ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಕೂಪಗಳಾದ ತೆರೆದ ಬಾವಿಗಳು

Last Updated 9 ಅಕ್ಟೋಬರ್ 2017, 5:37 IST
ಅಕ್ಷರ ಗಾತ್ರ

ಬೀದರ್: ನಗರ ವ್ಯಾಪ್ತಿಯಲ್ಲಿ ತೆರೆದ ಬಾವಿಗಳಲ್ಲಿ ಬಿದ್ದು ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಿದೆ. ಜೀವ ಹಾನಿ ಮುಂದುವರಿದಿದ್ದರೂ ನಗರಸಭೆ ತೆರೆದ ಬಾವಿಗಳ ಸುತ್ತ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಿಲ್ಲ.

ಜಿಲ್ಲಾ ನಗರ ಅಭಿವೃದ್ಧಿ ಕೋಶದ ಮೂಲಕ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಹೂಳು ತೆಗೆದ ಭೂಕಾಲುವೆಯ ಕೆಲ ಬಾವಿಗಳಿಗೆ ಮಾತ್ರ ತಡೆಗೋಡೆ ನಿರ್ಮಿಸಲಾಗಿದೆ. ಆದರೆ, ನಗರಸಭೆಯು ತನ್ನ ವ್ಯಾಪ್ತಿಯಲ್ಲಿನ ತೆರೆದ ಬಾವಿಗಳ ಮೇಲೆ ಕನಿಷ್ಠ ಗ್ರಿಲ್‌ ಹಾಕಿ ಮುಚ್ಚುವ ಪ್ರಯತ್ನವನ್ನೂ ಮಾಡಿಲ್ಲ.

ಈಚೆಗೆ ಮಂಗಲಪೇಟ್‌ನಲ್ಲಿ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದ ಬಾಲಕನೊಬ್ಬ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟರೆ, ಎರಡು ತಿಂಗಳ ಹಿಂದೆ ಚಿಕ್ಕಪೇಟೆ ಸಮೀಪ ಈಜಲು ಹೋಗಿದ್ದ ಮೂವರು ಸಾವಿಗೀಡಾಗಿದ್ದರು. ಕಳೆದ ವರ್ಷ ಗುರುನಾನಕ ಪದವಿ ಪೂರ್ವ ಕಾಲೇಜಿನ ಸಮೀಪ ಮೂತ್ರ ವಿಸರ್ಜನೆ ಮಾಡಲು ಹೋಗಿದ್ದ ಯುವಕ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದ.

ಎರಡು ವರ್ಷಗಳ ಹಿಂದೆ ಚೆನ್ನಬಸವನಗರದ ಪ್ರವೇಶ ದ್ವಾರದಲ್ಲಿಯೇ ಇರುವ ಬಾಯಿಯಲ್ಲಿ ನಾಯಿ ಮರಿಯೊಂದು ಬಿದ್ದಿತ್ತು. ಮನೆಗಳ ನಿವಾಸಿಗಳು ಎಸೆದ ಮುಸುರೆ ಹಾಗೂ ಮಕ್ಕಳು ಎಸೆದ ರೊಟ್ಟಿ ತಿಂದು ಬೆಳೆದಿತ್ತು. ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ನಾಯಿ ಮರಿಯನ್ನು ಮೇಲಕ್ಕೆ ಎತ್ತಿದ್ದರು. ಆಗಿನ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಸ್ಥಳಕ್ಕೆ ಭೇಟಿ ನೀಡಿ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕಳೆದ ವರ್ಷ ವಿದ್ಯಾನಗರ ಹಾಗೂ ಬಸವನಗರದ ಬಾವಿಗಳಲ್ಲಿ ಹಸುಗಳು ಬಿದ್ದಿದ್ದವು. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಯಾಸಪಟ್ಟು ಹಗ್ಗದ ಸಹಾಯದಿಂದ ಅವುಗಳನ್ನು ಮೇಲಕ್ಕೆ ಎತ್ತಿದ್ದರು.

ನಗರದಲ್ಲಿ ನಗರಸಭೆಗೆ ಸೇರಿದ ನೂರಕ್ಕೂ ಹೆಚ್ಚು ಬಾವಿಗಳಿವೆ. ಅನೇಕ ಬಾವಿಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಬಾವಿಯ ಸುತ್ತ ಬೆಳೆದ ಹುಲ್ಲು ಮೇಯುತ್ತ ಸಾಗುವ ದನಕರುಗಳು ಬಾವಿಗೆ ಬೀಳುತ್ತಿವೆ. ಜಾನುವಾರುಗಳ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ.

‘ನಗರಸಭೆ ಅಧಿಕಾರಿಗಳು ತಂಡ ರಚಿಸಿ ನಗರದಲ್ಲಿನ ತೆರೆದ ಬಾವಿಗಳನ್ನು ಗುರುತಿಸಬೇಕು. ರಸ್ತೆ ಬದಿಗೆ ಇರುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇರುವ ತೆರೆದ ಬಾವಿಗಳಿಗೆ ಮುಚ್ಚಳ ಹಾಕಬೇಕು ಇಲ್ಲವೆ ಸುತ್ತ ಬಾವಿಯ ತಡೆಗೋಡೆ ನಿರ್ಮಿಸಬೇಕು. ಜನ ಹಾಗೂ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು’ ಎಂದು ನಗರಸಭೆ ಸದಸ್ಯ ಫಿಲೋಮನ್‌ ರಾಜ್‌ ಪ್ರಸಾದ್‌ ಒತ್ತಾಯಿಸುತ್ತಾರೆ.

‘ತೆರೆದ ಬಾವಿಗಳನ್ನು ಗುರುತಿಸುವ ಕಾರ್ಯ ಆರಂಭವಾಗಿದೆ. ಈಗಾಗಲೇ ಜಿಲ್ಲಾ ನಗರ ಅಭಿವೃದ್ಧಿ ಕೋಶದ ಮೂಲಕ ಕೆಲ ಬಾವಿಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. ನಗರಸಭೆಯಿಂದಲೂ ತೆರೆದ ಬಾವಿಗಳಿಗೆ ಮುಚ್ಚಳ ಹಾಕಲಾಗುವುದು’ ಎಂದು ನಗರಸಭೆಯ ಸಹಾಯಕ ಎಂಜಿನಿಯರ್‌ ಮೊಯಿಸ್‌ ಹುಸೇನ್‌ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT