ಸಂಸಾರ ಸಂಭ್ರಮ

ಸಂಸಾರ ಎಂದರೆ ಸಭ್ಯತೆ

ಸಂಸಾರ ಎಂದರೆ ಗಂಡು–ಹೆಣ್ಣು ಕೂಡಿ ನಡೆಸುವ ಸುಂದರವಾದ ಪಯಣ. ಸಮಾಜ ಬದಲಾದಂತೆ ಸಂಸಾರದ ವ್ಯಾಖ್ಯಾನವೂ ಬದಲಾಗಿದೆ.

ಸಂಸಾರ ಎಂದರೆ ಸಭ್ಯತೆ

ಇದು ಆರೋಗ್ಯವಂತ ಸಮಾಜದ ಮೂಲಧಾತು ಮತ್ತು ಭದ್ರತಳಹದಿ ಕುಟುಂಬ. ಆದರೆ ಇದರ ಅರ್ಥವ್ಯಾಪ್ತಿಯನ್ನು ಅರಿಯಲು ಹೊರಟರೆ ಜಿಡುಕಾಗುತ್ತದೆ, ಜಿಗುಟಾಗುತ್ತದೆ. 'ಮೊದಲು ನಿನ್ನ ಸಂಸಾರ ನೆಟ್ಟಗೆ ಮಾಡಿಕೊ', 'ನೆಟ್ಟಗೆ ಸಂಸಾರ ಮಾಡುವುದನ್ನು ಕಲಿ'. ದಿನನಿತ್ಯ ನಾವು ಕೇಳುವ ಈ ಮಾತುಗಳಲ್ಲಿ 'ನೆಟ್ಟಗೆ' ಎಂಬ ಪದಕ್ಕೆ ಇನ್ನೂ ಯಾರಿಗೂ ಸರಿಯಾದ ಅರ್ಥವನ್ನು ವಿವರಿಸಲು ಸಾಧ್ಯವಾಗಿಲ್ಲ.

ಅಲ್ಲದೆ ನಮ್ಮ ವಿದ್ಯಾಭ್ಯಾಸದ ಪರಮಗುರಿಯೂ ಕೊನೆಯಲ್ಲಿ ಸಂಸಾರವನ್ನು ಹೊಂದುವುದೇ ಆಗಿದೆ ಎಂದು ಬಿಂಬಿಸಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಒಳ್ಳೆ ಸಂಬಳದ ಕೆಲಸದ ಸಿಕ್ಕಿದರೆ ಸುಖದ ಸಂಸಾರ ತಾನೇ ತಾನಾಗಿ ಒಲಿಯುತ್ತದೆ ಎಂಬ ನಂಬಿಕೆಯನ್ನು ಈಗಿನ ಶಿಕ್ಷಣವ್ಯವಸ್ಥೆ ಮೊಳೆಯುವಂತೆ ಮಾಡುತ್ತಿದೆ. ಅದಕ್ಕೆ ಸರಿಯಾಗಿ ಓದು ಮುಗಿಸಿ ಕೆಲಸಕ್ಕೆ ಹೋಗುವ ಯುವಜನತೆ ಕ್ಲಪ್ತ ಸಮಯಕ್ಕೆ ಮದುವೆಯಾಗದೇ ಮುಂದೂಡುತ್ತಿದ್ದರೆ ಪುರುಷತ್ವದ ಮೇಲೋ, ಇರಬಹುದಾದ ಅಕ್ರಮ ಸಂಬಂಧದ ಮೇಲೋ ಅನುಮಾನ ಪಡುತ್ತದೆ ನಮ್ಮ ಸಮಾಜ.

ಸಂಸಾರ ಎಂಬ ಸಮಾಜ ಚಿನ್ನದ ಪಂಜರದೊಳಗೆ ಹೊರಗಿರುವ ಹಕ್ಕಿ ಒಳಗೂ, ಒಳಗಿರುವ ಹಕ್ಕಿ ಹೊರಗೂ ಬರಲು ಅವಸರಿಸುತ್ತದೆ. ಹಾಗೆಯೇ ಅಲ್ಲೊಬ್ಬ ತನ್ನ ಮದುವೆಯ ವಿಡಿಯೋವನ್ನು ರಿವೈಂಡ್ ಮಾಡಿ ನೋಡಿ ಖುಷಿಪಟ್ಟ ಎಂಬ ಜೋಕುಗಳು ಕ್ಲೀಷೆಯಾಗಿದ್ದರೂ ಸಂಸಾರದ ಬಗೆಗಿರುವ ಆಕರ್ಷಣೆ ಮತ್ತು ವಿಕರ್ಷಣೆಯನ್ನು 'ಕಿರಿದರೊಳಗೆ ಹಿರಿದನ್ನು' ಸೂಚ್ಯವಾಗಿ ಹೇಳುತ್ತದೆ.

ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಕಾಮವನ್ನು ಪೂರೈಸಿಕೊಳ್ಳಲು ಗಂಡು ಮತ್ತು ಹೆಣ್ಣು ಒಟ್ಟಿಗೆ ಇದ್ದು ಸಂಸಾರ ನಡೆಸಲು ಸಮಾಜ ಕೊಡುವ ಅಧಿಕೃತ ಪರವಾನಿಗೆಯೇ ಮದುವೆ. ಮದುವೆ ಎಂಬ ಹೆಸರಿನ ಮುದ್ರೆ ಇಲ್ಲದ ಸಂಬಂಧ, ಅದು ಅನೈತಿಕ. ಇಡೀ ಪ್ರಪಂಚಕ್ಕೆ ಕುಟುಂಬ ವ್ಯವಸ್ಥೆಯ ಅ, ಆ, ಇ, ಈ ಹೇಳಿಕೊಟ್ಟ ನಾವು, ಈಗ ನಮ್ಮ ಯುವಜನತೆ ಆ ವ್ಯಾಕರಣವನ್ನು ಮೀರುವ ದುಸ್ಸಾಹಸ ಮಾಡುತ್ತಿದೆ. 'ಲಿವಿಂಗ್ ಟುಗೆದರ್', 'ಸರೋಗೇಟ್ ಮದರ್' ಮುಂತಾದ ಚಂದ–ಚಂದದ ಇಂಗ್ಲಿಷ್ ಶಬ್ದಗಳು ಈಗೀಗ ಹೆಚ್ಚು ಆಕರ್ಷಣೀಯವಾಗುತ್ತಿವೆ.

ಅವುಗಳನ್ನು ಬಾಚಿ ತಬ್ಬಿಕೊಳ್ಳುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಿದೆ. 'ಇವನ ಟೇಸ್ಟ್ ಸರಿಯಾಗಿಲ್ಲ', 'ಇವಳು ಮಹಾ ಬೋರು' ಎಂಬ ನೆಪ ಹೇಳಿ ಒಬ್ಬರನ್ನು ಬಿಟ್ಡು ಇನ್ನೊಬ್ಬರನ್ನು ಎಂದು, ಹಾಗೆಯೇ ಸಂಗಾತಿಗಳನ್ನು ಪರಸ್ಪರ ಬದಲಾಯಿಸುತ್ತಾ ಹೋಗುವುದೇ ಇಂದಿನ’ ಟ್ರೆಂಡ್’ ಆಗಿದೆ. ಇಂಥ ಸಂಸ್ಕೃತಿಯ ಜನರು ಕುಟುಂಬ ವ್ಯವಸ್ಥೆಯ ಅರ್ಥವನ್ನು ಹೇಗೆ ಅರ್ಥೈಸಿಕೊಂಡಾರು? (ಇದೊಂಥರಾ ಪರೀಕ್ಷಾರ್ಥ ಸಂಬಂಧ ಎನ್ನಬಹುದು!) ಒಬ್ಬರಿಗೊಬ್ಬರು ನಿಷ್ಠೆಯಿಂದ ಇರುವ ಅನನ್ಯ ಗುಣದಿಂದಾಗಿ ತಾನೇ ಮನುಷ್ಯ, ಪ್ರಾಣಿಗಳಿಗಿಂತ ಭಿನ್ನವಾದ ಸಾಲಿನಲ್ಲಿ ನಿಲ್ಲುವಂತಾಗಿದ್ದು? ಹಾಗೆಯೇ ಸಂಸಾರಸ್ಥರೂ ತಮ್ಮ ನಡುವಿನ ಅಪನಂಬಿಕೆ, ಇಲ್ಲದ ಹೊಂದಾಣಿಕೆ, ಹಿರಿಯರೊಂದಿಗಿನ ಮನಸ್ತಾಪ, ಸ್ವಪ್ರತಿಷ್ಠೆಗಳಿಂದಾಗಿ ಡೈವೋರ್ಸ್‌ಗಳು ಅಥವಾ ಬೇರೆ ಮನೆಯಲ್ಲಿ ವಾಸ್ತವ್ಯ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚಿಗೆ ಸಲಿಂಗವಿವಾಹಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಕುಟುಂಬ ವ್ಯವಸ್ಥೆ ಎಂಬ ಪದದ ಅರ್ಥವೇ ಬುಡಮೇಲಾಗುತ್ತಿದೆ.

ಹಾಗಾಗಿ ವ್ಯಕ್ತಿಯೊಬ್ಬ ಸಭ್ಯತೆಯ ಚೌಕಟ್ಟಿನೊಳಗೆ ತನ್ನ ಬದುಕು ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಂಡರೆ ಸುಂದರ ಸಂಸಾರ ಅವನದಾಗಬಹುದು. ಇದು ಸಮಾಜಕ್ಕೂ ಹಿತ, ಅವನ ಅವಲಂಬಿರಿಗೂ ಹಿತ. ಇದನ್ನೇ ಒಂದು ಕುಟುಂಬ, ಸಮಾಜಕ್ಕೆ ಮಾದರಿಯಾಗಿ ನಿಲ್ಲಲು ವಿವಾಹಿತರಾಗಲೀ, ಒಬ್ಬಂಟಿಯಾಗಿರುವವರಾಗಲೀ ಸುಸಂಸ್ಕೃತರಾಗಿರಬೇಕು. ಸಭ್ಯಸ್ಥರಾಗಿರಬೇಕು. ಆಗ ಆರೋಗ್ಯವಂತ ಸಮಾಜದ ಪಾಲುದಾರರು ನಾವಾಗಬಹುದು.

ಶ್ರೀರಂಜಿನಿ

Comments
ಈ ವಿಭಾಗದಿಂದ ಇನ್ನಷ್ಟು
ಮನೆಯೊಂದು ನಂದನವನ

ಮನೆ ಮನ
ಮನೆಯೊಂದು ನಂದನವನ

20 Jan, 2018
ದೀಪವಿರದ ಮನೆಗಳು, ಉರಿಯುವ ಒಲೆಗಳು…

ದ್ವಿತೀಯ ಬಹುಮಾನ ಪಡೆದ ಪ್ರಬಂಧ
ದೀಪವಿರದ ಮನೆಗಳು, ಉರಿಯುವ ಒಲೆಗಳು…

20 Jan, 2018
‘ಅತಿಯಾದ ಶಬ್ದವೇ ನನಗೆ ಅಲರ್ಜಿ!’

ಏನಾದ್ರೂ ಕೇಳ್ಬೋದು
‘ಅತಿಯಾದ ಶಬ್ದವೇ ನನಗೆ ಅಲರ್ಜಿ!’

20 Jan, 2018
ಊರದನಗಳ ಕುರಿತ ನೂರೆಂಟು ನೆನಪುಗಳು

ಮೊದಲ ಬಹುಮಾನ ಪಡೆದ ಪ್ರಬಂಧ
ಊರದನಗಳ ಕುರಿತ ನೂರೆಂಟು ನೆನಪುಗಳು

13 Jan, 2018
‘ಕೋಮಲ ಮನಸ್ಸಿನ ಸಮತೂಕದ ಬರಹಗಳು’

ತೀರ್ಪುಗಾರರ ಟಿಪ್ಪಣಿ
‘ಕೋಮಲ ಮನಸ್ಸಿನ ಸಮತೂಕದ ಬರಹಗಳು’

13 Jan, 2018