ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕ ಭಾರತ: ಇದು ಎಚ್ಚರಗೊಳ್ಳುವ ಸಮಯ

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಯುವ ಭಾರತ’ ಪರಿಕಲ್ಪನೆಯನ್ನು 2020ರೊಳಗೆ ಸಾಕಾರಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲೇ, ತೀವ್ರತರವಾದ ಅಪೌಷ್ಟಿಕತೆ ಹಾಗೂ ಕಡಿಮೆ ತೂಕದಿಂದ ಬಳಲುತ್ತಿರುವ 9.7 ಕೋಟಿ ಮಕ್ಕಳು ಭಾರತದಲ್ಲಿದ್ದಾರೆ ಎನ್ನುವ ಆಘಾತಕರ ಅಧ್ಯಯನ ವರದಿ ಪ್ರಕಟವಾಗಿದೆ.

ವಿಶ್ವದಲ್ಲಿ ಅಪೌಷ್ಟಿಕತೆ ಹೊಂದಿರುವ 19.2 ಕೋಟಿ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ಭಾರತದಲ್ಲೇ ಇದ್ದಾರೆ. ಈ ಸಂಖ್ಯೆ ವಿಶ್ವದಲ್ಲೇ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಲಂಡನ್‌ನ ಇಂಪೀರಿಯಲ್‌ ಕಾಲೇಜಿನ ಅಧ್ಯಯನ ತಿಳಿಸಿದೆ.

ಲ್ಯಾನ್ಸೆಟ್‌ ನಿಯತಕಾಲಿಕ ಪ್ರಕಟಿಸಿರುವ ಅಧ್ಯಯನದ ವಿವರಗಳು ನಮ್ಮ ಅಭಿವೃದ್ಧಿ ಮಾಪಕಗಳ ಬಗ್ಗೆ ತೀವ್ರ ಗುಮಾನಿ ಹುಟ್ಟಿಸುವಂತಿವೆ. ಬಾಲಕಿಯರಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಪ್ರಮಾಣ ಶೇ 22.7ರಷ್ಟು ಇದ್ದರೆ, ಬಾಲಕರಲ್ಲಿ ಇದು ಶೇ 30.7ರಷ್ಟಿದೆ. 1975ರಲ್ಲಿ ಈ ಪ್ರಮಾಣ ಕ್ರಮವಾಗಿ ಶೇ 24.4 ಹಾಗೂ ಶೇ 39.3ರಷ್ಟಿತ್ತು.

ನಾಲ್ಕು ದಶಕಗಳಲ್ಲಿ ಈ ಪ್ರಮಾಣ ಕೊಂಚ ಕಡಿಮೆಯಾಗಿದ್ದರೂ ಇದು ಆಧುನಿಕ ಭಾರತದ ಅಭಿವೃದ್ಧಿ ಕಾರ್ಯಕ್ರಮಗಳ ವೇಗಕ್ಕೆ ತಕ್ಕಂತಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ. ಉತ್ತರ ಪ್ರದೇಶದ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಇತ್ತೀಚೆಗೆ ಪದೇಪದೇ ಸುದ್ದಿಯಾಗುತ್ತಿದೆ.

ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವ ಮಕ್ಕಳು ಮತ್ತು ಹದಿಹರೆಯದವರ ಸಂಖ್ಯೆ ಹೆಚ್ಚಾಗಿರುವ ದೇಶದ 201 ಜಿಲ್ಲೆಗಳಲ್ಲಿ, ಶೇ 57ರಷ್ಟು ಜಿಲ್ಲೆಗಳು ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲೇ ಇವೆ. ಕರ್ನಾಟಕದಲ್ಲಿ ಕೂಡ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವ ಮಕ್ಕಳು-ಮಹಿಳೆಯರ ಪ್ರಮಾಣ ಕಡಿಮೆಯೇನಿಲ್ಲ.

ಶೇ 45.4ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಹಾಗೂ ಶೇ 20.7ರಷ್ಟು ಗರ್ಭಿಣಿಯರು ತೂಕದ ಕೊರತೆಯಿಂದ ಬಳಲುತ್ತಿದ್ದಾರೆ. ಅಮ್ಮಂದಿರ ಈ ದೌರ್ಬಲ್ಯ ನವಜಾತ ಮಕ್ಕಳಲ್ಲೂ ಸಹಜವಾಗಿಯೇ ಕಾಣಿಸಿಕೊಳ್ಳುತ್ತದೆ. ಕೊಪ್ಪಳ, ಬೆಂಗಳೂರು ನಗರ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಂತೂ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿದೆ.

ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಪೌಷ್ಟಿಕತೆಯ ಕೊರತೆ ಆಗದಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ. ಆನುವಂಶೀಯವಾಗಿ ಉಂಟಾಗುವ ಅಪೌಷ್ಟಿಕತೆಯನ್ನು ತಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಚ್ಚರಿಕೆ ವಹಿಸಿದೆ. ನಮ್ಮಲ್ಲಿ ಶಾಲಾಮಕ್ಕಳಿಗೆ ‘ಕ್ಷೀರಭಾಗ್ಯ’ ಯೋಜನೆಯಲ್ಲಿ ಹಾಲು ನೀಡಲಾಗುತ್ತಿದೆ. ಮಕ್ಕಳಿಗೆ ಮೊಟ್ಟೆ ವಿತರಿಸಲಾಗುತ್ತಿದೆ.

ಗರ್ಭಿಣಿಯರಿಗೆ ಪ್ರತಿನಿತ್ಯ 1300 ಕ್ಯಾಲರಿಗಳಷ್ಟು ಆಹಾರ ಒದಗಿಸುವ ‘ಮಾತೃಪೂರ್ಣ’ ಯೋಜನೆ ಜಾರಿಯಲ್ಲಿದೆ. ಅಂಗನವಾಡಿ ಮಕ್ಕಳಿಗೆ ಪ್ರೊಟೀನ್‌ಯುಕ್ತ ಆಹಾರ ನೀಡಲಾಗುತ್ತಿದೆ. ಆದರೆ, ಈ ಯೋಜನೆಗಳ ಪೂರ್ಣ ಪ್ರಯೋಜನ ದೊರೆಯದಿರುವುದು ಪ್ರಸಕ್ತ ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ದೇಶದ ‘ನೀತಿ ಆಯೋಗ’ವು ರಾಷ್ಟ್ರೀಯ ಪೌಷ್ಟಿಕ ಕಾರ್ಯತಂತ್ರವೊಂದನ್ನು ರೂಪಿಸಿದೆ.

2020ರೊಳಗೆ ಮಕ್ಕಳು, ಹದಿಹರೆಯದವರು ಹಾಗೂ ಮಹಿಳೆಯರ ಪೌಷ್ಟಿಕತೆಯನ್ನು ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗುಣಮಟ್ಟದ ಪೌಷ್ಟಿಕ ಆಹಾರ ದುಬಾರಿಯಾಗಿದ್ದು, ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ಇದು ಕೈಗೆಟುಕುತ್ತಿಲ್ಲ. ಮಾರುಕಟ್ಟೆಯಲ್ಲಿ ಸುಲಭ ದರಕ್ಕೆ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳುವುದರ ಜೊತೆಗೆ, ಶಾಲೆಗಳಲ್ಲಿ ಕೂಡ ಮಕ್ಕಳಿಗೆ ಉತ್ತಮ ಆಹಾರ ಲಭ್ಯವಾಗಬೇಕು.

ಕಡಿಮೆ ತೂಕದ ಮಕ್ಕಳ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಬೊಜ್ಜಿನಿಂದ ಬಳಲುತ್ತಿರುವ ಮಕ್ಕಳು ಮತ್ತು ಹದಿಹರೆಯದವರ ಸಮಸ್ಯೆಯನ್ನೂ ಜಗತ್ತು ಎದುರಿಸುತ್ತಿದೆ. 1975ರಲ್ಲಿ, 5ರಿಂದ 19 ವರ್ಷದೊಳಗಿನ ಸುಮಾರು 1.1 ಕೋಟಿ ಮಂದಿ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದರು. 2016ರಲ್ಲಿ ಈ ಪ್ರಮಾಣ 12.4 ಕೋಟಿಗೇರಿದೆ. ಅಂದರೆ, ಅಧಿಕ ತೂಕ ಹೊಂದಿರುವವರ ಸಂಖ್ಯೆಯಲ್ಲಿ ಹತ್ತು ಪಟ್ಟು ಹೆಚ್ಚಳವಾಗಿದೆ. ಅಭಿವೃದ್ಧಿಶೀಲ ಮತ್ತು ಬಡ ದೇಶಗಳಲ್ಲಿನ ಮಕ್ಕಳು ಕೂಡ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವುದು ಗಮನಾರ್ಹ.

ಸಾಮಾನ್ಯವಾಗಿ ಸಿರಿವಂತಿಕೆಯ ಸಂಕೇತವಾಗಿ ಗುರ್ತಿಸುವ ಬೊಜ್ಜು ಅಸಮತೋಲನ ಆಹಾರ ಹಾಗೂ ಅಪೌಷ್ಟಿಕತೆಯ ರೂಪದಲ್ಲೂ ಕಾಣಿಸಿಕೊಳ್ಳುತ್ತದೆ. ಮಕ್ಕಳ ನೆಮ್ಮದಿಯ ನಾಳೆಗಳ ಮೇಲೆ ಸಮಾಜದ ಭವಿಷ್ಯವನ್ನು ಕಲ್ಪಿಸಿಕೊಳ್ಳಲಾಗುತ್ತದೆ. ಮಕ್ಕಳು-ಮಹಿಳೆಯರ ಆರೋಗ್ಯದ ಜೊತೆಗೆ ನಮ್ಮ ಅಭಿವೃದ್ಧಿಯ ಎಲ್ಲ ಅಂಶಗಳೂ ತಳಕು ಹಾಕಿಕೊಂಡಿವೆ.

ಆ ಕಾರಣದಿಂದಲೇ, ನಮ್ಮ ಮುಂದಿನ ತಲೆಮಾರು ನಿಶ್ಶಕ್ತಿಯಿಂದಲೋ ಬೊಜ್ಜಿನಿಂದಲೋ ಬಳಲುವುದನ್ನು ಸಮಾಜದ ಸ್ವಾಸ್ಥ್ಯಕ್ಕೆ ಒದಗಿರುವ ಆತಂಕದ ರೂಪದಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT