ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 12–10–1967

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಡಾ. ಲೋಹಿಯಾ ನಿಧನ
ನವದೆಹಲಿ, ಅ. 12
– ಹತ್ತು ದಿನಗಳಿಂದ ಜೀವನ–ಮರಣಗಳ ತೂಗುಯ್ಯಾಲೆಯಲ್ಲಿ ತೊನೆದಾಡುತ್ತಿದ್ದ, ಭಾರತದ ಅಗ್ರಗಣ್ಯ ಸೋಷಲಿಸ್ಟ್ ಧುರೀಣ ಡಾ. ರಾಂ ಮನೋಹರ ಲೋಹಿಯಾ ಅವರು ಇಂದು ರಾತ್ರಿ 1 ಗಂಟೆ 5 ನಿಮಿಷಕ್ಕೆ ವೆಲಿಂಗ್ಟನ್ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 57 ವರ್ಷ ವಯಸ್ಸಾಗಿತ್ತು. ಪ್ರಾಸ್ಟೇಟ್ ಗ್ರಂಥಿಯ ವಿಕಾಸದ ಕಾರಣಕ್ಕಾಗಿ ಕಳೆದ ತಿಂಗಳು 30ರಂದು ಅವರಿಗೆ ಶಸ್ತ್ರಕ್ರಿಯೆ ನಡೆಸಲಾಗಿತ್ತು.

ಈ ಶಸ್ತ್ರಕ್ರಿಯೆಯ ಕಾರಣ ಉಂಟಾದ ಗಾಯದಲ್ಲಿ ನಂಜುಂಟಾಗಿ, ಅದು ರಕ್ತಕ್ಕೆ ವ್ಯಾಪಿಸಿ, ಅದರ ಫಲವಾಗಿ ಕಳೆದ ಹತ್ತು ದಿನಗಳಲ್ಲಿ ಅವರ ದೇಹಸ್ಥಿತಿ ತುಂಬಾ ಕಳವಳಕ್ಕೆಡೆ ಕೊಟ್ಟಿದ್ದಿತು.

ಅವರನ್ನು ಮರಣದ ದವಡೆಯಿಂದ ಪಾರು ಮಾಡಲು ಹಲವಾರು ಜಗದ್ವಿಖ್ಯಾತ ವೈದ್ಯರ ತಂಡ ನಿರಂತರವಾಗಿ ಶ್ರಮಿಸಿತಾದರೂ ಸಾರ್ಥಕವಾಗಲಿಲ್ಲ.

ಡಾ. ಲೋಹಿಯಾ ಅವರ ನಿಧನ ವಾರ್ತೆಯನ್ನು ಕೂಡಲೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಇತರೆ ನಾಯಕರಿಗೆ ತಿಳಿಸಲಾಯಿತು. ನಾಯಕರ ಹಾಗೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರವಾಹದೋಪಾದಿಯಲ್ಲಿ ನರ್ಸಿಂಗ್ ಹೋಂಗೆ ಬರಲಾರಂಭಿಸಿದರು.

*
ಚಳವಳಿಯಿಂದ ಪ್ರಯೋಜನವಿಲ್ಲ
ಪುಣೆ, ಅ. 11– ಮೈಸೂರು–ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಚಳವಳಿಯ ಮಾರ್ಗ ಅನುಸರಿಸುವುದರಿಂದ ಏನೂ ಪ್ರಯೋಜನ ಕಾಣದೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ವಿ.ಪಿ. ಸಿಂಗ್ ಅವರು ಇಂದು ಇಲ್ಲಿ ತಿಳಿಸಿದರು.

‘ನನ್ನ ಮಟ್ಟಿಗೆ ಹೇಳುವುದಾದರೆ ಈ ಸಮಸ್ಯೆಯನ್ನು ಬೌದ್ಧಿಕ ಮಟ್ಟದಲ್ಲಿ ಪರಿಹರಿಸಿಕೊಳ್ಳಲು ಯತ್ನಿಸುವುದು ಮೇಲೆನಿಸುತ್ತದೆ’ ಎಂದು ಅವರು ವರದಿಗಾರರಿಗೆ ತಿಳಿಸಿದರು.

*
ಉರಿ ವಿಭಾಗದಲ್ಲಿ ಶಾಂತ ಪರಿಸ್ಥಿತಿ
ನವದೆಹಲಿ, ಅ. 11–
ಕಾಶ್ಮೀರದ ಉರಿ ಕ್ಷೇತ್ರದಲ್ಲಿ ಶಾಂತ ಪರಿಸ್ಥಿತಿ ಉಂಟಾಗಿದೆಯೆಂದು ಇಂದು ಬೆಳಿಗ್ಗೆ ಇಲ್ಲಿಗೆ ಬಂದ ಇತ್ತೀಚಿನ ವರದಿ ತಿಳಿಸಿದೆ.
ನಿನ್ನೆಯಿಂದ ಗುಂಡಿನ ದಾಳಿ ಇಲ್ಲವೆಂದೂ ಆ ವರದಿ ಹೇಳಿದೆ.

*
ಹೆಂಡ ಇಳಿಸಲು ಆಂಧ್ರದಿಂದ ರಾಜ್ಯಕ್ಕೆ 60,000 ಈಚಲು ಮರ
ಹೈದರಾಬಾದ್, ಅ. 11–
ಈ ತಿಂಗಳು 15 ರಿಂದ ಪಾನನಿರೋಧ ರದ್ದಾಗುವ ಮೈಸೂರು ರಾಜ್ಯದ ಅಗತ್ಯ ಪೂರೈಸಲು 60,000 ಈಚಲು ಮರಗಳನ್ನು ನೀಡಲು ಆಂಧ್ರ ಸರ್ಕಾರ ಮುಂದಾಗಿದೆ.

ಈಗ ಮೈಸೂರು ರಾಜ್ಯದಲ್ಲಿ ಈಚಲು ಮರಗಳ ಅಭಾವ ಉಂಟಾಗಿರುವ ಕಾರಣ ರಾಜ್ಯದ ಅಬ್ಕಾರಿ ಕಮಿಷನರ್ ಅವರು ಇತ್ತೀಚೆಗೆ ಹೈದರಾಬಾದಿಗೆ ಭೇಟಿ ಇತ್ತರಲ್ಲದೆ ಚಿತ್ತೂರು, ಅನಂತಪುರ ಮತ್ತು ಮಹಬೂಬ್‌ನಗರ ಜಿಲ್ಲೆಗಳಲ್ಲಿ ಈಚಲು ಮರಗಳಿಂದ ಹೆಂಡ ಇಳಿಸಲು ಅನುಮತಿ ಬಗ್ಗೆ ಪ್ರಸ್ತಾಪಿಸಿದರು.

ಹೆಂಡ ಇಳಿಸಲು ಈಚಲು ಮರಗಳನ್ನು ಬಿಟ್ಟು ಕೊಡುವ ನಿರ್ಧಾರವನ್ನು ಈಗಾಗಲೇ ಮೈಸೂರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿರುವುದಾಗಿ ಆಂಧ್ರ ಸರ್ಕಾರದ ಅಬ್ಕಾರಿ ಸಚಿವ ಶ್ರೀ ವಿ. ಸತ್ಯನಾರಾಯಣರಾವ್ ಅವರು ಇಂದು ಇಲ್ಲಿ ಪಿ.ಟಿ.ಐ.ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT