ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಮೇಲಿರಲಿ ಒಲವು

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

*ಸಮುದ್ಯತಾ ಕಂಜರ್ಪಣೆ

ಈಗ ತೊಮೊಯೆದಂತಹ ಶಾಲೆಗಳಿದ್ದಿದ್ದರೆ ಇಂದು ಕಂಡುಬರುತ್ತಿರುವ ಕ್ರೌರ್ಯ ಎಷ್ಟೋ ಕಡಿಮೆಯಾಗುತ್ತಿತ್ತು ಮತ್ತು ಮಕ್ಕಳು ಶಾಲೆ ಬಿಡುವುದೂ ಕಡಿಮೆಯಾಗುತ್ತಿತ್ತು, ಅಲ್ಲಿ ಮಗುವಿನಲ್ಲಿನ ತನ್ನತನವನ್ನು ಹೊರತಂದು ಆತ್ಮಾಭಿಮಾನವನ್ನು ಉತ್ತೇಜಿಸಲು ಸಾಧ್ಯವಾಗುವಂತಹ ಮುಕ್ತ ಪಠ್ಯಕ್ರಮವಿತ್ತು - ತೆತ್ಸುಕೋ ಕುರೊಯಾನಗಿ, ತೊತ್ತೊಚಾನ್

ಮಕ್ಕಳ ವಿದ್ಯಾಭ್ಯಾಸದ ಕುರಿತಾಗಿ ಹಲವಾರು ಗೊಂದಲಗಳಿವೆ. ಖಾಸಗಿ ಶಾಲೆಗಳ ವೆಚ್ಚವನ್ನು ಭರಿಸಲಾಗದ ಪೋಷಕರು ಪರ್ಯಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸಲಾಗದೆ ಹಿಂಜರಿಯುತ್ತಿದ್ದಾರೆ. ಸರ್ಕಾರಿ ಶಾಲೆ, ಸ್ಟೇಟ್ ಸಿಲಬಸ್ ಎಂದರೆ ಒಂದು ರೀತಿಯ ಅಸಡ್ಡೆ-ಅಗೌರವದ ಭಾವ. ಸರ್ಕಾರಿ ಶಾಲೆಗೆ ಸೇರಿಸುವುದೆಂದರೆ ಕೇವಲ ಕೆಳವರ್ಗದ ಜನರು, ಆರ್ಥಿಕವಾಗಿ ಹಿಂದುಳಿದವರು ಒಂದು ಹೊತ್ತಿನ ಊಟ, ಮೊಟ್ಟೆ, ಹಾಲಿಗಾಗಿ ಮಾತ್ರ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಾರೆ ಎಂಬ ಅಭಿಪ್ರಾಯ. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಶಿಸ್ತು, ಸ್ವಚ್ಛತೆಯ ಅರಿವು ಇರುವುದಿಲ್ಲ, ಶೌಚಾಲಯ, ಶುದ್ಧ ನೀರು ಮುಂತಾದ ಸಾಲು ಸಾಲು ದೂರುಗಳಿವೆ ಸರ್ಕಾರಿ ಶಾಲೆಗಳ ಮೇಲೆ.

ಕಲಿಕಾ ಸಾಮರ್ಥ್ಯವೆನ್ನುವುದು ಪ್ರತಿ ಮಗುವಿಗೂ ಬೇರೆ ಬೇರೆ ಇರುತ್ತದೆ; ಅದು ಬದಲಾಗುತ್ತಾ ಹೋಗುತ್ತದೆ. ಕೆಲವು ಮಕ್ಕಳು ಎರಡು ವರ್ಷದಲ್ಲೇ ಮಾತನಾಡಿದರೆ ಇನ್ನು ಕೆಲವು ಮೂರಾದರೂ ತೊದಲುತ್ತಿರುತ್ತವೆ. ಮೂರು ವರ್ಷದಲ್ಲಿ ಅಕ್ಷರಗಳನ್ನು ಗುರುತಿಸಲು ಕಷ್ಟಪಡುವ ಮಗು ಆರನೇ ವರ್ಷದಲ್ಲಿ ಬಹಳಷ್ಟು ಪುಸ್ತಕಗಳನ್ನು ಓದಿರಬಹುದು. ಈ ಸಮಯದಲ್ಲಿ ಪೋಷಕರು ಮಾಡುವ ಬಹುದೊಡ್ಡ ತಪ್ಪೆಂದರೆ ಮಗು ಕೇವಲ ಶೈಕ್ಷಣಿಕವಾದದ್ದನ್ನು ಮಾತ್ರ ಕಲಿಯಲಿ ಎಂದು ಬಯಸುವುದು. ಹಲವಾರು ಮಕ್ಕಳ ಬಾಲ್ಯ ಕೇವಲ ಖಾಸಗಿ ಶಾಲೆಗಳಲ್ಲಿ ಶಿಶುಗೀತೆಗಳನ್ನು ಕಂಠಪಾಠ ಮಾಡುವುದರಲ್ಲಿ, ಪೆನ್ಸಿಲ್ ಹಿಡಿಯಲು ಬರದ ಕೈಗಳಲ್ಲಿ ಉದ್ದ-ಅಡ್ಡ ಗೆರೆಗಳನ್ನು, ವೃತ್ತಗಳನ್ನು ಅಭ್ಯಾಸ ಮಾಡುವುದರಲ್ಲಿ ಮುಳುಗಿಹೋಗುತ್ತದೆ. ತುಂಟ ಮಗುವನ್ನು ಮನೆಯಲ್ಲಿರಿಸಿಕೊಳ್ಳುವುದು ಕಷ್ಟ ಎಂಬ ಒಂದೇ ಕಾರಣಕ್ಕೆ ಶಾಲೆಗೆ ಸೇರಿಸುವ ಪೋಷಕರು ಹಲವರು.

ಸಾವಿರಾರು ರೂಪಾಯಿ ಸುರಿದು ಒಂದು ಖಾಸಗಿ ಶಾಲೆಗೆ ಸೇರಿಸಿ ಹತ್ತಾರು ಪುಟದ ಹೋಂವರ್ಕ್ ಹಾಗೂ ಪ್ರಾಜೆಕ್ಟ್ ಎಂಬ ಹೊರೆಯನ್ನು ಹೊರಿಸುವ, ಅದರಲ್ಲಿನ ಸ್ಪರ್ಧಾತ್ಮಕ ಬೆಳವಣಿಗೆಯ ವೇಗಕ್ಕೆ ಸಮನಾಗಲು ಟ್ಯೂಷನ್ನಿಗೂ ಸೇರಿಸುವ ತಂದೆತಾಯಂದಿರಿಗೆ ತಮ್ಮ ಮಕ್ಕಳ ಭವಿಷ್ಯ ಯಾವುದರ ಮೇಲೆ ಅವಲಂಬಿತವಾಗಿದೆ ಎಂಬುದು ಅರಿವಾಗುವುದೇ ಇಲ್ಲ. ಮಕ್ಕಳ ಬೌದ್ಧಿಕ ಸಾಮರ್ಥ್ಯಕ್ಕೆ ತಕ್ಕಂಥ ವಿದ್ಯಾಭ್ಯಾಸವನ್ನು ಒದಗಿಸಲು ವಿಫಲರಾಗುವ ಪೋಷಕರು ಮಕ್ಕಳು ಈ ಒತ್ತಡದ ನಡುವೆ ಸೋತಾಗ ಸೋಮಾರಿ, ಮೈಗಳ್ಳ, ದಡ್ಡ ಮುಂತಾದ ಬಿರುದುಗಳನ್ನು ಆ ಮಗುವಿಗೆ ನೀಡುತ್ತಾ ಹೋಗುತ್ತಾರೆ.

ಖಾಸಗಿ ಶಾಲೆಗಳು ಹೆಚ್ಚಿದಂತೆ ಸರ್ಕಾರಿ ಶಾಲೆಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಸೇರಿಸುವುದರಿಂದ ಆಗುವ ಅನುಕೂಲಗಳು ಜನರ ಅರಿವಿಗೆ ಇನ್ನೂ ಬಂದಿಲ್ಲ. ಅಂಗನವಾಡಿಗೆ ಸೇರಿಸಲು ಮೂರೂವರೆ ವರ್ಷವಾಗಬೇಕೆನ್ನುತ್ತದೆ ಸರ್ಕಾರ. ಆ ವಯಸ್ಸಿಗೆ ಮಗು ಏನನ್ನಾದರೂ ಕೇಳಿಸಿಕೊಳ್ಳುವ ಮತ್ತು ಒಂದು ಜಾಗದಲ್ಲಿ ಅರ್ಧಘಂಟೆಯ ಕಾಲ ಕುಳಿತುಕೊಳ್ಳುವ ಹಂತಕ್ಕೆ ಬಂದಿರುತ್ತದೆ. ಐದೂವರೆ ವರ್ಷದ ಹೊತ್ತಿಗೆ ಒಂದನೆಯ ತರಗತಿಗೆ ಬಂದಾಗ ಹೊಸ ವಿಷಯಗಳನ್ನು ತಿಳಿದುಕೊಳ್ಳುವ, ಅರ್ಥಮಾಡಿಕೊಳ್ಳುವ ಹಂತಕ್ಕೆ ಮಗು ತಲುಪಿರುತ್ತದೆ.

ಮಕ್ಕಳ ಬೌದ್ಧಿಕ ಬೆಳವಣಿಗೆಗೆ ತಕ್ಕಂತೆ ಸರ್ಕಾರಿ ಶಾಲೆಗಳಲ್ಲಿ ಪಠ್ಯಕ್ರಮವನ್ನು ಅಳವಡಿಸಲಾಗಿರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿರುವ ನಲಿ-ಕಲಿ ಪಠ್ಯಕ್ರಮ ಇದಕ್ಕೊಂದು ಉದಾಹರಣೆ. 1ರಿಂದ 2ನೆಯ ತರಗತಿಯ ಮಕ್ಕಳು ಪಾಠವನ್ನು ಆಟದೊಂದಿಗೆ ಕಲಿಯಬೇಕು ಎನ್ನುತ್ತದೆ ಈ ಕ್ರಮ. ಇಲ್ಲಿ ಅನೇಕ ಮಾದರಿಗಳಿರುತ್ತವೆ, ಕಲ್ಲು, ಕಾಗದ, ಆಟಿಕೆಗಳು, ಇತರೆ ವಸ್ತುಗಳ ಸಹಾಯದಿಂದ ಮಕ್ಕಳಿಗೆ ವಿಷಯಗಳನ್ನು ಅರ್ಥೈಸಲಾಗುತ್ತದೆ. ಉದಾ: 1ನೆಯ ತರಗತಿ ಮಕ್ಕಳಿಗೆ ಲೆಕ್ಕವನ್ನು ಪರಿಚಯಿಸುವ ವಿಧಾನ ತರಗತಿಯಲ್ಲಿನ ವಸ್ತುಗಳ ಎಣಿಕೆಯಿಂದ ಆರಂಭವಾಗುತ್ತದೆ. ಒಂದು ಮೇಜು, ಎರಡು ಕುರ್ಚಿ, ಮೂರು ಬಳಪ... ಇತ್ಯಾದಿ. ಇಂತಹ ದೃಶ್ಯಾತ್ಮಕ ಕಲಿಕೆಯಿಂದ ಮಕ್ಕಳ ನೆನಪಿನ ಶಕ್ತಿ ಬೆಳೆಯುತ್ತದೆ. ಹಲವಾರು ಶಾಲೆಗಳಲ್ಲಿ ಸ್ವತಃ ಶಿಕ್ಷಕರು ಮಕ್ಕಳಿಂದ ತರಕಾರಿಗಳನ್ನು ಬೆಳೆಸಿ ಅದನ್ನೇ ಬಿಸಿಯೂಟದ ಅಡುಗೆಗೆ ಬಳಸುತ್ತಾರೆ. ಕೇವಲ ಪರೀಕ್ಷಾ ದೃಷ್ಟಿಯಿಂದ ಸಸ್ಯದ ಭಾಗಗಳು ಎಲೆ, ಬೇರು ಕಾಂಡ ಎಂದು ಉರು ಹೊಡೆದು ಪರೀಕ್ಷೆಯಲ್ಲಿ ಬರೆಯುವ ಬದಲು ಇಲ್ಲಿಯ ಮಕ್ಕಳು ಹಲವಾರು ರೀತಿಯ ಸಸ್ಯಗಳನ್ನು ಗುರುತಿಸುತ್ತಾ ಅವುಗಳನ್ನು ಬೆಳೆಸುವ ಕಲೆಯನ್ನೂ ಕಲಿತಿರುತ್ತಾರೆ.

ಮಕ್ಕಳಲ್ಲಿ ಓದು-ಬರವಣಿಗೆಗೆ ಒತ್ತು ನೀಡಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಉನ್ನತ ಮಟ್ಟದ ಗ್ರಂಥಾಲಯದ ಅನುಕೂಲವೂ ಇರುತ್ತದೆ. ಮಕ್ಕಳ ಗ್ರಹಣಶಕ್ತಿ ಹೆಚ್ಚಿದಂತೆ ಪುಸ್ತಕಗಳ ಮೂಲಕ ಅವರ ಆಸಕ್ತಿ, ಅರಿವನ್ನು ಹೆಚ್ಚಿಸುವುದು ಇದರ ಉದ್ದೇಶ. ಮಾತೃಭಾಷೆಯನ್ನು ಸರಿಯಾಗಿ ಕಲಿತರೆ ಇತರ ಎಲ್ಲಾ ಭಾಷೆಗಳನ್ನೂ ಕಲಿಯುವುದು ಸುಲಭ ಎನ್ನುತ್ತಾರೆ ತಜ್ಞರು. ಇದೇ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಮೂಲಪಾಠಗಳನ್ನು ಮಾತೃಭಾಷೆಯಲ್ಲಿ ಕಲಿಸಲಾಗುತ್ತದೆ.

ಹಳ್ಳಿಗಳಿಗೆ ಹೋಲಿಸಿದರೆ ನಗರಗಳಲ್ಲಿನ ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿಯಲ್ಲಿವೆ. ಹಲವಾರು ಶಾಲೆಗಳು ಸುಣ್ಣಬಣ್ಣ ಕಂಡು ವರ್ಷಗಳೇ ಉರುಳಿರುತ್ತವೆ. ಬೆಳಕಿನ, ಶಿಸ್ತಿನ ಹಾಗೂ ಸ್ವಚ್ಛತೆಯ ಕೊರತೆ ಸಾಮಾನ್ಯವಾಗಿ ಎದ್ದುಕಾಣುತ್ತವೆ. ಪೋಷಕರು ಶಿಕ್ಷಕರ ಮೇಲೆ, ಶಿಕ್ಷಕರು ಸರಕಾರದ ಮೇಲೆ ದೂರು ಎತ್ತಿಹಾಕುತ್ತಾ ಕೊನೆಗೊಮ್ಮೆ ಸರ್ಕಾರಿ ಶಾಲೆಯ ಬಾಗಿಲು ಸಂಪೂರ್ಣವಾಗಿ ಮುಚ್ಚುವುದನ್ನು ನೋಡುತ್ತಾ ನಿಲ್ಲಬೇಕಾಗುತ್ತದೆ. ಇದಕ್ಕೆ ಒಂದು ಪರ್ಯಾಯ ಪರಿಹಾರವನ್ನು ಕಂಡುಕೊಳ್ಳುವ ಸಮಯ ಇದೆಂಬುದನ್ನು ಎಲ್ಲರೂ ಅರಿಯಬೇಕಾಗಿದೆ, ಶಿಕ್ಷಕರು ಸರಕಾರದ ಸಹಯೋಗದೊಂದಿಗೆ ತಮ್ಮ ಶಾಲೆಗಳ ಅಭಿವೃದ್ಧಿಯತ್ತ ಗಮನ ಹರಿಸಬೇಕಾಗಿದೆ. ಎರಡು ವರ್ಷಕ್ಕೊಮ್ಮೆಯಾದರೂ ಶಾಲೆಗೆ ಸುಣ್ಣ ಬಣ್ಣ ಮಾಡಿಸುವುದು, ಹೂವಿನ, ತರಕಾರಿ ಗಿಡಗಳನ್ನು ಬೆಳೆಸುವುದು, ಶಿಸ್ತು ಪಾಲನೆ ಮಾಡುವುದು, ಸುಸಜ್ಜಿತ ಶೌಚಾಲಯದ ವ್ಯವಸ್ಥೆ, ಶುದ್ಧ ಆಹಾರ-ನೀರು ಹಾಗೂ ಸ್ವಚ್ಛತೆಯ ಕಡೆಗೆ ಗಮನ ಹರಿಸುವುದು ಮುಖ್ಯವಾಗಿ ಮಾಡಬೇಕಾದ ಕೆಲಸಗಳು. ಸರ್ಕಾರಿ ಶಾಲೆ ಕೇವಲ ಬಡವರಿಗೆ ಎಂಬ ಕಲ್ಪನೆಯನ್ನು ಜನರಿಂದ ಹೋಗಲಾಡಿಸಬೇಕಾದುದು ಕೂಡ ಮುಖ್ಯ.

ಬಿಸಿಯೂಟ, ಹಾಲು, ಮೊಟ್ಟೆ, ಸೈಕಲ್, ಅಫಘಾತ ವಿಮೆ ಮುಂತಾದ ಅನುಕೂಲಗಳನ್ನು ಕೊಡುವ ಸರಕಾರ ತನ್ನ ಜಾಹೀರಾತಿನಲ್ಲಿ ತನ್ನ ಪಠ್ಯಕ್ರಮದ ಅನುಕೂಲವನ್ನೂ ತಿಳಿಸಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿರುವ ಬೋಧನಾ-ಕಲಿಕಾ ಮಾದರಿ ಯಾವ ರೀತಿಯದು, ಪಠ್ಯೇತರ ಚಟುವಟಿಕೆಗಳೇನು, ಇದರಿಂದ ಮಗುವಿನ ಸಮಗ್ರ ಬೆಳವಣಿಗೆಗೆ ಹೇಗೆ ಸಹಾಯವಾಗುತ್ತದೆ ಎಂಬುದನ್ನು ಕೂಡ ಜನರಿಗೆ ತಿಳಿಸುವ ಪ್ರಯತ್ನ ಅವಶ್ಯ. ಇದರಿಂದ ಆರ್ಥಿಕವಾಗಿ ಹಿಂದುಳಿದವರಲ್ಲದೆ, ಮಧ್ಯಮವರ್ಗ ಹಾಗೂ ಉನ್ನತವರ್ಗದ ಮಕ್ಕಳು ಕೂಡ ಶಾಲೆಯೆಡೆಗೆ ಬರುವ ಸಾಧ್ಯತೆ ಹೆಚ್ಚುತ್ತದೆ.

ಶಾಲಾಭಿವೃದ್ದಿ ಕೇವಲ ಸರ್ಕಾರದ ಕೆಲಸ ಎಂದು ತಿಳಿಯುವ ಪೋಷಕರು ಬಹಳಷ್ಟು. ತಾವು ಖಾಸಗಿ ಶಾಲೆಗಳಿಗೆ ವ್ಯಯಿಸುವ ಕಾಲುಭಾಗದಷ್ಟು ಹಣ ಹಾಗೂ ಸಮಯವನ್ನು ಪೋಷಕರು ತಮ್ಮ ಮಗುವಿನ ಹಾಗೂ ಶಾಲೆಯ ಅಭಿವೃದ್ಧಿಗೆ ನೀಡಿದರೆ ಸರ್ಕಾರಿ ಶಾಲೆಗಳ ಪ್ರಗತಿಯನ್ನು ಕಡಿಮೆ ಕಾಲಾವಧಿಯಲ್ಲಿ ನೋಡಬಹುದು. ಪೋಷಕರು ತಿಂಗಳಿಗೊಮ್ಮೆ ಶಿಕ್ಷಕರ ಜೊತೆ ಕುಳಿತು ಮಗುವಿನ ಬೆಳವಣಿಗೆಯ ಜೊತೆಗೆ ಶಾಲೆಯ ಅಭಿವೃದ್ಧಿಯ ಕುರಿತು ಚರ್ಚಿಸಬಹುದು. ಇದಕ್ಕಾಗಿ ಈಗಾಗಲೇ ಜಾರಿಯಲ್ಲಿರುವ ಪೋಷಕರು, ಶಿಕ್ಷಕರು, ಗ್ರಾಮ ಪಂಚಾಯತ್ ಸದಸ್ಯರು, ಶಿಕ್ಷಣತಜ್ಞರು, ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿದ ಶಾಲಾಭಿವೃದ್ಧಿ ಸಮಿತಿ ಇದಕ್ಕೆ ನೆರವಾಗುತ್ತದೆ. ಶಾಲಾ ಪರಿಸರದ ಶುಚಿತ್ವ, ಗಿಡಗಳನ್ನು ನೆಡುವುದು, ಗ್ರಂಥಾಲಯಕ್ಕೆ ಒಳ್ಳೆಯ ಪುಸ್ತಕಗಳನ್ನು ನೀಡುವುದು ಮುಂತಾದ ಕೆಲಸಗಳನ್ನು ಸರದಿಯಂತೆ ಪೋಷಕರೂ ಮಾಡಬಹುದು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಬುಟ್ಟಿಯ ತುಂಬ ಬೀನ್ಸ್, ಟೊಮೆಟೊ ಬೆಳೆದಿರುವ ಉದಾಹರಣೆಗಳಿವೆ. ಹಲವು ಶಾಲೆಗಳಲ್ಲಿ ನೈಸರ್ಗಿಕ ವಸ್ತುಗಳ ಉಪಯೋಗ ಪಡೆದುಕೊಂಡು ಪಠ್ಯಕ್ಕೆ ಅನುಕೂಲವಾಗುವ ಪರಿಕರಗಳನ್ನು ತಯಾರಿಸಿದ್ದಾರೆ.

ವಿದ್ಯಾವಂತರಾಗಿದ್ದಲ್ಲಿ ಅಥವಾ ಯಾವುದಾದರೂ ಕಲೆಯಲ್ಲಿ ಪರಿಣತಿ ಹೊಂದಿದವರಾದಲ್ಲಿ ವಾರಾಂತ್ಯದಲ್ಲಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್, ಚಿತ್ರಕಲೆ, ಸಂಗೀತ, ಸಮರಕಲೆ ಮುಂತಾದ ತರಗತಿಗಳನ್ನು ನಡೆಸಬಹುದು. ಕೆಲವು ಶಾಲೆಗಳಲ್ಲಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಶಾಲಾ ವಾರಪತ್ರಿಕೆಯನ್ನು ಸ್ವತಃ ಮಕ್ಕಳ ಕೈಯಿಂದಲೇ ಬರೆಸುತ್ತಾರೆ. ಮಕ್ಕಳು ಬರೆದ ಕಥೆ, ಕವನ, ಚಿತ್ರಗಳನ್ನು ಶಾಲೆಯ ಸೂಚನಾ ಫಲಕದಲ್ಲಿ ಹಾಕುತ್ತಾರೆ. ನಿತ್ಯದ ಹವಾಮಾನ ವರದಿಗಾಗಿ ಮಕ್ಕಳೇ ತಯಾರಿಸಿದ ಫಲಕಗಳನ್ನು ಪ್ರತಿ ತರಗತಿಯಲ್ಲೂ ಇಟ್ಟಿರುತ್ತಾರೆ. ಈ ಯಾವ ಅಂಶಗಳೂ ಪೋಷಕರಿಗೆ ತಿಳಿದೇ ಇರುವುದಿಲ್ಲ. ಕೆಲವು ಶಾಲೆಗಳಲ್ಲಿ ಶಿಕ್ಷಕರಿಗೆ ಕೂಡ ಈ ಯೋಜನೆಗಳ ಕುರಿತಾದ ಸರಿಯಾದ ಅರಿವಿರುವುದಿಲ್ಲ. ಸರ್ಕಾರೀ ಶಾಲೆಗಳ ವೈಫಲ್ಯಕ್ಕೆ ಇದೂ ಒಂದು ಮುಖ್ಯ ಕಾರಣವಾಗಿದೆ.

ಮಕ್ಕಳನ್ನು ಬೆಳೆಸುವ ಕರ್ತವ್ಯ ಕೇವಲ ಶಿಕ್ಷಕರದು ಮಾತ್ರವಲ್ಲ ಪೋಷಕರದ್ದೂ ಆಗಿರುತ್ತದೆ ಎಂಬ ಅರಿವು ತಂದೆತಾಯಂದಿರಿಗೆ ಮುಖ್ಯ. ಮನೆಪಾಠಕ್ಕೆ ಕಳಿಸುವ ಬದಲು, ಮನೆಯಲ್ಲೇ ಚಟುವಟಿಕೆಗಳನ್ನು ಮಾಡಿಸುತ್ತಾ, ಮೌಲ್ಯಾಧಾರಿತ ಕಲಿಕೆಯ ಬೋಧನೆ ಆಗಬೇಕಿದೆ. ನಮ್ಮ ಸುತ್ತಮುತ್ತಲ ಗಿಡಮರಗಳ ಪರಿಚಯ, ಪ್ರಾಣಿ-ಪಕ್ಷಿಗಳ ಪರಿಚಯ, ಐತಿಹಾಸಿಕ ಸ್ಥಳಗಳು, ಸ್ವಾತಂತ್ರ್ಯ ಹೋರಾಟಗಾರರು, ಜೀವನಕಲೆಗಳನ್ನು ವಿವಿಧ ಪುಸ್ತಕಗಳನ್ನು ಓದಿಸುತ್ತಾ, ಸ್ಥಳಗಳಿಗೆ ಭೇಟಿ ನೀಡುತ್ತಾ ಮಕ್ಕಳಿಗೆ ಪರಿಚಯಿಸಬೇಕು. ಮಕ್ಕಳಲ್ಲಿನ ಕಲಾವಿದ, ಸಾಹಿತಿ, ಕವಿ, ಹಾಡುಗಾರ ಇತ್ಯಾದಿ ಪ್ರತಿಭೆಗಳನ್ನು ಹೊರತರುವ ಪ್ರಯತ್ನ ಆಗಬೇಕಿದೆ.

ಮಕ್ಕಳಿಗೆ ಒತ್ತಡ ಹೇರುತ್ತಾ ಅವರ ಬೌದ್ಧಿಕ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಬದಲು ಅವರಲ್ಲಿರುವ ಪ್ರತಿಭೆಗೆ ಬೆಂಬಲವಾಗಿ ನಿಂತು ಅದರಲ್ಲಿ ಸಾಧನೆಗೈಯುವ ಸ್ವಾತಂತ್ರ್ಯವನ್ನು ಪೋಷಕರು ಮಕ್ಕಳಿಗೆ ಕೊಡಬೇಕಿದೆ. ತೊತ್ತೊಚಾನಳ ತೊಮೊಯೆ ಶಾಲೆ, ಗಿಜುಭಾಯ್ ಬಧೇಕಾ ಅವರ ಹಗಲುಗನಸು ಕಾದಂಬರಿಯಲ್ಲಿ ಬರುವ ಪಠ್ಯಕ್ರಮಗಳು ವಿಶೇಷವಾಗುವುದು ಇಲ್ಲಿ. ಮಕ್ಕಳು ಶೈಕ್ಷಣಿಕವಾಗಿ ಬೆಳೆಯುವುದರ ಜೊತೆಗೆ ಆತ್ಮವಿಶ್ವಾಸ, ಜೀವನಕಲೆ, ಪರಿಸರದ ಜೊತೆಯ ಹೊಂದಾಣಿಕೆ ಈ ಎಲ್ಲವನ್ನೂ ಅರಿತಾಗಲೇ ಅವರು ಮುಂದಿನ ಹೆಜ್ಜೆಗಳನ್ನು ಧೃಢವಾಗಿ ಇಡುವುದಕ್ಕೆ ಸಾಧ್ಯ. ಸರಕಾರ, ಶಿಕ್ಷಕರು, ಪೋಷಕರು ಎಲ್ಲರೂ ಈ ನಿಟ್ಟಿನಲ್ಲಿ ಜೊತೆಯಾಗಿ ನಡೆದರೆ ಮಕ್ಕಳ ಭವಿಷ್ಯದ ಅಡಿಪಾಯವನ್ನು ಬಿಗಿಗೊಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT