ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಲುವ ಹಾಡುಗಳು

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

–ಶ್ರೀರಂಜನ್ ಟಿ.

ಎರಡು ವರುಷಗಳ ಮೊದಲು ಯಾರಾದರೂ ‘ನಿಮ್ಮ ಮನೆಯ ಬಳಿ ಎಷ್ಟು ಹಕ್ಕಿಗಳನ್ನು ನೋಡಿರುವೆ?’ ಎಂದು ಕೇಳಿದ್ದರೆ ಕಾಗೆ, ಪಾರಿವಾಳ, ಕೊಕ್ಕರೆಯ ಹೊರತಾಗಿ ಮತ್ತೊಂದೆರಡು ಹೆಸರು ಹೇಳಲು ಕಷ್ಟಪಡುತ್ತಿದ್ದೆ. ಒಮ್ಮೆ ನಮ್ಮ ಮನೆಯ ಮಾಡಿನಲ್ಲೇ ಹೂಗುಬ್ಬಿಯೊಂದು ಗೂಡು ಕಟ್ಟಿದ್ದರೂ ಓ! ಯಾವುದೋ ಹಕ್ಕಿ ಗೂಡುಕಟ್ಟಿದೆ ಎಂದುಕೊಂಡೆನೇ ಹೊರತು ಅದೊಂದು ಕುತೂಹಲದ ಸಂಗತಿಯಾಗಿ ಕಾಣಲಿಲ್ಲ. ನನ್ನಲ್ಲಿ ಹಕ್ಕಿಗಳ ಬಗೆಗೆ ಆಸಕ್ತಿ ಮೂಡಲು ಏಕೈಕ ಕಾರಣವೆಂದರೆ ಪೂರ್ಣಚಂದ್ರ ತೇಜಸ್ವಿಯವರು ಬರೆದ ಪುಸ್ತಕ ‘ಹೆಜ್ಜೆ ಮೂಡದ ಹಾದಿ’.

ಸುತ್ತಲೂ ಸಂಭವಿಸುತ್ತಿರುವ ವಿಸ್ಮಯದ ಘಟನೆಗಳಿಗೆ ನಾನು ಕುರುಡನಂತಾಗಿರುವೆನಲ್ಲ ಎಂಬ ವಿಷಯ ತುಂಬ ದಿನ ಕಾಡಿತು. ಬಳಿಕ ಮನೆಯೆದುರಿನ ಜಗಲಿಯಲ್ಲಿ ಇನ್ನೇನು ಬರುವ ಗೆಳೆಯನಿಗೆ ಕಾದಂತೆ ಹಕ್ಕಿಗಳಿಗೆ ಕಾದು ಕೂತೆ. ಸಿನಿಮಾದ ಪರದೆಯಲ್ಲಿ ಹೊಸ ಪಾತ್ರಗಳು ಪ್ರಕಟಗೊಳ್ಳುತ್ತ ಹೋದಂತೆ ಒಂದೊಂದಾಗಿ ಹೊಸ ಹಕ್ಕಿಗಳೂ ಕಾಣಿಸಿಕೊಳ್ಳತೊಡಗಿದವು.

ಇಂದು ಪಟ್ಟಿ ಮಾಡಹೊರಟರೆ ನಾ ಕಂಡ ಹಕ್ಕಿಗಳ ಸಂಖ್ಯೆ ನೂರನ್ನೂ ದಾಟುತ್ತದೆ. ಎಲ್ಲಿಂದಲೋ ಹಾಡೊಂದು ತೇಲಿ ಬಂದರೆ ಒಂದು ಕ್ಷಣ ಸ್ತಬ್ಧನಾಗಿ ಆಲಿಸುತ್ತೇನೆ. ಕೇಳಿದ ದನಿ ಹೊಸತಾಗಿದ್ದರೆ ಹುಮ್ಮಸ್ಸಿನಿಂದ ಅತ್ತ ಕಡೆಗೆ ಮೆಲ್ಲಮೆಲ್ಲನೆ ಓಡುತ್ತೇನೆ. ಕೆಲವೊಂದನ್ನು ಪತ್ತೆ ಮಾಡಿ ಬೀಗಿದ್ದೇನೆಯೇ ಹೊರತು ಉಳಿದಂತೆ ಎಲ್ಲೆಯಿರದ, ಬೇಕೆಂದಲ್ಲಿ ಕುಳಿತು ಹಾಡುವ ಹಕ್ಕಿಯ ಹಾಡು ಮಾತ್ರ ದಕ್ಕಿದೆ.

***

ಆಕಾಶದಲ್ಲಿ ಕಪ್ಪಗಿನ ಮುಗಿಲು ಮುತ್ತುತ್ತಿದ್ದೊಂದು ಸಂಜೆ. ನಾನು ಮತ್ತು ತಮ್ಮ ಪಾರ್ವತಿಯೊಡನೆ ಹರಟುತ್ತ ಏನೋನೋ ಪ್ರಶ್ನೆಗಳನ್ನು ಕೇಳುತ್ತಿದ್ದೆವು. ಸಮೀಪದೆಲ್ಲಿಂದಲೋ ಹಕ್ಕಿಯೊಂದು ಏರುಸ್ವರದಲ್ಲಿ ಒಂದೇ ಸಮನೆ ಹಾಡುತ್ತ ತನ್ನ ಸಭೆ ಶುರು ಮಾಡಿತ್ತು. ‘ಆ ಹಕ್ಕಿ ಯಾವುದೆಂದು ಹೇಳು?’ ಎಂದು ತಮ್ಮ ಪಾರ್ವತಿಯಲ್ಲಿ ಕೇಳಿದ. ಅವಳ ಮಾತುಗಳನ್ನು ಕೇಳಿದ ಕೂಡಲೇ ನಾನಲ್ಲಿಂದ ಎದ್ದು ಹಕ್ಕಿಯಿರುವಲ್ಲಿಗೆ ಹೊರಟು ನಿಂತೆ.

ನಾನು ಆ ಹಕ್ಕಿಯ ಹಾಡನ್ನು ಕೇಳಿದ್ದೆನಾದರೂ ಎಪ್ಪತ್ತಡಿ ಎತ್ತರದ ಗಾಳಿ ಮರದ ಮೇಲೆ ಕುಳಿತರೆ ನನ್ನ ಕಣ್ಣಿಗೆ ಎಲ್ಲಿ ಕಾಣಿಸೀತು? ಎಂದು ನಿರ್ಲಕ್ಷಿಸಿದ್ದೆ. ಬಾಯ್ತುಂಬ ಎಲೆಯಡಿಕೆ ಜಗಿಯುತ್ತ ತುಳುವಿನಲ್ಲಿ ಅವಳು ಹೇಳಿದ್ದಿಷ್ಟು-‘ಈ ಹಕ್ಕಿ ಬೇಸಗೆಯ ಸೆಕೆ ವಿಪರೀತ ಎನಿಸಿದಾಗ ಎತ್ತರದ ಮರದಲ್ಲಿ ಕುಳಿತು ಮಳೆಯನ್ನು ಕರೆಯುತ್ತದೆ.

ಮರಾಠಿಯಲ್ಲಿ ಪೌಸಾಲಾ (ಉಚ್ಛಾರಣೆಯಲ್ಲಿ ವ್ಯತ್ಯಾಸವಿರಬಹುದು) ಹಕ್ಕಿ ಎನ್ನುತ್ತಾರೆ. ಒಟ್ಟಿನಲ್ಲಿ ಈ ಹಕ್ಕಿ ಕೂಗಲು ಶುರುಮಾಡಿದೆಯೆಂದರೆ ಇನ್ನೇನು ಮಳೆಯ ದಿನಗಳು ದೂರವಿಲ್ಲ ಎನ್ನುತ್ತಿದ್ದರು’ ಎಂದಳು.

ಹಕ್ಕಿ ಹಾಡು ನಿಲ್ಲಿಸಿ ಬೇರೆಲ್ಲೋ ಹಾರಿ ಹೋಗಬಹುದೆಂಬ ಕಳವಳ ತುಂಬಿಕೊಂಡೇ ನನ್ನಲ್ಲಿದ್ದ ಪ್ರೊಸ್ಯೂಮರ್ ಕ್ಯಾಮೆರಾ ಹಿಡಿದು ಹಕ್ಕಿಯಿದ್ದ ಜಾಗ ತಲುಪಿದೆ. ‘ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ, ಎದೆ ತುಂಬಿ ಹಾಡುವೆನು ಇಂದು ನಾನು’ ಎಂಬಂತೆ ಹಕ್ಕಿ ತನ್ನ ಹಾಡನ್ನು ಮುಂದುವರೆಸಿತ್ತು. ನನ್ನ ಅದೃಷ್ಟಕ್ಕೆ ಕೆಲವೇ ಕ್ಷಣಗಳಿದ್ದ ಸಂಜೆ ಬಿಸಿಲು ಹಕ್ಕಿಯ ಮೇಲೆ ಚೆನ್ನಾಗಿ ಬೀಳುತ್ತಿತ್ತು.

ನನ್ನಲ್ಲಿರುವ ಕ್ಯಾಮೆರಾವನ್ನು ಫೋಟೊ ತೆಗೆಯುವುದಕ್ಕಿಂತ ಹೆಚ್ಚಾಗಿ ಬೈನಾಕ್ಯುಲರ್‌ನಂತೆ ಉಪಯೋಗಿಸುತ್ತೇನೆ. ಪೂರ್ಣ ಜೂಮ್ (ಆಪ್ಟಿಕಲ್)ನಲ್ಲಿ ಹಕ್ಕಿಯ ಫೋಟೋ ಕ್ಲಿಕ್ಕಿಸಿ ನಂತರ ಮತ್ತಷ್ಟು ಜೂಮ್ (ಡಿಜಿಟಲ್) ಮಾಡಿ ಹಕ್ಕಿ ಯಾವುದೆಂದು ನೋಡಿದೆ. ಸಣ್ಣ ಗಿಡುಗದಂತೆ ಕಾಣುತ್ತಿದ್ದ ಹಕ್ಕಿಯ ಕೊಕ್ಕು ನೋಡಿ ಬಹುಶಃ ಕೋಗಿಲೆ ಜಾತಿಗೆ ಸೇರಿರಬೇಕು ಎಂದುಕೊಂಡೆ.

ನಾನಿಲ್ಲಿ ಆಧುನಿಕ ಏಕಲವ್ಯನಂತೆ ಸಲೀಂ ಅಲಿಯವರ ಪುಸ್ತಕವನ್ನು ಎದುರಿಟ್ಟುಕೊಳ್ಳಬೇಕಾಗುತ್ತದೆ. ನಾ ನೋಡಿದ ಹಕ್ಕಿಯನ್ನು ಪುಸ್ತಕದಲ್ಲಿ ಕಂಡು ಹಿಡಿದು ಮೌನದಲ್ಲೇ ಸಂಭ್ರಮಿಸಿದೆ. ಅಲ್ಲಿದ್ದ ವಿವರಣೆಗಳನ್ನು ಕಣ್ಣರಳಿಸಿ ಓದಿದೆ. ‘ಬ್ರೇನ್ ಫಿವರ್’ ಹಕ್ಕಿ ಎಂಬ ಹೆಸರೇ ವಿಚಿತ್ರವಾಗಿ ತೋರಿತು. ನಾನು ಊಹಿಸಿದಂತೆ ಕೋಗಿಲೆ (ಕುಕೂ) ಜಾತಿಗೆ ಸೇರಿದ ಹಕ್ಕಿ ಮತ್ತು ತನ್ನ ಮೊಟ್ಟೆಯನ್ನು ಬೇರೆ ಹಕ್ಕಿಗಳ ಗೂಡಲ್ಲಿಟ್ಟು ಸಂತಾನಾಭಿವೃದ್ಧಿ ಕಾರ್ಯದಿಂದ ತಪ್ಪಿಸಿಕೊಳ್ಳುತ್ತದೆ.

ಚಳಿಗಾಲದಲ್ಲಿ ನಿಶ್ಯಬ್ದವಾಗಿರುವ ಇದು ಸೆಕೆ ಹೆಚ್ಚಾದಂತೆ ಗಲಾಟೆ ಮಾಡಿದಷ್ಟು ಜೋರಿನಲ್ಲಿ ಕೂಗುತ್ತದೆ. ಇದರ ಕೂಗು ಬ್ರೈನ್ ಫಿವರ್ ಎಂದಂತೆ ಕೇಳಿಸುವುದರಿಂದ ಬ್ರೇನ್‌ಫಿವರ್ ಹಕ್ಕಿ ಎಂಬ ಹೆಸರು ಬಂದಿದೆ. ಹಿಂದಿಯ ಜನ ಪಿಯಾ ಕಹಾ (ಎಲ್ಲಿ ಪ್ರಿಯಾ) ಮತ್ತು ಮರಾಠಿಗರು ಪೌಸಾಲಾ (ಮಳೆ ಬರುತಿದೆ) ಎಂದು ಕರೆಯುವರೆಂದು ಓದಿ ಆಶ್ಚರ್ಯವಾಯಿತು.

***

ಕೆಂಪು ಕಣ್ಣಿನ ಕೆಂಬೂತ (ನಾವೆಲ್ಲ ಕುಪ್ಪುಳು ಹಕ್ಕಿ ಎನ್ನುತ್ತೇವೆ) ಕೆಂಪು ಬಣ್ಣದ ಹೊರತಾಗಿ ಹೆಚ್ಚು ಕಡಿಮೆ ಕಾಗೆಯನ್ನೇ ಹೋಲುತ್ತದೆ. ಒಂಟಿಯಾಗಿ ಅಥವಾ ಜೋಡಿಯಾಗಿ ಪೊದೆಗಳೆಡೆಯಲ್ಲಿ ಏನನ್ನಾದರೂ ಹುಡುಕುತ್ತಿರುತ್ತದೆ. ಇದೂ ಕೋಗಿಲೆ ಜಾತಿಗೆ ಸೇರಿದ ಪಕ್ಷಿಯೇ ಆದರೂ ತನ್ನ ಮೊಟ್ಟೆಗೆ ತಾನೇ ಕಾವು ಕೊಟ್ಟು ಮರಿ ಮಾಡಿ ಪೋಷಿಸುತ್ತದೆ. ಗಂಟಲಿನ ಮೂಲಕ ಗೂಕ್ ಗೂಕ್ ಎಂದೇ ಹೆಚ್ಚಾಗಿ ಕೂಗುತ್ತದೆಯಾದರೂ ಇದರ ಬತ್ತಳಿಕೆಯಲ್ಲಿ ಇನ್ನೂ ಅನೇಕ ದನಿಗಳಿವೆ. ಕೆಲವೊಮ್ಮೆ ಕಾದು ಕೆಂಪಾದ ಕಾವಲಿಗೆಗೆ ನೀರುದೋಸೆ ಹಿಟ್ಟು ಎರೆದಂತೆ ಚೊಯ್ ಎಂದು ಕೂಗುತ್ತದೆ.

ನಾವು ಸಣ್ಣವರಿದ್ದಾಗ ಅಮ್ಮ ‘ಕುಪ್ಪುಳು ತನ್ನ ಮರಿಗಳಿಗೆ ದೋಸೆ ಎರೆದು ಕೊಡುತ್ತಿದೆ’ ಎನ್ನುತ್ತಿದ್ದಳು. ನಮಗಂತೂ ಇದೊಂದು ಅದ್ಭುತ ವಿಷಯವಾಗಿ ಕಂಡಿತ್ತು. ನಮ್ಮಮ್ಮ ಮಾಡಿದಂತೆ ಕಾವಲಿಗೆಯಿಂದ ದೋಸೆ ಎಬ್ಬಿಸಿ ಸುತ್ತ ಕುಳಿತ ತನ್ನ ಮರಿಗಳಿಗೆ ಬಡಿಸುವುದನ್ನೊಮ್ಮೆ ನೋಡಬೇಕು ಎಂದುಕೊಂಡಿದ್ದೆ. ಕುಪ್ಪುಳು ಸರಿಯಾಗಿ ಗಂಟೆಗೊಮ್ಮೆ ಹೀಗೆ ಸದ್ದು ಮಾಡುತ್ತದೆಂದೂ ಮತ್ತು ಆ ಮೂಲಕವೇ ಗಡಿಯಾರವಿಲ್ಲದ ಕಾಲದಲ್ಲಿ ಸಮಯ ತಿಳಿದುಕೊಳ್ಳುತ್ತಿದ್ದರೆಂದು ಕೆಲವರು ಹೇಳುವುದುಂಟು.

ತೇಜಸ್ವಿಯವರು ಬರೆದ ಕೆಂಬೂತ ಮತ್ತು ಸಂಜೀವಿನಿ ಕಡ್ಡಿಯ ಬಗೆಗಿನ ಸ್ವಾರಸ್ಯದ ಕತೆ ಮರೆತಿರಲಿಲ್ಲ. ಪಾರ್ವತಿಗೂ ಇದರ ಬಗ್ಗೆ ಏನಾದರೂ ತಿಳಿದಿರಬಹುದು ಎಂದುಕೊಂಡು ಒಂದು ದಿನ ಕೇಳಿದೆ. ನನ್ನ ಕುತೂಹಲಕ್ಕೆ ಸರಿಯಾಗಿ ಸಣ್ಣ ಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಇವಳೂ ಅದೇ ಕತೆ ಹೇಳಿದಳು. ಕುಪ್ಪುಳುವಿಗೆ ಸಂಜೀವಿನಿ ಕಡ್ಡಿ ಎಲ್ಲಿರುತ್ತದೆಂದು ತಿಳಿದಿರುತ್ತದಂತೆ.

ಕುಪ್ಪುಳುವಿನ ಗೂಡು ಪತ್ತೆಹಚ್ಚಿ ಅದರ ಮರಿಯ ಕತ್ತು ಮುರಿದರೆ ಕುಪ್ಪುಳು ಸಂಜೀವಿನಿ ಕಡ್ಡಿ ತಂದು ಮತ್ತೆ ತನ್ನ ಮರಿಯನ್ನು ಬದುಕಿಸುತ್ತದಂತೆ. ಕನ್ನಡ ಮಾತನಾಡಲೂ ಬಾರದ ಪಾರ್ವತಿಗೂ ಈ ವಿಷಯ ತಿಳಿದಿದೆಯೆಂದರೆ ಇದೊಂದು ಬಲು ಜನಪ್ರಿಯ ಕತೆಯಿರಬೇಕೆಂದೆನಿಸಿತು.

ಗೂಡಿನಲ್ಲಿರುವ ಹಲವಾರು ಕಡ್ಡಿಗಳಲ್ಲಿ ಸಂಜೀವಿನಿ ಕಡ್ಡಿ ಯಾವುದೆಂದು ಪತ್ತೆಹಚ್ಚುವುದು ಹೇಗೆ? ಎಂದೂ ಪಾರ್ವತಿ ಹೇಳಿದಳು. ಗೂಡನ್ನು ಹಿಡಿದು ತಂದು ಬಿಡಿಸಿ ಎಲ್ಲಾ ಕಡ್ಡಿಗಳನ್ನು ಹರಿವ ನೀರಲ್ಲಿ ಬಿಡಬೇಕಂತೆ. ಎಲ್ಲಾ ಕಡ್ಡಿಗಳು ಕೊಚ್ಚಿ ಹೋದರೂ ಸಂಜೀವಿನಿ ಕಡ್ಡಿ ಮಾತ್ರ ನದಿಯ ಹರಿವಿನ ವಿರುದ್ಧ ದಿಕ್ಕಿಗೆ ತೇಲುತ್ತ ಚಲಿಸುತ್ತದೆಂದು ಹೇಳಿದಳು. ಏನೇ ಇರಲಿ ಇಲ್ಲಿರುವ ಕಲ್ಪನಾಶಕ್ತಿಗೆ ಮೆಚ್ಚಲೇಬೇಕು. ಬಹುಶಃ ಇದು ಅಸಂಭವ ಎಂದು ಹೇಳುವ ಪ್ರಯತ್ನವಾಗಿರಬಹುದು.

***

ಕೆಲವೊಮ್ಮೆ ಗುಂಪಾಗಿ ಇಲ್ಲವೇ ಜೋಡಿಯಾಗಿ ಹಾರುತ್ತಾ ಟಿಟ್ಟಿಟ್ಟಿ ಎಂದು ಕೂಗುತ್ತಾ ಕೆಳಗಿಳಿವ ಹಕ್ಕಿ ರುಧಿರ ಟಿಟ್ಟಿಭ. ಕಲ್ಲು ಬಂಡೆಗಳ ಬಳಿಯೇ ಹೆಚ್ಚಾಗಿ ಕಾಣಸಿಗುವುದರಿಂದ ತುಳುವಿನಲ್ಲಿ ಪಾದೆಪಕ್ಕಿ ಎನ್ನುತ್ತಾರೆ. ಮೊಟ್ಟೆ ಮತ್ತು ಮರಿಗಳು ತಮ್ಮ ಬಣ್ಣ ವಿನ್ಯಾಸದಿಂದ ಸುತ್ತಲಿನ ಪರಿಸರದೊಡನೆ ಬಹುತೇಕ ಬೆರೆತು ಹೋಗಿ ಪತ್ತೆ ಹಚ್ಚಲು ಬಲು ಕಷ್ಟ. ಈ ಟಿಟ್ಟಿಭ ರಾತ್ರಿ ವೇಳೆಯಲ್ಲಿ ಎಲ್ಲಿಯಾದರೂ ಆಕಾಶ ಬಿದ್ದುಬಿಡಬಹುದೆಂದು ತಲೆ ಕೆಳಗೆ ಕಾಲು ಮೇಲೆ ಮಾಡಿ ಮಲಗುತ್ತದೆಂದು ಹೇಳುತ್ತಾರೆ.

ಬೇಟೆಗಾರರು ಸ್ವಲ್ಪವೂ ಇಷ್ಟಪಡದ ಹಕ್ಕಿ ಇದು. ಯಾಕೆಂದರೆ ಮನುಷ್ಯರನ್ನು ನೂರು ಮೀಟರ್ ದೂರದಿಂದ ಕಂಡಾಕ್ಷಣ ಎತ್ತರದ ದನಿಯಲ್ಲಿ ಕೂಗಿ ಎಲ್ಲರನ್ನೂ ಎಚ್ಚರಗೊಳಿಸುತ್ತಿತ್ತು. ಹೀಗಾಗಿ ಇಂದು ರಾತ್ರಿ ಹೊತ್ತು ಟಿಟ್ಟಿಭ ಕೂಗಿತೆಂದರೆ ಅಲ್ಲೆಲ್ಲೋ ಮನುಷ್ಯರು ಸುಳಿದಾಡುತ್ತಿದ್ದಿರಬೇಕೆಂದು ಸಂಶಯ ಪಡಬಹುದು.

ನಮ್ಮ ಊರಿನಲ್ಲಿರುವ ಪಂಚಾಯತು ಕಟ್ಟಡವೊಂದು ಬಹು ಸಮಯದಿಂದ ಖಾಲಿ ಬಿದ್ದಿದೆ. ಈ ಕಟ್ಟಡದ ತಾರಸಿಯ ಮೇಲೆ ಹತ್ತಲು ಯಾವುದೇ ಮೆಟ್ಟಿಲುಗಳಿಲ್ಲ. ಯಾವತ್ತೂ ಕಟ್ಟಡದ ಮೇಲೆ ಟಿಟ್ಟಿಭಗಳೆರಡು ಇರುವುತ್ತಿದ್ದವು ಮತ್ತು ಕಟ್ಟಡದ ಬಳಿಯಲ್ಲಿ ಯಾರೇ ಸುಳಿದರೂ ಟಿಟ್ಟಿಟ್ಟಿ ಎನ್ನುತ್ತಿದ್ದವು. ಒಂದು ದಿನ ನಾನು ಸ್ವಲ್ಪ ಎತ್ತರವಿರುವ ಜಾಗಕ್ಕೆ ಹೋಗಿ ನೋಡಿದಾಗ ತಾರಸಿಯ ಮೇಲೆ ಮೂರು ಚೆಂಡಿನಂತಹ ಪುಟಾಣಿ ಟಿಟ್ಟಿಭಗಳು ಅತ್ತಿಂದಿತ್ತ ಓಡಾಡುತ್ತಿದ್ದವು.

ರಾತ್ರಿ ವೇಳೆಯಲ್ಲಿ ಟಿಟ್ಟಿಭ ತಲೆಕೆಳಗೆ ಕಾಲು ಮೇಲೆ ಮಾಡಿ ಮಲಗಿರಬಹುದೆ ಎಂದು ನೋಡಲು ಆ ಕಟ್ಟಡದ ಬಳಿಗೆ ಕೆಲವು ದಿನ ಹೋದೆ. ಪ್ರತಿಬಾರಿಯೂ ಅವು ನಾನು ಕಟ್ಟಡದ ಹತ್ತಿರ ತಲುಪುವ ಮೊದಲೇ ಗಲಾಟೆ ಮಾಡಲು ಶುರು ಮಾಡುತ್ತಿದ್ದವು. ತಲೆಕೆಳಗೆ ಮಾಡಿ ಮಲಗುವುದಿರಲಿ ನನಗಂತೂ ಈ ಹಕ್ಕಿ ಎಂದಾದರೂ ಮಲಗುತ್ತದೆಯೇ ಎಂದು ಸಂಶಯವಿದೆ. ಆದರೆ ದೊಡ್ಡ ಸಾಹಸಕ್ಕೆ ಕೈ ಹಾಕುವವರನ್ನು ಲೇವಡಿ ಮಾಡಲು ಹಿಂದಿಯಲ್ಲೊಂದು ಪ್ರಸಿದ್ಧ ಗಾದೆಯಿದೆ- ‘ಟಿಟ್ಟಿಭನಿಂದೆಲ್ಲಾದರೂ ಆಕಾಶ ಹಿಡಿದುಕೊಳ್ಳುವುದು ಸಾಧ್ಯವೇ?’

***

ಸರಸರನೆ ಮರವೇರುವ, ಡಮರುಗದಂತೆ ಸದ್ದು ಮಾಡುತ್ತ ಹಾರುವ ವರ್ಣರಂಜಿತ ಹಕ್ಕಿಯಾದ ಮರಕುಟಿಕ ಕ್ಕೆಕ್ಕೆಕ್ಕೆ ಎಂದು ಒಮ್ಮೊಮ್ಮೆ ಬಲು ಕರ್ಕಶವಾಗಿ ಕೂಗುತ್ತ ಹಾರುತ್ತದೆ. ಮರಕುಟಿಕಗಳ ಈ ಕರ್ಕಶ ಶಬ್ದದ ಬಗೆಗಿನ ಮೂಢನಂಬಿಕೆಯೊಂದು ಪ್ರಸಿದ್ಧವಾಗಿದೆ. ಇದರ ದನಿ ಕೇಳಿದ ಕೂಡಲೇ ‘ಇವತ್ತೊಂದು ಅನಿಷ್ಟದ ಸುದ್ದಿ ಕೇಳಬೇಕಾಗುತ್ತದೆ’ ಎಂದು ಚಡಪಡಿಸುವ ಹಲವರನ್ನು ನಾನೇ ಕಣ್ಣಾರೆ ನೋಡಿದ್ದೇನೆ.

ಬಹುಪಾಲು ಜನರಿಗೆ ಅದು ಯಾವ ಹಕ್ಕಿಯಾಗಿರಬಹುದೆಂಬ ಸಣ್ಣ ಸುಳುಹು ಕೂಡಾ ಇಲ್ಲ. ನಾನು ನೋಡಿದಂತೆ ಮರಕುಟಿಕಗಳು ಪ್ರತಿದಿನವೂ ಪದೇ ಪದೇ ಕೂಗುತ್ತಲೇ ಇರುತ್ತದೆ. ಇದೇನು ವಲಸೆ ಹೋಗುವಂತಹ ಹಕ್ಕಿಯಲ್ಲವಾದ್ದರಿಂದ ಒಂದೇ ಪರಿಸರದಲ್ಲಿ ವಾಸಿಸುತ್ತಿರುತ್ತದೆ.

ದೂರದಲ್ಲೆಲ್ಲೋ ಇದರ ಕೂಗು ಕೇಳಿದ್ದು ನಮ್ಮ ಕಿವಿಗೆ ಬಿದ್ದರೂ ಅದರತ್ತ ಲಕ್ಷ್ಯ ಕೊಟ್ಟಿರುವುದಿಲ್ಲ. ಆದರೆ ಹತ್ತಿರದಿಂದ ಸದ್ದು ಮಾಡುತ್ತ ಹಾರಿ ಹೋದಾಗ ಫಕ್ಕನೆ ಗಮನ ಸೆಳೆಯುತ್ತದೆ. ಕೂಗುವುದು ಅದರ ಸಹಜ ಸ್ವಭಾವವೆಂದೆಲ್ಲ ನಾನು ಹೇಳಹೊರಟರೆ ನನ್ನನ್ನೇ ಗೂಬೆಯಂತೆ ದುರುಗುಟ್ಟಿ ನೋಡುತ್ತಾರೆ. ನನಗಂತೂ ಈ ಮರಕುಟಿಕಗಳ ಕೂಗು ಪ್ರತಿದಿನವೂ ಕೇಳುತ್ತದೆ.

***

ನಾವೆಲ್ಲ ನಿಶಾಚರಿಗಳಲ್ಲದ್ದರಿಂದ ಮತ್ತು ರಾತ್ರಿ ಹೊತ್ತಲ್ಲಿ ನಾವು ಅಸಹಾಯಕರಾದ್ದರಿಂದ ಅದು ನಮ್ಮನ್ನು ಹೆದರಿಸುತ್ತದೆ. ರಾತ್ರಿಯಲ್ಲಿ ಕೇಳಿಬರುವ ಸದ್ದುಗಳು ಅನೇಕ ಮತ್ತು ಅವಕ್ಕೊಂದು ಬಗೆಯ ನಿಗೂಢತೆ ಬೆರೆತಂತಿರುತ್ತದೆ. ಒಟ್ಟಿನಲ್ಲಿ ಕಲ್ಪನೆಗಳು ಎಲ್ಲೆ ಮೀರಬಯಸುವ ಸಮಯವದು.

ಅಪರೂಪದ ರಾತ್ರಿಗಳಲ್ಲಿ ಕಾಡಿನೊಳಗಿಂದ ಒಂದು ಕೂಗು ಕೇಳುತ್ತದೆ. ಅಮ್ಮ ಇಂದಿಗೂ ಈ ಸದ್ದಿಗೆ ಬಹಳ ಹೆದರಿಕೊಳ್ಳುತ್ತಾಳೆ. ಆ ಕೂಗೂ ಒಂದು ರೀತಿ ಭಯಾನಕವಾಗಿಯೇ ಇದೆ.

‘ಕುಕ್ಕು ಸುಡೂ’ ಎಂದು ಹೆದರಿಸಲು ಕೂಗಿದಂತೆ ಕೇಳುತ್ತದೆ. ಇದರಿಂದಾಗಿ ಎಲ್ಲರೂ ‘ಕುಕ್ಕುಸುಡೂ ಹಕ್ಕಿ’ ಎಂದು ಕರೆಯುತ್ತಾರೆ. ಅನೇಕರು ಇದರ ಕೂಗು ಕೇಳಿದರೆ ಸದ್ಯದಲ್ಲೇ ಸಾವಿನ ಸುದ್ದಿ ಕಿವಿಗೆ ಬೀಳಲಿದೆ ಎನ್ನುತ್ತಾರೆ. ಈ ಕೂಗು ಕೇಳಿದೊಡನೆ ಅಜ್ಜಿ ಯಾರಿಗೆಲ್ಲ ಸಾಯುವ ವಯಸ್ಸಾಗಿದೆ ಎಂದು ಒಂದು, ಎರಡು ಲೆಕ್ಕ ಹಾಕಲು ಶುರುಮಾಡುತ್ತಿದ್ದರು.

ಕೂಗನ್ನು ಒಂದೆರೆಡು ಬಾರಿ ಕೇಳಿದ್ದೆನಾದರೂ ನನಗೆ ಕೂಗುವವರಾರೆಂದು ನೋಡಲು ಸಾಧ್ಯವಾಗಲಿಲ್ಲ. ನೋಡಿದ್ದೇನೆಂದು ಅನೇಕ ಮಂದಿ ಹೇಳುತ್ತಾರೆ ಮತ್ತು ಒಬ್ಬೊಬ್ಬರು ಒಂದೊಂದು ರೀತಿಯ ವಿವರಣೆ ಕೊಡುತ್ತಾರೆ. ಆ ಕೂಗು ಕೇಳದೆ ಬಹಳ ದಿನಗಳಾದವು. ಇನ್ನೂ ಕಾಯುತ್ತಿದ್ದೇನೆ ಆ ಕೂಗಿಗೆ, ಟಾರ್ಚು ಹಿಡಿದು ಅತ್ತ ಕಡೆಗೆ ಹೋಗಲು, ಹತ್ತಿರದಿಂದೊಮ್ಮೆ ನೋಡಿ, ಮಾತನಾಡಿಸಿ ಬರಲು....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT