ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಕಾವ್ಯ ಓದದೆ ಸಾಹಿತ್ಯ ಪ್ರೀತಿ ಹುಟ್ಟಲು ಸಾಧ್ಯವೆ?

Last Updated 7 ಅಕ್ಟೋಬರ್ 2017, 20:45 IST
ಅಕ್ಷರ ಗಾತ್ರ

ಕನ್ನಡ ಶಾಲೆಗಳಲ್ಲೇ ಕನ್ನಡ ಸಾಹಿತ್ಯ ಹೇಳಿಕೊಡುವ ಪರಿಪಾಠ ಮರೆಯಾಗುತ್ತಿದೆ. ಕನ್ನಡದ ಬಹಳಷ್ಟು ಶಿಕ್ಷಕರಿಗೆ ಬೋಧನೆ ಒಂದು ಉದ್ಯೋಗವಾಗಿದೆ. ಕಥೆ, ಕಾವ್ಯ, ಪ್ರಬಂಧ ಬಗ್ಗೆ ತಲೆ ಕೆಡಿಸಿಕೊಳ್ಳುವ ವ್ಯವಧಾನವೂ ಇಲ್ಲ. ಕನ್ನಡದ ಎಷ್ಟೋ ಶಿಕ್ಷಕರು ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಓದಿಲ್ಲ. ಆ ಕೃತಿಯನ್ನು ನೋಡಿಯೂ ಇಲ್ಲ. ಈ ಕೃತಿ ಓದದ ಶಿಕ್ಷಕರು ಹಾಗೂ ಮಕ್ಕಳಿಗಾಗಿ ಮಂಡ್ಯದ ವೈದ್ಯ ಡಾ.ಪ್ರದೀಪ್‌ ಕುಮಾರ ಹೆಬ್ರಿ ಅವರು ರಾಮಾಯಣ ದರ್ಶನಂಗೆ ಜ್ಞಾನಪೀಠ ಪ್ರಶಸ್ತಿ ಬಂದು 50 ವರ್ಷ ತುಂಬಿದ ನೆನಪಿಗಾಗಿ 48 ಪುಟಗಳ ರಾಮಾಯಣ ದರ್ಶನಂ ಕೃತಿ ಹೊರ ತರುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಕಾವ್ಯ, ಅದರಲ್ಲೂ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸುವುದು ಇವರ ಉದ್ದೇಶ. ಡಾ.ಪ್ರದೀಪ್‌ ಅವರು ‘ಪ್ರಜಾವಾಣಿ’ ಜೊತೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

* ‘ವಾಲ್ಮೀಕಿ ರಾಮಾಯಣ’ದಿಂದ ಹಿಡಿದು ಮೊಯಿಲಿ ರಾಮಾಯಣದವರೆಗೆ ಸಾಕಷ್ಟು ರಾಮಾಯಣಗಳು ಇವೆ. ಕುವೆಂಪು ಅವರ ‘ರಾಮಾಯಣ ದರ್ಶನಂ’ ಅನ್ನೇ ಮಕ್ಕಳಿಗಾಗಿ ಏಕೆ ಆಯ್ಕೆ ಮಾಡಿಕೊಂಡಿರಿ?

ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಕೃತಿ ‘ರಾಮಾಯಣ ದರ್ಶನಂ’. ಈ ಪ್ರಶಸ್ತಿ ಬಂದು 50 ವರ್ಷ ಕಳೆದಿವೆ. ಆ ನೆನಪಿಗಾಗಿ ಈ ಪ್ರಯತ್ನ. ಈ ಕೆಲಸ ಮಾಡಲು ನನಗೆ ಒಂದು ಘಟನೆ ಪ್ರೇರಣೆ ನೀಡಿತು ಎಂಬುದನ್ನು ಹೇಳಲೇಬೇಕು. ಒಮ್ಮೆ ಬಿಇಡಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೋಗಿದ್ದೆ. ಕುವೆಂಪು ಅವರ ‘ರಾಮಾಯಣ ದರ್ಶನಂ’ ಎಷ್ಟು ಜನ ಓದಿದ್ದೀರಿ ಎಂದು ಭವಿಷ್ಯದ ಕನ್ನಡದ ಶಿಕ್ಷಕರಿಗೆ ಪ್ರಶ್ನೆ ಮಾಡಿದೆ. ಯಾರೂ ಪ್ರತಿಕ್ರಿಯಿಸಲಿಲ್ಲ. ಅವರು ಈ ಕೃತಿ ಬಗ್ಗೆ ಕೇಳಿಯೂ ಇರಲಿಲ್ಲ, ನೋಡಿಯೂ ಇರಲಿಲ್ಲ. ಶಿಕ್ಷಕರಾಗುವವರಿಗೇ ಕನ್ನಡದ ಒಂದು ಮಹತ್ವದ ಮಹಾಕಾವ್ಯದ ಪರಿಚಯವಿಲ್ಲ ಎಂದರೆ ಅವರು  ಮಕ್ಕಳಿಗೆ ಇನ್ನೇನು ಹೇಳಿಕೊಡಲು ಸಾಧ್ಯ? ಅಲ್ಲಿಗೆ ಕನ್ನಡದ ಸಾಹಿತ್ಯದ ಹರಿವು ನಿಂತು ಹೋಗುತ್ತದೆ. ಈ ಹಂತದಲ್ಲಿ ನನಗೆ ಮಕ್ಕಳು ಮತ್ತು ಶಿಕ್ಷಕರಿಗೆ ಸರಿ ಹೊಂದುವಂತಹ ಪುಸ್ತಕ ರಚಿಸಬೇಕು ಎಂಬ ಚಿಂತನೆ ಹೊಳೆದಿದ್ದು.

* ಆಧುನಿಕ ಸಮೂಹ ಮಾಧ್ಯಮಗಳ ಆಕ್ರಮಣದ ಮಧ್ಯೆ, ಕನ್ನಡದಲ್ಲಿ ರಾಮಾಯಣ ಬರೆದು ಎಷ್ಟು ಮಕ್ಕಳನ್ನು ಪ್ರಭಾವಿಸಲು ಸಾಧ್ಯ? ರಾಮನ ಕಥೆ ಆಕರ್ಷಣೀಯ ಎನಿಸಬಲ್ಲದೆ?

ನಿಜಕ್ಕೂ ಅದೊಂದು ಗಂಭೀರ ಸವಾಲು. ಇಲ್ಲಿ ರಾಮ, ಸೀತೆ, ರಾವಣ ಮುಖ್ಯ ಅಲ್ಲ. ರಾಮ– ರಾವಣರ ಕಥೆಯ ಮೂಲಕ ಮಕ್ಕಳು ಮತ್ತು ಅವರಿಗೆ ಪಾಠ ಹೇಳುವ ಯುವ ಶಿಕ್ಷಕರ ವ್ಯಕ್ತಿತ್ವ ವಿಕಸನಕ್ಕೆ ಪ್ರೇರೇಪಿಸುವುದು ನನ್ನ ಉದ್ದೇಶ. ಕ್ರೌಂಚ ಪಕ್ಷಿ ಸಾಯುವ ಶೋಕ ಶ್ಲೋಕವಾಗುತ್ತದೆ. ವಾಲ್ಮೀಕಿ ಋಷಿಗಳು ಪಕ್ಷಿಗೆ ಮರುಜೀವ ಕೊಡುತ್ತಾರೆ. ಹೀಗೆ ರಾಮಾಯಣದಲ್ಲಿ ಪ್ರತಿಯೊಂದು ವಿಚಾರ, ಘಟನೆ ಮತ್ತು ಪಾತ್ರ ಸಂದೇಶವಾಗಿದೆ. ಮನೋವೈಜ್ಞಾನಿಕ ವಿಶ್ಲೇಷಣೆಯೂ ಪಾತ್ರಗಳ ಮೂಲಕ ವ್ಯಕ್ತವಾಗುತ್ತದೆ. ನೀತಿಯೂ ಇದೆ. ಇಲ್ಲಿ ರಂಜನೆಯ ಉದ್ದೇಶಕ್ಕಾಗಿ ಓದುವುದಕ್ಕಿಂತ, ಮಹಾನ್‌ ಕವಿಯ ಕಾವ್ಯದ ಪ್ರವೇಶ ಪಡೆಯಲು ಆ ಮೂಲಕ ಧರ್ಮ, ನೀತಿ, ಆದರ್ಶಗಳ ಪರಿಚಯ ಸಿಗುತ್ತದೆ. ಕಥೆ ಕೇಳುವ ಮತ್ತು ಕಥನದ ಪರಂಪರೆ ಮುಂದುವರಿಕೆಗೆ ಸಹಾಯವಾಗುತ್ತದೆ. ‘ರಾಮಾಯಣ ದರ್ಶನಂ’ ನಲ್ಲಿರುವ ನಾಲ್ಕು ಅಧ್ಯಾಯಗಳ 50 ಸಂಚಿಕೆಯನ್ನು 48 ಪುಟಕ್ಕೆ ಇಳಿಸಲಾಗುತ್ತದೆ. ಇಲ್ಲಿ ಪ್ರತಿ ಅಧ್ಯಾಯದಲ್ಲೂ ರಾಮಾಯಣ ದರ್ಶನಂನಲ್ಲಿ ಉಲ್ಲೇಖವಾಗಿರುವ ಮಹತ್ವದ ಹಳೆಗನ್ನಡದ ವಾಕ್ಯ ಇರುತ್ತದೆ. ಇಂದಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ಆ ಮಹಾಕಾವ್ಯಕ್ಕೆ ಇದೆ.

ಶಾಲೆಗಳಲ್ಲಿ ಮಕ್ಕಳು ಮಹಾಕಾವ್ಯವನ್ನು ಓದುವ ವಾತಾವರಣ ನಿರ್ಮಾಣವಾಗಬೇಕು. ಆ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಮೌಲ್ಯವನ್ನು ಕಥೆ ಮತ್ತು ಕಾವ್ಯದ ಮೂಲಕವೇ ಧಾರೆ ಎರೆಯಬೇಕು. ತಂದೆ–ತಾಯಿ ಮರೆತಿರುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಕಾವ್ಯ ಮತ್ತು ಕಥನವನ್ನು ಆಲಿಸುವ ಪರಂಪರೆಗೆ ಮರು ಚಾಲನೆ ನೀಡಬೇಕು ಎಂಬುದು ಈ ಯೋಜನೆಯ ಹಿಂದಿನ ಉದ್ದೇಶ.

* ಇಂದಿನ ಸಾಮಾಜಿಕ ಮತ್ತು ಶೈಕ್ಷಣಿಕ ವ್ಯವಸ್ಥೆಗೂ ‘ರಾಮಾಯಣ’ಕ್ಕೂ ಎಲ್ಲಿಯ ಸಂಬಂಧ. ಅದು ಕೇವಲ ಪುರಾಣದ ಕಥೆಯಲ್ಲವೆ, ಅವೆರಡಕ್ಕೂ ಹೇಗೆ ಸಂಬಂಧ ಕಲ್ಪಿಸುತ್ತೀರಿ?

ಕುವೆಂಪು ನಮ್ಮ ಕಾಲದ ಕವಿ. ಅವರ ಕಾವ್ಯ ನೋಡದೆ ಅಥವಾ ಓದದೆ ಸಾಹಿತ್ಯದ ಮೇಲೆ ಹೇಗೆ ಪ್ರೀತಿ ಹುಟ್ಟಲು ಸಾಧ್ಯ ಹೇಳಿ. ನಾವು ಹೂವಿಗೆ ನೀರು ಹಾಕುವ ಕೆಲಸ ಮಾಡುತ್ತೇವೆ. ನಾವು ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದು ನೀತಿ ಬೋಧನೆ ಮಾಡಬಹುದು. ಅವರನ್ನು ರೂಪಿಸುವ ಶಿಕ್ಷಕರು ಬೇರುಗಳಿದ್ದಂತೆ. ಬೇರುಗಳಿಗೆ (ಶಿಕ್ಷಕರಿಗೆ) ನೀರು (ಜ್ಞಾನ) ಎರೆಯದೇ ಇದ್ದರೆ ಹೂವು ಸುಂದರವಾಗಿ ಹೇಗೆ ಅರಳಲು ಸಾಧ್ಯ? ಕಾವ್ಯವನ್ನು ಶಿಕ್ಷಕರ ಮೂಲಕ ಮಕ್ಕಳಿಗೆ ಧಾರೆ ಎರೆಯುವ ಕೆಲಸ ಆಗಬೇಕು. ಇದರಿಂದ ಇಬ್ಬರಲ್ಲೂ ಮನೋಧರ್ಮ (attitude) ಬದಲಾಗಬೇಕು. ಅದಕ್ಕೆ ಪೂರಕ ಹಂದರ ರಾಮಾಯಣದಲ್ಲಿದೆ. ಈ ಕಾವ್ಯವನ್ನು ವಾಲ್ಮೀಕಿಗಿಂತ ಭಿನ್ನವಾಗಿ ಕುವೆಂಪು ನಿರೂಪಿಸಿದ್ದಾರೆ.

ಇಂದಿನ ಮಕ್ಕಳಿಗೆ ಕಥೆ ಕೇಳುವ ಮತ್ತು ಓದುವ ಆಸಕ್ತಿ ಇದೆ. ಆದರೆ, ಅದಕ್ಕೆ ಪೂರಕ ವಾತಾವರಣವನ್ನು ಪೋಷಕರು ಮತ್ತು ಶಾಲೆಗಳು ಸೃಷ್ಟಿಸುತ್ತಿಲ್ಲ. ಮಕ್ಕಳಿಗೆ ನಿಸರ್ಗದೊಂದಿಗೆ ತಾದ್ಯಾತ್ಮ ಬೆಳೆಯುವುದಿಲ್ಲ. ಅದರ ಸೌಂದರ್ಯ, ಚೈತನ್ಯದ ಸಣ್ಣ ಅನುಭವವೂ ಸಹಜವಾಗಿ ದಕ್ಕುವುದಿಲ್ಲ. ಬದಲಿಗೆ ಪೋಷಕರು ತಮ್ಮ ಆಸೆ, ಆಸಕ್ತಿಗಳನ್ನು ಅವರ ಮೇಲೆ ಹೇರುತ್ತಾರೆ. ಅವರನ್ನು ಪ್ರಭಾವಿಸಬಹುದಾದ ನೈತಿಕ ಪಾಠ ಸಿಗುವುದಿಲ್ಲ. ರಾಮಾಯಣದ ಕಥೆ ಹಾಗಿರಲಿ, ಪಂಚತಂತ್ರ, ಚಂದಮಾಮ, ಅಮರಚಿತ್ರ ಕಥಾ ಮೊದಲಾದ ಪುಸ್ತಕಗಳನ್ನು ಓದುವುದಕ್ಕೆ ಶೇ 95 ರಷ್ಟು ಪೋಷಕರು ಪ್ರೋತ್ಸಾಹಿಸುವುದಿಲ್ಲ. ಇವುಗಳನ್ನು ಖರೀದಿಸಿ ₹ 25 ಏತಕ್ಕೆ ವ್ಯರ್ಥ ಮಾಡಬೇಕು ಎಂಬ ಭಾವನೆ ಇದೆ. ಮಕ್ಕಳ ಮನಸ್ಸು ಅರಳಿಸಲು ಅವಕಾಶವನ್ನೇ ನೀಡದ ಸ್ಥಿತಿ ಇದೆ.

ಕುವೆಂಪು ರಾಮಾಯಣದರ್ಶನಂನಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮೊದಲನೆಯದಾಗಿ ಇಲ್ಲಿ ರಾವಣ ಸಾಯುವುದಿಲ್ಲ. ಬದಲಿಗೆ, ರಾವಣನಲ್ಲಿ ರಾಮತ್ವ ಮೂಡುತ್ತದೆ. ಅಂದರೆ, ಕೆಟ್ಟತನಗಳು ಹೋಗಿ ಸದ್ಗುಣಗಳನ್ನು ಬೆಳೆಸಿಕೊಳ್ಳುತ್ತಾನೆ. ರಾವಣ ಮತ್ತು ಕುಂಭಕರ್ಣರು ರಾಮನ ಮಕ್ಕಳಾಗಿ ಅಂದರೆ, ಲವ–ಕುಶರಾಗಿ ಜನಿಸುತ್ತಾರೆ. ಅಂದರೆ ರಾಮತ್ವವನ್ನು ಹೊಂದುವ ಮೂಲಕ ರಾಕ್ಷಸತನ ಕಳೆದುಕೊಳ್ಳುತ್ತಾರೆ. ಯಾವುದೇ ವ್ಯಕ್ತಿ ತನ್ನ ವ್ಯಕ್ತಿತ್ವದ ದೋಷಗಳನ್ನು ಸರಿಪಡಿಸಿಕೊಳ್ಳಬಹುದು ಮತ್ತು ಬದಲಾವಣೆ ಹೊಂದಬಹುದು ಎಂಬುದನ್ನು ಕುವೆಂಪು ರಾಮಯಣ ದರ್ಶನಂ ಕೃತಿಯಲ್ಲಿ ಹೇಳಿದ್ದಾರೆ.

ರಾವಣನಲ್ಲಿ ಸ್ತ್ರೀ ದೌರ್ಬಲ್ಯವೊಂದನ್ನು ಹೊರತುಪಡಿಸಿದರೆ, ಆತ ದೊಡ್ಡ ವಿದ್ವಾಂಸ ಮತ್ತು ಮಹಾನ್‌ ದೊರೆ. ತನ್ನ ಮತ್ತು ರಾಮನ ಮಧ್ಯೆ ಯುದ್ಧದಲ್ಲಿ ಪ್ರಜೆಗಳು ಸಾಯಬಾರದು ಎಂಬ ಕಾರಣಕ್ಕೆ, ಏಕಾಂಗಿಯಾಗಿ ರಾಮನ ಜತೆ ಯುದ್ಧ ಮಾಡುತ್ತಾನೆ. ‘ಸತ್ಯ’ದ ದರ್ಶನದ ಮೂಲಕ ಮಾನವ ಉದ್ಧಾರ ಸಾಧ್ಯ. ಭಗವಂತನ ಆರಾಧನೆ ಮೂಲಕ ಪಾಪಿಯೂ ಉದ್ಧಾರ ಆಗಬಹುದು ಎಂಬುದನ್ನು ಕುವೆಂಪು ಸೂಚ್ಯವಾಗಿ ಪ್ರತಿಪಾದಿಸಿದ್ದಾರೆ. ಹೀಗಾಗಿ ರಾಮಾಯಣ ದರ್ಶನಂ ವಿದ್ಯಾರ್ಥಿಗಳಲ್ಲಿ ನೈತಿಕತೆ ಬೆಳೆಸುವ ಮೂಲ ಸಾಧನ ಆಗಬಲ್ಲದು ಅಲ್ಲವೆ? ಪೋಷಕರ ಹುಸಿ ಪ್ರತಿಷ್ಠೆಯಿಂದ ಮಕ್ಕಳಲ್ಲಿ ಉತ್ತಮ ಸಾಹಿತ್ಯ ಕೃತಿಯನ್ನು ಓದುವ ಸಂಸ್ಕೃತಿ ಬೆಳೆಯುತ್ತಿಲ್ಲ. ಮಕ್ಕಳಿಗೆ ಸವಲತ್ತುಗಳನ್ನು ಕೊಡುತ್ತಾರೆ. ಆದರೆ, ಕಥೆ ಹೇಳುವ ಪ್ರೀತಿ ತೋರುವುದಿಲ್ಲ.

ಮೌಲಿಕ ಕಾವ್ಯ ಮತ್ತು ಕಥನಗಳು ಮಕ್ಕಳಲ್ಲಿ ಬೆಳೆಯಬಹುದಾದ ಅಹಂಕಾರದ ಪರದೆಯನ್ನು ಸರಿಸುತ್ತವೆ. ಎಳೆಯ ಮನಸ್ಸಿನಲ್ಲಿ ಮೂಡಬಹುದಾದ ತಾರತಮ್ಯ, ವ್ಯಕ್ತಿ ಕೇಂದ್ರಿತ ಸ್ವಾರ್ಥದ ಮನೋಭಾವವನ್ನು ತೊಳೆದು ಶುಭ್ರಗೊಳಿಸುವ ವಿಶಿಷ್ಟ ಶಕ್ತಿಯನ್ನು ಹೊಂದಿರುತ್ತದೆ. ಶಾಲೆ ಮತ್ತು ಮನೆಯಲ್ಲಿ ಸಹಜತೆಗೆ ವಿರುದ್ಧವಾದ ಕಟ್ಟುಪಾಡುಗಳಿಂದ ಮಾನಸಿಕವಾಗಿ ಮುಕ್ತಗೊಳಿಸುವ ಶಕ್ತಿ ಈ ಮಾಧ್ಯಮಕ್ಕೆ ಇದೆ. ಆದ್ದರಿಂದ ಈ ಸಂಸ್ಕೃತಿ ಅತಿ ಮುಖ್ಯ.

* ಕೃಷ್ಣನಲ್ಲಿರುವ ರೋಚಕತೆ ರಾಮನಲ್ಲಿ ಕಾಣಲು ಸಾಧ್ಯವಿಲ್ಲ. ರಾಮನದು ಗಂಭೀರ ಪಾತ್ರ. ಹೀಗಾಗಿ ರಾಮಾಯಣ ಮಕ್ಕಳನ್ನು ಆಕರ್ಷಿಸಲು ಸಾಧ್ಯವೇ ?

ರಾಮ ಮತ್ತು ಕೃಷ್ಣ ಪಾತ್ರಗಳು ಮತ್ತು ಸತ್ವ ಭಿನ್ನ ಎಂಬುದು ನಿಜ. ಹಿಂದೆ ಮಕ್ಕಳಿಗೆಂದೇ ಕೃಷ್ಣನ ಕುರಿತಾಗಿ 125 ಪುಟಗಳ ಪುಸ್ತಕ ಮಾಡಿದ್ದೆ. ಅದರಲ್ಲಿ ಆಕರ್ಷಕ ಚಿತ್ರಗಳೂ ಇದ್ದವು. ಇದನ್ನು ಮುದ್ರಿಸಿದ ಪ್ರಕಾಶಕರು ನಷ್ಟ ಹೊಂದಿದರು. ಇದು ಬರೆದವರ ತಪ್ಪೂ ಅಲ್ಲ, ಮುದ್ರಿಸಿದವರ ತಪ್ಪೂ ಅಲ್ಲ. ಸಮಸ್ಯೆ ಇರುವುದು ಹೆತ್ತವರದು. ಹೆತ್ತವರಿಗೆ ರಾಮನೂ ಬೇಡ, ಕೃಷ್ಣನೂ ಬೇಡ. ಮಕ್ಕಳು ರ‍್ಯಾಂಕ್‌ ತೆಗೆಯಬೇಕು, ಡಾಕ್ಟರ್‌ ಇಲ್ಲವೆ ಎಂಜಿನಿಯರ್‌ ಆಗಬೇಕು ಅಷ್ಟೇ. ಎಲ್ಲಿಯವರೆಗೆ ಹೆತ್ತವರು ಈ ಧೋರಣೆ ಬಿಡುವುದಿಲ್ಲವೊ ಅಲ್ಲಿಯತನಕ ರಾಮ ಮತ್ತು ಕೃಷ್ಣರ ಸ್ಥಿತಿ ಒಂದೇ ಆಗಿರುತ್ತದೆ. ರಾಮ ಮತ್ತು ಕೃಷ್ಣರನ್ನು ಇವರು ಮೌಲ್ಯವೆಂದು ಭಾವಿಸುವುದಿಲ್ಲ.

* ನಿಮ್ಮ ರಾಮಾಯಣ ದರ್ಶನಂ ಕೃತಿಯ ಸ್ವರೂಪ, ಅದನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತಲುಪಿಸುವ ವಿಧಾನ ಹೇಗೆ?

ಕುವೆಂಪು ಅವರ ರಾಮಾಯಣ ದರ್ಶನಂ 600 ಪುಟಗಳನ್ನು ಹೊಂದಿದೆ. ಅದರ ಸಾರವನ್ನು ಹಿಂಡಿ 48 ಪುಟಗಳಿಗೆ ಇಳಿಸಲಾಗಿದೆ. ಕೊನೆ ಕ್ಷಣದಲ್ಲಿ ಕೆಲವು ಪುಟಗಳು ಹೆಚ್ಚಾಗಲೂಬಹುದು. ಇದನ್ನು ರಾಜ್ಯದ ಎಲ್ಲಡೆ ಶಾಲಾ ಮಕ್ಕಳು ಮತ್ತು ಶಿಕ್ಷಕರಿಗೆ ತಲುಪಿಸಲಾಗುವುದು. ಈ ಪುಸ್ತಕಕ್ಕೆ ₹ 10 ಬೆಲೆ ಇಡಲಾಗಿದೆ. ಉಚಿತವಾಗಿ ಕೊಟ್ಟರೆ ಅದಕ್ಕೆ ಬೆಲೆ ಇರುವುದಿಲ್ಲ ಎಂಬ ಕಾರಣಕ್ಕೆ ಹಣವನ್ನು ನಿಗದಿ ಮಾಡಲಾಗಿದೆ. ಮಂಡ್ಯದ ಡ್ಯಾಫೊಡಿಲ್ಸ್‌ ಹಾಗೂ ಶಾರದಾ ಪಬ್ಲಿಕ್ ಶಾಲೆಯವರು ಸೇರಿ ಒಟ್ಟು 3000 ಪ್ರತಿಗಳನ್ನು ಮುದ್ರಿಸಲು ಒಪ್ಪಿಕೊಂಡಿದ್ದಾರೆ. ಈ ಯೋಜನೆಯ ಮಾಹಿತಿ ರಾಜ್ಯದಾದ್ಯಂತ ಪ್ರಚಾರ ಆಗಿರುವುದರಿಂದ ಈಗಾಗಲೇ 2000 ಪ್ರತಿಗಳಿಗೆ ಬೇಡಿಕೆ ಬಂದಿದೆ. ಪ್ರೌಢಶಾಲೆ ಶಿಕ್ಷಕರು ಮತ್ತು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೂ ಪ್ರತಿಗಳನ್ನು ತಲುಪಿಸಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ‘ಗ್ರಂಥ ದಾಸೋಹ’ದ ಮೂಲಕ ಪುಸ್ತಕ ವಿತರಿಸಲು ಒಂದಷ್ಟು ಜನ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT