ಅದನ್ನು ಪಾಲಿಸುವುದು ಕಡ್ಡಾಯ. ಆದರೆ ಈ ಎರಡೂ ಪ್ರಕ್ರಿಯೆಗಳಲ್ಲಿ ಆರೋಗ್ಯ ಇಲಾಖೆ ಈ ಕಾಯ್ದೆಯನ್ನು ಪಾಲಿಸಿದಂತೆ ಕಾಣುತ್ತಿಲ್ಲ. ಇದು ಅಕ್ಷಮ್ಯ. ತಾನೇ ಮಾಡಿದ ಕಾಯ್ದೆ, ನಿಯಮಗಳಿಗೆ ಸರ್ಕಾರ ಬದ್ಧವಾಗಿರಬೇಕು. ಸಾರ್ವಜನಿಕರ ಹಣದ ದುರುಪಯೋಗಕ್ಕೆ ಕಡಿವಾಣ ಬೀಳಬೇಕು. ಇನ್ನಾದರೂ ಇಂತಹ ದುಸ್ಸಾಹಸಕ್ಕೆ ಸರ್ಕಾರ ಕೈಹಾಕದೇ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT