ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದುರಿಗೆ ಸುಂದರಿ ಸಿಕ್ಕರೆ ಇರಲಿ ಎಚ್ಚರ...!

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಂದೀಪ್ ಆಗ ತಾನೇ ಪದವಿ ಮುಗಿಸಿ ಒಂದು ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡಿದ್ದ. ಸ್ವಲ್ಪ ಆತುರ ಸ್ವಭಾವದವನಾದ ಈತ, ಯಾವ ವಿಷಯವನ್ನೂ ಅಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಅವನ ಈ ಸ್ವಭಾವದಿಂದಲೇ ಹಲವಾರು ಬಾರಿ ತೊಂದರೆಯನ್ನೂ ಅನುಭವಿಸಿದ್ದ. ಏಕಾಏಕಿ ಯಾವುದಾದರೂ ಕೆಲಸಕ್ಕೆ ಮುನ್ನುಗ್ಗಿ ಕೈಸುಟ್ಟುಕೊಳ್ಳುತ್ತಿದ್ದ ಜಾಯಮಾನ ಆತನದ್ದು.

ಸಂದೀಪನ ತಂದೆ ಸುರೇಶ್‌ ಖಾಸಗಿ ಕಂಪೆನಿಯೊಂದರಲ್ಲಿ ನೋಡಲ್‌ ಅಧಿಕಾರಿಯಾಗಿದ್ದರು. ಕಂಪೆನಿಗೆ ಸಂಬಂಧಿಸಿದ ಕೆಲವೊಂದು ವ್ಯಾಜ್ಯಗಳನ್ನು ನಿರ್ವಹಿಸುವ ಉಸ್ತುವಾರಿ ಅವರೇ ವಹಿಸಿಕೊಂಡಿದ್ದರಿಂದ ನನ್ನ ಬಳಿ ಆಗಾಗ್ಗೆ ಬರುತ್ತಿದ್ದರು. ಆ ಕಂಪೆನಿಯ ಬಹುತೇಕ ಎಲ್ಲ ಪ್ರಕರಣಗಳನ್ನೂ ನಾನೇ ಕೋರ್ಟ್‌ನಲ್ಲಿ ಪ್ರತಿನಿಧಿಸುತ್ತಿದ್ದ ಕಾರಣ, ನನ್ನ ಮತ್ತು ಸುರೇಶ್‌ ಅವರ ಒಡನಾಟ ಸಾಕಷ್ಟಿತ್ತು. ಕೆಲವು ಬಾರಿ ಸಂದೀಪನನ್ನೂ ಕರೆದುಕೊಂಡು ನನ್ನ ಕಚೇರಿಗೆ ಬರುತ್ತಿದ್ದರು.

ಉದ್ಯೋಗ ಸಿಕ್ಕ ಮೇಲೆ ಸಂದೀಪ, ಹೊಸ ಕಾರನ್ನು ಖರೀದಿಸಿದ್ದ. ಅದೊಂದು ದಿನ ಬೆಂಗಳೂರಿನ ಮೇಖ್ರಿ ವೃತ್ತದ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಒಬ್ಬಳು ಯುವತಿ ಕಾರನ್ನು ನಿಲ್ಲಿಸುವಂತೆ ಕೈ ಮಾಡಿದಳು. ಸಂದೀಪ ಕಾರು ನಿಲ್ಲಿಸಿದ. ತಾನು ಅಲ್ಲಿಂದ ದೂರ ಇರುವ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ತುರ್ತಾಗಿ ಹೋಗಬೇಕಾಗಿರುವುದರಿಂದ ದಯವಿಟ್ಟು ಅಲ್ಲಿಗೆ ತನ್ನನ್ನು ಡ್ರಾಪ್‌ ಮಾಡುವಂತೆ ಆಕೆ ಸಂದೀಪನನ್ನು ಕೋರಿಕೊಂಡಳು. ತಾನು ತುಂಬಾ ಕಷ್ಟದಲ್ಲಿದ್ದು, ಸಹಾಯ ಮಾಡುವಂತೆ ಕಣ್ಣೀರು ಸುರಿಸಿದಳು.

ಸಂದೀಪ, ಯುವತಿಯ ಕಣ್ಣೀರಿಗೆ ಕರಗಿಹೋದ. ಸುಂದರ ಯುವತಿ ಬೇರೆ ಆಕೆ. ತಾನಾಗಿಯೇ ಬಂದು ಡ್ರಾಪ್‌ ಕೇಳಿದಾಗ, ಆಗುವುದಿಲ್ಲ ಎಂದು ಹೇಳುವುದುಂಟೇ? ಸಂದೀಪ, ಹಿಂದೆಮುಂದೆ ಯೋಚಿಸದೇ ಕಾರಿನ ಮುಂದಿನ ಬಾಗಿಲನ್ನು ಯುವತಿಗಾಗಿ ತೆರೆದ. ಕಣ್ಣೀರು ಒರೆಸಿಕೊಂಡ ಯುವತಿ ಥಟ್ಟನೆ ಕಾರು ಏರಿ ಸಂದೀಪನ ಬದಿಯ ಸೀಟಿನಲ್ಲಿ ಕುಳಿತಳು.

ತನ್ನ ಪರಿಚಯ ಮಾಡಿಕೊಂಡ ಯುವತಿ, ತಾನು ಕಾಲೇಜಿನಲ್ಲಿ ಓದುತ್ತಿರುವುದಾಗಿ ಹೇಳಿ ತನ್ನ ಬಗ್ಗೆ ಒಂದಿಷ್ಟು ವಿವರಣೆ ನೀಡಿದಳು. ಸಂದೀಪ ಕೂಡ ತನ್ನ ಪರಿಚಯ ಮಾಡಿಕೊಂಡ. ಅಲ್ಲಿಗೆ ಮಾತು ಮುಗಿಸದ ಯುವತಿ ಅದೂ ಇದೂ ಹರಟುತ್ತಾ ಸಂದೀಪನನ್ನು ತನ್ನ ಮಾತಿನ ಬಲೆಗೆ ಸಿಲುಕಿಸಿದಳು. ಇಷ್ಟೇ ಅಲ್ಲದೆ ಆಸ್ಪತ್ರೆಯನ್ನು ತಲುಪುವಷ್ಟರಲ್ಲಿಯೇ ತನ್ನ ಮೋಹದ ಜಾಲಕ್ಕೂ ಸಿಲುಕಿಸಿಬಿಟ್ಟಳು. ಅವಳ ಸೌಂದರ್ಯ, ಮಾದಕ ನೋಟ, ಮಾತಿನ ಧಾಟಿ... ಎಲ್ಲವನ್ನೂ ನೋಡಿ ಸಂದೀಪ ಮರುಳಾಗಿಹೋದ.

ಅಷ್ಟರಲ್ಲಿಯೇ ಆಸ್ಪತ್ರೆ ಬಂತು. ಅವಳು ಇಳಿಯುವ ಸಮಯ ಬಂತಲ್ಲಾ ಎಂದು ಸಂದೀಪ ಬೇಜಾರು ಮಾಡಿಕೊಳ್ಳುವಷ್ಟರಲ್ಲಿಯೇ ಆ ಯುವತಿ, ‘ನನ್ನ ಬಂಧು ಒಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರಿಗೆ ಸ್ವಲ್ಪ ಹಣ ಕೊಡಬೇಕಿದೆ. ಹಣ ಕೊಟ್ಟು ಅವರನ್ನು ಸಂತೈಸಿ ತಕ್ಷಣ ಬರುತ್ತೇನೆ. ಒಂದು ವೇಳೆ ಲೇಟ್‌ ಎನಿಸಿದರೆ ಹೋಗಿ. ಇಲ್ಲದಿದ್ದರೆ 10-15 ನಿಮಿಷ ಕಾದರೆ ನಾನು ಬಂದೇ ಬಿಡುತ್ತೇನೆ’ ಎಂದಳು. ಅವಳನ್ನು ಬಿಟ್ಟು ಹೋಗಲು ಸಂದೀಪನ ಮನಸ್ಸು ಒಪ್ಪುತ್ತಿರಲಿಲ್ಲ. (ಅದು ಅವಳಿಗೂ ಗೊತ್ತಿತ್ತು...!). 10-15 ನಿಮಿಷ ಅಷ್ಟೇ ಏಕೆ? ಗಂಟೆಗಟ್ಟಲೆಯಾದರೂ ಕಾಯುವ ಸ್ಥಿತಿಯಲ್ಲಿದ್ದ ಸಂದೀಪ. ಅದಕ್ಕಾಗಿ ತಾನು ಕಾಯುವೆ ಎಂದ.

ಅವಳು ಅಂದುಕೊಂಡಂತೆ ಎಲ್ಲವೂ ಆಗುತ್ತಿತ್ತು. ಒಳಗೊಳಗೇ ನಗುಬೀರುತ್ತಾ ಆಕೆ ಕಾರಿನಿಂದ ಇಳಿದು ಆಸ್ಪತ್ರೆ ಒಳಗೆ ಹೋದಳು. ಇತ್ತ ಸಂದೀಪ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಅವಳನ್ನು ಇನ್ನಷ್ಟು ಹತ್ತಿರ ಹೇಗೆ ಮಾಡಿಕೊಳ್ಳುವುದು ಎಂದು ಕನಸು ಕಾಣುತ್ತಾ ಕುಳಿತ.

ಯುವತಿ, ತಾನು ಹೇಳಿದಂತೆ ಬೇಗನೆ ಹೊರಗೆ ಬಂದು ಸಂದೀಪನಿಗೆ ‘ಥ್ಯಾಂಕ್ಸ್’ ಹೇಳಿ ಕಾರಿನಲ್ಲಿ ಕುಳಿತಳು. ಅವಳನ್ನು ಎಲ್ಲಿಗೆ ಡ್ರಾಪ್‌ ಮಾಡಬೇಕು ಎಂದು ಸಂದೀಪ ಕೇಳಿದಾಗ ಆಕೆ ತನಗೂ ಸಂದೀಪನ ಮೇಲೆ ಮನಸ್ಸಾಗಿದೆ ಎಂಬಂತೆ ಬಿಂಬಿಸಿ, ‘ಇಲ್ಲೇ ಎಲ್ಲಾದರೂ ಹತ್ತಿರದ ಹೋಟೆಲ್‌ಗೆ ಹೋಗಿ ಸಮಯ ಕಳೆಯೋಣ. ಆಮೇಲೆ ನಾನು ನನ್ನ ಮನೆಗೆ ಹೋಗುತ್ತೇನೆ’ ಎಂದಳು. ಸಂದೀಪ ಹಿರಿಹಿರಿ ಹಿಗ್ಗಿದ.

***

ಅಷ್ಟರಲ್ಲಿ ಕತ್ತಲಾಗುತ್ತ ಬಂತು. ಯಾವ ಹೋಟೆಲ್‌ಗೆ ಹೋಗುವುದು ಎಂದು ಸಂದೀಪ ಯೋಚನೆ ಮಾಡುತ್ತಿದ್ದ. ಅಗ ಆ ಯುವತಿ ‘ಇಲ್ಲೇ ಹತ್ತಿರ ಸದಾಶಿವನಗರದ ಕಡೆಗೆ ಹೋಗೋಣ. ಅಲ್ಲೊಂದು ಒಳ್ಳೇ ಹೋಟೆಲ್‌ ಇದೆ. ಅಲ್ಲಿ ಪ್ರೈವೆಸಿ ಇರುತ್ತದೆ. ಆರಾಮವಾಗಿ ಮಾತಾಡಬಹುದು’ ಎಂದಳು. ಆಕೆ ಏನು ಹೇಳಿದರೂ ಅದನ್ನು ಒಪ್ಪುವ ಪರಿಸ್ಥಿತಿಯಲ್ಲಿದ್ದ ಸಂದೀಪ ಹೂಂಗುಟ್ಟಿದ. ಕಾರು ಆ ಹೋಟೆಲ್‌ನತ್ತ ಸಾಗಿತು.

ಯುವತಿ ಹೇಳಿದ ಹೋಟೆಲ್‌ ಸಿಕ್ಕಾಗ ಕಾರಿನಿಂದ ಇಬ್ಬರೂ ಇಳಿದರು. ಅಲ್ಲಿ ಅಕ್ಕಪಕ್ಕ ಹೆಚ್ಚಿನ ಜನರೂ ಇರಲಿಲ್ಲ. ಇದರಿಂದ ತಮಗೆ ಸ್ವಲ್ಪ ಹೆಚ್ಚಿನದೇ ಪ್ರೈವೆಸಿ ಸಿಕ್ಕಿದೆ ಎಂದು ಸಂದೀಪ ಖುಷಿಪಟ್ಟ. ಕಾರಿನಿಂದ ಇಳಿಯುತ್ತಿದ್ದಂತೆಯೇ ಆ ಯುವತಿ ತನ್ನ ಮೊಬೈಲ್‌ ಫೋನ್‌ನಿಂದ ಮೆಸೇಜ್‌ ಟೈಪ್‌ ಮಾಡಿ ಅದನ್ನು ಕಳಿಸುತ್ತಿದ್ದಂತೆಯೇ ಪೊಲೀಸ್‌ ಕಾನ್‌ಸ್ಟೆಬಲ್‌ ಡ್ರೆಸ್‌ನಲ್ಲಿದ್ದವನೊಬ್ಬ ಅಲ್ಲಿಗೆ ಧಾವಿಸಿದ. ಅವನನ್ನು ನೋಡಿದ ತಕ್ಷಣ ಆ ಯುವತಿ ಇದ್ದಕ್ಕಿದ್ದಂತೆ ಜೋರಾಗಿ ಕಿರುಚಿಕೊಳ್ಳಲು ಶುರು ಮಾಡಿದಳು. ಕಾನ್‌ಸ್ಟೆಬಲ್‌ ಏನಾಯಿತೆಂದು ವಿಚಾರಿಸುತ್ತಿದ್ದಂತೆಯೇ ಆಕೆ, ಈ ಯುವಕ ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ ಎಂದು ರಂಪಾಟ ಮಾಡಿದಳು.

ಸಂದೀಪ ಹೌಹಾರಿ ಹೋದ. ಏನಾಗುತ್ತಿದೆ, ಆ ಯುವತಿ ಏಕೆ ಹಾಗೆ ಮಾಡುತ್ತಿದ್ದಾಳೆ ಎಂದು ತಿಳಿದುಕೊಳ್ಳಲೂ ಸಮಯ ಸಿಗಲಿಲ್ಲ ಅವನಿಗೆ. ಅಷ್ಟೊತ್ತಿಗಾಗಲೇ ಕಾನ್‌ಸ್ಟೆಬಲ್‌ ವೇಷದ ವ್ಯಕ್ತಿ ಅವನ ಹತ್ತಿರ ಬಂದು ಜೋರು ಧ್ವನಿಯಲ್ಲಿ ಗುಟುರು ಹಾಕಿದ, ಸಂದೀಪನ ಬಾಯಿಯಿಂದ ಯಾವುದೇ ಶಬ್ದವೂ ಹೊರಬರಲಿಲ್ಲ. ಆ ವ್ಯಕ್ತಿ ಹೆಚ್ಚು ಮಾತನಾಡದೇ ಕಾರಿನೊಳಗೆ ಕುಳಿತುಕೊಳ್ಳುವಂತೆ ಸಂದೀಪನಿಗೆ ಹೇಳಿದ. ಸಂದೀಪ ಕೂತ. ಆ ಯುವತಿಯೂ ಅದರಲ್ಲಿ ಕೂತಳು. ಕಾನ್‌ಸ್ಟೆಬಲ್‌ ವೇಷದ ವ್ಯಕ್ತಿ ಕಾರು ಓಡಿಸಿಕೊಂಡು ಹೋದ. ಕಾರು ನಿರ್ಜನ ಪ್ರದೇಶಕ್ಕೆ ಹೋಯಿತು. ನಂತರ ಆ ವ್ಯಕ್ತಿ ಸಂದೀಪನನ್ನು ಚೆನ್ನಾಗಿ ಥಳಿಸಿ, ಅವನಲ್ಲಿದ್ದ ಹಣ, ವಾಚು, ಉಂಗುರ, ಚೈನು ಎಲ್ಲವನ್ನೂ ಕಿತ್ತುಕೊಂಡು ಕಾರಿನಿಂದ ಹೊರಕ್ಕೆ ನೂಕಿ ಕಾರನ್ನು ಓಡಿಸಿಕೊಂಡು ಹೋದ.

ಯುವತಿಗೆ ಸೌಂದರ್ಯಕ್ಕೆ ಮರುಳಾದ ಸಂದೀಪನ ಸ್ಥಿತಿ ಇಂಗುತಿಂದ ಮಂಗನಂತಾಗಿತ್ತು. ಅವರು ಬಾರಿಸಿದ ಏಟಿಗೆ ಮೈಕೈಯೆಲ್ಲಾ ಊದಿಕೊಂಡಿತ್ತು. ತಾನು ತಪ್ಪುಮಾಡಿದೆ ಎಂದು ಗೊತ್ತಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು!

ಹಾಗೂ ಹೀಗೂ ಕಷ್ಟಪಟ್ಟು ನನ್ನ ಕಚೇರಿಗೆ ಬಂದ. ಏನೋ ಕಿತಾಪತಿ ಮಾಡಿಕೊಂಡು ಏಟು ತಿಂದಿರಬಹುದು ಎಂದುಕೊಂಡೆ. ಆನಂತರ ಅವನು ನಡೆದ ಘಟನೆ ವಿವರಿಸಿದ. ತಕ್ಷಣ ನಾನು ನನ್ನ ಪರಿಚಯಸ್ಥರಾದ ಸದಾಶಿವನಗರದ ಠಾಣೆಯ ಪೊಲೀಸ್‌ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದೆ. ಆಗ ಇನ್‌ಸ್ಪೆಕ್ಟರ್‌ ಸ್ವಾಮಿಯವರು ಇಂಥದ್ದೇ ಹಲವಾರು ಘಟನೆ ನಡೆಯುತ್ತಿರುವ ಬಗ್ಗೆ ವಿವರಿಸಿದರು.

ಈ ರೀತಿ ಅಮಾಯಕರನ್ನು ದೋಚುವ ಗ್ಯಾಂಗ್ ಬೆಂಗಳೂರಿನಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವುದಾಗಿ ಹೇಳಿದ ಅವರು ಸಂದೀಪನನ್ನು ತಕ್ಷಣ ಠಾಣೆಗೆ ಕಳುಹಿಸಿಕೊಡುವಂತೆ ಹೇಳಿದರು. ನಾನು ಸಂದೀಪನನ್ನು ಕಳುಹಿಸಿಕೊಟ್ಟೆ. ಬೇರೆ ಕೆಲಸದಲ್ಲಿ ನಾನು ಮಗ್ನನಾದೆ.

2-3 ದಿನಗಳಾದರೂ ಸಂದೀಪನ ಪತ್ತೆ ಇರಲಿಲ್ಲ. ಆದ್ದರಿಂದ ಪೊಲೀಸ್‌ ಠಾಣೆಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದಾಗ, ಅವರೂ ಸಂದೀಪ ಠಾಣೆಗೆ ಬರಲಿಲ್ಲ ಎಂದು ಹೇಳಿದರು. ನನಗೆ ಸಂದೀಪನ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು. ಇಂಥ ಘಟನೆ ನಡೆದ ತಕ್ಷಣ ದೂರು ದಾಖಲು ಮಾಡಿದರೆ ತಪ್ಪಿತಸ್ಥರನ್ನು ಹಿಡಿಯಲು ಪೊಲೀಸರಿಗೂ ಸಹಾಯವಾಗುತ್ತದೆ. ಅದರೆ ಅನೇಕ ಮಂದಿ ಮರ್ಯಾದೆಗೆ ಅಂಜಿ ದೂರು ದಾಖಲು ಮಾಡುವುದೇ ಇಲ್ಲ. ಆದ್ದರಿಂದ ತಪ್ಪಿತಸ್ಥರು ಸುಲಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನನಗೆ ಬೇಸರವಾಯಿತು.

ಕೆಲವು ದಿನ ಕಳೆದ ನಂತರ ಸಂದೀಪ ನನ್ನ ಕಚೇರಿಗೆ ಬಂದ. ಅವನ ಬಗ್ಗೆ ಸಿಟ್ಟಿನಲ್ಲಿದ್ದ ನಾನು ತಕ್ಷಣ ನನ್ನನ್ನು ನೋಡಲು ಅವಕಾಶ ಕೊಡಲಿಲ್ಲ. ಆದರೂ ಇದ್ದಕ್ಕಿದ್ದಂತೆ ನನ್ನ ಛೇಂಬರ್‌ಗೆ ನುಗ್ಗಿದ. ತಾನು ಆ ಯುವತಿಯನ್ನು ಮತ್ತು ಕಾನ್‌ಸ್ಟೆಬಲ್‌ ಆಗಿ ಬಂದಿದ್ದ ವ್ಯಕ್ತಿಯನ್ನು ನನ್ನ ಕಚೇರಿಯ ಹತ್ತಿರವೇ ಇರುವ ಹೋಟೆಲ್‌ ಒಂದರಲ್ಲಿ ನೋಡಿದ್ದು, ಈಗಲೂ ಅವರು ಅಲ್ಲಿಯೇ ಇರುವುದಾಗಿ ಹೇಳಿದ. ದೂರು ಏಕೆ ಕೊಡಲಿಲ್ಲ ಎಂದು ಅವನಲ್ಲಿ ಕೋಪದಿಂದ ವಿಚಾರಿಸಿದೆ. ಅದಕ್ಕೆ ಆತ, ‘ದೂರು ಕೊಟ್ಟರೆ ನಿನ್ನ ಹೆಸರು ಟಿ.ವಿ.ಯಲ್ಲಿ ಪ್ರಚಾರ ಆಗುತ್ತದೆ. ನಿನ್ನ ಊದಿರುವ ಮುಖವನ್ನು ನೋಡಿ ಗೊತ್ತಿರುವವರು ನಗುತ್ತಾರೆ, ಆದ್ದರಿಂದ ಸುಮ್ಮನೇ ಇದ್ದುಬಿಡು’ ಎಂದು ನನ್ನ ಸ್ನೇಹಿತರು ಹೇಳಿದರು. ನನಗೂ ಸರಿ ಎನ್ನಿಸಿತು. ಕೋರ್ಟು, ಕಚೇರಿ ಅಂತೆಲ್ಲಾ ಅಲೆದು ಸುಖಾಸುಮ್ಮನೆ ಹಣ, ಸಮಯ ಹಾಳಾಗುತ್ತದೆ ಎಂದು ನನ್ನ ಸ್ನೇಹಿತರು ಹೇಳಿದ ಮಾತು ಸರಿ ಎನಿಸಿತು. ಅದಕ್ಕೇ ದೂರು ನೀಡಲಿಲ್ಲ’ ಎಂದ.

ಇನ್ನೇನು ಹೇಳಿಯೂ ಪ್ರಯೋಜನ ಇಲ್ಲ ಎಂದುಕೊಂಡ ನಾನು, ಅವನಿಗೆ ಇನ್ನಾದರೂ ಅವರ ಬಗ್ಗೆ ದೂರು ನೀಡು ಎಂದು ಹೇಳಿ ಕಳುಹಿಸಿದೆ. ಹೋಟೆಲ್‌ನ ವ್ಯಾಪ್ತಿಯ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ರಮೇಶ್‌ ಅವರನ್ನು ನನ್ನ ಕಚೇರಿಗೆ ಬರುವಂತೆ ವಿನಂತಿಸಿಕೊಂಡೆ. ಅವರು ಬಂದಾಗ ಸಂದೀಪನನ್ನು ಅವರಿಗೆ ಪರಿಚಯಿಸಿ ನಡೆದ ಘಟನೆ ವಿವರಿಸಿದೆ. ನಂತರ ಅವರು ನನ್ನ ಮನವಿ ಮೇರೆಗೆ ಸಂದೀಪನ ಜೊತೆ ಹೋಟೆಲ್‌ಗೆ ಹೋದರು. ಅಲ್ಲಿಯೇ ಇದ್ದ ಆ ಜೋಡಿ, ತಮ್ಮ ಮುಂದಿನ ಯೋಜನೆಗೆ ‘ಸ್ಕೆಚ್‌’ ಹಾಕುತ್ತಿದ್ದರು. ಇನ್‌ಸ್ಪೆಕ್ಟರ್‌ ತಡ ಮಾಡದೇ ಅವರಿಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋದರು.

ಇಬ್ಬರನ್ನೂ ಪೊಲೀಸ್‌ ಶೈಲಿಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಇದೇ ರೀತಿ ಹಲವಾರು ಯುವಕರನ್ನು, ಪುರುಷರನ್ನು ವಂಚಿಸಿರುವ ಬಗ್ಗೆ ಅವರು ಬಾಯಿ ಬಿಟ್ಟರು. ಕೆಲವು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿರುವ ಆ ಯುವತಿ ನಿಜ ಜೀವನದಲ್ಲೂ ಚೆನ್ನಾಗಿ ನಟನೆ ಮಾಡುತ್ತಿರುವ ವಿಷಯ ಪೊಲೀಸರಿಗೆ ತಿಳಿಯಿತು. ಅಷ್ಟೇ ಅಲ್ಲದೇ ಕಾನ್‌ಸ್ಟೆಬಲ್‌ ರೂಪದಲ್ಲಿ ಬಂದಿದ್ದ ಆ ವ್ಯಕ್ತಿ ಆಕೆಯ ಗಂಡ ಎಂದೂ ತಿಳಿಯಿತು. ಇವರಿಬ್ಬರಷ್ಟೇ ಅಲ್ಲ ಇಂಥವರ ದೊಡ್ಡ ಗ್ಯಾಂಗ್‌ ಇರುವುದು ತಿಳಿಯಿತು.

ಸಂದೀಪ ದೂರು ನೀಡಲು ವಿಳಂಬ ಮಾಡಿದ ಬಗ್ಗೆ ವಿವರಣೆ ನೀಡಿ ಠಾಣೆಗೆ ಹೇಳಿಕೆ ಬರೆದುಕೊಟ್ಟ. ಅದೆಲ್ಲವನ್ನೂ ದಾಖಲಿಸಿಕೊಂಡ ಸಂಬಂಧಪಟ್ಟ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ಆರೋಪಿ ದಂಪತಿ ನೀಡಿದ ಸುಳಿವಿನ ಆಧಾರದ ಮೇಲೆ ಹಲವು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದರು. ಶ್ರೀಮಂತರನ್ನು ವಂಚಿಸುತ್ತಿದ್ದ ಈ ದೊಡ್ಡ ಗ್ಯಾಂಗ್‌ ಪತ್ತೆ ಹಚ್ಚಿದ್ದಕ್ಕೆ ಪೊಲೀಸರಿಗೆ ಪದಕವೂ ಸಿಕ್ಕಿತು.

ಈ ಗ್ಯಾಂಗ್ ಇನ್ನೂ ಮೊಕದ್ದಮೆಯನ್ನು ಎದುರಿಸುತ್ತಾ ಇದೆ. ಈಗಲೂ ಕೋರ್ಟ್‌ನಲ್ಲಿ ಇವರ ದರ್ಶನ ಆಗುತ್ತಲೇ ಇರುತ್ತದೆ.

ಇದೇ ರೀತಿಯ ದರೋಡೆಗಳಿಗೆ ಈಗ ಹೊಸ ರೂಪ ಬಂದಿದೆ. ಅದಕ್ಕೆ ಹನಿಟ್ರ್ಯಾಪ್‌ ಎನ್ನುತ್ತಾರೆ. ಸುಂದರಿ ಎದುರಿಗೆ ಸಿಕ್ಕಳು ಎಂದ ತಕ್ಷಣ ಮರುಳಾಗದಿರಿ. ನೀವು ಶ್ರೀಮಂತ ವ್ಯಕ್ತಿಯಾಗಿದ್ದರೆ ಇನ್ನೂ ಎಚ್ಚರಿಕೆ ಇರಲಿ. ನಿಮ್ಮ ಮನಸ್ಸು ನಿಮ್ಮ ಹತೋಟಿಯಲ್ಲಿ ಇರದಿದ್ದರೆ ಸಂದೀಪನ ಪರಿಸ್ಥಿತಿಯೇ ನಿಮಗೂ ಆದೀತು ಜೋಕೆ.

(ಹೆಸರುಗಳನ್ನು ಬದಲಾಯಿಸಲಾಗಿದೆ)

ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT