ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ದರ ಇಳಿಕೆ ಅನಿವಾರ್ಯ ಆಗಿತ್ತು

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಈಚೆಗೆ ನಡೆದ ಜಿಎಸ್‌ಟಿ ಮಂಡಳಿ ಸಭೆ ಒಟ್ಟು 26 ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರವನ್ನು ತಗ್ಗಿಸಿದೆ. ಸಣ್ಣ ಉದ್ಯಮಿಗಳು, ಸಣ್ಣ ವರ್ತಕರ ಬವಣೆಯನ್ನು ಕಡಿಮೆ ಮಾಡಲು ರಿಟರ್ನ್‌ ಸಲ್ಲಿಕೆ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಜುಲೈ 1 ರಂದು ಜಿಎಸ್‌ಟಿ ಜಾರಿಗೆ ತಂದ ಬಳಿಕದ ಅತಿ ದೊಡ್ಡ ಮಾರ್ಪಾಡುಗಳು ಇವು. ಇಂತಹ ಕ್ರಮದ ಅಗತ್ಯ ಇತ್ತು. ಆರ್ಥಿಕತೆಗೆ ಚೇತರಿಕೆ ತುಂಬಬೇಕಾದರೆ, ಸರಕುಗಳ ಖರೀದಿ ಚುರುಕುಗೊಳ್ಳಬೇಕಾದರೆ ತೆರಿಗೆ ದರಗಳು ಹೊರೆಯಾಗದಂತೆ ಇರಬೇಕು. ದುಬಾರಿ ತೆರಿಗೆಗೆ ಹೆದರಿ ಗ್ರಾಹಕರು ಖರೀದಿಯನ್ನು ಕಡಿಮೆ ಮಾಡಿದರೆ ಅದರ ಪರಿಣಾಮ ತುಂಬ ಕೆಟ್ಟದಾಗಿರುತ್ತದೆ. ದೇಶ ಈಗ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಧಿಕ ಮೌಲ್ಯದ ನೋಟುಗಳ ರದ್ದತಿಯ ಬೆನ್ನಲ್ಲೇ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಹೊಂದಿಕೊಳ್ಳಲು ಹೆಣಗಾಡುತ್ತಿದೆ. ಈ ವಾತಾವರಣ ಬದಲಾಯಿಸುವ ಅನಿವಾರ್ಯ ಇತ್ತು. ಅಲ್ಲದೆ ಉದ್ಯಮ, ವಾಣಿಜ್ಯ, ವರ್ತಕ ಸಮುದಾಯಗಳು ಮಾತ್ರವಲ್ಲದೆ ಜನಸಾಮಾನ್ಯರಿಂದಲೂ ಭಾರಿ ಒತ್ತಡ ಇತ್ತು. ಅದಕ್ಕೆಲ್ಲ ಸರ್ಕಾರ ಸ್ಪಂದಿಸಿದೆ. ಜಿಎಸ್‌ಟಿಯಿಂದ ಆಗಿರುವ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ದೆಹಲಿಯಲ್ಲಿ ಕಂಪೆನಿ ಕಾರ್ಯದರ್ಶಿಗಳ ಸಂಸ್ಥೆಯ ಸಮಾವೇಶದಲ್ಲಿ ಹೇಳಿದ್ದರು. ಜಿಎಸ್‌ಟಿ ಮಂಡಳಿ ತೆಗೆದುಕೊಂಡ ನಿರ್ಣಯಗಳು ಪ್ರಧಾನಿಯ ಭರವಸೆಗೆ ಪೂರಕವಾಗಿವೆ. ಪರಿಷ್ಕೃತ ನಿರ್ಧಾರದಿಂದಾಗಿ ತೆರಿಗೆ ದರ ಅಗ್ಗವಾದ ಸರಕುಗಳ ಪಟ್ಟಿಯಲ್ಲಿ ಜನಸಾಮಾನ್ಯರ ಬಳಕೆಯ ಸಿದ್ಧ ಚಪಾತಿಗಳು, ಬ್ರ್ಯಾಂಡ್‌ ರಹಿತ ಕುರುಕಲು ತಿಂಡಿಗಳು ಮತ್ತು ಆಯುರ್ವೇದ ಔಷಧಗಳು, ಕೈಮಗ್ಗದ ಬಟ್ಟೆಗಳು, ನೆಲಕ್ಕೆ ಹಾಸುವ ಕಲ್ಲುಗಳು ಸೇರಿವೆ. ಪದೇ ಪದೇ ರಿಟರ್ನ್‌ಗಳನ್ನು ಸಲ್ಲಿಸುವುದೇ ಜಿಎಸ್‌ಟಿಯಲ್ಲಿ ವರ್ತಕರಿಗೆ ದೊಡ್ಡ ತಲೆನೋವಾಗಿತ್ತು. ಅದನ್ನು ಸರಳೀಕರಿಸಿರುವುದು ಒಳ್ಳೆಯದು. ಕೇಂದ್ರದ ಹಣಕಾಸು ಕಾರ್ಯದರ್ಶಿಯ ಹೇಳಿಕೆಯ ಪ್ರಕಾರ, ಶೇ 90ರಷ್ಟು ವರ್ತಕರು ಇನ್ನು ಮುಂದೆ 3 ತಿಂಗಳಿಗೊಮ್ಮೆ ಲೆಕ್ಕಪತ್ರ ಸಲ್ಲಿಸುವ ಮತ್ತು 3 ತಿಂಗಳಿಗೊಮ್ಮೆ ತೆರಿಗೆ ಕಟ್ಟುವ ವರ್ಗದ ಅಡಿ ಬರುತ್ತಾರೆ. ರಾಜಿ ತೆರಿಗೆ ಪದ್ಧತಿ ಅಳವಡಿಕೆಗೆ ಅರ್ಹವಾದ ವಹಿವಾಟು ಮಿತಿಯನ್ನು ₹ 1 ಕೋಟಿಗೆ ಏರಿಸಿದ್ದು, ಶೇ 1ರಿಂದ ಶೇ 5ರ ವರೆಗೆ ತೆರಿಗೆ ನಿಗದಿಪಡಿಸಲಾಗಿದೆ. ಇವೆಲ್ಲವೂ ಜಿಎಸ್‌ಟಿಯನ್ನು ಉತ್ಪಾದನೆ ಮತ್ತು ವಹಿವಾಟು ಸ್ನೇಹಿಯಾಗಿಸುವ ಪ್ರಯತ್ನಗಳು. ಆದರೆ ಈಗಲೂ ಬಹಳಷ್ಟು ಟೀಕೆಗೆ ಒಳಗಾಗಿರುವುದು ಹವಾನಿಯಂತ್ರಿತ ರೆಸ್ಟೊರೆಂಟ್‌ಗಳ ಮೇಲಿನ ದುಬಾರಿ ತೆರಿಗೆ. ಹೋಟೆಲ್‌ ಮತ್ತು ತಿನಿಸು ಮಳಿಗೆಗಳ ಮಾಲೀಕರು ಮತ್ತು ಗ್ರಾಹಕರಿಬ್ಬರೂ ತನ್ನನ್ನು ಶಪಿಸುತ್ತಿರುವುದು ಸರ್ಕಾರದ ಗಮನಕ್ಕೂ ಬಂದಿದೆ. ಈ ಹೊರೆ ಕಡಿಮೆ ಮಾಡುವ ಬಗ್ಗೆ ಸಮಿತಿ ರಚನೆಯಾಗಿದ್ದು, ಸದ್ಯದಲ್ಲಿಯೇ ಒಳ್ಳೆಯ ನಿರ್ಧಾರ ಹೊರ ಬೀಳಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು.

ಜುಲೈ 1ರಿಂದ ಜಿಎಸ್‌ಟಿಯನ್ನು ಜಾರಿಗೆ ತರುವಾಗ ಮೋದಿ ಅವರು ಅದನ್ನು ‘ಉತ್ತಮ ಮತ್ತು ಸರಳ ತೆರಿಗೆ’ (ಗುಡ್‌ ಅಂಡ್‌ ಸಿಂಪಲ್‌ ಟ್ಯಾಕ್ಸ್‌) ಎಂದು ವ್ಯಾಖ್ಯಾನಿಸಿದ್ದರು. ಆರಂಭದ ದಿನಗಳಲ್ಲಿ ವರ್ತಕರು ಹಳೆಯ ದಾಸ್ತಾನು ಮಾರಾಟ ಮಾಡುವ ಭರದಲ್ಲಿ ದರಗಳನ್ನು ತಗ್ಗಿಸಿದ್ದರು. ಆದರೆ ದಿನ ಕಳೆದಂತೆ ಜಿಎಸ್‌ಟಿಯ ಬಿಸಿ ಎಲ್ಲರನ್ನೂ ತಟ್ಟಲು ಶುರು ಮಾಡಿತ್ತು. ಇದು ಖಂಡಿತವಾಗಿಯೂ ‘ಉತ್ತಮ, ಸರಳ ಅಲ್ಲ’ ಎಂಬ ಟೀಕೆ, ಟಿಪ್ಪಣಿಗಳನ್ನು ಸರ್ಕಾರ ಕೇಳಬೇಕಾಯಿತು. ಒಂದು ತೆರಿಗೆ ವ್ಯವಸ್ಥೆಯಿಂದ ಇನ್ನೊಂದಕ್ಕೆ ವರ್ಗಾವಣೆ ಆಗುವಾಗ ಆರಂಭಿಕ ಸಮಸ್ಯೆಗಳು, ಗೊಂದಲಗಳು ಎದುರಾಗುವುದು ಸಹಜ. ಜಿಎಸ್‌ಟಿ ಕೂಡ, ತೆರಿಗೆ ವ್ಯವಸ್ಥೆ ಪರಿವರ್ತನೆಯ ಕಾಲಘಟ್ಟವನ್ನು ಹಾದು ಹೋಗುತ್ತಿದೆ. ಹೀಗಿರುವಾಗ ತಪ್ಪುಗಳನ್ನು, ತೊಂದರೆಗಳನ್ನು ಸರಿಪಡಿಸುವುದು ಸರ್ಕಾರದ ಕರ್ತವ್ಯ. ಈ ವಿಚಾರದಲ್ಲಿ ಅದು ಮುಕ್ತ ಮನಸ್ಸು ಹೊಂದಬೇಕಾದುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT