ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಷ್ಟದ ಹುಡುಗ ಕುಲದೀಪ್...

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾ ನೆಲದಲ್ಲಿ 19 ವರ್ಷದೊಳಗಿನವರ ಕ್ರಿಕೆಟ್ ನಲ್ಲಿ ಆಡಿ ಬಂದಿದ್ದ ಕುಲದೀಪ್ ಯಾದವ್ ಬೇಸರದಲ್ಲಿದ್ದರು. ಉತ್ತರ ಪ್ರದೇಶದ ಹುಡುಗನಿಗೆ ಎರಡು ಪಂದ್ಯಗಳಲ್ಲಿ ಮೂರೇ ವಿಕೆಟ್ ಸಿಕ್ಕಿತ್ತು. ಆಗ ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ವ್ಯವಸ್ಥಾಪಕರಿಂದ ಫೋನ್ ಕರೆ ಬಂತು.

ಮಧ್ಯಾಹ್ನ 1ಕ್ಕೆ ಸಚಿನ್ ತೆಂಡೂಲ್ಕರ್ ನೆಟ್ಸ್ ನಲ್ಲಿ ಅಭ್ಯಾಸ ಮಾಡಲಿದ್ದು, ಅವರಿಗೆ ಬೌಲಿಂಗ್ ಮಾಡಬೇಕು ಎಂದು ಅವರು ಆಹ್ವಾನಿಸಿದರು.

ತಕ್ಷಣ ಕುಲದೀಪ್ ಬೇಸರ ಮಾಯ. ಮಧ್ಯಾಹ್ನ ನೆಟ್ಸ್ ನಲ್ಲಿ ಅವರು ಬೌಲಿಂಗ್ ಮಾಡಿದ್ದಷ್ಟೇ ಅಲ್ಲ, ಸಚಿನ್ ಅವರನ್ನು ಔಟ್ ಮಾಡಿದರು. ಅವರ ಒಂದು ಎಸೆತದ ಗತಿ ಅಂದಾಜು ಮಾಡುವಲ್ಲಿ ವಿಫಲರಾದ ಸಚಿನ್ ಬ್ಯಾಟ್‌ನ ಒಳ ಅಂಚಿಗೆ ಚೆಂಡು ಸೋಕಿಕೊಂಡು ವಿಕೆಟ್ ಗೆ ಬಡಿದಿತ್ತು.

ಅಭ್ಯಾಸ ಮುಗಿದೊಡನೆ ಸಚಿನ್ ಕೆಲವು ನಿಮಿಷ ಮಾತನಾಡಿದರು. ಅಪರೂಪಕ್ಕೆ ಚೈನಾಮನ್ ಬೌಲಿಂಗ್ ಎದುರಿಸಿದ ಸಂತೋಷ ಅವರದ್ದಾಗಿತ್ತು. ಆಸ್ಟ್ರೇಲಿಯಾದ ಬ್ರಾಡ್ ಹಾಗ್ ಅವರನ್ನು ಬಿಟ್ಟರೆ ಆ ಕಾಲಘಟ್ಟದಲ್ಲಿ ಸಚಿನ್ ಎದುರಿಸಿದ ಚೈನಾಮನ್ ಬೌಲರ್ ಕುಲದೀಪ್. ಅಪರೂಪದ ಆ ಶೈಲಿಯನ್ನು ಇನ್ನಷ್ಟು ತಿದ್ದಿಕೊಳ್ಳುವಂತೆ ಹೇಳಿ ಸಚಿನ್ ಬೆನ್ನುತಟ್ಟಿದ್ದರು. ಅಮೇಲೆ ಹರಭಜನ್ ಸಿಂಗ್ ಒಂದಿಷ್ಟು ಸ್ಪಿನ್ ಪಾಠ ಹೇಳಿಕೊಟ್ಟರು.

ಕುಲದೀಪ್ ಮೊನ್ನೆ ಮೊನ್ನೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಚೇತನ್ ಶರ್ಮ, ಕಪಿಲ್ ದೇವ್ ಬಿಟ್ಟರೆ ಭಾರತದ ಯಾರೂ ಮಾಡದ ಸಾಧನೆ ಇದು.

ಕುಲದೀಪ್ ಬಾಲ್ಯದಿಂದಲೂ ವಸೀಂ ಅಕ್ರಂ ಆರಾಧಕ. ಅವರಂತೆ ತಾನೂ ವೇಗದ ಬೌಲರ್ ಆಗಬೇಕೆಂದೇ ಅಕಾಡೆಮಿಗೆ ಸೇರಿದ್ದು. ನಾಲ್ಕೈದು ತಿಂಗಳು ವೇಗದ ಎಸೆತಗಳನ್ನೇ ಅಭ್ಯಾಸ ಮಾಡಿದರು. ಇದ್ದಕ್ಕಿದ್ದಂತೆ ಕೋಚ್ ಕರೆದು, 'ನೀನು ಸ್ಪಿನ್ ಬೌಲರ್ ಆಗು' ಎಂದರು. ಅವರ ಮಾತನ್ನು ತಳ್ಳಿಹಾಕುವಂತಿರಲಿಲ್ಲ. ಆ ಕ್ಷಣಕ್ಕೆ ಬೇಸರವಾದರೂ ಆಮೇಲೆ ಅದೇ ಕುಲದೀಪ್ ಗೆ ವರದಾನವಾಯಿತು.

ಅದೃಷ್ಟದ ಹುಡುಗ ಕುಲದೀಪ್. 16 ವರ್ಷದೊಳಗಿನವರ ಪಂದ್ಯದಲ್ಲಿ ಆಡಿದ ರೀತಿ ನೋಡಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಆಡಲು ಸೇರಿಸಿಕೊಂಡಿತು. ಪಂದ್ಯವೊಂದರಲ್ಲಿ 7 ವಿಕೆಟ್ ಪಡೆದು, 80 ಚಿಲ್ಲರೆ ರನ್ ಗಳಿಸಿದ್ದಕ್ಕೆ ಹುಡುಕಿಕೊಂಡು ಬಂದ ಅವಕಾಶವಿದು.

ವಿಡಿಯೊಗಳನ್ನು ನೋಡಿ ಬೌಲಿಂಗ್ ವರಸೆಗಳನ್ನು ಕರಗತ ಮಾಡಿಕೊಂಡು ಬಂದವರು ಕುಲದೀಪ್.

ಶೇನ್ ವಾರ್ನ್ ಯಾವ ರೀತಿ ಚೆಂಡನ್ನು ಹಾಕುತ್ತಾರೆ ಎಂದು ಪ್ರಾತ್ಯಕ್ಷಿಕೆ ನೀಡುವಷ್ಟು ಅವರ ಬೌಲಿಂಗ್ ಶೈಲಿಯನ್ನು ವಿಡಿಯೊಗಳಿಂದಲೇ ತಿಳಿದುಕೊಂಡಿದ್ದರು.
2017 ಕುಲದೀಪ್ ಮರೆಯಲಾಗದ ವರ್ಷ. ಅಸ್ಟ್ರೇಲಿಯಾ ಎದುರು ಪದಾರ್ಪಣೆ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲೇ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದ ಅವರು, ಈಗ ಏಕದಿನ ಪಂದ್ಯಗಳಲ್ಲಿ ಕೂಡ ಅದೇ ತಂಡದ ಬ್ಯಾಟ್ಸ್ ಮನ್ ಗಳನ್ನು ಕಾಡಿದ್ದು ದೊಡ್ಡ ಸಾಧನೆಯೇ ಹೌದು.

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರವಾಗಿ ಐಪಿಎಲ್ ಆಡುವ ಅವಕಾಶ ಅವರಿಗೆ ಸಿಕ್ಕಿದ್ದರಿಂದ ಬಹುಕಾಲದ ಕನಸು ನನಸಾದಂತಾಯಿತು.

ತಮ್ಮ ಹೀರೋ ವಸೀಂ ಆಕ್ರಂ ಅವರನ್ನು ಭೇಟಿ ಮಾಡಿ, ಬೌಲಿಂಗ್ ಟಿಪ್ಸ್ ಪಡೆಯುವ ಅವಕಾಶ ಸಿಕ್ಕಿದ್ದನ್ನು ಕುಲದೀಪ್ ಮರೆಯಲಾರರು. ಇನ್ನೊಬ್ಬ ಚೈನಾಮನ್ ಬೌಲರ್ ಬ್ರಾಡ್ ಹಾಗ್ ಜೊತೆಗಿನ ಒಡನಾಟದಿಂದ ಆದದ್ದೂ ಲಾಭವೇ.

ಬಂದದ್ದನ್ನು ಬಂದಹಾಗೇ ಸ್ವೀಕರಿಸುತ್ತಾ, ಸಿಕ್ಕ ಅವಕಾಶಗಳನ್ನು ಗಮನ ಸೆಳೆಯುವಂತೆ ದುಡಿಸಿ ಕೊಳ್ಳುತ್ತಿರುವ ಕುಲದೀಪ್ ಭವಿಷ್ಯದ ಕುರಿತು ಭಾರತದ ಕ್ರಿಕೆಟ್ ವಿಶ್ಲೇಷಕರಿಗಂತೂ ಕುತೂಹಲವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT