ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಬಿಟಿಸ್‌ಗೆ ಗ್ಲೂಕೋಸ್, ಇನ್ಸುಲಿನ್ ಮಾತ್ರ ಕಾರಣವೇ?

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಡಯಾಬಿಟಿಸ್’ ಅನ್ನೋ ಕಾಯಿಲೆಗೆ ಭಾರತ ದೇಶ ಹೊಸದೇನಲ್ಲ. ನಮ್ಮ ಕುಟುಂಬ ಹಾಗೂ ಸ್ನೇಹಿತ ವರ್ಗದವರಲ್ಲೇ ಒಬ್ಬರಲ್ಲ ಒಬ್ಬರಿಗೆ ಡಯಾಬಿಟಿಸ್ ಇದ್ದೆ ಇರುತ್ತದೆ. ಇದು ಒಂದು ತರಹ ಸದ್ದಿಲ್ಲದೆ ಕೊಲ್ಲುವ ಕಾಯಿಲೆ. ನಮ್ಮಲ್ಲೇ ಎಷ್ಟೋ ಜನರನ್ನು ಇದನ್ನು ‘ರಾಜಕಾಯಿಲೆ - ಒಂದು ಬಾರಿ ಹಿಡಿದರೆ, ಸಾಯುವವರೆಗೂ ನಮಗೆ ಅಂಟಿಕೊಂಟಿರುತ್ತದೆ’ ಎಂದು ಹೇಳುತ್ತಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ನಮ್ಮ ದೇಶ ‘ಡಯಾಬಿಟಿಸ್ ರಾಜಧಾನಿ’ ಎಂದೇ ಖ್ಯಾತಿ ಪಡೆದಿದೆ.

ಭಾರತದಲ್ಲೇ, ಡಯಾಬಿಟಿಸ್ ಇರುವ ಜನಸಂಖ್ಯೆ ಇಷ್ಟು ವರ್ಷಗಳ ತನಕ ಅತಿ ಹೆಚ್ಚು ಇರುತ್ತಿತ್ತು. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಚೀನಾ ದೇಶ ಭಾರತವನ್ನು ಡಯಾಬಿಟಿಸ್ ಹೊಂದಿರುವ ಜನಸಂಖ್ಯೆಯಲ್ಲಿ ಮೀರಿಸಿದೆ. ಆದರೂ, ಭಾರತದ 6.2 ಕೋಟಿ ಡಯಾಬಿಟಿಸ್ ಜನಸಂಖ್ಯೆ ಕಡಿಮೆಯೇನೂ ಇಲ್ಲ. 2030ರ ಅಂತ್ಯಕ್ಕೆ, ಈ ಸಂಖ್ಯೆ 10 ಕೋಟಿ ಮೀರುವ ನಿರೀಕ್ಷೆ ಇದೆ ಎಂದು ಅಂತರರಾಷ್ಟ್ರೀಯ ಡಯಾಬಿಟಿಸ್ ರಾಷ್ಟ್ರಗಳ ಒಕ್ಕೂಟ ಪ್ರಕಟಿಸಿರುವ ಡಯಾಬಿಟಿಸ್ ನಕ್ಷೆ ಸಂಕೇತಿಸುತ್ತದೆ. ಭಾರತದಲ್ಲಿ ಏರುವ ಸಂಖ್ಯೆಗೆ, ಅನುವಂಶಿಕವಾಗಿ ಡಯಾಬಿಟಿಸ್ ಕಾಯಿಲೆ ಮುಂದುವರೆದಿದ್ದರೆ, ಆಧುನಿಕ ಜೀವನಶೈಲಿ ಹಾಗೂ ಶಕ್ತಿ ಸಮೃದ್ಧ ಆಹಾರದ ಲಭ್ಯತೆಯು ಇದಕ್ಕೆ ಉತ್ತೇಜನ ನೀಡುತ್ತಿದೆ.

ನಾವು ಯಾರಾದರೂ ಡಯಾಬಿಟಿಸ್ ಕಾಯಿಲೆ ಇರುವ ವ್ಯಕ್ತಿಯೊಂದಿಗೆ ಮಾತನಾಡಿದ್ದರೆ, ಅಥವಾ, ಪ್ರೌಢ ಶಾಲೆಯ ಮೂಲಭೂತ ಜೀವಶಾಸ್ತ್ರ ಓದಿದ್ದರೆ, ರಕ್ತದಲ್ಲಿನ ಹೆಚ್ಚಿನ ಮಟ್ಟದ ಗ್ಲೂಕೋಸ್ ಮತ್ತು ಇನ್ಸುಲಿನ್‌ನಿಂದಾಗಿ, ಡಯಾಬಿಟಿಸ್ ಉಂಟಾಗುತ್ತದೆ ಎಂಬ ಸಂಗತಿ ಗೊತ್ತೇ ಇರುತ್ತದೆ. ರಕ್ತದಲ್ಲಿ ಗ್ಲೂಕೋಸ್ (ಸಕ್ಕರೆಯ ಅಂಶ) ಮತ್ತು ಇನ್ಸುಲಿನ್ (ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ನಿಯಂತ್ರಿಸುವ ರಾಸಾಯನಿಕ ಅಂತಃಸ್ರಾವ) ಏರುಪೇರಾಗುವ ಕಾರಣಗಳು ಹಲವಾರು.

ಡಯಾಬಿಟಿಸ್‌ನಲ್ಲಿ ಎರಡು ವಿಧಗಳು ಇವೆ. ಟೈಪ್ 1 ಮತ್ತು ಟೈಪ್ 2. ಟೈಪ್ 1 ನಲ್ಲಿ, ದೇಹವು ಇನ್ಸುಲಿನ್ ಅನ್ನು ಅಗತ್ಯವಿರುವಷ್ಟು ಉತ್ಪತ್ತಿಯೇ ಮಾಡುವುದಿಲ್ಲ. ಟೈಪ್ 2 ನಲ್ಲಿ, ದೇಹದಲ್ಲಿನ ಇನ್ಸುಲಿನ್ ನ ಪ್ರತಿಕ್ರಿಯೆ ಕಡಿಮೆಯಾಗುತ್ತದೆ ಅಥವಾ ಇನ್ಸುಲಿನ್ ನ ಉತ್ಪಾದಿಸುವ ಕೋಶಗಳ ಪ್ರತಿಕ್ರಿಯೆ ಕಡಿಮೆಯಾಗುತ್ತದೆ - ಒಟ್ಟಿನಲ್ಲಿ ಗ್ಲೂಕೋಸ್ (ಸಕ್ಕರೆ) ಅಂಶ ಹೆಚ್ಚಾಗುತ್ತದೆ. ಇದರಿಂದಾಗಿ, ಎಲ್ಲ ಚಿಕಿತ್ಸೆಗಳ ಮುಖ್ಯ ಗುರಿ, ಇನ್ಸುಲಿನ್ ಅಥವಾ ಗ್ಲೂಕೋಸ್ ನ ಮಟ್ಟ ನಿಯಂತ್ರಿಸುವುದೇ ಆಗಿರುತ್ತದೆ.

ಹೀಗಿರುವಾಗ, ಡಯಾಬಿಟಿಸ್ ಅನ್ನು ಇನ್ಸುಲಿನ್-ಗ್ಲೂಕೋಸ್ ಕೇಂದ್ರೀಕೃತ ಕಾಯಿಲೆಯೆಂದು ಅರ್ಥೈಸಿಕೊಂಡಿರುವುದೇ ಸರಿಯೇ. ಒಂದು ವೇಳೆ, ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟ ಏರುಪೇರಾಗುವುದಕ್ಕೆ ಬೇರೆಯೇ ಕಾರಣಗಳು ಇರಬಹುದೇ.
ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಯ ಪ್ರೊ. ಮಿಲಿಂದ್ ವಾಟ್ವೇ ಮತ್ತು ತಂಡದ ನೂತನ ಸಂಶೋಧನಾ ಪತ್ರಿಕೆ ಈ ಪ್ರಶ್ನೆಗಳನ್ನು ಹಾಕುತ್ತಾ ಅವನ್ನು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

ಒಂದು ಇ-ಮೇಲ್ ಸಂದರ್ಶನದಲ್ಲಿ, ಪ್ರೊ. ವಾಟ್ವೇ ಇದರ ಬಗ್ಗೆ ವಿವರಿಸುತ್ತಾ, ಡಯಾಬಿಟಿಸ್ ಟೈಪ್ 2 ಮೇಲೆ 25 ವರ್ಷಗಳಿಂದ ಸಾಕಷ್ಟು ಸಂಶೋಧನೆ ನಡೆದರೂ, ಸಣ್ಣ – ಸಣ್ಣ ಅಂಶಗಳ ಸುತ್ತ ಕೇಂದ್ರೀಕರಣವಾಗಿ - ಸಂಶೋಧಕರು ಒಂದು ರೀತಿಯಲ್ಲಿ ಈ ಸಣ್ಣ ಅಂಶಗಳನ್ನು ಹೆಚ್ಚು ಸವಿಸ್ತಾರವಾಗಿ ಅನ್ವೇಶಿಸುತ್ತಾ ಬಂದಿದ್ದಾರೆ ಎಂದು ಅಭಿಪ್ರಾಯ ಪಡುತ್ತಾರೆ. ‘ಎಲ್ಲ ಅಂಶಗಳನ್ನು ಯಾವುದೇ ಪಕ್ಷಪಾತವಿಲ್ಲದೆ ಸಮಗ್ರವಾಗಿ ವಿಶ್ಲೇಷಿಸುವ ಅವಶ್ಯಕತೆ ಇತ್ತು. ನಾವು ಆ ಪ್ರಯತ್ನ ಮಾಡಿದೆವು’ ಎನ್ನುತ್ತಾರೆ ಅವರು.

ಈ ಇಡೀ ಪ್ರತಿಕ್ರಿಯೆಯನ್ನು ಮತ್ತು ಡಯಾಬಿಟಿಸ್ ಇರುವಾಗ ದೇಹದಲ್ಲಿ ಏನೇನು ಬದಲಾವಣೆಗಳು ಸಂಭವಿಸುತ್ತವೆ ಎಂದು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಪ್ರೊ. ವಾಟ್ವೇ ಮತ್ತು ತಂಡ ಹಿಂದಿನ ಅಧ್ಯಯನಗಳಲ್ಲಿ ಡಯಾಬಿಟಿಸ್ ಗೆ ಸಂಬಂಧಿತ ಹಲವಾರು ಅಂಶಗಳನ್ನು ಪರಿಗಣಿಸಿದೆ. ಇದರಲ್ಲಿ ಮೊದಲಾವುಗಳಾದ ಚಯಾಪಚಯ ನಿಯಂತ್ರಣ ರಾಸಾಯನಗಳು, ಅಂತಃಸ್ರಾವ ರಾಸಾಯನಗಳು, ನ್ಯೂರೋಪೆಪ್ಟೈಡ್‌ಗಳು, ಮತ್ತು ಡಯಾಬಿಟಿಸ್ ಸಂಬಂಧಿತ ಹಲವಾರು ವರ್ತನೆಗಳನ್ನು ಗಣನೆಗೆ ತೆಗೆದುಕೊಂಡು, ಒಂದು ಬಹು-ಅಂಗ ಮತ್ತು ಬಹು-ಸಂಕೇತ ಜಾಲವನ್ನು ರಚಿಸಿದರು. ಡಯಾಬಿಟಿಸ್ ನ ಆಂತರಿಕ ಚಟುವಟಿಕೆಗಳನ್ನು ಸರಳೀಕೃತ ಮಾದರಿಯಾದ, ಗ್ಲೂಕೋಸ್-ಇನ್ಸುಲಿನ್ ಮಾತ್ರವಲ್ಲದೇ, ಎಷ್ಟೋ ಬೇರೆ ಅಂಶಗಳನ್ನು ಗಣನೆಗೆ ತೆಗೆದುಕೊಂಡಿರುವ ಒಂದು ಸಂವಾದಾತ್ಮಕ ಜಾಲ ಮಾದರಿಯ ಮುಖೇನ ಅರ್ಥೈಸುವುದು ಇವರ ಮುಖ್ಯ ಧ್ಯೇಯ.

ಈ ಸಂಶೋಧನೆಯಿಂದ ಹೊರಬಿದ್ದ ಒಂದು ಆಶ್ಚರ್ಯಕರ ಸಂಗತಿಯೆಂದರೆ ಗ್ಲೂಕೋಸ್-ಇನ್ಸುಲಿನ್ ನಿಯಂತ್ರಣದಿಂದ ಡಯಾಬಿಟಿಸ್ ನಿಂದ ಉಂಟಾಗುವ ತೊಡಕುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದೆ ಇರಬಹುದು ಎಂದು. ಈ ಮಾದರಿ ಬೇರೆ ಬೇರೆ ನರ-ನಿರ್ನಾಳಗ್ರಂಥಿಯ ಹಾಗೂ ಕೆಲ ವರ್ತನೆಗಳ ಮಧ್ಯಸ್ಥಿಕೆಗಳು ಡಯಾಬಿಟಿಸ್ ಅನ್ನು ಗುಣಪಡಿಸುವ ಭರವಸೆಯ ಗುರಿಗಳಾಗಬಹುದು ಎಂದು ಪ್ರಸ್ತಾಪಿಸುತ್ತದೆ. ಉದಾಹರಣೆಗೆ ವೈವಿಧ್ಯಮಯವಾದ, ಚಯಾಪಚಯ ರಸಾಯನಗಳಾದ ಟೆಸ್ಟೊಸ್ಟೆರೋನ್, ಈಸ್ಟ್ರೋಜೆನ್, ನರ ಪ್ರಸಾರ ರಸಾಯನಗಳಾದ ಡೋಪಮೈನ್, ಸೆರೋಟೋನಿನ್, ಅಂತಃಸ್ರಾವಗಳಾದ ಮೆಲಟೋನಿನ್, ಗ್ರೆಲಿನ್ ಮತ್ತು ವೃದ್ಧಿ ಅಂತಃಸ್ರಾವ ಮೊದಲಾದವು, ಹಾಗೂ ಅಕ್ರಮಣಾ ಶೀಲತೆಯ ವರ್ತನೆಯೂ ಆಗಬಹುದು ಎಂದು!

ಇದರ ಬಗ್ಗೆ ಪ್ರೊ. ವಾಟ್ವೇ ಮಾತನಾಡಿ, ‘ಈ ವ್ಯವಸ್ಥೆ ಎರಡರಲ್ಲಿ ಒಂದು ಸ್ಥಿತಿ ತಲುಪಬಹುದು. ಒಂದು, ಇನ್ಸುಲಿನ್ ಪ್ರತಿರೋಧ ಮತ್ತು ಪರಸ್ಪರ ಸಂಬಂಧಿತ ಅಥವಾ ಇನ್ಸುಲಿನ್ ಸೂಕ್ಷ್ಮ ಮತ್ತು ಪರಸ್ಪರ ಸಂಬಂಧಿತ. ಈ ಪ್ರತಿಕ್ರಿಯೆಯನ್ನು ದ್ವಿಸ್ಥಿರತೆಯೆಂದು ಹೇಳಲಾಗುತ್ತದೆ. ಈ ವ್ಯವಸ್ಥೆಯಲ್ಲಿ ದ್ವಿಸ್ಥಿರತೆಯ ಹೊರಹೊಮ್ಮುವಿಕೆ ನಾವು ಈವರೆಗೆ ಡಯಾಬಿಟಿಸ್ ಅನ್ನು ಅರ್ಥಮಾಡಿಕೊಂಡಿರುವ ರೀತಿಯನ್ನೇ ಪ್ರಶ್ನಿಸಬಹುದು ಮತ್ತು ಇದರ ಪರಿಣಾಮಗಳು ನಮ್ಮ ತಿಳಿವಳಿಕೆಗಳನ್ನು ಪುನಃ ವಿಮರ್ಶಿಸುವಂತೆ ಮಾಡಿದೆ. ಒಂದು ಇನ್ಸುಲಿನ್-ಪ್ರತಿರೋಧಕ ಸ್ಥಿತಿಯನ್ನು ರೂಪಿಸಿರುವ ಹಾಗೂ ಸ್ಥಿರಪಡಿಸುವ ಎಷ್ಟೋ ಯಾಂತ್ರಿಕತೆಗಳು ಹಾಗೂ ಚಟುವಟಿಕೆಗಳಿದ್ದರೆ ಇದಕ್ಕೆ ಏನಾದರೂ ವಿಕಸನೀಯ ಪ್ರಯೋಜನ ಇದ್ದೇ ಇರಬೇಕು. ಇಲ್ಲವಾದಲ್ಲಿ ಇಂದಿನ ಒಂದು ಕಾಯಿಲೆ ಸ್ಥಿತಿಯನ್ನು ಸ್ಥಿರವಾಗಿಸುವ ಎಷ್ಟೋ ವಿಕಾಸನಗೊಂಡ ಯಾಂತ್ರಿಕತೆಗಳು ಅಥವಾ ಚಟುವಟಿಕೆಗಳನ್ನು ನಾವು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ’ ಎಂದು ಅವರು ವಾದ ಮಂಡಿಸುತ್ತಾರೆ.

ಇದರಿಂದ ಅರ್ಥವಾಗುವ ಅಂಶಗಳೆಂದರೆ ಡಯಾಬಿಟಿಸ್ ಗೆ ಮುಖ್ಯ ಕಾರಣವಾದ ಇನ್ಸುಲಿನ್-ಪ್ರತಿರೋಧಕ ಸ್ಥಿತಿ, ವಾಸ್ತವಿಕ ಕಾಯಿಲೆ ಸ್ಥಿತಿ ಅಲ್ಲದಿರಬಹುದು ಮತ್ತು ಅದು ಕೇವಲ ಪರಿಸರ ಪರಿಸ್ಥಿತಿಗಳಿಗೆ ವಿಕಸನಗೊಂಡ ಒಂದು ರೂಪಾಂತರವಿರಬಹುದು. ಈ ಅಂಶ ಡಯಾಬಿಟಿಸ್ ಬಗೆಗಿನ ನಮ್ಮ ಮೂಲ ತಿಳಿವಳಿಕೆಯನ್ನು ಮತ್ತು ಅದರ ಚಿಕಿತ್ಸೆಯ ಹಾಗೂ ತಡೆಗಟ್ಟುವಿಕೆಯ ಮೇಲ್ನೋಟ ಹಾಗೂ ಆಯಾಮಗಳನ್ನು ಬದಲಿಸಬಹುದು.

ಪ್ರೊ.ವಾಟ್ವೇ ಮತ್ತು ತಂಡದ ಈ ಸಂಶೋಧನೆ, ವೈದ್ಯಕೀಯ ಕ್ಷೇತ್ರದಲ್ಲಿ ಮರು ಪರಿಶೀಲನೆಗೆ ಒಳಗಾದರೆ, ಡಯಾಬಿಟಿಸ್ ಬಗೆಗಿನ ನಮ್ಮ ಯೋಚನೆಗಳು ಬದಲಾಗಬಹುದು. ಇನ್ಸುಲಿನ್-ಗ್ಲೂಕೋಸ್ ನಿಯಂತ್ರಣ ಮಾತ್ರವಲ್ಲದೇ, ದ್ವಿಸ್ಥಿರತೆಯ ಎಷ್ಟೋ ಅಂಶಗಳ, ಒಂದು ಸಮಗ್ರ ವಿಧಾನಗಳತ್ತ ನಮ್ಮ ಗಮನವನ್ನು ಕೇಂದ್ರೀಕರಿಸಬಹುದು. ಈ ಆಯಾಮ, ಇನ್ಸುಲಿನ್ ಪ್ರತಿರೋಧಕ ಸ್ಥಿತಿಯಿಂದ, ಇನ್ಸುಲಿನ್ ಸೂಕ್ಷ್ಮ ಸ್ಥಿತಿಗೆ ನಮ್ಮ ಗಮನವನ್ನು ಹರಿಸಬಹುದು. ಮಾತ್ರವಲ್ಲದೇ, ಎಷ್ಟೋ ಸಕ್ಕರೆ-ಕಾಯಿಲೆ ಪೀಡಿತ ವ್ಯಕ್ತಿಗಳು ಅನುಭವಿಸುವ ಗ್ಲೂಕೋಸ್-ಕೇಂದ್ರಿತ ಜೀವನ ಶೈಲಿ ಹಾಗೂ ಆಹಾರ ಕ್ರಮಗಳನ್ನು ಬದಲಿಸಬಹುದು. ಪ್ರೊ. ವಾಟ್ವೇ, ‘ವಿಜ್ಞಾನದಲ್ಲಿ ಆಯಾಮ ಅಥವಾ ಮಾದರಿಯ ಬದಲಾವಣೆ ಕಷ್ಟ. ಅದರಲ್ಲೂ ಇನ್ಸುಲಿನ್ ಒಂದು 50 ಬಿಲಿಯನ್ ಡಾಲರ್ ಉದ್ಯಮ.ಆದ್ದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ವಾದ-ವಿವಾದಗಳ ಹಾಗೂ ಆಸಕ್ತಿಗಳ ಸಂಘರ್ಷಗಳು ಉಂಟಾಗುವುದರಿಂದ ಏಕಾಏಕಿ ಇಂತಹ ಬದಲಾವಣೆಗಳನ್ನು ತರಲು ಅಸಾಧ್ಯ’ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. “ಆದರೆ, ಈ ಬಗ್ಗೆ ಕೆಲ ವೈದ್ಯರು ಹಾಗೂ ಡಯಾಬಿಟಿಸ್ ಸಂಶೋಧಕರಿಂದ ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದಿದ್ದೇವೆ. ಸ್ವಲ್ಪ ಸಮಯವಾದರೂ, ಆಯಾಮದಲ್ಲಿ ಒಂದು ದೊಡ್ಡ ಬದಲಾವಣೆಯೇ ಕಾಣಬಹುದು!” ಎಂದು ಹೇಳುತ್ತಾರೆ.

ಗುಬ್ಬಿ ಲ್ಯಾಬ್ಸ್‌

(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಒಂದು ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT