ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರುಷಿ ಕೊಲೆ ಪ್ರಕರಣ: ರಾಜೇಶ್- ನೂಪುರ್ ದಂಪತಿ ಖುಲಾಸೆ

Last Updated 13 ಅಕ್ಟೋಬರ್ 2017, 9:09 IST
ಅಕ್ಷರ ಗಾತ್ರ

ಅಲಹಾಬಾದ್‌: ಆರುಷಿ- ಹೇಮರಾಜ್ ಅವಳಿ ಕೊಲೆ ಪ್ರಕರಣದಿಂದ ತಲ್ವಾರ್ ದಂಪತಿ ರಾಜೇಶ್‌ ಮತ್ತು ನೂಪುರ್ ಅವರನ್ನು ಅಲಹಾಬಾದ್‌ ಹೈಕೋರ್ಟ್‌ ಖುಲಾಸೆಗೊಳಿಸಿದೆ.

2008ರಲ್ಲಿ ನಡೆದಿದ್ದ ಈ ಕೊಲೆ ಪ್ರಕರಣದ ವಿಚಾರಣೆ ನಡೆಸಿದ್ದ ಗಾಜಿಯಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು 2013ರ ನವೆಂಬರ್‌ 26ರಂದು ತಲ್ವಾರ್‌ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ತಲ್ವಾರ್‌ ದಂಪತಿ ಅಲಹಾಬಾದ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ರಾಜೇಶ್‌ ಮತ್ತು ನೂಪುರ್‌ ದಂಪತಿ ತಮ್ಮ ಮಗಳು ಮತ್ತು ಮನೆ ಕೆಲಸದ ಸಹಾಯಕ ಹೇಮರಾಜ್‌ ಕೊಲೆಯ ಹೊಣೆಗಾರರಲ್ಲ ಎಂದು ನ್ಯಾಯಪೀಠ ಹೇಳಿದೆ.

ರಾಜೇಶ್‌ ಮತ್ತು ನೂಪುರ್‌ ಅವರೇ ಈ ಜೋಡಿ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

‘ಕೇವಲ ಶಂಕೆಯ ಆಧಾರದ ಮೇಲೆ ತಲ್ವಾರ್‌ ದಂಪತಿಯನ್ನು ದೋಷಿಗಳು ಎಂದು ತೀರ್ಮಾನಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.


ಹೇಮರಾಜ್ – ಆರುಷಿ

ಏನಿದು ಪ್ರಕರಣ: 2008 ಮೇ 15 ರ ರಾತ್ರಿ ನೋಯಿಡಾದ ಜಲ್‌ವಾಯು ವಿಹಾರ ನಿವಾಸದಲ್ಲಿ ಆರುಷಿ ಹಾಗೂ ಮನೆ ಕೆಲಸದ ಸಹಾಯಕ ಹೇಮರಾಜ್‌ ಅವರ ಕೊಲೆ ನಿಗೂಢವಾಗಿ ನಡೆದಿತ್ತು. ಆನಂತರ ಕೊಲೆ ತನಿಖೆ ಆರಂಭಿಸಿದ್ದ ಉತ್ತರ ಪ್ರದೇಶ ಪೊಲೀಸರು ಹಾಗೂ ಸಿಬಿಐ ಆರುಷಿ ಪೋಷಕರ ಮೇಲೆ ಕೊಲೆ ಆರೋಪ ಹೊರಿಸಿದ್ದರು.

ಮಾಧ್ಯಮಗಳಿಂದ ಭಾರಿ ಪ್ರಚಾರ ಪಡೆದ ಈ ಪ್ರಕರಣದ ವರದಿ ಪ್ರಸಾರದ ಮೇಲೆ 2009 ರ ಸುಪ್ರೀಂಕೋರ್ಟ್‌ ತಡೆ ಒಡ್ಡಿತ್ತು. ಮೊದಲಿಗೆ ಹೇಮರಾಜ್‌ ಆರುಷಿಯನ್ನು ಕೊಲೆ ಮಾಡಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ಶಂಕಿಸಿದ್ದರು. ಆದರೆ ಆತನ ಶವ ತಾರಸಿಯಲ್ಲಿ ಮಾರನೇ ದಿನ ಪತ್ತೆಯಾಗಿದ್ದರಿಂದ ಆತ ಈ ಕೊಲೆ ಮಾಡಿರಲಿಕ್ಕಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಪ್ರಕರಣದ ಗಂಭೀರತೆ ಅರಿತ ಅಂದಿನ ಮುಖ್ಯಮಂತ್ರಿ ಮಾಯಾವತಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು.

ಇದನ್ನೂ ಓದಿ...
ರಾಜೇಶ್- ನೂಪುರ್ ದಂಪತಿ ನಾಳೆ ಬಿಡುಗಡೆ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT