ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರೀದುಃಖವ ಹಂಚಿಕೊಳ್ಳುವ ಪುರುಷರೆದೆಯ ತಲ್ಲಣ

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸುಷ್ಮಾಗೆ ಹೆರಿಗೆ ಸುಸೂತ್ರವಾಗಿ ಆಗಿ ಲೇಬರ್‌ ವಾರ್ಡ್‌ನಿಂದ ಆಕೆಯನ್ನು ಕೊಠಡಿಗೆ ಕರೆತಂದು ಮಲಗಿಸಿಯಾಗಿತ್ತು. ಮಗುವಿನ್ನೂ ಮೊದಲ ಸುತ್ತಿನ ಹಾಲು ಕುಡಿದು ನಿದ್ರೆಯ ಮಂಪರಿನಲ್ಲಿತ್ತು. ಪ್ರಸವದ ದಣಿವಿನಿಂದ ಸುಷ್ಮಾ ನಿದ್ದೆಯ ಮಂಪರಿನಲ್ಲಿದ್ದಳು. ಸುಷ್ಮಾಳ ಅಮ್ಮನಿಗೆ ಹೆರಿಗೆಯ ಅದುವರೆಗಿನ ಆತಂಕ-ಓಡಾಟ, ತಯಾರಿಯ ಒತ್ತಡದಿಂದ ಬಸವಳಿದು ಬೆಳಗ್ಗಿನ ತಿಂಡಿತಿಂದು ಬರಲು ಹೋಗಿದ್ದರು.

ಪತಿ ಚಿನ್ಮಯ್‍ ತನ್ನ ಪತ್ನಿಗೆ ಸನಿಹದಲ್ಲಿಯೇ ಕುರ್ಚಿಯ ಮೇಲೆ ಸುಮ್ಮನೇ ಕುಳಿತಿದ್ದರು. ಒಂದು ಮಗುವಿನ ಜನನದ ಕಥೆ ಎಲ್ಲವೂ ಸುರಳೀತ ಎನ್ನುವಂಥ ಪರಿಸ್ಥಿತಿ. ಆದರೆ, ಅಷ್ಟಕ್ಕೆ ಎಲ್ಲವೂ ಮುಗಿದಿರಲಿಲ್ಲ.

ಹೆರಿಗೆಯ ಸ್ವಲ್ಪ ಸಮಯದ ನಂತರ ನಿಯಂತ್ರಣಕ್ಕೆ ಬರಬೇಕಿದ್ದ ರಕ್ತಸ್ರಾವ ತಹಬಂದಿಗೆ ಬಂದಿರಲಿಲ್ಲ. ಅದು ಹೆಚ್ಚಾಗುತ್ತಲೇ ಹೋಯಿತು. ಅದರೊಂದಿಗೆ ಚಿನ್ಮಯಗೆ ಅನಿರೀಕ್ಷಿತ ಜವಾಬ್ದಾರಿಯೂ ಹೆಗಲೇರಿತು. ಆತ ಪ್ಯಾಡ್‌ಗಳನ್ನು ಬದಲಿಸಲು ಪತ್ನಿಗೆ ನೆರವಾಗಬೇಕಾಯಿತು.

ಚಿನ್ಮಯ್‌ ನರ್ಸ್‌ಗೆ ಫೋನ್‌ ಮಾಡಿದ. ರಕ್ತವನ್ನು ಸ್ವಚ್ಛಗೊಳಿಸುತ್ತ, ಆಯಾಗಳು ತಂದ ಸ್ಟ್ರೆಚರ್‌ಗೆ ಪತ್ನಿಯನ್ನು ವರ್ಗಾಯಿಸಿ... ಅದರ ಹಿಂದೆ ಧಾವಿಸತೊಡಗಿದ. ಮತ್ತೆ ಅದ್ಯಾವುದೋ ಕೋಣೆಯೊಳಗೆ ಪತ್ನಿಯನ್ನು ಕರೆದುಕೊಂಡು ಹೋದ ನರ್ಸ್‌ಗಳು ಬಾಗಿಲು ಹಾಕಿಕೊಂಡರು. ಚಿನ್ಮಯ್‌ ಅಲ್ಲೇ ನೆಲದ ಮೇಲೆ ಕುಸಿದು ಕುಳಿತ. ಕಟ್ಟಿದ ಗಂಟಲನ್ನು ನಿಭಾಯಿಸಲು ಹೆಣಗಾಡತೊಡಗಿದ.

ಮೊಣಕಾಲ ನಡುವೆ ಮುಖ ಹುದುಗಿಸಿಕೊಂಡು ದುಃಖ ನುಂಗತೊಡಗಿದ. ತುಸು ಹೊತ್ತಿಗೆ ಮುಂಚೆ ಹೆರಿಗೆಯ ಸಂದರ್ಭ ಆಕೆಯ ಕಿರುಚಾಟವನ್ನೂ ಸ್ರಾವವನ್ನೂ ಪತ್ನಿಯ ಪೇಲವ ಮುಖವನ್ನೂ ಕಂಡು ಅವನ ಮನಸ್ಸು ಕರಗಿತ್ತು. ಈಗ ಮತ್ತೊಂದು ಆಘಾತ. ಒಂದಷ್ಟು ಹೊತ್ತು ಜೋರಾಗಿ ಅಳಬೇಕು ಎಂದು ಚಿನ್ಮಯ್‌ಗೆ ಅನ್ನಿಸಿತ್ತು. ಆದರೆ, ಅದು ಆಸ್ಪತ್ರೆ. ದುಃಖವಾದರೂ ಸಂತೋಷವಾದರೂ ಮೇರೆ ಮೀರುವುದು ಸಭ್ಯತೆಯಲ್ಲ. ಆ ಕ್ಷಣ... ಜೋರಾಗಿ ಅಳುವುದೆಂದೆರೆ ಅದೊಂದು ‘ವರ’ ಎಂದು ಚಿನ್ಮಯಗೆ ಅನಿಸಿತ್ತು.

ಚಿನ್ಮಯ್‍ ಮಾತ್ರವಲ್ಲ – ಬಹುತೇಕ ಕುಟುಂಬಗಳ ಗಂಡಸರು ತಮ್ಮ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಇಂಥ ಸನ್ನಿವೇಶಗಳಿಗೆ ಸಾಕ್ಷಿಯಾಗಿರುವವರೇ! ಪ್ರಸವದ ಬೇನೆಯನ್ನು ತಿನ್ನುವುದು ಹೆಣ್ಣಾದರೂ ಅದರ ಸಂಕಟ ಮಾನಸಿಕ ರೂಪದಲ್ಲಿ ಗಂಡನ್ನೂ ತಾಕದೆ ಬಿಡುವುದಿಲ್ಲ. ಗಂಡಿಗೇಕೆ ಗೌರಿದುಃಖ ಎನ್ನುವ ಮಾತು ಈಗ ಪೂರ್ಣಸತ್ಯವಲ್ಲ. ಬದಲಾದ ಸಾಮಾಜಿಕ ಸಂದರ್ಭದಲ್ಲಿ ಹೆಣ್ಣಿನ ಭಾವವಲಯ ನಿಧಾನವಾಗಿ ಗಂಡಿಗೂ ಅರ್ಥವಾಗುತ್ತಿದೆ, ಅನುಭವವೇದ್ಯವಾಗುತ್ತಿದೆ.

ಭಾವಲೋಕದ ಅನಾವರಣ
ಹೆಣ್ಣು ಮತ್ತು ಗಂಡಿನ ಭಾವವಲಯಗಳ ಅಪೂರ್ವ ಸಂಗಮದ ದೃಶ್ಯಗಳು ಬಹುತೇಕ ಅನಾವರಣಗೊಳ್ಳುವುದು ಹೆರಿಗೆ ವಾರ್ಡ್‍ಗಳಲ್ಲಿ. ಪ್ರಸೂತಿ ಗೃಹದ ಹೊರಗೆ ಕುಳಿತ ಪುರುಷರ ಮುಖದಲ್ಲಿ ಗೋಚರಿಸುವ ಆತಂಕವನ್ನು ಪದಗಳಲ್ಲೇ ಹಿಡಿದಿಡುವುದು ಕಷ್ಟ. ಅಣ್ಣನೋ ತಮ್ಮನೋ, ತಂದೆಯೋ... ಪಾತ್ರಗಳು ಬದಲಾದರೂ, ಆ ಕ್ಷಣ ಗಂಡಸರ ಮನದಲ್ಲೊಂದು ಹೆಣ್ಣುಮನಸ್ಸು ಪಿಸುಗುಡುತ್ತಿರುತ್ತದೆ.

ಮುಚ್ಚಿದ ಬಾಗಿಲನ್ನು ನೋಡುತ್ತಾ, ಆಕೆಗೆ ಅವಶ್ಯಕವಾದುದನ್ನು ತಂದುಕೊಡಲು ತುದಿಗಾಲಲ್ಲಿ ನಿಂತು, ವೈದ್ಯರು ಹೇಳಬಹುದಾದ ಸುದ್ದಿಗೆ ಕಾತರರಾಗಿ ನಿಲ್ಲುವುದು, ನಿಂತೂ ನಿಂತೂ ಸುಸ್ತಾಗಿ ಒಂದು ಚೇರ್‌ನಲ್ಲಿ ಕೂರುವುದು, ಐದಾರು ನಿಮಿಷಕ್ಕೇ ಕುಳಿತಿರುವುದು ಸಾಧ್ಯವಾಗದೇ ಮತ್ತದೇ ಬಾಗಿಲಿನ ಬಳಿ ಒಂದು ಸುಳಿದಾಡುವುದು – ಇವೆಲ್ಲ ಲೇಬರ್‍ ವಾರ್ಡ್‍ಗಳಲ್ಲಿನ ಸಾಮಾನ್ಯ ದೃಶ್ಯಗಳು.

ಕೆಲವು ಗಂಡಂದಿರು ಪರ್ಸ್‌ ತೆಗೆದು ಹಣವಿದೆಯೇ ಎಂದು ದೃಢಪಡಿಸಿಕೊಳ್ಳುತ್ತಾರೆ. ಎಟಿಎಂ ಕಾರ್ಡನ್ನು ನಂಬಲಿಕ್ಕೆ ಆಗುವುದಿಲ್ಲ ಎಂದುಕೊಂಡರೂ ಕಾರ್ಡೂ ಇರಲಿ ಎಂದು ಅದನ್ನು ಸವರಿ ಸಮಾಧಾನ ಮಾಡಿಕೊಳ್ಳುತ್ತಾರೆ. ಪಕ್ಕದಲ್ಲೇ ಅಮ್ಮನಿದ್ದರೆ ಒಂದಿಷ್ಟು ನಿರಾಳ. ‘ಅಮ್ಮ... ಸ್ವಲ್ಪ ಹೊತ್ತು ಸಾಕಲ್ಲಾ...’ ಎಂದು ಸುಮ್ಮನೇ ಪ್ರಶ್ನೆ ಕೇಳುತ್ತಾರೆ. ಅಮ್ಮ ಗಟ್ಟಿಗಿತ್ತಿಯಾದರೆ ಸರಿ. ಸೊಸೆಯ ಅಥವಾ ಮಗಳ ಹೆರಿಗೆ ನೋವಿನ ಬೊಬ್ಬೆ ಕೇಳಲಾರದೇ ಅಮ್ಮನೂ ಮೂಲೆಗೆ ಹೋಗಿ ಅಳುತ್ತಿದ್ದರೆ... ಅವನ ಪಾಡು ಹೇಳತೀರದು.

‘ಪತ್ನಿಯನ್ನು ತೀವ್ರವಾಗಿ ಹಚ್ಚಿಕೊಂಡ ಪತಿಯು ಹೆರಿಗೆ ಸಂದರ್ಭದಲ್ಲಿ ತೀವ್ರವಾಗಿ ಸಂಕಟ ಅನುಭವಿಸುವುದುಂಟು. ಆಕೆಯ ನೋವನ್ನು ಕಂಡು ಆತನಲ್ಲಿ ಆಡ್ರಿನಾಲಿನ್‌ ಮತ್ತು ಡೋಪಮಿನ್‌ ಹಾರ್ಮೋನ್‌ಗಳ ಬಿಡುಗಡೆ ಹೆಚ್ಚಿನ ಪ್ರಮಾಣದಲ್ಲಿ ಆಗುವುದರಿಂದ ಆತಂಕಗೊಂಡಿರುತ್ತಾನೆ. ಆ ಕ್ಷಣದಲ್ಲಿ ಎಲ್ಲ ಗಂಡಸರೂ ಆರ್ದ್ರ ಹೃದಯದಿಂದ ಪತ್ನಿಯ ಕ್ಷೇಮವನ್ನು ಬಯಸುತ್ತಾ ಕಳವಳಗೊಂಡಿರುತ್ತಾರೆ’ ಎಂದು ಹಿರಿಯ ವೈದ್ಯೆ ಡಾ. ವಸುಂಧರಾ ಭೂಪತಿ ಹೇಳುತ್ತಾರೆ.

ಸಾಮಾನ್ಯವಾಗಿ ಹೆಣ‍್ಣುಮಕ್ಕಳಿಗೆ ಅಪ್ಪನೆಂದರೆ ಬಲುಪ್ರೀತಿ. ಆದರೆ ಈ ಹೆರಿಗೆಯ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಮತ್ತು ಆ ಬಳಿಕ ‘ಅಪ್ಪ’ನ ಧಾವಂತ ಇನ್ನೂ ಎದೆಕಲಕುವಂತೆ ಇರುತ್ತದೆ. ಕೆಂಪುಕೆನ್ನೆಗಳ ಹಸುಳೆಯನ್ನು ಮೊದಲು ಎತ್ತಿಕೊಂಡ ನೆನಪು ಅಪ್ಪನ ಎದೆಯಲ್ಲಿ ಎಂದಾದರೂ ಮಾಸುವುದಿದೆಯೇ? ಅದೇ ಮಗಳು ಹೆರಿಗೆಯ ನೋವು ಅನುಭವಿಸುತ್ತಿರುವಾಗ ಅಳಿಯನ ಮುಖ ನೋಡುತ್ತಾ ಅಪ್ಪ ಸಂಕಟಪಡುವುದುಂಟು. ‘ಗಂಡನೇ ಆಕೆಯ ಸಾಂತ್ವನ’ ಎಂಬುದು ಅಪ್ಪನಿಗೆ ಅರಿವಿದೆ. ಈ ಅಳಿಯ ಸ್ವಲ್ಪ ಸೆನ್ಸಿಬಲ್‌ ಆಗಿ ಮಗಳ ಸಂತೈಸಲಪ್ಪಾ... ಎಂದು ಬೇಡಿಕೊಳ್ಳುತ್ತ ಸಂಕಟ ನುಂಗಿಕೊಳ್ಳದೇ ಅವರ ಪಾಲಿಗೆ ಬೇರೆ ವಿಧಿಯಿಲ್ಲ.

ಸಂಘರ್ಷ - ಭಾವೋತ್ಕರ್ಷ
ಲೇಬರ್‍ ವಾರ್ಡ್‍ ಅನೇಕ ಸಂದರ್ಭಗಳಲ್ಲಿ ಭಾವೋತ್ಕರ್ಷದ ಶಾಶ್ವತ ರಂಗಶಾಲೆಯಂತೆ ಕಾಣಿಸುತ್ತದೆ. ಕೆಲವು ಚಿತ್ರಗಳನ್ನು ನೆನಪಿಸಿಕೊಳ್ಳಿ: ಹೆರಿಗೆ ವಾರ್ಡ್‌ನ ಎದುರು ಶತಪಥ ಸುತ್ತುವ ಗಂಡನ ಕೈಯಲ್ಲಿ ಮೊಬೈಲ್‌. ಬಾಗಿಲು ತುಸುವೇ ತೆರೆದು ಪತಿಯ ಕೈಗೊಂದು ಚೀಟಿಕೊಟ್ಟು ‘ಇಷ್ಟು ತಕ್ಕೊಂಡು ಬನ್ನಿ’ ಎಂದು ಹೇಳುವ ನರ್ಸ್‌. ಆ ನಾಲ್ಕಾರು ಸೆಕೆಂಡುಗಳಲ್ಲೇ ತೂರಿಬರುವ ‘ಹೇಗಿದ್ದಾಳೆ.. ತೊಂದ್ರೆ ಏನಿಲ್ವಲ್ಲಾ..’ ಎನ್ನುವ ಅವನ ಪ್ರಶ್ನೆಗಳು. ಕೆಲವೊಮ್ಮೆ ಒಂದೆರಡು ಪದ ಉತ್ತರಿಸುವ ನರ್ಸ್‌.

‘ಸಿಸೇರಿಯನ್‌ ಮಾಡಬೇಕಾಗಬಹುದು’ ಅಂತ ವೈದ್ಯರು ಬಂದು ಹೇಳಿದರೆ... ಧಸಕ್ಕೆನ್ನುವ ಎದೆ. ಮೊಬೈಲ್‌ನಲ್ಲಿ ಗೂಗಲ್‌ ಮಾಡುತ್ತಾ ‘ಸಿಸೇರಿಯನ್’ ಅಂತಲೋ, ‘ಹೌ ಟು ರೆಡ್ಯೂಸ್‌ ಲೇಬರ್ ಪೈನ್‌’ ಅಂತಲೋ ಟೈಪ್‌ ಮಾಡುತ್ತ ಹುಡುಕಾಟ. ನೆಟ್‌ವರ್ಕ್‌ ಸಿಗದೇ ಸುತ್ತುವ ಚಕ್ರ ನೋಡಿ ಮೊಬೈಲನ್ನೇ ನೆಲಕ್ಕೆ ಬಡಿಯಬೇಕೆಸಿದ ಕ್ಷಣದಲ್ಲೇ ಆಫೀಸಿನ ಕಾಲ್‌. ಅದನ್ನು ಕಟ್‌ ಮಾಡಿ, ಮೊಬೈಲ್‌ ಕಿಸೆಗೆ ತುರುಕಿ ನೆನಪಾದ ದೇವರನ್ನೆ ಸ್ಮರಿಸಿಕೊಂಡು ಮೂರು ಕ್ಷಣಕ್ಕೇ ಏರುವ ಕಳವಳ. ಮತ್ತೆ ಗೂಗಲ್.. ‘ಎಂಬಿಎ’ ತನಕ ಓದುವಾಗ ಈ ಬಗ್ಗೆ ಒಂದಾದರೂ ತರಗತಿ ಇದ್ದರೆ ಒಳ್ಳೆದಿತ್ತು..ಅಂತ ಅನಿಸಿ..

ಅಷ್ಟರಲ್ಲಿ ಎಲ್ಲವೂ ಸಸೂತ್ರವಾಗಿ ನಡೆದು ಮಗು ಜನಿಸಿದರೆ... ನಿರಾಳ. ಬಾಗಿಲು ತೆರೆಯುವ ನರ್ಸ್‌ – ’ಏನೋ ಸಮಸ್ಯೆಯಾಗಿದೆ ರಕ್ತ ಬೇಕು...’ ಎಂದರೆ ಮತ್ತೆ ಅವನ ಕಾಲಲ್ಲಿ ನಡುಕ. ಮೆಟ್ಟಿಲಿಳಿಯಲು ಆಗದೇ, ಲಿಫ್ಟ್‌ ಬೇಗ ಬಾರದೇ, ನೆಟ್‌ವರ್ಕ್‌ ಸಿಗದೇ.. ಕಿರುಚುವ ಅಳುವ ಅವಳ ಮುಖವೇ ಕಣ್ಮುಂದೆ ಬರುವುದುನ್ನು ತಡೆಯುವುದಾದರೂ ಹೇಗೆ?

ಬದಲಾದ ಭಾವವಲಯ
ವಿಭಕ್ತ ಕುಟುಂಬಗಳಲ್ಲಿ ಹೆರಿಗೆ-ಸ್ರಾವ ಮುಂತಾದ ವಿಚಾರಗಳು ಹೆಂಗಸರ ವಿಚಾರವಾಗಿ ಈಗ ಉಳಿದಿಲ್ಲ. ‘ಅದೇನೋ ಹೆಂಗಸರು ನಿಭಾಯಿಸಿಕೊಳ್ಳುತ್ತಾರೆ..’ ಎಂದು ಹಿಂದಿನ ಕಾಲದ ಪುರುಷರಂತೆ ಪ್ರಸ್ತುತ ಕಾಲಮಾನದ ಪುರುಷರು ಹೇಳುವುದು ಕಡಿಮೆ.

ಈ ತಲೆಮಾರಿನ ವಿವಾಹಿತ ಗಂಡಸರ ಭಾವವಲಯ ವಿಸ್ತಾರವಾಗಿದೆ. ನಗರ ಜೀವನದಲ್ಲಂತೂ ಈ ಬದಲಾವಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಅವಿಭಕ್ತ ಕುಟುಂಬದಲ್ಲಿ ಹೆರಿಗೆ ಮನೆ, ಬಾಣಂತಿಕೋಣೆ ಎಂಬ ಪರಿಕಲ್ಪನೆಗಳ ಜೊತೆಗೆ ಅದೊಂದು ಹೆಂಗಸರ ವ್ಯವಹಾರ ಆಗಿತ್ತು.

‘ಹೇಗಾದರೂ ಆ ಕ್ಷಣಗಳನ್ನೆಲ್ಲ ದಾಟಲೇಬೇಕು. ಆತಂಕದಲ್ಲಿ ತಡವರಿಸುವ ಹೆಜ್ಜೆಗಳನ್ನು ಇಡಲೇಬೇಕು. ಎಲ್ಲ ಸುರಳೀತವಾದ ಮೇಲೆ ಅದೊಂದು ಸಂಭ್ರಮವನ್ನೂ ಕೊಡುತ್ತದೆ’ ಎನ್ನುವುದು ಚಿನ್ಮಯ ಅವರ ಮಾತುಗಳು.

ಹೆರಿಗೆ ಪ್ರಕ್ರಿಯೆ, ಋತುಚಕ್ರದ ಬಗ್ಗೆ ಬಾಲ್ಯದಿಂದಲೇ ಸ್ತ್ರೀಯರಿಗೆ ಮಾರ್ಗದರ್ಶನದ ಮಹಾಪೂರಗಳೇ ದೊರೆಯುತ್ತವೆ. ಆದರೆ ಇತ್ತೀಚೆಗಷ್ಟೇ ತನ್ನ ಭಾವವಲಯವನ್ನು ವಿಸ್ತರಿಸಿಕೊಂಡು ಸ್ತ್ರೀಲೋಕದ ನೋವುಗಳನ್ನು ಹಂಚಿಕೊಳ್ಳಲು ಮುಂದಡಿ ಇಡುವ ಪುರುಷರಿಗೂ ಅಂತಹುದೊಂದು ಕಲಿಕೆಯ ಅವಕಾಶವನ್ನು ಕಲ್ಪಿಸಿಕೊಡಬೇಕಾಗಿದೆಯೇ...?

ನೀವೂ ಬರೆಯಬಹುದು
ಭೂಮಿಕಾ ಪುರವಣಿಗೆ ಮಹಿಳಾ ಸಂಬಂಧಿತ ಪ್ರಚಲಿತ ವಿದ್ಯಮಾನಗಳನ್ನು ಕುರಿತು ಮತ್ತು ನಳಪಾಕ, ಆರೋಗ್ಯ ವಿಭಾಗಕ್ಕೆ ನೀವೂ ಬರೆಯಬಹುದು. ಪ್ರಕಟಿತ ಬರಹಗಳಿಗೆ ಸಂಭಾವನೆ ಉಂಟು. ಹೆಣ್ತನ, ಸ್ತ್ರೀಸ್ವಾತಂತ್ರ್ಯ, ಹೆಣ್ಣುಮಕ್ಕಳಿಗೂ ಸಮಾಜಕ್ಕೂ ಇರುವ/ಇರಬೇಕಾದ ನಂಟು – ಇವುಗಳನ್ನು ಕುರಿತು ನೀವೂ ಬರೆಯಬಹುದು.. ನಿಮ್ಮ ಬರಹಗಳನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ಭೂಮಿಕಾ ಪುರವಣಿ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560 001. ನುಡಿ, ಬರಹ ಅಥವಾ ಯೂನಿಕೋಡ್‌ಗಳಲ್ಲಿ ಪ್ರಬಂಧಗಳನ್ನು ಇ–ಮೇಲ್‌ ಮೂಲಕವೂ ಕಳುಹಿಸಬಹುದು.
ಇ–ಮೇಲ್: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT