ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಾರಕ್ಕೆ ಸಂದ ನೊಬೆಲ್‌!

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವೈದ್ಯಕೀಯ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ನೀಡಲಾಗುವ ನೊಬೆಲ್‌ ಬಹುಮಾನವನ್ನು ಈ ವರ್ಷ ಕ್ಯಾನ್ಸರ್‌, ಎಬೋಲಾ, ಏಡ್ಸ್‌ ಮುಂತಾದ ಮಾರಣಾಂತಿಕ ಕಾಯಿಲೆಗಳಿಗೆ ಸಂಬಂಧಿಸಿದ ಸಂಶೋಧನೆಗಳ ಬದಲಿಗೆ ‘ಜೈವಿಕ ಗಡಿಯಾರಗಳ ಕಾರ್ಯವಿಧಾನ’ದಂತಹ ಮೂಲವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗೆ ನೀಡಿರುವುದು ಹಲವರ ಹುಬ್ಬನ್ನು ಮೇಲೇರಿಸಿದೆ.

ಅಮೆರಿಕಾದ ಮೈನ್‌ ವಿಶ್ವವಿದ್ಯಾಲಯದ ಜೆಫ್ರಿ ಸಿ. ಹಾಲ್‌, ಬ್ರಾಂಡಿಯಸ್‌ ವಿಶ್ವವಿದ್ಯಾಲಯದ ಮಿಷಲ್‌ ರಾಸ್‌ಬಾಷ್‌ ಮತ್ತು ರಾಕೆ ಫೆಲ್ಲರ್‌ ವಿಶ್ವವಿದ್ಯಾಲಯದ ಮಿಷಲ್‌ ಡಬ್ಲ್ಯೂ. ಯಂಗ್‌ ಎಂಬ ವಿಜ್ಞಾನಿತ್ರಯರು ನಮಗೆಲ್ಲ ಕಿರಿಕಿರಿ ಮಾಡುವ ಗುಂಗಾಡುಗಳೆಂಬ ಸಣ್ಣ ಹುಳುಗಳ ದೇಹದಲ್ಲಿರುವ ‘ಜೈವಿಕ ಗಡಿಯಾರ’ವನ್ನು ನಿಯಂತ್ರಿಸುವ ವಂಶವಾಹಿಯನ್ನು ಪ್ರತ್ಯೇಕಿಸಿ ಕೋಟ್ಯಂತರ ರೂ‍ಪಾಯಿ ಬಹುಮಾನಕ್ಕೆ ಪಾತ್ರರಾಗಿದ್ದಾರೆ! ‘ಇವರ ಈ ಸಂಶೋಧನೆಯು ಗಿಡಮರಗಳು ಮತ್ತು ಮನುಷ್ಯನೂ ಸೇರಿದಂತೆ ಎಲ್ಲ ಜೀವಿಗಳು ಹೇಗೆ ತಮ್ಮ ಜೈವಿಕ ಲಯವನ್ನು ಭೂಮಿಯ ಪರಿಭ್ರಮಣಕ್ಕೆ ಹೊಂದಿಸಿಕೊಳ್ಳುತ್ತವೆ ಎಂಬುದನ್ನು ನಿರೂಪಿಸುತ್ತದೆ’ ಎಂದು ಪ್ರಶಸ್ತಿಯನ್ನು ಕೊಡಮಾಡುವ ಸ್ವೀಡನ್ನಿನ ಕೆರೋಲಿನ್ಸ್ಕ ಇನ್ಸ್‌ಟಿಟ್ಯೂಟ್‌ನ ನೊಬೆಲ್‌ ಪ್ರಶಸ್ತಿ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಅಚ್ಚರಿಯ ಮಾತೆಂದರೆ ಈ ಮೂವರಿಗೂ ನೊಬೆಲ್‌ ಪ್ರಶಸ್ತಿ ಬರಬಹುದೆಂಬ ಸುಳಿವು ಇತರರಿಗಿರಲಿ, ಸ್ವತಃ ಅವರುಗಳಿಗೇ ಇರಲಿಲ್ಲವಂತೆ! ನೊಬೆಲ್‌ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿಯಾದ ಥಾಮಸ್‌ ಪೆರ್ಲ್‌ಮನ್‌ ಬೆಳ್ಳಂಬೆಳಗ್ಗೆ ಮಿಷಲ್‌ ರಾಸ್‌ಬಾಷ್‌ರಿಗೆ ಫೋನ್‌ ಮಾಡಿ ವಿಷಯ ತಿಳಿಸಿದಾಗ ಒಂದು ಕ್ಷಣ ಮೌನವಾಗಿದ್ದ ರಾಸ್‌ಬಾಷ್‌’ ‘ನೀವು ತಮಾಷೆ ಮಾಡುತ್ತಿದ್ದೀರಿ’ ಎಂದು ಪ್ರತಿಕ್ರಯಿಸಿದರಂತೆ!!

ಏಕೆಂದರೆ ಈ ಬಾರಿಯ ನೊಬೆಲ್‌ ಪ್ರಶಸ್ತಿ ಕ್ಯಾನ್ಸರ್‌ನ ವಿರುದ್ಧ ಹೋರಾಡುವ ದೇಹಕಣಗಳ ಸಂಶೋಧನೆಯಾದ ಇಮ್ಯೂನೋ ಥೆರಪಿಗೋ ಅಥವಾ ಕ್ರಾಂತಿಕಾರಕ ಸಂಶೋಧನೆಯೆಂದೇ ಕರೆಯಬಹುದಾದ ‘ಜೀನ್‌ ಎಡಿಟಿಂಗ್‌’ ತಂತ್ರಜ್ಞಾನಕ್ಕೋ ಸಿಗುತ್ತದೆ ಎಂದೇ ಎಲ್ಲಾ ಮಹಾ ಮಹಾ ಪಂಡಿತರು ಗಿಳಿಶಾಸ್ತ್ರ ನುಡಿದಿದ್ದರು. ಅಂತಹುದರಲ್ಲಿ ಯಾವುದೇ ಅತ್ಯಾಧುನಿಕತೆಯ ಸೋಂಕಿಲ್ಲದ, ಬಹಳ ಸರಳವಾದ ಸ್ವರೂಪದ ಸಂಶೋಧನೆಗೆ ನೊಬೆಲ್‌ ಬಹುಮಾನ ಬರುತ್ತದೆ ಎಂದರೆ ಆನ್ವಯಿಕ ಸಂಶೋಧನೆಯನ್ನು ಹಿಂದೊತ್ತಿ ಮತ್ತೆ ಮೂಲಭೂತ ಸಂಶೋಧನೆಗೆ ಜಗತ್ತು ಮಣೆಹಾಕುತ್ತಿದೆಯೇ!

ಈ ಪ್ರಶ್ನೆಗೆ ಉತ್ತರ ದೊರೆಯಬೇಕಾದರೆ ‘ಜೈವಿಕ ಗಡಿಯಾರ’ ಎಂದರೇನು, ನಮ್ಮೆಲ್ಲರ ಬದುಕಿನಲ್ಲಿ ಇದು ವಹಿಸುವ ಪಾತ್ರವೇನು ಎಂಬುದನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ನಮ್ಮ ದೇಹ ತನ್ನ ಚಟುವಟಿಕೆಗಳನ್ನು ನಡೆಸುವುದು ಸೂರ್ಯನ ಚಲನೆಯನ್ನು ಅನುಸರಿಸಿಯೇ.

ಕತ್ತಲು ಬೆಳಕಿನ ಈ ಆಟವೇ ಸಕಲ ಚರಾಚರ ಜೀವರಾಶಿಗಳ ಚಟುವಟಿಕೆಗಳ ಹಿಂದಿನ ಚೈತನ್ಯ. ಜೀವಿಯ ಪ್ರತಿ ಕಣ ಕಣಗಳಲ್ಲಿ ಇರುವ ಈ ಅಗೋಚರ ಜೈವಿಕ ಗಡಿಯಾರಗಳು ಸುಮಾರು 24 ಗಂಟೆ 11 ನಿಮಿಷಗಳಿಗೆ ಒಮ್ಮೆ ಆವರ್ತನೆಗೊಳ್ಳುತ್ತವೆ.

ಈ ಆವರ್ತನೆಗಳ ಸರಣಿಯೆ ‘ಜೈವಿಕ–ಲಯ.’ ಮೊದಲಿಗೆ ಕೇವಲ ನಾವು ಮಲಗುವ ಮತ್ತು ಏಳುವ ಕ್ರಿಯೆಗಳ ಹಿಂದಷ್ಟೇ ಜೈವಿಕ ಗಡಿಯಾರಗಳ ಪಾತ್ರವಿದೆ ಎಂದು ಭಾವಿಸಲಾಗಿತ್ತು. ಆದರೆ ಆಧುನಿಕ ಸಂಶೋಧನೆಗಳು ಹಸಿವು, ಹೃದಯದ ಬಡಿತ, ಹಾರ್ಮೋನುಗಳ ಕಾರ್ಯನಿರ್ವಹಣೆ, ರೋಗನಿರೋಧತೆ, ಬುದ್ಧಿಯ ಚುರುಕುತನ, ಭಾವನೆಗಳ ಏರುಪೇರು, ಅಷ್ಟೇಕೆ ದೇಹದ ಮೇಲೆ ಔಷಧಗಳು ಬೀರುವ ಪರಿಣಾಮ –  ಇವೆಲ್ಲದರ ಹಿಂದೆಯೂ ಜೈವಿಕ ಲಯದ ಕೈವಾಡವಿದೆ ಎಂಬುದನ್ನು ಸಾಬೀತುಗೊಳಿಸಿವೆ.

ಜೈವಿಕಲಯದ ಅಧ್ಯಯನವು ಶರೀರಕ್ರಿಯಾ ವಿಜ್ಞಾನದ ಕ್ಷೇತ್ರದಲ್ಲಿ ಒಂದು ಪ್ರತ್ಯೇಕ ವಿಭಾಗವಾಗಿಯೇ ಬೆಳೆದು ನಿಂತಿದೆ. ಜೆಟ್‌ ಲ್ಯಾಗ್‌, ರಾತ್ರಿ ಪಾಳಿಯ ದುಡಿತ ಮುಂತಾದ ಒತ್ತಡದ ಬದುಕಿನ ಚಟುವಟಿಕೆಗಳು ಜೈವಿಕ ಗಡಿಯಾರದ ಚಲನೆಯನ್ನು ಅಡ್ಡಾದಿಡ್ಡಿಯಾಗಿ ಮಾಡುವುದೇ ನಮ್ಮೆಲ್ಲ ಅನಾರೋಗ್ಯಗಳ ಮೂಲಕಾರಣ ಎಂದು ವಿಜ್ಞಾನಿಗಳು ಸಾರಿ ಹೇಳುತ್ತಿದ್ದಾರೆ.

ಜೈವಿಕ ಗಡಿಯಾರಗಳ ಚಲನೆಯನ್ನು ನಿಯಂತ್ರಿಸುವ ವಂಶವಾಹಿ ಯಾವುದೆಂದು ಪತ್ತೆ ಮಾಡಿ ಅದನ್ನು ರಿಪೇರಿ ಮಾಡುವುದು ಸಾಧ್ಯವಾದರೆ ಮನುಕುಲದ ಎಲ್ಲ ರೋಗಗಳಿಗೆ ಒಂದೇ ರಾಮಬಾಣ ಸಿಕ್ಕಂತೆ ಆಗುವುದಿಲ್ಲವೇ? ಅಮೆರಿಕನ್‌ ವಿಜ್ಞಾನಿ ತ್ರಯರ ಸಾಧನೆ ಇರುವುದು ಇಲ್ಲಿಯೇ.

ನಮ್ಮ ದೇಹದ ಚಟುವಟಿಕೆಗಳಿಗೂ ಸೂರ್ಯನ ಚಲನೆಗೂ ಇರುವ ಸಂಬಂಧವನ್ನು ಕುರಿತಾದ ಸಂಶೋಧನೆ ಇಂದು ನಿನ್ನೆಯದೇನಲ್ಲ. ಕ್ರಿ.ಶ. 1729 ರಷ್ಟು ಹಿಂದೆಯೇ ಫ್ರಾನ್ಸಿನ ಖಗೋಳ ವಿಜ್ಞಾನಿಯಾಗಿದ್ದ ಜೀನ್‌ ಜಾಕ್ವೆಸ್‌ ಡಿ ಮೈರಾನ್‌ ಎಂಬಾತ ಮುಟ್ಟಿದರೆ ಮುನಿ ಗಿಡಗಳನ್ನು ಬಳಸಿ ಸಂಶೋಧನೆ ನಡೆಸಿದ್ದ.

1970ರ ದಶಕದಲ್ಲಿ ಸೈಮೋರ್‌ ಬೆನ್ಜರ್‌ ಮತ್ತು ಅವನ ಶಿಷ್ಯ ರೊನಾಲ್ಡ್‌ ಕೊನೋಪ್ಕಾ ಗುಂಗಾಡುಗಳ ಜೈವಿಕ ಲಯವನ್ನು ನಿಯಂತ್ರಿಸುವ ವಂಶವಾಹಿಯನ್ನು ಗುರುತಿಸಿ ಅದನ್ನು ‘ಪೀರಿಯೆಡ್‌’ ಎಂದು ಕರೆದಿದ್ದರಾದರೂ ಅದನ್ನು ಪ್ರತ್ಯೇಕಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಸುಮಾರು ನಾಲ್ಕು ದಶಕಗಳಿಂದ ನಮ್ಮ ಈ ಅಮೇರಿಕನ್‌ ತ್ರಯರು ಇದರ ಬೆನ್ನು ಹತ್ತಿ 1984ರ ವೇಳೆಗೆ ‘ಪೀರಿಯೆಡ್‌’ ಜೀನನ್ನು ಪ್ರತ್ಯೇಕಿಸುವುದರಲ್ಲಿ ಯಶಸ್ವಿಯಾದರು.

1990ರಲ್ಲಿ ಈ ತಂಡ ಪೀರಿಯಡ್‌ ಜೀನಿನಲ್ಲಿರುವ ಫ್ರೇಟಿನ್‌ ಸರಣಿಯಂತಹುದು ಎಂಬುದನ್ನು ಪತ್ತೆ ಹಚ್ಚಿತಲ್ಲದೆ ಈ ಪ್ರೋಟೀನ್‌ ಕಣಗಳು 24 ಗಂಟೆಗಳ ಒಂದು ಜೈವಿಕ–ಲಯದ ಅವಧಿಯಲ್ಲಿ ರಾತ್ರಿಯ ವೇಳೆ ನಿರ್ಮಾಣಗೊಳ್ಳುತ್ತಾ ಒಂದು ಹಗಲಿನಲ್ಲಿ ಶಿಥಿಲಗೊಳ್ಳುತ್ತವೆ ಎಂಬುದನ್ನು ನಿರೂಪಿಸಿತು. ನಾಲ್ಕು ವರ್ಷಗಳ ನಂತರ ಯಂಗ್‌ ಮತ್ತು ಅವನ ಸಹಚರರು ಮತ್ತೊಂದು ಪ್ರಮುಖವಾದ ಜೈವಿಕ–ಲಯ ಸಂಬಂಧಿ ವಂಶವಾಹಿಯನ್ನು ಕಂಡುಹಿಡಿದು ಅದಕ್ಕೆ ‘ಟೈಮ್‌ಲೆಸ್‌’ ಎಂಬ ಹೆಸರನ್ನು ಕೊಟ್ಟಿದ್ದಾರೆ. ಈ ಸಾಧನೆಗಳೇ ಇಂದು ಇವರೆಲ್ಲರನ್ನು ನೊಬೆಲ್‌ ಪ್ರಶಸ್ತಿಯ ಬಳಿಗೆ ಕೊಂಡೊಯ್ದಿವೆ.

ಕಳೆದ ವರ್ಷ ಯಾಶಿನೋರಿ ಒಸುಮಿ ಎಂಬ ಜಪಾನಿನ ಜೀವವಿಜ್ಞಾನಿ ‘ಜೀವಕೋಶಗಳು ಹೇಗೆ ತಮ್ಮಲ್ಲಿಯ ಕೊಳಕನ್ನು ಹೊರಹಾಕುತ್ತವೆ’ ಎಂಬ ಬಗೆಗಿನ ಸಂಶೋಧನೆಗಾಗಿ ನೊಬೆಲ್‌ ಪ್ರಶಸ್ತಿ ಪಡೆದಾಗ ಎದ್ದ ಆಶ್ಚರ್ಯದ ಉದ್ಗಾರದ ಅಲೆ ಮತ್ತೆ ಈ ವರ್ಷವೂ ಮುಂದುವರೆದಿದೆ. ಆದರೆ ಪ್ರಶಸ್ತಿ ಸಮಿತಿ ಎಲ್ಲ ಅಂಶಗಳನ್ನೂ ತೂಗಿನೋಡಿಯೇ ಮತ್ತೆ ಮೂಲಭೂತ ಸಂಶೋಧನೆಗೇ ಗೌರವ ನೀಡಿದೆ.

ಈ ಹಿನ್ನೆಲೆಯಲ್ಲಿ ‘ಅಮೆರಿಕದಲ್ಲಿ ಮೂಲಭೂತ ಸಂಶೋಧನೆಗಳು ಬಹುಮಟ್ಟಿಗೆ ನಿಂತೇ ಹೋಗಿವೆ ಎಂಬ ಮಟ್ಟಕ್ಕೆ ಬಂದಿವೆ. ಕೋಟ್ಯಂತರ ಡಾಲರ್‌ಗಳ ಬಂಡವಾಳವನ್ನು ಹೂಡಿ ಅರ್ಥಹೀನ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದೇ ಸಂಶೋಧನೆ ಎನ್ನುವ ಈ ದಿನಗಳಲ್ಲಿ ಹಾಲ್‌, ರಾಸ್‌ಬಾಷ್‌ ಮತ್ತು ಯಂಗ್‌ರಿಗೆ ನೊಬೆಲ್‌ ಪ್ರಶಸ್ತಿ ಸಿಕ್ಕಿರುವುದು ಮನುಷ್ಯನ ಆರೋಗ್ಯ ಮತ್ತು ಸ್ವಾಸ್ಥ್ಯದ ಬಗೆಗಿನ ನಮ್ಮ ಅರಿವನ್ನು ವಿಸ್ತರಿಸುವ ಕೆಲಸಕ್ಕೂ ಮನ್ನಣೆಯಿದೆ ಎಂಬುದಕ್ಕೆ ನಿದರ್ಶನ’ ಎಂಬ ‘ದಿ ನ್ಯೂಯಾರ್ಕರ್‌’ನ ಹೇಳಿಕೆ ನಿಜಕ್ಕೂ ಅರ್ಥಪೂರ್ಣ.

-ಎಸ್‌.ಎಲ್‌. ಶ್ರೀನಿವಾಸಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT