ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವ ಶಿಕ್ಷಣ ಗುರಿ ಸಾಧನೆಯಲ್ಲಿ ಹಿಂದೆ ಬೀಳುವುದು ಸರಿಯಲ್ಲ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರಿ ಪ್ರಾಯೋಜಿತ ‘ಸರ್ವ ಶಿಕ್ಷಣ ಅಭಿಯಾನ’ 2000–2001 ರಿಂದ ದೇಶದಾದ್ಯಂತ ಜಾರಿಯಲ್ಲಿದೆ. ಅದರ ಮುಖ್ಯ ಉದ್ದೇಶವೇ ‘ಎಲ್ಲರಿಗೂ ಶಿಕ್ಷಣ, ಮಧ್ಯದಲ್ಲಿಯೇ ಶಾಲೆ ಬಿಡುವುದನ್ನು ತಪ್ಪಿಸುವುದು, ಕಲಿಕೆಯ ಗುಣಮಟ್ಟ ಹೆಚ್ಚಿಸುವುದು, ಪ್ರಾಥಮಿಕ ಶಾಲಾ ಹಂತದಲ್ಲಿ ಸಾಮಾಜಿಕ ಮತ್ತು ಲಿಂಗ ತಾರತಮ್ಯವನ್ನು ಕಡಿಮೆ ಮಾಡುವುದು, ಅಂದರೆ ಜಾತಿ– ಅಂತಸ್ತಿನ ಭೇದವಿಲ್ಲದೆ ಹುಡುಗರು ಮಾತ್ರವಲ್ಲ ಹುಡುಗಿಯರೂ ಶಿಕ್ಷಣ ಕಲಿಯುವಂತೆ ಉತ್ತೇಜಿಸುವುದು’.

ಈ ಗುರಿ ಸಾಧನೆಗೆ ಪೂರಕವಾಗಿ ಹೊಸ ಶಾಲೆಗಳ ಸ್ಥಾಪನೆ, ಅಗತ್ಯಕ್ಕೆ ತಕ್ಕಂತೆ ಶಾಲಾ ಕೊಠಡಿಗಳ ನಿರ್ಮಾಣ, ಶಾಲೆಗಳಲ್ಲಿ ಮಕ್ಕಳಿಗೂ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯ ಕಲ್ಪಿಸುವುದು, ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳ ಪೂರೈಕೆ, ಶಿಕ್ಷಕರ ನೇಮಕ, ಶಿಕ್ಷಕರಿಗೆ ನಿಯಮಿತ ತರಬೇತಿಯಂತಹ ಬಹುಮುಖಿ ಕಾರ್ಯಗಳ ಅನುಷ್ಠಾನವನ್ನೂ ಅಭಿಯಾನ ಒಳಗೊಂಡಿದೆ. ಇದರ ಜಾರಿಯ ನಂತರ ದೇಶದ ವಿವಿಧೆಡೆ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಮಧ್ಯದಲ್ಲಿಯೇ ಶಾಲೆ ಬಿಡುವವರ ಪ್ರಮಾಣ ಕಡಿಮೆಯಾಗಿದೆ.

ಕೆಲವು ರಾಜ್ಯಗಳಂತೂ ಈ ವಿಷಯದಲ್ಲಿ ಒಳ್ಳೆಯ ಸಾಧನೆಯನ್ನೇ ಮಾಡಿವೆ. ಆದರೆ ನಿಗದಿತ ಗುರಿ ತಲುಪುವಲ್ಲಿ ಕರ್ನಾಟಕ ಹಿಂದೆ ಬಿದ್ದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಡೆಸಿದ ಮೊದಲ ಮೌಲ್ಯಮಾಪನ ಎತ್ತಿತೋರಿಸಿದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆ, ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಆಂತರಿಕ ತರಬೇತಿ ಮತ್ತು ಅರ್ಧಕ್ಕೇ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವ ವಿಷಯದಲ್ಲಿ ನಮ್ಮ ರಾಜ್ಯಕ್ಕೆ ಸೊನ್ನೆ ಅಂಕ ಬಂದಿದೆ. ಸಂಬಂಧಪಟ್ಟವರೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ ಇದು.

ಕೇರಳ, ಪುದುಚೇರಿ, ಆಂಧ್ರ, ಮಹಾರಾಷ್ಟ್ರಗಳು 91–100ರ ನಡುವಿನ ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ತೋರಿದ ರಾಜ್ಯಗಳ ಪಟ್ಟಿಯಲ್ಲಿವೆ. ತೆಲಂಗಾಣ 81ಕ್ಕಿಂತ ಹೆಚ್ಚು ಮತ್ತು ತಮಿಳುನಾಡು 71–80ರ ನಡುವಿನ ಅಂಕಗಳನ್ನು ಪಡೆದಿವೆ. ವಿಶೇಷ ಎಂದರೆ ಇವೆಲ್ಲವೂ ನಮ್ಮ ನೆರೆಯ ರಾಜ್ಯಗಳು. ಆದರೆ ನಾವು ಮಾತ್ರ 41–50ರ ಅಂಕ ಶ್ರೇಣಿಯಲ್ಲಿದ್ದೇವೆ.

ಬಿಹಾರದಂತಹ ಹಿಂದುಳಿದ ರಾಜ್ಯಗಳ ಜತೆ ನಮ್ಮ ರಾಜ್ಯ ಇದೆ ಎನ್ನುವುದಂತೂ ತಲೆತಗ್ಗಿಸುವ ಸಂಗತಿ. ಮೈಸೂರು ಮಹಾರಾಜರ ಕಾಲದಿಂದಲೇ ಶಿಕ್ಷಣಕ್ಕೆ ಬಹಳ ಮಹತ್ವ ನೀಡುತ್ತ ಬಂದ ರಾಜ್ಯ ನಮ್ಮದು. ರಜಾಕಾರರ ಹಾವಳಿಯಿಂದ ಮಹಿಳೆಯರು ಮನೆಯಿಂದ ಹೊರಬರಲು ಹೆದರುತ್ತಿದ್ದ ಕಾಲದಲ್ಲಿಯೇ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಅನೇಕ ಶಾಲೆಗಳು ಗುಟ್ಟಾಗಿ ಬಾಲಕಿಯರಿಗೆ ಶಿಕ್ಷಣ ನೀಡುತ್ತಿದ್ದವು.

ಶೈಕ್ಷಣಿಕ ಸುಧಾರಣೆ ವಿಷಯದಲ್ಲಿ ಇಷ್ಟೆಲ್ಲ ಹಿನ್ನೆಲೆ, ಇತಿಹಾಸ ಇರುವ ನಾವು ಹಿಂದೆ ಉಳಿದದ್ದು ಸರಿಯಲ್ಲ. ಜಿಲ್ಲಾ ಶೈಕ್ಷಣಿಕ ಮಾಹಿತಿ ವ್ಯವಸ್ಥೆಯ ಅಂಕಿಅಂಶಗಳು ಹೇಳುವಂತೆ ‘ಹುಡುಗಿಯರನ್ನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ, ಹುಡುಗರಾದರೆ ಖಾಸಗಿ ಇಂಗ್ಲಿಷ್‌ ಶಾಲೆಗಳಿಗೆ’ ಸೇರಿಸುವ ಪ್ರವೃತ್ತಿ ಪೋಷಕರಲ್ಲಿ ಬೆಳೆಯುತ್ತಿದೆ. ಎರಡೂ ಬಗೆಯ ಶಾಲೆಗಳಲ್ಲಿನ ಶೈಕ್ಷಣಿಕ ವಾತಾವರಣ, ಶಿಕ್ಷಣದ ಗುಣಮಟ್ಟದಲ್ಲಿ ಸಾಕಷ್ಟು ಅಂತರ ಇದೆ. ಅಂದರೆ, ಇದು ಹುಡುಗಿಯರ ಶಿಕ್ಷಣದ ಬಗ್ಗೆ ಈಗಲೂ ನಮ್ಮಲ್ಲಿ ಬೇರೂರಿರುವ ತಾರತಮ್ಯಕ್ಕೆ ಒಂದು ಉದಾಹರಣೆ. ಜತೆಗೆ ನಮ್ಮ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಗ್ಗೆ ಜನರಿಗೆ ಇರುವ ಅಭಿಪ್ರಾಯಕ್ಕೆ ಕನ್ನಡಿಯೂ ಹೌದು.

ಶಿಕ್ಷಣ ಎನ್ನುವುದು ವ್ಯಕ್ತಿಯ, ತನ್ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಮೂಲ ಸಾಧನ. ಅದಕ್ಕಾಗಿಯೇ ಶಿಕ್ಷಣಕ್ಕೆ ಭಾರೀ ಮಹತ್ವ. ಹೀಗಾಗಿ ಪ್ರಾಥಮಿಕ ಶಿಕ್ಷಣವನ್ನು ಕಡೆಗಣಿಸುವುದು ಸರಿಯಲ್ಲ.

ನಮ್ಮ ಮಕ್ಕಳು ಶಾಲೆಗಳಲ್ಲಿ ಪಾಠ ಕೇಳಿಸಿಕೊಳ್ಳುವುದು, ಶಬ್ದಗಳನ್ನು ಗುರುತಿಸುವುದು, ಓದುವಿಕೆ, ಗಣಿತದಂತಹ ವಿಷಯಗಳ ಗ್ರಹಿಕೆಯ ಸಾಮರ್ಥ್ಯದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಮೇಲಿದ್ದಾರೆ. ಆದ್ದರಿಂದ ನಮ್ಮ ಸಾಧನೆ ಹೆಚ್ಚಿರುವ ಕ್ಷೇತ್ರಗಳಲ್ಲಿನ ಮೇಲುಗೈ ಉಳಿಸಿಕೊಳ್ಳಬೇಕು. ನಾವು ಎಲ್ಲಿ ಹಿಂದೆ ಬಿದ್ದಿದ್ದೇವೆಯೋ ಅಲ್ಲಿ ಸರಿಪಡಿಸಿಕೊಳ್ಳಬೇಕು. ಇದು ಮುಖ್ಯವಾಗಿ ಸರ್ಕಾರ ಮಾಡಬೇಕಾದ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT