ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಧಾರೆ ಅಬ್ಬರ; ಹಿಂಗಾರಿ ಬಿತ್ತನೆಗೆ ಹಿನ್ನಡೆ

Last Updated 14 ಅಕ್ಟೋಬರ್ 2017, 9:26 IST
ಅಕ್ಷರ ಗಾತ್ರ

ವಿಜಯಪುರ: ಮೇಘರಾಜನ ಕೃಪೆಯಿಂದ ಜಿಲ್ಲೆಯ ವಿವಿಧೆಡೆ ವರ್ಷಧಾರೆಯ ಅಬ್ಬರ ಮುಂದುವರಿದಿದೆ. ಸತತ ಮಳೆಯಿಂದ ವಾಣಿಜ್ಯ ಬೆಳೆಗಳಿಗೆ ವಿವಿಧ ರೋಗ ಬಾಧಿಸಿದರೆ, ಹಿಂಗಾರಿ ಬಿತ್ತನೆಗೆ ವ್ಯಾಪಕ ಪ್ರಮಾಣದಲ್ಲಿ ಹಿನ್ನಡೆ ಉಂಟಾಗಿದೆ.ವಾಗಿ ನೀರು ನಿಂತಿರುವುದರಿಂದ ತೊಗರಿಗೂ ಕೊಳೆ ರೋಗ ಕಾಣಿಸಿಕೊಂಡಿದೆ. ವರ್ಷಧಾರೆಯ ಅಬ್ಬರ ಇನ್ನೂ ಮೂರ್ನಾಲ್ಕು ದಿನ ಸತತವಾಗಿ ಮುಂದುವರೆಯುವ ಮುನ್ಸೂಚನೆಯಿದ್ದು, ರೈತ ಸಮೂಹದಲ್ಲಿ ಆತಂಕ ಸೃಷ್ಟಿಸಿದೆ.

ಸತತ ಅನಾವೃಷ್ಟಿಗೆ ಸಿಲುಕಿ ತತ್ತರಿಸಿದ್ದ ಜಿಲ್ಲೆಯ ರೈತ ಸಮುದಾಯ, ಇದೀಗ ಅತಿವೃಷ್ಟಿಗೆ ಬಾಧಿತವಾಗುವ ಭೀತಿ ಎಲ್ಲೆಡೆ ವ್ಯಕ್ತವಾಗಿದೆ. ಇದಕ್ಕೆ ವಾತಾವರಣವೂ ಪೂರಕವಾಗಿದೆ. ವಾರದ ಅವಧಿ ಮಳೆ ಬಿಡುವು ನೀಡಲಿ ಎಂಬ ಪ್ರಾರ್ಥನೆ ನಡೆದಿದೆ.

ಡೋಣಿ ನದಿಯಲ್ಲಿ ಪ್ರವಾಹ ಬಂದಿದೆ. ಅಕ್ಕಪಕ್ಕದ ಹೊಲಗಳಿಗೆ ನುಗ್ಗಿ ಬೆಳೆ ಹಾನಿಗೊಳಿಸಿದೆ. ಕೆರೆ–ಕಟ್ಟೆ, ಬಾಂದಾರ, ಹಳ್ಳ–ಕೊಳ್ಳಗಳು ಮೈದುಂಬಿವೆ. ವರುಣನ ಆರ್ಭಟ ಮುಂದುವರೆದಿದ್ದು, ಅತಿವೃಷ್ಟಿಯ ಭೀತಿ ದಿನೇ ದಿನೇ ಹೆಚ್ಚುತ್ತಿದೆ.

ಬಿತ್ತನೆ ತಿಥಿ: ‘ಹಸ್ತಾ ಮಳೆಗೆ ಹಿಂಗಾರಿ ಬೆಳೆಗಳಾದ ಕಡಲೆ, ಬಿಳಿ ಜೋಳದ ಬಿತ್ತನೆ ನಡೆಯಬೇಕಿತ್ತು. ಕಡಲೆ ಬಿತ್ತನೆಯ ತಿಥಿ ಈಗಾಗಲೇ ಮುಗಿದಿದೆ. ಬಿಳಿ ಜೋಳದ ಬಿತ್ತನೆ ತಿಥಿ ಐದು ದಿನವಷ್ಟೇ ಉಳಿದಿದೆ. ಇದೇ ವಾತಾವರಣ ಮುಂದುವರೆದರೆ, ತಿಥಿಗೆ ಬಿತ್ತನೆ ಅಸಾಧ್ಯವಾಗಲಿದೆ’ ಎಂದು ಬಸವನಬಾಗೇವಾಡಿ ತಾಲ್ಲೂಕಿನ ಬೂದಿಹಾಳದ ದಯಾನಂದ ಸೋಮನಾಳ ತಿಳಿಸಿದರು.

‘ಬಿತ್ತನೆಯ ತಿಥಿ ಮುಗಿದ ಬಳಿಕ ಬಿತ್ತನೆ ನಡೆಸಿದರೂ ಪ್ರಯೋಜನವಾಗಲ್ಲ. ಫಸಲು ಸಮೃದ್ಧವಾಗಿ ಬೆಳೆಯಲ್ಲ. ನಿರೀಕ್ಷಿತ ಇಳುವರಿ ದೊರಕಲ್ಲ. ಪೂರ್ವಿಕರ ಕಾಲದಿಂದಲೂ ತಿಥಿ ನೋಡಿಕೊಂಡೇ ಬಿತ್ತನೆ ನಡೆಸಿದ್ದೇವೆ. ಇದೀಗ ಸಂಕಷ್ಟದ ಸಮಯ ಎದುರಾದಂತಾಗಿದೆ’ ಎಂದು ಅವರು ಹೇಳಿದರು.

ಶೇ 50 ಬಿತ್ತನೆ: ‘ಹಿಂಗಾರು ಹಂಗಾಮಿನಲ್ಲಿ ವರ್ಷಧಾರೆಯ ಅಬ್ಬರ ಹೆಚ್ಚಿದೆ. ಇದೇ 17ರವರೆಗೂ ಮಳೆ ಸುರಿಯುವ ಲಕ್ಷಣವಿದೆ. ಇದು ಬಿತ್ತನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ತಿಳಿಸಿದರು.

‘ಇಲ್ಲಿಯವರೆಗೂ ಶೇ 50ರಷ್ಟು ಬಿತ್ತನೆಯಾಗಿದೆ. ಇನ್ನೂ ಅರ್ಧ ಭಾಗದಲ್ಲಿ ಬಿತ್ತನೆ ನಡೆಯಬೇಕಿದೆ. ಮಳೆ ಬಿಡುವು ನೀಡಿದ ವಾರದ ಬಳಿಕ ಬಿಳಿಜೋಳ, ಕಡಲೆ, ಗೋಧಿಯ ಬಿತ್ತನೆ ಬಿರುಸುಗೊಳ್ಳಲಿದೆ. ಪ್ರಸ್ತುತ ಮಳೆ ಬಿಡುವು ನೀಡಬೇಕಷ್ಟೇ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT