ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಏರಿ ಕುಸಿಯುವ ಭೀತಿ; ಆತಂಕ

ಅಧಿಕಾರಿಗಳ ಎದುರು ಸಮಸ್ಯೆ ಬಿಚ್ಚಿಟ್ಟ ಬಲಶೆಟ್ಟಿಹಾಳ ಗ್ರಾಮಸ್ಥರು
Last Updated 12 ಅಕ್ಟೋಬರ್ 2017, 11:55 IST
ಅಕ್ಷರ ಗಾತ್ರ

ಹುಣಸಗಿ: ಕೆಲ ದಿನಗಳಿಂದ ಸುರಿದ ಮಳೆಯಿಂದ ಸಮೀಪದ ಬಲಶೆಟ್ಟಿಹಾಳ ಕೆರೆಯ ಏರಿ (ಒಡ್ಡು) ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳಿಂದ ತೂಬು ಸ್ಥಳದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೆ, ಮಂಗಳವಾರ ಈ ಬಿರುಕು ಹೆಚ್ಚಾಗಿ ಕುಸಿಯುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ.

ಈ ಕುರಿತು ಬುಧವಾರ ಗ್ರಾಮದ ಮುಖಂಡರು ಜಿಲ್ಲಾಧಿಕಾರಿಗೆ ಹಾಗೂ ಸುರಪುರ ಮತ್ತು ಹುಣಸಗಿ ತಹಶೀಲ್ದಾರ್ ಅವರಿಗೆ ಕೆರೆಯ ಏರಿ (ಒಡ್ಡು) ಕುಸಿದಿರುವ ಬಗ್ಗೆ ದೂರವಾಣಿಯಲ್ಲಿ ತಿಳಿಸಿರುವುದಾಗಿ ಗ್ರಾಮಸ್ಥರು ಹೇಳಿದರು.

ಜಿಲ್ಲಾಧಿಕಾರಿ ಆದೇಶನ್ವಯ ಬುಧವಾರ  ಕಂದಾಯ ನಿರೀಕ್ಷಕ ಶ್ರೀಶೈಲ ಕೆರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಕಂದಾಯ ನಿರೀಕ್ಷಕ ಶ್ರೀಶೈಲ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆರೆಯ ಏರಿ ಕುಸಿದಿರುವುದು, ಅಲ್ಲದೇ ಹಾನಿಯ ಕುರಿತು ಸಮಗ್ರ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು’ ಎಂದರು.

‘ಈ ಬಲಶೆಟ್ಟಿಹಾಳ ಗ್ರಾಮದ ಕೆರೆಯಲ್ಲಿ ಅಂದಾಜು 4 ಮೊಸಳೆಗಳಿದ್ದು, ಅವುಗಳನ್ನು ಬೇರೆಡೆ ಸಾಗಿಸಬೇಕು. ಕೆರೆ ದಂಡೆಯಲ್ಲೇ ಕೆಲ ಗ್ರಾಮಸ್ಥರು ವಾಸವಿದ್ದಾರೆ. ಅವರೆಲ್ಲರೂ ಆತಂಕದಲ್ಲೇ ನಿತ್ಯ ಕಾಲ ಕಳೆಯುತ್ತಿದ್ದಾರೆ’ ಎಂದು ಗ್ರಾಮದ ಮುಖಂಡರು ತಿಳಿಸಿದರು.

‘ಕೆಲ ವರ್ಷಗಳಿಂದ ಈ ಕೆರೆಯ ವಾರ್ಷಿಕ ನಿರ್ವಹಣೆಯನ್ನು ಸಂಬಂಧಿಸಿದ ಇಲಾಖೆಯವರು ಮಾಡಿಲ್ಲ. ಈ ಕೆರೆಯತ್ತ ಗಮನ ಹರಿಸಿಲ್ಲ’ ಎಂದು ಗ್ರಾಮದ ಕಾಶಿಂಸಾಬ ಅವರಾದಿ ಆರೋಪಿಸಿದರು.

ಬಲಶೆಟ್ಟಿಹಾಳ ಕೆರೆ ಪಂಚಾಯಿತಿ ರಾಜ್ ಇಲಾಖೆಯು ನಿರ್ವಹಣೆ ಮಾಡುತ್ತಿದೆ. ಬಲಶೆಟ್ಟಿಹಾಳ ಗ್ರಾಮದ ಹೊರವಲಯದ ಸರ್ವೆ ನಂ. 67 ರಲ್ಲಿ ಅಂದಾಜು 41 ಎಕರೆ ವಿಸ್ತೀರ್ಣದ ದೊಡ್ಡ ಕೆರೆ ಇದಾಗಿದೆ.

ಗ್ರಾಮದ ತಿಪ್ಪಣ್ಣಗೌಡ ಬಿರಾದಾರ, ಟಿಪ್ಪುಸುಲ್ತಾನ ಅವರಾದಿ, ತಿಪ್ಪಣ್ಣ ಸರಗಾರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ರಾಮಪ್ಪ ಪಾಟೀಲ, ಗ್ರಾಮಲೆಕ್ಕಾಧಿಕಾರಿ ಹಣಮರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT