ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಮಾನ್ಯತೆ ರದ್ದು ಭೀತಿ

Last Updated 9 ಅಕ್ಟೋಬರ್ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿ 15 ತಿಂಗಳಾದರೂ, ಸೂಕ್ತ ಕಾನೂನು ರೂಪಿಸಿ ಹಣ ಬಳಸಿಕೊಳ್ಳಲು ಸಾಧ್ಯವಾಗದಿರುವುದರಿಂದ ವಿಶ್ವವಿದ್ಯಾಲಯ ಮಾನ್ಯತೆ ಕಳೆದುಕೊಳ್ಳುವ ಅಪಾಯ ಎದುರಾಗಿದೆ.

ವಿಶ್ವವಿದ್ಯಾಲಯದ ಅನುದಾನ ಆಯೋಗ (ಯುಜಿಸಿ) ಇತ್ತೀಚೆಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ‘ಅನುದಾನ ಬಿಡುಗಡೆ ಮಾಡಿದ ಆರು ತಿಂಗಳೊಳಗೆ ಕಾನೂನು ರೂಪಿಸಿ, ವಿಶ್ವವಿದ್ಯಾಲಯಕ್ಕೆ ಅಗತ್ಯವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಿತ್ತು. ಒಂದು ವರ್ಷ ಕಳೆದರೂ ಏನೂ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಣಿ ಕಾಲೇಜನ್ನು ಕ್ಲಸ್ಟರ್ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲು 2015ರ ಡಿಸೆಂಬರ್1ರಂದು ಅನುಮೋದನೆ ನೀಡಲಾಗಿತ್ತು. ವಿಶ್ವವಿದ್ಯಾಲಯ ಸ್ಥಾಪನೆಗೆ ₹ 55 ಕೋಟಿ ಅನುದಾನ ಮೀಸಲಿಡಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಶೇ 60ರಷ್ಟು ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ಒದಗಿಸಬೇಕು. ಕೇಂದ್ರ ತನ್ನ ಪಾಲಿನ ಅನುದಾನದಲ್ಲಿ ಅರ್ಧದಷ್ಟು ಹಣವನ್ನು ಅಂದರೆ, ₹ 16.5 ಕೋಟಿಯನ್ನು 2016ರ ಜೂನ್ ಅಂತ್ಯದಲ್ಲಿ ಬಿಡುಗಡೆ ಮಾಡಿದೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ತನ್ನ ಪಾಲಿನ ಅನುದಾನದಲ್ಲಿ ಶೇ 50ರಷ್ಟು ₹ 11 ಕೋಟಿಯನ್ನು ಕಳೆದ ಮಾರ್ಚ್‌ನಲ್ಲಿ ಒದಗಿಸಿದೆ. ₹ 27.5 ಕೋಟಿಯಲ್ಲಿ ಇದುವರೆಗೂ ಒಂದು ರೂಪಾಯಿಯೂ ಖರ್ಚಾಗದೆ ಬ್ಯಾಂಕ್ ಖಾತೆಯಲ್ಲಿ ಕೊಳೆಯುತ್ತಿದೆ.

‘ಕ್ಲಸ್ಟರ್ ವಿಶ್ವವಿದ್ಯಾಲಯ ಸಾಮಾನ್ಯ ವಿಶ್ವವಿದ್ಯಾಲಯಗಳಂತೆ ಅಲ್ಲ. ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸಾ) ನಿಯಮಗಳನ್ನೂ ಒಳಗೊಂಡಂತೆ ಪ್ರತ್ಯೇಕ ಕಾನೂನು ರೂಪಿಸಬೇಕು. ಆದರೆ, ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾದ ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಯಲ್ಲಿಯೇ ಕ್ಲಸ್ಟರ್ ವಿಶ್ವವಿದ್ಯಾಲಯವನ್ನೂ ಸೇರಿಸಲಾಗಿತ್ತು. ಆದರೆ, ಇತ್ತೀಚೆಗೆ ಈ ನಿರ್ಧಾರ ಬದಲಿಸಿ ಸಮಗ್ರ ಕಾಯ್ದೆಯಿಂದ ತೆಗೆದು ಕ್ಲಸ್ಟರ್ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸುವ ಸಿದ್ಧತೆ ಮಾಡಲಾಗುತ್ತಿದೆ’ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. 

ಕರ್ನಾಟಕದ ಜೊತೆಗೆ 8 ರಾಜ್ಯಗಳಿಗೆ ಕ್ಲಸ್ಟರ್ ವಿಶ್ವವಿದ್ಯಾಲಯಗಳನ್ನು ಘೋಷಿಸಲಾಗಿತ್ತು. ಈ ಪೈಕಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಒಡಿಶಾದಲ್ಲಿ ಪ್ರತ್ಯೇಕ ಕಾಯ್ದೆ ರೂಪಿಸಿ, ಕುಲಪತಿಗಳ ನೇಮಕ ಮಾಡಲಾಗಿದೆ. ಆದರೆ, ಇಲ್ಲಿ ಮಹಾರಾಣಿ ಕಾಲೇಜು ಇನ್ನೂ ಬೆಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿಯೇ ಇದೆ.

ಏನಿದು ಕ್ಲಸ್ಟರ್ ವಿ.ವಿ

ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೊಡಾ ಅವರು ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ 1,500 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದ್ದರು. ಅದರ ಭಾಗವಾಗಿ ಮಹಾರಾಣಿ ಕಲಾ, ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ವಿ.ಎಚ್.ಡಿ. ಗೃಹ ವಿಜ್ಞಾನ ಕಾಲೇಜುಗಳನ್ನು ಸೇರಿಸಿ ‘ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಮಂಡ್ಯ ಸರ್ಕಾರಿ ಕಾಲೇಜನ್ನು ‘ಯೂನಿಟರಿ ವಿಶ್ವವಿದ್ಯಾಲಯ’ ಆಗಿ ಘೋಷಿಸಲಾಗಿತ್ತು.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಮೂರು ಕಾಲೇಜುಗಳಿಗೆ ಹೊಂದಿಕೊಂಡಂತೆ ಹೊಸ ಕಟ್ಟಡಗಳನ್ನು ನಿರ್ಮಿಸಬೇಕು. ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ಕೊಡಲು ಮೊದಲು ನಿರ್ಧರಿಸಲಾಗಿತ್ತು. ಬಳಿಕ ಅದನ್ನು ರೈಟ್ಸ್‌ ಸಂಸ್ಥೆಗೆ (ಭಾರತೀಯ ರೈಲ್ವೆ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು) ಕೊಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಈ ಮಧ್ಯೆ ಕಳೆದ ಮೇ ನಲ್ಲಿ  ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ ಇಲಾಖೆ ಮುಖ್ಯ ಆರ್ಕಿಟೆಕ್ಟ್‌, ಮುಖ್ಯ ಎಂಜಿನಿಯರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರನ್ನೊಳಗೊಂಡ ಸಮಿತಿ ರಚಿಸಿ, ಮೂಲಸೌಕರ್ಯ ಅಭಿವೃದ್ಧಿ ಸಂಬಂಧ ವರದಿಯೊಂದನ್ನು ಪಡೆಯಲಾಗಿದೆ. ಆದರೆ, ಇದಕ್ಕೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಗಮನಕ್ಕೆ ತರಲಾಗಿದೆ

‘ಕಾನೂನು ರೂಪಿಸುವುದು ವಿಳಂಬ ಆಗಿರುವುದರಿಂದ ಅನುದಾನ ಬಳಕೆ ಸಾಧ್ಯವಾಗಿಲ್ಲ. ಪ್ರತ್ಯೇಕ ಕಾನೂನು ರೂಪಿಸುವ ಅಗತ್ಯವಿದ್ದು, ಇದನ್ನು ಸರ್ಕಾರದ ಗಮನಕ್ಕೂ ತರಲಾಗಿದೆ’ ಎಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ. ರವೀಂದ್ರ ರೇಷ್ಮೆ ಹೇಳಿದರು.

ವಿಶೇಷ ಉದ್ದೇಶಕ್ಕಾಗಿ ಈ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿದೆ. ಸಾಮಾನ್ಯ ವಿಶ್ವವಿದ್ಯಾಲಯಗಳ ಚಟುವಟಿಕೆಗಳಿಗೂ ಇದಕ್ಕೂ ಸಾಕಷ್ಟು ಭಿನ್ನವಿದೆ. ಹೊಸ ಪ್ರಯೋಗವನ್ನು ಮಾಡುತ್ತಿರುವ ಬಗ್ಗೆ ವ್ಯಾಪಕವಾಗಿ ಚರ್ಚೆಯನ್ನೂ ಮಾಡಬೇಕಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಮುಖ್ಯಾಂಶಗಳು

* ಖರ್ಚಾಗದ ₹ 27.5 ಕೋಟಿ ಅನುದಾನ

* ಅಸಮಾಧಾನ ವ್ಯಕ್ತಪಡಿಸಿದ ಯುಜಿಸಿ

* ಸಮಗ್ರ ಕಾಯ್ದೆಯಿಂದ ಕ್ಲಸ್ಟರ್ ವಿಶ್ವವಿದ್ಯಾಲಯ ಹೊರಗಿಡಲು ನಿರ್ಧಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT