ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹ್ರಾ ವಿದಾಯ ಸನ್ನಿಹಿತ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅನುಭವಿ ಬೌಲರ್‌ ಆಶಿಶ್ ನೆಹ್ರಾ ನವೆಂಬರ್‌ 1ರಂದು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

‘ತವರಿನ ಫೆರೋಜ್ ಷಾ ಕೋಟ್ಲಾ ಅಂಗಳದಲ್ಲಿ ನಡೆಯುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟಿ–20 ಪಂದ್ಯದ ವೇಳೆ ನಿವೃತ್ತಿ ಘೋಷಿಸುವುದಾಗಿ ನೆಹ್ರಾ ನಿರ್ಧರಿಸಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

38 ವರ್ಷದ ಆಟಗಾರ ನೆಹ್ರಾ ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ತಮ್ಮ ನಿವೃತ್ತಿಯ ನಿರ್ಧಾರದ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

‘2018ರಲ್ಲಿ ಐಸಿಸಿ ಯಾವುದೇ ಪ್ರಮುಖ ಟಿ–20 ಟೂರ್ನಿಗಳನ್ನು ಆಯೋಜಿಸಿಲ್ಲ. ಕಿರಿಯ ಆಟಗಾರರು ತಂಡವನ್ನು ಸೇರಿಕೊಳ್ಳಲು ಇದು ಸರಿಯಾದ ಸಮಯ. ಆದ್ದರಿಂದ ನಾನು ನಿವೃತ್ತಿ ಘೋಷಿಸುವುದಕ್ಕೂ ಇದು ಸಕಾಲ‘ ಎಂದು ನೆಹ್ರಾ ತಂಡದ ಆಡಳಿತ ಮಂಡಳಿಯೊಂದಿಗೆ ನಡೆಸಿದ ಮಾತುಕತೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷದ ಐಪಿಎಲ್‌ನಲ್ಲಿಯೂ ನೆಹ್ರಾ ಆಡುವುದು ಅನುಮಾನ ಎನಿಸಿದೆ.

ಮೊಹಮ್ಮದ್ ಅಜುರುದ್ದೀನ್ ತಂಡದ ನಾಯಕರಾಗಿದ್ದ ವೇಳೆ 1999ರಲ್ಲಿ ನೆಹ್ರಾ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಭಾರತ ತಂಡದ ಪರ 17 ಟೆಸ್ಟ್‌, 120 ಏಕದಿನ ಪಂದ್ಯ ಹಾಗೂ 26 ಅಂತರರಾಷ್ಟ್ರೀಯ ಟಿ–20 ಪಂದ್ಯಗಳಲ್ಲಿ ಅವರು ಆಡಿದ್ದಾರೆ.

ಟೆಸ್ಟ್ ಮಾದರಿಯಲ್ಲಿ 44 ವಿಕೆಟ್‌ಗಳನ್ನು ಪಡೆದುಕೊಂಡಿದ್ದರೆ, ಏಕದಿನದಲ್ಲಿ 157 ಹಾಗೂ ಟಿ–20ಯಲ್ಲಿ 34 ವಿಕೆಟ್ ಕಬಳಿಸಿದ್ದಾರೆ.

‘ನವೆಂಬರ್1ರ ಬಳಿಕ ತಂಡದಲ್ಲಿ ಮುಂದುವರಿಯುವುದಿಲ್ಲ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡುವ ಅಭಿಲಾಷೆ ಇತ್ತು. ಆದರೆ ನಿವೃತ್ತಿಗೆ ಇದೇ ಸರಿಯಾದ ಸಮಯ ಎನಿಸಿದೆ’ ಎಂದು ನೆಹ್ರಾ ವಿರಾಟ್ ಹಾಗೂ ಶಾಸ್ತ್ರಿ ಅವರ ಎದುರು ಹೇಳಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ–20 ತಂಡದಲ್ಲಿ ನೆಹ್ರಾ ಸ್ಥಾನ ಪಡೆದಿದ್ದರು. ಆದರೆ ಈವರೆಗೂ ಆಡಿದ ಎರಡು ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿಲ್ಲ.

‘ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನೆಹ್ರಾಗೆ ಸ್ಥಾನ ಸಿಗುವುದು ಅನುಮಾನ. ಆದ್ದರಿಂದ ಹೈದರಾಬಾದ್‌ನಲ್ಲಿ ನಡೆಯುವ ಆಸ್ಟ್ರೇಲಿಯಾ ಎದುರಿನ ಮೂರನೇ ಟಿ–20 ಪಂದ್ಯದಲ್ಲಿ ನೆಹ್ರಾ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡುವ ಸಾಧ್ಯತೆ ಇದೆ’ ಎಂದೂ ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ನೆಹ್ರಾ ಸ್ಥಾನ ಪಡೆದಿದ್ದರು. ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬೆರಳು ಗಾಯದ ಕಾರಣ ಫೈನಲ್ ಪಂದ್ಯದಲ್ಲಿ ನೆಹ್ರಾ ಆಡಿರಲಿಲ್ಲ.

ಐಪಿಎಲ್‌ನ ಕೆಲವು ಫ್ರಾಂಚೈಸ್‌ಗಳು ನೆಹ್ರಾ ಅವರನ್ನು ಬೌಲಿಂಗ್ ಕೋಚ್ ಹಾಗೂ ತಂಡದ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲು ಉತ್ಸಾಹ ತೋರಿಸಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT