ಸುತ್ತಾಣ

ಸೊಬಗಿನ ಚಿತ್ತಾರ ಮುಕೋಡ್ಲು ಜಲಪಾತ

ಸೋಮವಾರಪೇಟೆಯಿಂದ ಮಡಿಕೇರಿಗೆ ಹೋಗುವಾಗ ಸಿಗುವ ಹಟ್ಟಿಹೊಳೆ ಗ್ರಾಮದ ಬಳಿ ಬಲಕ್ಕೆ ಹೊರಳಿ ಅರು ಕಿ.ಮೀ. ಸಾಗಿದರೆ ಮುಕೋಡ್ಲು ಜಲಪಾತ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಸೊಬಗಿನ ಚಿತ್ತಾರ ಮುಕೋಡ್ಲು ಜಲಪಾತ

–ಸಿ.ಎಸ್.ನಿರ್ವಾಣ ಸಿದ್ದಯ್ಯ

ಕೃತಿಯ ಸೊಬಗು ಮೇಳೈಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಹಲವು ಸುಂದರ ತಾಣಗಳಿವೆ. ಮಡಿಕೇರಿ ಸಮೀಪ ಕಣ್ಣಿಗೆ ಹಬ್ಬ ಉಂಟುಮಾಡುವ ಜಲಪಾತಗಳಿಗೆ ಲೆಕ್ಕವಿಲ್ಲ. ಹಲವು ಜಲಪಾತಗಳು ಇಂದಿಗೂ ಅಜ್ಞಾತವಾಗಿಯೇ ಇವೆ. ಅವುಗಳ ಪೈಕಿ ಮುಕೋಡ್ಲು ಜಲಪಾತವು ಒಂದು.

ಸೋಮವಾರಪೇಟೆಯಿಂದ ಮಡಿಕೇರಿಗೆ ಹೋಗುವಾಗ ಸಿಗುವ ಹಟ್ಟಿಹೊಳೆ ಗ್ರಾಮದ ಬಳಿ ಬಲಕ್ಕೆ ಹೊರಳಿ ಅರು ಕಿ.ಮೀ. ಸಾಗಿದರೆ ಮುಕೋಡ್ಲು ಜಲಪಾತ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇದು ಯಾವುದೇ ನದಿಯ ನೀರಲ್ಲ. ಕಾಡಿನಿಂದ ಹರಿದು ಬರುವ ಹಳ್ಳಗಳ ನೀರು ಧುಮ್ಮಿಕ್ಕಿ ಮೂಡಿರುವ ಜಲಪಾತ. ಚಿಕ್ಕ ಜಲಧಾರೆಗಳು ದೊಡ್ಡ ಜಲಪಾತವಾಗಿ ಇಲ್ಲಿ ಕಂಗೊಳಿಸುವುದು ವಿಶೇಷ.

ಮೂರು ದಿಕ್ಕುಗಳಿಂದ ಜಲಧಾರೆಗಳು ಕೂಡಿ ಹರಿಯುವುದರಿಂದ ಇದನ್ನು ಮುಕೋಡ್ಲು ಜಲಪಾತ ಎನ್ನಲಾಗುತ್ತದೆ ಎನ್ನುವುದು ಸ್ಥಳೀಯರ ವಿವರಣೆ. ಸುಮಾರು 25 ಅಡಿ ಎತ್ತರದಿಂದ ಧುಮುಕುವ ಈ ಜಲಪಾತ ಸೊಬಗಿನ ಚಿತ್ತಾರಗಳನ್ನು ಮೂಡಿಸುತ್ತದೆ. ಆಗಷ್ಟೇ ಕರೆದಿಟ್ಟ ಹಾಲಿನ ನೊರೆಯಂತೆ ಬಿಳುಪಾಗಿ ಹರಿಯುವ ನೀರು ಕಲ್ಲು ಬಂಡೆಗಳಿಂದ ಸುಂದರ ರಂಗವಲ್ಲಿಯ ಚಿತ್ತಾರವನ್ನು ಚಿತ್ರಿಸುತ್ತದೆ. ಉದ್ದನೆಯ ಬಂಡೆಗಲ್ಲಿನ ಮೇಲೆ ಅಮೆರಿಕಾದ ನಯಾಗರದ ಜಲಪಾತದಂತೆ ಸೊಗಸಾಗಿ ಹರಿಯುವ ಈ ಜಲಪಾತ ಮನಸನ್ನು ಸೆಳೆಯುತ್ತದೆ.

ಎದೆಗಾರಿಕೆ ಉಳ್ಳವರು ಜಲಪಾತದ ಬುಡಕ್ಕೆ ತೆರಳಿ ಜಲಧಾರೆಗೆ ಮೈ ಒಡ್ಡಬಹುದು. ಹೀಗೆ ಮಾಡುವುದರಿಂದ ತಲೆನೋವು, ಚರ್ಮದ ರೋಗಗಳು ಗುಣವಾಗುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.

ಹಟ್ಟಿಹೊಳೆ ಗ್ರಾಮದಿಂದ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಹಲವು ತಿರುವುಗಳಿವೆ. ನುರಿತ ಚಾಲಕರು ಇದ್ದರೆ ಒಳ್ಳೆಯದು. ಜಲಪಾತಕ್ಕೆ ಮೂನ್ನೂರು ಮೀಟರ್ ಅಂತರದಲ್ಲಿ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡು ಹೋಗಬೇಕು. ಜಲಪಾತದ ಸಮೀಪ ಯಾವುದೇ ಅಂಗಡಿಗಳು ಇಲ್ಲ. ಏನೇ ಬೇಕಾದರೂ ಹಟ್ಟಿಹೊಳೆ ಗ್ರಾಮದಿಂದ ತೆಗೆದುಕೊಂಡು ಹೋಗಬೇಕು. ಜಲಪಾತದ ಅಸುಪಾಸುನಲ್ಲಿ ಹೋಂಸ್ಟೇಗಳೂ ಇವೆ.

ಬೆಳಿಗ್ಗೆ 5 ಗಂಟೆಗೆ ಬೆಂಗಳೂರು ಬಿಟ್ಟರೆ 10 ಗಂಟೆ ವೇಳೆಗೆ ಜಲಪಾತವಿರುವ ಸ್ಥಳ ತಲುಪಬಹುದು. ಸಂಜೆ ತನಕ ಅಲ್ಲಿದ್ದು ರಾತ್ರಿ ವಾಪಸ್ ಬರಬಹುದು. ಬೆಂಗಳೂರಿನಿಂದ ಸುಮಾರು 220 ಕಿ.ಮೀ. ದೂರವಿದೆ ಈ ಮುಕೋಡ್ಲು ಜಲಪಾತ. ಜಿಗಣೆಗಳು ಇರುವುದರಿಂದ ತುಸು ಸುಣ್ಣ ತೆಗೆದುಕೊಂಡು ಹೋಗಿ. ಜಲಪಾತ ವೀಕ್ಷಣೆಗೆ ಸೆಪ್ಟೆಂಬರ್‍ ನಿಂದ ಡಿಸೆಂಬರ್ ವರೆಗಿನ ಕಾಲ ಒಳ್ಳೆಯದು.

ಮಾದಾಪುರದಲ್ಲಿ ಒಂದು ದಿನ ಉಳಿದುಕೊಂಡರೆ ಗಾರ್ವಾಲೆ, ಕಾಡುಬೆಟ್ಟ, ಪುಪ್ಪಗಿರಿ, ಮಳವಳ್ಳಿ ಮತ್ತಿತರ ಸುಂದರ ಸ್ಥಳಗಳನ್ನು ಕಣ್ತುಂಬಿಕೊಂಡು ಬರಬಹುದು.

ಬೆಂಗಳೂರಿನಿಂದ ಕುಣಿಗಲ್, ಅರಕಲ ಗೂಡು, ಶನಿವಾರಸಂತೆ, ಸೋಮವಾರಪೇಟೆ, ಮಾದಪುರ, ಹಟ್ಟಿಹೊಳೆ, ಮೂಕ್ಲೋಡು ಮಾರ್ಗವಾಗಿ ಹೋಗಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಹಳಿಗಳ ಮೇಲೆ ನೆನಪಿನ ಉಯ್ಯಾಲೆ...

ಪ್ರವಾಸ ಕಥನ
ಹಳಿಗಳ ಮೇಲೆ ನೆನಪಿನ ಉಯ್ಯಾಲೆ...

21 Jan, 2018
ಹೂ ಕಣಿವೆಯ ಸೌಂದರ್ಯ ಮತ್ತು ನೆತ್ತರ ಚರಿತ್ರೆ...

ಪುಷ್ಟಪ್ರಿಯರ ಪಾಲಿನ ಸ್ವರ್ಗ
ಹೂ ಕಣಿವೆಯ ಸೌಂದರ್ಯ ಮತ್ತು ನೆತ್ತರ ಚರಿತ್ರೆ...

31 Dec, 2017
ವಂಗನಾಡಿನ ಮಾಸದ ಸ್ವಪ್ನಗಳು...

ಕೋಲ್ಕತ್ತ
ವಂಗನಾಡಿನ ಮಾಸದ ಸ್ವಪ್ನಗಳು...

10 Dec, 2017
ಜನಕಪುರಿಯ ಝಲಕ್

ನೇಪಾಳ
ಜನಕಪುರಿಯ ಝಲಕ್

3 Dec, 2017
ಆಸ್ಟ್ರೇಲಿಯಾ ಎಂಬ ಖಂಡ ದೇಶದೊಳಗೆ...

ಗಗನಚುಂಬಿ ಕಟ್ಟಡಗಳು
ಆಸ್ಟ್ರೇಲಿಯಾ ಎಂಬ ಖಂಡ ದೇಶದೊಳಗೆ...

29 Oct, 2017