ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆಯಲ್ಲಿ ಯಮರೂಪಿ ಗುಂಡಿಗಳು

Last Updated 11 ಅಕ್ಟೋಬರ್ 2017, 5:22 IST
ಅಕ್ಷರ ಗಾತ್ರ

ದೇವನಹಳ್ಳಿ: ಎಲ್ಲೆಂದರಲ್ಲಿ ರಸ್ತೆ ಪಕ್ಕದಲ್ಲಿ ನೀರು, ಹದಗೆಟ್ಟಿರುವ ರಸ್ತೆಯಲ್ಲಿ ನೂರಾರು ಗುಂಡಿ ಹೊಂಡಗಳ ದರ್ಶನ, ದಿನನಿತ್ಯ ಸಂಭವಿಸುತ್ತಿರುವ ಅಪಘಾತಗಳು... ಇದು ದೇವನಹಳ್ಳಿ ನಗರದಲ್ಲಿ ನಿತ್ಯದ ಕತೆ. ತಾಲ್ಲೂಕು ಗಡಿಭಾಗ ರಾಷ್ಟ್ರೀಯ ಹೆದ್ದಾರಿ 7ರ ಬೀರಸಂದ್ರ ಗೇಟ್ ನಿಂದ ದೇವನಹಳ್ಳಿ ನಗರ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 7 ರ ಸೂಲಿಬೆಲೆ ರಸ್ತೆ, ದೇವನಹಳ್ಳಿ ತಾಲ್ಲೂಕು ನಲ್ಲೂರು ಕ್ರಾಸ್ ವರೆಗಿನ ರಸ್ತೆಗಳಲ್ಲಿ ಸಾವಿರಾರು ಗುಂಡಿಗಳಿವೆ.

ಮಳೆಗಾಲದಲ್ಲಿ ನೀರು ತುಂಬಿ ಗುಂಡಿಯ ಆಳ ಅರಿವಾಗುತ್ತಿಲ್ಲ. 45 ಕಿ.ಮೀ. ಉದ್ದದ ರಸ್ತೆ ಮತ್ತು ದೇವನ ಹಳ್ಳಿ ನಗರ ವ್ಯಾಪ್ತಿಯಲ್ಲಿ ಕಳೆದ ಇಪ್ಪತ್ತು ದಿನಗಳಲ್ಲಿ ಆಗರುವ ಅಪಘಾತ ಆಗಿರುವ ಸಂಖ್ಯೆ 27. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ದೊಡ್ಡಬಳ್ಳಾಪುರ ಕಡೆಯ ಮಾರ್ಗ ರಾಷ್ಟ್ರೀಯ ಹೆದ್ದಾರಿ 207 ರಸ್ತೆ ವಿಸ್ತರಿಸಲು ಮತ್ತು ಶೆಟ್ಟರಹಳ್ಳಿ ಗೇಟ್ ನಿಂದ ಸಾವಕನಹಳ್ಳಿ, ನೀಲೇರಿ ಬಡಾವಣೆಯ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 7ರ ರಾಣಿ ಕ್ರಾಸ್‌ನಿಂದ ದೇವನಹಳ್ಳಿ ಹೊರ ಭಾಗದಲ್ಲಿ ಹಾದು ಹೋಗುವಂತೆ ಬೈಪಾಸ್ ನಿರ್ಮಿಸುವ ಕಾಮಗಾರಿ ಐದಾರು ವರ್ಷದಿಂದ ನನೆಗುದಿಗೆ ಬಿದ್ದಿದೆ.

ಕೆಲ ವರ್ಷಗಳ ಹಿಂದೆ ಆರಂಭಗೊಂಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಸಾವಿರಾರು ಸಂಖ್ಯೆಯಲ್ಲಿದ್ದ ಸರಕು ಸಾಗಾಣಿಕೆ ವಾಹನ ಸಂಚಾರ ದುಪ್ಪಟ್ಟು ಹೆಚ್ಚಿದೆ. ರಸ್ತೆ ವಿಸ್ತರಣೆ ಆಗಿಲ್ಲ. ಇರುವ ರಸ್ತೆಯನ್ನು ದುರಸ್ತಿ ಮಾಡಲಿಲ್ಲ. ಮಳೆಯಿಂದ, ಬೃಹತ್ ವಾಹನಗಳ ಸಂಚಾರದಿಂದ ಗುಂಡಿಗಳು ಹೆಚ್ಚುತ್ತಿವೆ.

ವಿಶ್ವನಾಥಪುರ ಠಾಣೆ ಮುಂಭಾಗದ ರಸ್ತೆಯಲ್ಲಿನ ಗುಂಡಿ, ವಿಶ್ವನಾಥಪುರ ಗ್ರಾಮದ ಬಳಿಯ ದೊಡ್ಡಗುಂಡಿ, ಶೆಟ್ಟರಹಳ್ಳಿ, ಬೊಮ್ಮವಾರ ಗೇಟ್, ಸಾವಕನಹಳ್ಳಿ ಗೇಟ್, ವೃಕ್ಷ ಉದ್ಯಾನವನದ ಬಳಿಯ ಗುಂಡಿ, ದೊಡ್ಡಅಮಾನಿಕೆರೆ ಏರಿ ಮೇಲಿನ ಹತ್ತಾರು ಬೃಹತ್ ಗುಂಡಿಗಳು ಬಾಯ್ತೆರೆದು ನಿಂತಿವೆ. ಹೀಗಾಗಿ ರಸ್ತೆ ಸ್ಥಿತಿ ಶೋಚನೀಯವಾಗಿದೆ ಎನ್ನುತ್ತಾರೆ ಕೋಡಿಮಂಚೇನಹಳ್ಳಿಯ ನಾಗೇಶ್.

ನೀರಗಂಟಿ ಪಾಳ್ಯದ ರೈಲ್ವೇ ಗೇಟ್ ಬಳಿಯ ಗುಂಡಿ, ಬೈಪಾಸ್ ರಸ್ತೆ, ದೇವನಹಳ್ಳಿ ನಗರ ವಿಜಯಪುರ ಕ್ರಾಸ್, ಹಳೆ ಬಸ್ ನಿಲ್ದಾಣ, ಪ್ರವಾಸಿ ಮಂದಿರದ ಮುಂಭಾಗ ಹೊಸ ಬಸ್ ನಿಲ್ದಾಣ ಗಿರಿಯಮ್ಮನ ವೃತ್ತದಿಂದ ಸೂಲಿಬೆಲೆ ಮಾರ್ಗದ ರಸ್ತೆಯಲ್ಲಿ ಅಡಿಗಡಿಗೂ ಗುಂಡಿಗಳದ್ದೇ ಕಾರುಬಾರು ಎಂದು ದೂರಲಾಗಿದೆ.

ದೊಡ್ಡ ಅಮಾನಿಕೆರೆ ಏರಿಮೇಲೆ ಸಾಗುವ ಬಸ್, ಸರಕು ಸಾಗಾಣಿಕೆ ವಾಹನಗಳು, ದ್ವಿಚಕ್ರ ವಾಹನ ಸವಾರರು ಆಕಸ್ಮಿಕವಾಗಿ ಎಚ್ಚರ ತಪ್ಪಿದರೆ ಕೆರೆಯ ಎರಡೂ ಬದಿಯ ಪ್ರಪಾತಕ್ಕೆ ಬೀಳಲೇಬೇಕಾದ ಅಪಾಯ ಕಾದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT