ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಗೆಲುವಿನ ನಿರೀಕ್ಷೆ

ಇಂದು ಎರಡನೇ ಪಂದ್ಯ; ಕೊಲಂಬಿಯಾ ಎದುರಾಳಿ
Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಮೊದಲ ಪಂದ್ಯದಲ್ಲಿ ಬಲಿಷ್ಠ ಅಮೆರಿಕ ಎದುರು ಸೋತ ಭಾರತ ತಂಡ ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯದ ವಿಶ್ವಾಸದೊಂದಿಗೆ ಸೋಮವಾರ ಮತ್ತೆ ಅಂಗಣಕ್ಕೆ ಇಳಿಯಲಿದೆ. ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಆತಿಥೇಯರು ಕೊಲಂಬಿಯಾವನ್ನು ಎದುರಿಸುವರು.

ಇದೇ ಮೊದಲ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ತಂಡ ಟೂರ್ನಿಯ ಮೊದಲ ದಿನ ನಡೆದ ಪಂದ್ಯದಲ್ಲಿ ಸೋತಿದ್ದರೂ ಕಿಕ್ಕಿರಿದು ತುಂಬಿದ್ದ ಫುಟ್‌ಬಾಲ್ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಎರಡನೇ ಪಂದ್ಯದಲ್ಲೂ ಇದೇ ರೀತಿಯ ಆಟವಾಡುವ ಭರವಸೆಯಲ್ಲಿ ತಂಡದ ಆಟಗಾರರು ಇದ್ದಾರೆ. ಪ್ರೇಕ್ಷಕರು ಕೂಡ ಮತ್ತೊಂದು ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದು ವಿಶ್ವಕಪ್‌ನಲ್ಲಿ ಭಾರತ ಮೊದಲ ಗೋಲು ಗಳಿಸುವುದನ್ನು ನೋಡಲು ಕಾತರರಾಗಿದ್ದಾರೆ.

ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲಿ ಶನಿವಾರ ರಾತ್ರಿ ಕೊರಿಯಾವನ್ನು ಮಣಿಸಿ ಗಮನ ಸೆಳೆದಿರುವ ನೈಗರ್‌ ತಂಡ ಭಾರತದ ಆಟಗಾರರಿಗೆ ಈಗ ಪ್ರೇರಣೆಯಾಗಿದೆ.

ಮೊದಲ ಪಂದ್ಯದಲ್ಲಿ ತಂಡ ಆಡಿದ ರೀತಿ ಕೋಚ್ ಲೂಯಿಸ್ ನಾರ್ಟನ್ ಮಾರ್ಟೊ ಅವರಿಗೆ ತೃಪ್ತಿ ತಂದಿಲ್ಲ. ಆದ್ದರಿಂದ ಪ್ರಬಲ ಎದುರಾಳಿಯಾದ ಕೊಲಂಬಿಯಾ ವಿರುದ್ಧ ಇನ್ನಷ್ಟು ಉತ್ತಮ ಆಟ ಆಡಬೇಕು ಎಂಬುದು ಅವರ ನಿರೀಕ್ಷೆ.

‘ಕೊಲಂಬಿಯಾ ಬಿಲಷ್ಠ ಎದುರಾಳಿ ಎಂಬುದರಲ್ಲಿ ಸಂದೇಹ ಇಲ್ಲ. ಯಾವುದೇ ತಂಡವನ್ನು ಸಮರ್ಥವಾಗಿ ಎದುರಿಸುವ ತಾಕತ್ತು ಆ ತಂಡಕ್ಕೆ ಇದೆ. ನಮಗೂ ಅತ್ಯುತ್ತಮ ಪೈಪೋಟಿ ನೀಡುವ ಸಾಧ್ಯತೆ ಇದೆ. ಆದರೆ ತಂಡದ ಆಟಗಾರರು ಭರವಸೆ ಕಳೆದುಕೊಂಡಿಲ್ಲ. ಈ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೇವೆ’ ಎಂದು ಅವರು ಹೇಳಿದರು.

ಅಮೆರಿಕ ಎದುರಿನ ಪಂದ್ಯದಲ್ಲಿ ಭಾರತದ ಕೆಲ ಆಟಗಾರರು ಗಮನ ಸೆಳೆದಿದ್ದಾರೆ. ಡ್ರಿಬ್ಲಿಂಗ್ ಪ್ರತಿಭೆ ಮತ್ತು ಚುರುಕಿನ ಓಡಾಟದ ಮೂಲಕ ಸ್ಟ್ರೈಕರ್ ಕೋಮಲ್‌ ಥಟಾಲ್‌ ರೋಮಾಂಚನಗೊಳಿಸಿದ್ದಾರೆ. ಭೈಚುಂಗ್ ಭುಟಿಯಾ ಅವರ ನಾಡು ಸಿಕ್ಕಿಂನಿಂದ ಬಂದಿರುವ ಕೋಮಲ್‌ ಮೊದಲ ಪಂದ್ಯದಲ್ಲಿ ಭಾರತಕ್ಕೆ ಅನೇಕ ಅವಕಾಶಗಳನ್ನು ಸೃಷ್ಟಿಸಿದ್ದರು.

ಅವರಿಗೆ ಉತ್ತಮ ಬೆಂಬಲ ನೀಡಿರುವ ಅಂಕಿತ್ ಜಾಧವ್ ಒಂದೇ ಪಂದ್ಯದಲ್ಲಿ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ. ರಕ್ಷಣಾ ವಿಭಾಗವನ್ನು ಸಮರ್ಥವಾಗಿ ನಿಭಾಯಿಸಿದ ಅನ್ವರ್ ಅಲಿ ಮತ್ತು ಜಿತೇಂದ್ರ ಸಿಂಗ್ ಪ್ರವಾಸಿ ತಂಡದ ಶ್ರಮಗಳಿಗೆ ತಡೆ ಒಡ್ಡುವಲ್ಲಿ ಯಶಸ್ವಿಯಾಗಿದ್ದರು. ಗೋಲ್‌ ಕೀಪರ್‌ ಮೊಯಿರಂಗ್‌ಥೆಮ್ ಧೀರಜ್‌ ಸಿಂಗ್ ಮೋಡಿ ಮಾಡಿದ್ದರು.

ಸಿಡಿದೇಳುವ ಹಂಬಲ: ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ ಸೋರಿತುವ ಕೊಲಂಬಿಯಾ ಸಿಡಿದೇಳುವ ಹುಮ್ಮಸ್ಸಿನಲ್ಲಿದೆ. ಆದ್ದರಿಂದ ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಒಟ್ಟು ಐದು ಬಾರಿ ವಿಶ್ವಕಪ್ ಆಡಿರುವ ಕೊಲಂಬಿಯಾ ಎರಡು ಬಾರಿ ಮೂರನೇ ಸ್ಥಾನ ಗಳಿಸಿದೆ. ಇಂಥ ಅನುಭವಿ ತಂಡಕ್ಕೆ ಭಾರತ ಯಾವ ರೀತಿಯ ಪೈಪೋಟಿ ನೀಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT