ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನಿನ ದೋಷ ಸರಿಪಡಿಸುವ‌ ಕ್ರಮ, ಮಕ್ಕಳ ಹಕ್ಕುಗಳ ರಕ್ಷಣೆ

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

18 ವರ್ಷದೊಳಗಿನ ಪತ್ನಿಯ ಜತೆ ನಡೆಸುವ ಸಮ್ಮತಿಯ ಲೈಂಗಿಕ ಕ್ರಿಯೆಯನ್ನು ‘ಅತ್ಯಾಚಾರ‘ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಐತಿಹಾಸಿಕ ತೀರ್ಪು ನೀಡಿದೆ. ಕಾನೂನಿನ ದೋಷವನ್ನು ಸರಿಪಡಿಸಲು ಅಂತೂ ಸುಪ್ರೀಂ ಕೋರ್ಟ್ ಅಗತ್ಯ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ನಡೆ.

18 ವರ್ಷಕ್ಕಿಂತ ಕೆಳಗಿರುವವರ ಜೊತೆ ಲೈಂಗಿಕ ಸಂಬಂಧ ಹೊಂದುವುದನ್ನು ನಿಷೇಧಿಸುವ ಮೂಲಕ ಮಕ್ಕಳನ್ನು ನಮ್ಮ ಅಪರಾಧ ಸಂಹಿತೆ ರಕ್ಷಿಸುತ್ತದೆ. ಆದರೆ ಇದೇ ಕಾನೂನು, ಈ ನಿಷೇಧದಿಂದ ವಿವಾಹಿತ ದಂಪತಿಗೆ ವಿನಾಯಿತಿ ನೀಡಿತ್ತು. 15 ವರ್ಷ ಮೀರಿದ ಬಾಲಪತ್ನಿಯ ಜೊತೆಗಿನ ಲೈಂಗಿಕ ಸಂಬಂಧ ಅತ್ಯಾಚಾರವಾಗುವುದಿಲ್ಲ ಎಂದು ಈ ವಿನಾಯಿತಿ ಹೇಳುತ್ತದೆ.

ಆದರೆ 18 ವರ್ಷಕ್ಕಿಂತ ಕೆಳಗಿನ ಬಾಲಕಿ ಜೊತೆ ‘ಸಮ್ಮತಿಪೂರ್ವಕ’ ಲೈಂಗಿಕ ಕ್ರಿಯೆ ನಡೆಸಿದರೂ ಅದು ಅತ್ಯಾಚಾರವಾಗುತ್ತದೆ. ಆದರೆ 15 ವರ್ಷ ಮೀರಿದ ಹಾಗೂ 18 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಪತ್ನಿ ಜೊತೆಗೆ ಮಾತ್ರ ಸಮ್ಮತಿ ಇಲ್ಲದೆ ನಡೆಸಿದ ಲೈಂಗಿಕ ಕ್ರಿಯೆಗೂ ಕಾನೂನಿನ ಮಾನ್ಯತೆ ಇತ್ತು.

ದೊಡ್ಡ ವಿರೋಧಾಭಾಸದ ಸಂಗತಿ ಇದು. ಹೀಗಾಗಿ, ‘ಇಂಡಿಪೆಂಡೆಂಟ್‌ ಥಾಟ್‌’ ಎಂಬ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈಗ ಪ್ರಕಟಿಸಿರುವ ಈ ತೀರ್ಪು ಹೊಸ ಮೈಲುಗಲ್ಲು.

ಲೈಂಗಿಕ ದೌರ್ಜನ್ಯ ಕಾಯಿದೆಗೆ ಸಂಬಂಧಿಸಿದಂತೆ ಎಲ್ಲಾ ಬಾಲೆಯರಿಗೆ ಅನ್ವಯವಾಗುವ ಕಾನೂನುಗಳೇ ಇನ್ನು ಮುಂದೆ ವಿವಾಹಬಂಧನಕ್ಕೊಳಗಾಗಿರುವ ಲಕ್ಷಾಂತರ ಬಾಲೆಯರಿಗೂ ಅನ್ವಯವಾಗುತ್ತವೆ ಎಂಬುದು ಸಮಾಧಾನದ ಅಂಶ. ಇದರಿಂದ ಹೆಣ್ಣುಮಕ್ಕಳ ಹಕ್ಕುಗಳನ್ನು ಎತ್ತಿಹಿಡಿದಂತಾಗಿದೆ. ವಿವಾಹಿತ ಹೆಣ್ಣುಮಗು ಹಾಗೂ ಅವಿವಾಹಿತ ಹೆಣ್ಣುಮಗು ಎಂಬ ವ್ಯತ್ಯಾಸ ಇನ್ನು ಮುಂದೆ ಇರದು.

ಮಕ್ಕಳ ಹಕ್ಕುಗಳನ್ನು ರಕ್ಷಿಸುವಂತಹ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾನೂನು (ಪೊಕ್ಸೊ) ಹಾಗೂ ಬಾಲ ನ್ಯಾಯ ಕಾಯ್ದೆಗಳಂತಹ ಪ್ರಗತಿಪರ ಕಾನೂನುಗಳ ನಡುವೆಯೂ ಬಾಲ ವಧುಗಳಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375ರ ಅಡಿ ರಕ್ಷಣೆ ಇಲ್ಲದಿದ್ದುದು ವಿಪರ್ಯಾಸದ ಸಂಗತಿಯಾಗಿತ್ತು.

ಸಂಪ್ರದಾಯದ ಹೆಸರಿನಲ್ಲಿರುವ ಸಾಮಾಜಿಕ– ಆರ್ಥಿಕ ವಾಸ್ತವಗಳಿವು ಎಂದು ಆಳುವ ಸರ್ಕಾರಗಳು ಇದಕ್ಕೆ ಕಾರಣಗಳನ್ನು ನೀಡಿಕೊಂಡು ಬರುತ್ತಲೇ ಇದ್ದವು. ಸಾಮಾಜಿಕ ಅನಿಷ್ಟವಾದ ಬಾಲ್ಯ ವಿವಾಹ ನಿಷೇಧಿಸುವ ಕಾನೂನು ಮಾಡಿದರೂ ಅತ್ಯಾಚಾರ ಕಾನೂನಿನಲ್ಲಿ ಅದೇ ರೀತಿ ಬದಲಾವಣೆ ಮಾಡದಿದ್ದುದು ಆಶ್ಚರ್ಯ.

ಸರ್ಕಾರಿ ಅಂಕಿ ಆಂಶಗಳ ಪ್ರಕಾರ, 18ರಿಂದ 29 ವರ್ಷಗಳ ಒಳಗೆ ಇರುವ ಭಾರತದ ಶೇ 46ರಷ್ಟು ಮಹಿಳೆಯರು 18 ವರ್ಷ ತುಂಬುವ ಮೊದಲೇ ವಿವಾಹವಾಗಿದ್ದಾರೆ. ಸುಮಾರು 2.3 ಕೋಟಿ ಮಂದಿ ಬಾಲ್ಯದಲ್ಲೇ ವಿವಾಹವಾದವರು ಎಂಬುದು ಅಂದಾಜು. ಹೆಣ್ಣುಮಕ್ಕಳಿಗೆ ಈ ಕಾನೂನು ಈಗ ಬಲ ನೀಡಿದರೂ ನಿಜವಾಗಿ ಆಗಬೇಕಾದದ್ದು ಬಾಲ್ಯ ವಿವಾಹ ನಿಷೇಧ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನ.

ಬಾಲ್ಯ ವಿವಾಹದಿಂದ ಸಣ್ಣ ವಯಸ್ಸಿನಲ್ಲೇ ತಾಯಂದಿರಾಗುವುದರಿಂದ ಸ್ವತಃ ಆರೋಗ್ಯ ಸಮಸ್ಯೆಗಳನ್ನು ಈ ಹೆಣ್ಣುಮಕ್ಕಳು ಅನುಭವಿಸುವುದಲ್ಲದೆ ಅದು ಮುಂದಿನ ಪೀಳಿಗೆಗೂ ರವಾನೆಯಾಗುತ್ತದೆ ಎಂಬುದನ್ನು ಹಗುರವಾಗಿ ಪರಿಗಣಿಸಲಾಗದು. ಬಾಲ್ಯ ವಿವಾಹದ ಪಿಡುಗು ಮುಂದುವರಿಯಲು ಬಡತನ ಹಾಗೂ ಸಂಪ್ರದಾಯಗಳ ಕಟ್ಟಳೆಗಳು ಮುಖ್ಯ ಕಾರಣವಾಗುತ್ತಿವೆ.

ಹಾಗೆಯೇ, ಶ್ರೀಮಂತ ವಿದೇಶೀಯರು ಅಥವಾ ಹೆಣ್ಣುಮಕ್ಕಳ ಸಂಖ್ಯೆ ಕ್ಷೀಣಿಸಿರುವ ರಾಷ್ಟ್ರದ ಬೇರೆ ಬೇರೆ ರಾಜ್ಯಗಳ ಜನರಿಗೆ ಚಿಕ್ಕ ವಯಸ್ಸಿನ ವಧುಗಳನ್ನು ಹಣದಾಸೆ ತೋರಿಸಿ ವಿವಾಹ ಮಾಡಿಕೊಳ್ಳುವ ಪದ್ಧತಿಯೂ ದೊಡ್ಡ ಪಿಡುಗಾಗಿ ಬೆಳೆದಿದೆ. ಇದರ ನಿಯಂತ್ರಣವೂ ಅಗತ್ಯ.

ಮುಖ್ಯವಾಗಿ ಹೆಣ್ಣುಮಕ್ಕಳು ಶಾಲೆಗಳಿಗೆ ಹೋಗುವುದಕ್ಕೆ ಉತ್ತೇಜನ ನೀಡಬೇಕು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು. ಆಗಸ್ಟ್ ತಿಂಗಳಲ್ಲಿ ತ್ರಿವಳಿ ತಲಾಖ್ ನಿಷೇಧಿಸಿ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಸುಪ್ರೀಂ ಕೋರ್ಟ್ ರಕ್ಷಿಸಿತ್ತು.

ಇಂತಹ ದಿಟ್ಟ ನಿಲುವನ್ನು ಇನ್ನು ವೈವಾಹಿಕ ಅತ್ಯಾಚಾರದ ಬಗೆಗೂ ತಾಳಬೇಕಾದ ಅಗತ್ಯ ಇದೆ. ವಿವಾಹ ವ್ಯವಸ್ಥೆ ಉಳಿಸುವ ನೆಪದಲ್ಲಿ ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿಸುವಲ್ಲಿ ಕೇಂದ್ರ ಸರ್ಕಾರ ಹಿಂಜರಿಯುತ್ತಿರುವುದು ಅನಪೇಕ್ಷಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT