ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿಯ ಅರ್ಥಶಾಸ್ತ್ರವೆಂದರೆ...

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕುವೆಂಪು ವರ್ಣನೆಯ ಅಡವಿ ಈಗ ಉಳಿದಿಲ್ಲ. ಅದು, ನೋಡ ನೋಡುತ್ತಲೇ ತನ್ನ ಗಾಂಭೀರ್ಯ ಕಳೆದುಕೊಂಡು ತುಸು ವಿದ್ಯುತ್ ನೀಡುವ ಯಂತ್ರವಾಯಿತು. ಲಿಂಗನಮಕ್ಕಿ, ವಾರಾಹಿ, ಕಾಳಿ ಎಲ್ಲವುಗಳ ದೀಪಗಳೀಗ ಮಸುಕಾಗುತ್ತಿವೆ. ಅಲ್ಲೀಗ ಮಳೆ ಅಂದಿನಂತೆ ‘ಸುರಿಯುತ್ತಿಲ್ಲ’. ಬರೀ ‘ಬೀಳುತ್ತಿದೆ’.

ಪಶ್ಚಿಮಘಟ್ಟದ ಸಾಲಿನ ಉಳಿದ ಹೇಮಾವತಿ, ಯಗಚಿ, ವಾಟೆಹೊಳೆ, ಭದ್ರಾ ಇತ್ಯಾದಿಗಳೆಲ್ಲವೂ ‘ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ’ ಎಂದು ಹಲುಬುತ್ತಿವೆ. ಆದರೆ ಕೆಂಪೇಗೌಡ ಕಟ್ಟಿದ ಬೆಂಗಳೂರು, ಅದರಾಚೆಯ ಬಯಲುಸೀಮೆಯ ಒಣಗಿದ ನೆಲಕ್ಕೆ ಪ್ರತಿನಿತ್ಯ ಬೋರೆಂದು ಮಳೆರಾಯನು ಮೋಡಣ್ಣಂದಿರನ್ನೆಲ್ಲ ಅಂಗಿ ಹಿಡಿದು ಎಳೆದು ತರುತ್ತಿದ್ದಾನೆ. ಮಲೆನಾಡು, ಅರೆಮಲೆನಾಡಿನಲ್ಲಿ ಎರಡು-ಮೂರು ಬೇಸಿಗೆ ಕಳೆಯಿತು. ಝರಿತೊರೆಗಳು ಹೊಟ್ಟೆಗಿಲ್ಲದ ಭಾರತದ ಬಡ ರೈತನಂತಾಗಿವೆ. ಆತನಂತೆಯೇ ಆತ್ಮಹತ್ಯೆ ದಾರಿಗಿಳಿದಿವೆ.

ಹೇಮಾವತಿಗೆ ಮುಳ್ಳಯ್ಯನಗಿರಿ ಕಡೆಯಿಂದ ದಡದಡನೆ ನೀರು ಉಕ್ಕಿಸುತ್ತಿದ್ದ ಯಗಚಿಯೀಗ ಬಲು ಬಡವಿ. ಬೇಲೂರು ಚೆನ್ನಕೇಶವನೇ ಯಗಚಿ ಅಣೆಯಲ್ಲಿ ಬಗ್ಗಿ ನೋಡಿದರೂ ನೀರಿಲ್ಲ. ಆದರೆ ಬೆಂಗಳೂರೆಂಬ ಕಾಂಕ್ರೀಟ್ ಕಾಡು, ಟಿ.ಎಂ.ಸಿ.ಗಟ್ಟಲೆ ಮಳೆನೀರನ್ನು ದ್ರಾವಿಡ ನೆಲಕ್ಕೆ ನೂಕಿದೆ. ಈ ನೀರು ಕುಡಿಯಲು ನಗರಗಳ ನೆಲಕ್ಕೆ ಗಂಟಲಲ್ಲಿ ರಂಧ್ರಗಳೇ ಇಲ್ಲ. ರಾಜಮಹಾರಾಜ, ಮಾಂಡಲೀಕರು ಕಟ್ಟಿಸಿದ ಕೆರೆಗಳೆಲ್ಲವೂ ಈಗ ಕೊಳಕುಕೊಚ್ಚೆ ನೂಕುವ ಗಂಡಿಗಳು.

ಯಾಕೆ ಈ ತಿರುಗುಮುರುಗು? ವಿಜ್ಞಾನಿಗಳು ಸಾಗರಗಳ ಮೇಲೆ ದುರ್ಬೀನು ಹಾಕಿ ನೋಡಿದ್ದಾರಂತೆ ಜಾಗತಿಕ ತಾಪಮಾನವು ಸಮುದ್ರರಾಯಂದಿರಿಗೆ ಮುಸುಕು ಹಾಕಿ ಗುದ್ದಿರುವುದುಂಟಂತೆ.

ಈ ಗುದ್ದಾಟಕ್ಕೆ ಬೆದರಿದ ಮೋಡಣ್ಣಂದಿರು ಎತ್ತೆತ್ತಲೋ ಚಲಿಸಿದ ಅನಾವೃಷ್ಟಿ, ಅತಿವೃಷ್ಟಿಯಿದು. ಹಾಗಾಗಿ ಹಬ್ಬಿದಾ ಮಲೆಯ ಮುಗಿಲಿಗೂ ನೆಲಕ್ಕೂ ಮಳೆತೇರು ಕಟ್ಟುವ ಪಶ್ಚಿಮಘಟ್ಟದ ಸಾಲು, ಹಿಮಾಲಯ ಸಾಲು ಬರಡಾಗುತ್ತಿರುವ ಆತಂಕದಲ್ಲಿವೆ. ಹಸಿರಿನ ಸಾಲಿಗೂ ಮುಗಿಲಿನ ಮಳೆಬಿಲ್ಲಿಗೂ ನಂಟು ಉಂಟು. ನಾಗರಿಕ ಮನುಷ್ಯ ಇದನ್ನು ಕತ್ತರಿಸಿರುವ ಕಟುಕ. ಮರದ ಮೇಲೆ ಕುಳಿತು ಬುಡ ಕಡಿವ ಹೆಡ್ಡನಿವನು.

ಮಳೆಗಾಲ ಬಂತೆಂದರೆ ನನ್ನಂತಹವರಿಗೆ ಮಲೆನಾಡಿನದೇ ಗ್ಯಾನ. ಅಲ್ಲಿ ಎರಡು– ಮೂರು ವರ್ಷದಿಂದ ಎಂದಿನಂತೆ ಹಿಡಿಯುವ ಮಳೆಯಿಲ್ಲ. ಮಳೆ ಹಿಡಿಯದಿದ್ದರೆ ಜಲ ಒಸರುವುದಿಲ್ಲ. ಒಸರದಿದ್ದರೆ ಝರಿಸಾಲು ಹೊಳೆ ಸೇರುವುದಿಲ್ಲ, ಹೊಳೆಗಳು ನದಿ ಮುಟ್ಟುವುದಿಲ್ಲ. ಹೋದ ವರ್ಷ ನೀರಡಿಕೆಯಾಗಿ ಕಿತ್ತಲೆ ಕಟ್ಟೆ ಬಂದು ಹೋಯ್ತು.

ಮೆಣಸು ಹೂವು ಪರಾಗಸ್ಪರ್ಶಕ್ಕೆ ಮಳೆಯೇ ಪುರುಷಬೀಜವಲ್ಲವೇ! ಒಂದು ದಿನ ಮಳೆ, ಒಂದು ದಿನ ಬಿಸಿಲಾದರೆ ಬೀಜ ಕಟ್ಟುವುದಿಲ್ಲ. ಈ ವರ್ಷ ಮೆಣಸು ಫಸಲು ಅತಿ ಕಡಿಮೆ. ಇನ್ನು ಕಾಫಿ ಫಸಲು ಶೇ 25ರಷ್ಟು ಖೋತಾ. ಹಾಗಾಗಿ ಎಸ್ಟೇಟ್ ಎಂಬ ದೂರದ ಬಣ್ಣದ ಕೃಷಿ ಆತಂಕದಲ್ಲಿದೆ. ಮಲೆನಾಡಿನಲ್ಲಿ ಭತ್ತದ ಗದ್ದೆಗಳನ್ನಂತೂ ನೆಡಲು ನೀರಿಲ್ಲ. ಮಕ್ಕಿ ಸಾಲಿನ ಅಡಿಕೆ ಉಳಿಯುವಂತಿಲ್ಲ.

ಸಣ್ಣ ಪುಟ್ಟ ಕೆರೆಗಳು ತುಂಬದೇ ಇರುವುದರಿಂದ ಮುಂದಿನ ಬೇಸಿಗೆ ಏನೆಂಬ ಚಿಂತೆ. ಮಲೆನಾಡ ಕಡೆ ಆಗುಂಬೆವರೆಗೂ ತಿರುಗಾಡಿದರೂ ಛತ್ರಿ ಅಥವಾ ಗೊರಬು ಅವಶ್ಯಕತೆ ಕಂಡುಬರುತ್ತಿಲ್ಲವೆಂದರೆ ಕನ್ನಂಬಾಡಿ, ಲಿಂಗನಮಕ್ಕಿ ನಂಬಿರುವ ನಗರಗಳಿಗೂ ಆಪತ್ತು ಉದ್ಭವವಾಗುತ್ತಿದೆ ಎಂದರ್ಥ.

ಆಗುಂಬೆ ಅಡವಿಯೊಳಗೆ ಯಮಕಲ್ಲು ಕೆರೆ ಎಂಬುದಿದೆ. ಬೋಳುಗುಡ್ಡಗಳ ನಡುವೆ ಮಹಾ ಅಡವಿಯ ಮಹಾಮಳೆಯ ನೀರನ್ನು ಜಲಿಸಿ ಬೇಸಿಗೆಯಲ್ಲಿ ಕಡವೆ, ಕಾಡೆಮ್ಮೆ, ಹುಲಿ, ಸಿಂಗಲೀಕ ಇತ್ಯಾದಿಗಳಿಗೆಲ್ಲ ದಾಹ ತೀರಿಸುವ ನೀರ ನೆಲೆ ಅದು. ಇಂಥವು ವಾರಾಹಿ ಮೂಲ ಹಾಗೂ ಸೀತಾನದಿಗೂ ಜೀವಧಾತು.

ಹಿನ್ನೀರಿನಲ್ಲಿ ಮುಳುಗಿದಾಗ ಅಳಿದುಳಿದ ಅಲ್ಲಿನ ಕೃಷಿ ಮನೆಯೊಂದರ ತುಸು ತೋಟತುಡಿಕೆ ಅರ್ಧಮನೆ ಜೀರ್ಣಸ್ಥಿತಿಯಲ್ಲಿದೆ. ಆ ಪ್ರದೇಶದಲ್ಲಿ ‘ನಮಗೆ ರಸ್ತೆ ಬೇಡ, ವಿದ್ಯುತ್ ಬೇಡ’ ಎಂದೆಲ್ಲಾ ಕಾಡೊಳಗೆ ಬದುಕುತ್ತಿದ್ದ ಬದುಕಿತ್ತು. ಪಾಕೆಟ್ ರೇಡಿಯೊ ಒಂದರಲ್ಲಿ ದೇಶದ ಪ್ರಧಾನಿಯೂ ಅಮೆರಿಕೆಯ ಅಧ್ಯಕ್ಷನೂ ಮಾತಾಡುತ್ತಾರಲ್ಲವೇ! ಸಾಕು ಎಂಬಂತಿದ್ದ ಕುಟುಂಬವಿತ್ತು.

ನಾ ಕಂಡಂತೆ ಆ ಮನೆಯೊಡೆಯನ ಮಾತು ಕೇಳಲು ಪೇಟೆ ಸ್ನೇಹಿತರು ಬರುತ್ತಿದ್ದರು. ಅಡವಿ ಜನರ ಮಾತನ್ನು ಎಲ್ಲಾದರೂ ಆಳುವವರು ಕೇಳುವುದುಂಟೇ? ಕಾಡು ಮುಳುಗಿತು. ಅಲ್ಲಿನ ಎಲ್ಲರೂ ಗುಳೆ ಹೊರಟರು. ಆ ಮನೆಯ ಗೂನುಬೆನ್ನಿನ ಅಜ್ಜಿ ಅಳಿದುಳಿದ ಕಾಡಿನ ಪಕ್ಕದಲ್ಲಿ ಅಲ್ಲೇ ಮುರುಕು ಮನೆಯಲ್ಲಿದೆ. ಅದು ಒಳಗೆ ಮಲಗಿದರೆ, ಜಗಲೀಲಿ ಕಾಳಿಂಗ ಸರ್ಪ.

‘ಅದು ಏನ್ ಮಾಡೀತು’ ಎನ್ನುವ ಅಜ್ಜಿಯನ್ನು ಅವರ ಮಗ– ಸೊಸೆ ಪೇಟೆ ಬದಿಯ ಮೇಗರವಳ್ಳಿಗೆ ಕರೆಯುತ್ತಾರೆ. ‘ಅಯ್ಯೋ ನಾ ಮನೆಬಿಟ್ಟು ಬಂದರೆ ಈ ಕಾಡನ್ನು ಬಿಡುತ್ತಾರೋ ನಾನೊಲ್ಲೆ’ ಅನ್ನುತ್ತದೆ ಅಜ್ಜಿ. ‘ಏನಜ್ಜಿ, ಕಾಡು ನಿನ್ನದೇ...’ ಎಂದರೆ ‘ಯಾಕಲ್ಲ! ಕಾಡು ಎಲ್ಲರದೂ ಅಲ್ಲವೆ!’ ಅನ್ನುತ್ತದೆ. ಇದು ಪರಂಪರೆಯ ಜ್ಞಾನ ವಿಜ್ಞಾನ. ಜಗತ್ತಿನ ಬಹುದಟ್ಟ ಅಡವಿಯಾಗಿದ್ದನ್ನು ವಾರಾಹಿ ಅಣೆ ಮುಳುಗಿಸಿತು. ಇದು ಕೇವಲ ಇಲ್ಲಿಯ ಅಜ್ಜಿಯ ಕಥನವಲ್ಲ. ಆಧುನಿಕ ಭಾರತದ ರೂಪಕ.

ನೆಹರೂ ಕಾಲ ಮುಗಿಯಿತು. ಬೃಹತ್ ಯೋಜನೆಗಳು ಬಾರಾಕಮಾನುಗಳಾದವು. ಹಳ್ಳಿಗಳು, ಅಡವಿಗಳು ಹಾಳುಹಂಪೆಗಳಾದವು. ನವಅಕ್ಷರವು ಪರಂಪರೆಯ ಜ್ಞಾನ ವಿಜ್ಞಾನಗಳನ್ನು ದೇಶವಿದೇಶಕ್ಕೆ ಅಡಹಾಕಿತು. ‘ಕಾರ್ಖಾನೆ ನಾಗರಿಕತೆಯ ಮೇಲೆ ಅಹಿಂಸೆಯನ್ನು ಕಟ್ಟಲಾರಿರಿ. ಆದರೆ ಸ್ವಯಂಪೂರ್ಣ ಹಳ್ಳಿಗಳ ಮೇಲೆ ಕಟ್ಟಲು ಸಾಧ್ಯ’ ಎನ್ನುವ ಗಾಂಧೀಜಿ ಮಾತನ್ನು ಧಿಕ್ಕರಿಸಿ ಹೊರಟಿರುವ ಭಾರತವು ನೆಹರೂ ಯುಗವನ್ನು ಮೀರಿಸಲು ಬುಲೆಟ್ ರೈಲಿನ ಹಳಿಗಳನ್ನು ಹಾಸುತ್ತಿದೆ.

ಗಾಂಧೀಜಿಯ ಅರ್ಥಶಾಸ್ತ್ರವೆಂದರೆ? ಕಾಡಿನ ನಾಡಿನ ಜೀವ ಜಾಲ. ಅದನ್ನು ಅರ್ಥಮಾಡಿಕೊಳ್ಳಬೇಕಾದರೆ ಕಾಯಕತತ್ವ ಅರ್ಥವಾಗಬೇಕು. ಅದನ್ನು ಗ್ರಾಮಗಳಲ್ಲಿ, ಅಡವಿಗಳಲ್ಲಿ ಹುಡುಕಿಕೊಳ್ಳಬೇಕು. ಆರ್ಭಟದಲ್ಲಿ ಒಂದು ರಾಜ್ಯವಾಳಿದ, ಒಂದು ಚುನಾವಣೆಯಲ್ಲಿ ಗೆದ್ದ, ಬಲಹೀನ ಎದುರು ಪಕ್ಷವನ್ನು ಹಳ್ಳಕ್ಕೆ ತಳ್ಳಿದ ಶಕ್ತಿ ಸಾಕಾಗುವುದಿಲ್ಲ. ದೇಶವಿದೇಶ ತಿರುಗಾಟ, ಬಲಿಷ್ಠರ ಒಡನಾಟ ಅಥವಾ ಸಮರೋತ್ಸಾಹ ಇವುಗಳಾವೂ ಶಾಶ್ವತ ಆರ್ಥಿಕ ಸ್ಥಿತಿಗಳಲ್ಲ. ದೇಶ ಆಳುವುದೆಂದರೆ ಅದೊಂದು ತಪಸ್ಸು.

ಸಕಲ ಜೀವಿಗಳ ಏಳಿಗೆ ಬಯಸುವ ಕಾಯಕ. ಅದು ಚಿಂತಕರ ಚಾವಡಿಯಲ್ಲಿ ಕಡೆದ ಬೆಣ್ಣೆ. ಅದನ್ನು ಕಾಯಿಸಿ ತುಪ್ಪ ಮಾಡಿಕೊಳ್ಳುವ ಹದ ದೇಶದ ಚುಕ್ಕಾಣಿ ಹಿಡಿದ ನಾಯಕತ್ವಕ್ಕಿರಬೇಕು. ಅರ್ಥಶಾಸ್ತ್ರವೆಂದರೆ ಕೇವಲ ನೋಟು ರದ್ದತಿ ಅಲ್ಲ. ಅದು ಬಡವ ಬಲ್ಲಿದರ ಅಂತರ ಕಡಿಮೆ ಮಾಡಲಿಲ್ಲ. ಗಡಿಯಲ್ಲಿ ಗಿದ್ಲ ಹಾಕಲಿಲ್ಲ. ಉಗ್ರತೆ ನಿರ್ಮೂಲನ ಔಷಧಿಯಾಗಲಿಲ್ಲ. ಅದೊಂದು ಹಾಸುಬೀಸಿನ ಭಾಷಣ ಮೋಡಿಯಷ್ಟೆ.

ಗಾಂಧಿ ನೋಟಿನಲ್ಲಿ ಕಾಯಕಿಗಳು ಕಡೆದು ತೆಗೆದ ಮಜ್ಜಿಗೆಯ ಸತ್ವವಿರುತ್ತದೆ. ಗಾಂಧೀಜಿ ನೋಟು ಬದಲಾಗಿ ವರ್ಷ ಕಳೆಯಿತು. ಆರ್ಥಿಕ ತಜ್ಞರ ಮಾತು ಧಿಕ್ಕಸಿರುವುದಿರಲಿ, ಪಕ್ಷದೊಳಗಿನ ಸಂಪನ್ನರೇ ಬೆದರುವಷ್ಟು ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ಜಿಡಿಪಿ, ರಿಸರ್ವ್ ಬ್ಯಾಂಕು ಈ ತೂಕದ ಮಾತುಗಳು ರೈತರಿಗೆ ಕಾರ್ಮಿಕರಿಗೆ ಅರ್ಥವಾಗುವುದಿಲ್ಲ. ಮುಂದೇನು? ನಾಳೆ ಏನು? ಹೊಟ್ಟೆ ಬಟ್ಟೆ ಏನು? ಎಂಬುದಷ್ಟೇ ಅವರಿಗೆ ಅರ್ಥಶಾಸ್ತ್ರ. ಮಸೀದಿ, ಮಂದಿರಕ್ಕಿಂತ ಅವರಿಗೆ ಹೆಚ್ಚಿನ ದೇವರು ಅನ್ನ.

‘ಶಾಶ್ವತ ಅರ್ಥಶಾಸ್ತ್ರ’ ಎಂಬ ಪುಸ್ತಕ ಬರೆದು ಮುನ್ನುಡಿ ಬರೆದುಕೊಡಲು ಡಾ. ಜೆ.ಸಿ. ಕುಮಾರಪ್ಪನವರು ಗಾಂಧೀಜಿ ಕೈಗಿಡುತ್ತಾರೆ. ಓದಿ ನೋಡಿ ಮುನ್ನುಡಿ ಬರೆದ ಆ ಪುಸ್ತಕದಲ್ಲಿ ‘ಶಾಶ್ವತ ಆರ್ಥಿಕ ವ್ಯವಸ್ಥೆ ಬರಬೇಕಾದರೆ ಗ್ರಾಮೋದ್ಯೋಗಗಳು ಒಂದೇ ಮಾರ್ಗ’ ಎಂಬ ತತ್ವ ಇದೆ. ಗಾಂಧೀಜಿ ಸಮ್ಮತಿಸಿದ ಈ ಅರ್ಥಶಾಸ್ತ್ರದ ತತ್ವ ದೇಶಕ್ಕೆ ಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT